Sullia Crime: ಸುಳ್ಯದಲ್ಲಿ 800 ರೂಪಾಯಿಗೆ ನಡೆಯಿತು ಕೊಡಗಿನ ವ್ಯಕ್ತಿಕೊಲೆ, ಕಾರಣವೇನು?
Dakshin kannada Crime ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ಕೊಡಗಿನ ವ್ಯಕ್ತಿಯೊಬ್ಬನನ್ನು ಬರೀ 800 ರೂ.ವಿಚಾರವಾಗಿ ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು
ಮಂಗಳೂರು: ಕೊಲೆ ಮಾಡುವವನಿಗೆ ನಾನಾ ಕಾರಣಗಳಿರುತ್ತವೆ, ಇತ್ತೀಚೆಗೆ ಸುದ್ದಿ ಮಾಧ್ಯಮಗಳಲ್ಲಿ ಹತ್ಯೆ ಪ್ರಕರಣ ನಾನಾ ಮಜಲುಗಳನ್ನು ಕಾಣುತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಹತ್ಯೆ ಮಾಡಲು ಕಾರಣ ಕೇವಲ 800 ರೂಪಾಯಿ ಎಂದರೇ ನಂಬಲೇಬೇಕು. ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ವ್ಯಕ್ತಿಯೋರ್ವ ಪತ್ತೆಯಾಗಿದ್ದ. ಇದೀಗ ಕೊಲೆ ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರು, ಯಾರನ್ನು ಕೊಂದರು?
ಕಡಬ ತಾಲೂಕಿನ ಎಡಮಂಗಲದ ಉದಯ ಕುಮಾರ್ ನಾಯ್ಕ್ (35) ಕೊಲೆ ಪ್ರಕರಣದ ಬಂಧಿತ ಆರೋಪಿ. ಭಾನುವಾರ ರಾತ್ರಿ ವಿರಾಜಪೇಟೆಯ ವಸಂತ (45) ಎಂಬ ವ್ಯಕ್ತಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಉದಯ ಕುಮಾರ್ ಗೆ ಬಾರೊಂದರಲ್ಲಿ ವಸಂತ ಎಂಬಾತನ ಪರಿಚಯವಾಗಿತ್ತು, ಇದೀಗ ಪರಿಚಯ, ಸ್ನೇಹ ಕೊನೆಯಲ್ಲಿ ಕೊನೆಗೊಂಡಿದೆ. ಭಾನುವಾರ ರಾತ್ರಿ ಕಾಂತಮಂಗಲಕ್ಕೆ ಅಟೋ ರಿಕ್ಷಾದಲ್ಲಿ ಬಂದು ಶಾಲಾ ಜಗಲಿಯಲ್ಲಿ ವಸಂತ ಮಲಗಿದ್ದರು. ಅವರ ಬಳಿ 800 ರೂ. ಹಣ ಇರುವುದನ್ನು ಗಮನಿಸಿ ಉದಯ ಆತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಬಳಿಕ ಬೆಳಿಗ್ಗೆ ಹಣ ಹಾಗೂ ಮೊಬೈಲ್ ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದರು.
ತನಿಖೆಗಿಳಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸದ್ರಿ ಶಾಲೆಯ ಜಗಲಿ ಮೇಲೆ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು.
ಮೃತಪಟ್ಟ ಸ್ಥಳದಲ್ಲಿ ತೀವ್ರ ಸ್ವರೂಪದ ರಕ್ತ ಸ್ರಾವವಾಗಿರುತ್ತದೆ. ಮೃತಪಟ್ಟ ವ್ಯಕ್ತಿಯ ಬಗ್ಗೆ ಸ್ಥಳಿಯರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಅಪರಿಚಿತ ವ್ಯಕ್ತಿಯನ್ನು ಯಾರೋ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರಬಹುದಾಗಿ ನೀಡಿದ ದೂರಿನ ಮೇರೆಗೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಈ ವೇಳೆ ಆರೋಪಿ ಮನೆಗೆ ತೆರಳದೇ ಎಲ್ಲಂದರಲ್ಲಿ ಇರುತ್ತಿದ್ದುದು ಬೆಳಕಿಗೆ ಬಂದಿತ್ತು.
ಎಸ್.ಪಿ.ರಿಷ್ಯಂತ್ ಸಿ.ಬಿ., ಎ.ಎಸ್.ಪಿ. ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ ನೇತೃತ್ವದಲ್ಲಿ ಪುತ್ತೂರು ಇನ್ಸ್ ಪೆಕ್ಟರ್ ಸತೀಶ್ ಜೆ.ಜೆ., ಸುಳ್ಯ ಎಸೈ ಮಹೇಶ್, ಸುಬ್ರಹ್ಮಣ್ಯ ಎಸೈ ಕಾರ್ತಿಕ್, ಸಿಬ್ಬಂದಿಗಳಾದ ಉದಯ್ ಗೌಡ, ಪ್ರಕಾಶ್, ಉದಯ್, ಅನಿಲ್ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕರ್ತವ್ಯ ನಿರ್ವಹಿಸುವ ವೇಳೆ ಸಾವು
ಸುಳ್ಯದ ಅಲೆಕ್ಕಾಡಿ ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಪ್ರಕಾಶ ಮೃತಪಟ್ಟವರು. ಸೀತಾರಾಮ, ಅವರ ಅಣ್ಣ ಪುರಂದರ, ತಮ್ಮ ಪ್ರಕಾಶ ಎಂಬವರುಗಳು, ಸುಮಾರು 3 ವರ್ಷಗಳಿಂದ ಮೆಸ್ಕಾಂ ಗುತ್ತಿಗೆದಾರ ಅಭಿಲಾಶ ಎಂಬವರ ಜೊತೆ ವಾಹಕ ಬದಲಾವಣೆ ಕೆಲಸ ಮಾಡಿಕೊಂಡಿದ್ದು, ಮೆಸ್ಕಾಂ ಪಂಜ ವಲಯಕ್ಕೆ ಸೇರಿದ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಅಲೆಕ್ಕಾಡಿ ಪಾರ್ಲ ಎಂಬಲ್ಲಿ ಇತರರರೊಂದಿಗೆ ವಿದ್ಯುತ್ ಕಂಬಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಪ್ರಕಾಶನು ಕಿರುಚಾಡಿಕೊಂಡ ಶಬ್ದ ಕೇಳಿದ್ದು, ಹೋಗಿ ನೋಡಲಾಗಿ ಪ್ರಕಾಶ ಕಂಬದಲ್ಲಿ ಸಿಕ್ಕಿಕೊಂಡಿದ್ದಾರೆ.ಕೂಡಲೇ ಕೆಳಕ್ಕಿಳಿಸಿ ನೋಡಲಾಗಿ, ಆತನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿದ್ದಾಗ, ವಿದ್ಯುತ್ ಪ್ರವಹಿಸಿ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆ ಇರುವುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸೆಲೂನ್ ಸಿಬಂದಿ ಕೊಲೆ ಯತ್ನ, ಮೂವರ ಬಂಧನ
ಉಡುಪಿಯ ಪುತ್ತೂರಿನಲ್ಲಿ ಸೆಲೂನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನನ್ನು ತಲವಾರು ಮೂಲಕ ದಾಳಿ ನಡೆಸಿ ಕೊಲೆಗೆ ಯತ್ನ ನಡೆಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಡಗುಬೆಟ್ಟುವಿನ ಪ್ರವೀಣ್(22), ಕಟಪಾಡಿಯ ಅಭಿಷೇಕ್(28), ಪುತ್ತೂರು ಗ್ರಾಮದ ದೇಶ್ ರಾಜ್(18) ಆರೋಪಿಗಳು
ಸಲೂನ್ ನಲ್ಲಿ ನೌಕರನಾಗಿರುವ ಚರಣ್ ಎಂಬಾತ ಶಬರಿ ಎಂಬಾತನಿಗೆ ಬೈದಿದ್ದಕ್ಕೆ ಪ್ರವೀಣ್ ತಂಡ ಚರಣ್ ನನ್ನು ಮಾತುಕತೆಗೆಂದು ಉಡುಪಿಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಕರೆದಿತ್ತು ಅದರಂತೆ ಚರಣ್ ತನ್ನ ಮೂವರು ಸ್ನೇಹಿತರೊಂದಿಗೆ ಪುತ್ತೂರಿಗೆ ಬಂದಿದ್ದ. ಇದೇ ವೇಳೆ ಪ್ರವೀಣ್ ಗ್ಯಾಂಗ್ ಮಾತುಕತೆಗೆಂದು ಬಂದ ಚರಣ್ ಮತ್ತು ಸ್ನೇಹಿತರ ಮೇಲೆ ತಲವಾರಿನಿಂದ ದಾಳಿ ನಡೆಸಲು ಯತ್ನಿಸಿದೆ
ಇದನ್ನು ಕಂಡ ಚರಣ್ ಮತ್ತು ಸ್ನೇಹಿತರು ಬೈಕ್ ಅಲ್ಲೇ ಬಿಟ್ಟು ಪ್ರವೀಣ್ ಗ್ಯಾಂಗ್ ನಡೆಸಿದ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಇದಾದ ಬಳಿಕ ಪ್ರವೀಣ್ ಗ್ಯಾಂಗ್ ಚರಣ್ ಹಾಗೂ ಸ್ನೇಹಿತರು ಬಿಟ್ಟು ಹೋದ ಬೈಕ್ ಹಾಗೂ ಸ್ಕೂಟಿಯನ್ನು ಪುಡಿಗೈದಿದ್ದರು. ಈ ಕುರಿತು ದೂರು ದಾಖಲಾಗಿದೆ.
(ವರದಿ: ಹರೀಶ ಮಾಂಬಾಡಿ. ಮಂಗಳೂರು)