Dakshina Kannada: ಎಂಡೋಪೀಡಿತ ಮಕ್ಕಳಿಗೆ ವಿದ್ಯಾಚೇತನ; ದಿವ್ಯಾಂಗರಿಗೆ ಸಾಧನೆಯ ಛಲಕ್ಕೆ ಸ್ಪೂರ್ತಿಯಾದ ಸೇವಾಭಾರತಿ
ಕನ್ನಡ ಸುದ್ದಿ  /  ಕರ್ನಾಟಕ  /  Dakshina Kannada: ಎಂಡೋಪೀಡಿತ ಮಕ್ಕಳಿಗೆ ವಿದ್ಯಾಚೇತನ; ದಿವ್ಯಾಂಗರಿಗೆ ಸಾಧನೆಯ ಛಲಕ್ಕೆ ಸ್ಪೂರ್ತಿಯಾದ ಸೇವಾಭಾರತಿ

Dakshina Kannada: ಎಂಡೋಪೀಡಿತ ಮಕ್ಕಳಿಗೆ ವಿದ್ಯಾಚೇತನ; ದಿವ್ಯಾಂಗರಿಗೆ ಸಾಧನೆಯ ಛಲಕ್ಕೆ ಸ್ಪೂರ್ತಿಯಾದ ಸೇವಾಭಾರತಿ

ಕಡಬದ ವಿದ್ಯಾಚೇತನ ವಿಶೇಷ ಶಾಲೆ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಈ ಕುರಿತು ವರದಿಗಾರ ಹರೀಶ್‌ ಮಾಂಬಾಡಿ ನೀಡಿರುವ ವಿಶೇಷ ವರದಿ ಇಲ್ಲಿದೆ.

ವಿದ್ಯಾಚೇತನ ವಿಶೇಷ ಮಕ್ಕಳ ಶಾಲೆ
ವಿದ್ಯಾಚೇತನ ವಿಶೇಷ ಮಕ್ಕಳ ಶಾಲೆ

ದಶಕಗಳ ಹಿಂದೆ ಎಂಡೋಸಲ್ಫಾನ್ ಎಂಬ ಮಾರಕ ಕೀಟನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಈಗಿನ ಕಡಬ ತಾಲೂಕು ಸಹಿತ ಸುತ್ತಮುತ್ತಲಿನ ಭಾಗದ ನೂರಾರು ಕುಟುಂಬಗಳು ಹೈರಾಣಾಗಿ ಹೋದವು. ಹುಟ್ಟುವ ಮಕ್ಕಳು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರು. ಸತತ ಹೋರಾಟದ ಬಳಿಕ ಸರ್ಕಾರ ಪಾಲನಾ ಕೇಂದ್ರ ಸ್ಥಾಪಿಸಿ ಸುಮ್ಮನಾಯಿತು. ಅಂತಹ ಸಮಯದಲ್ಲಿ ದಿವ್ಯಾಂಗ ಮಕ್ಕಳ ಕಲಿಯುವ ಆಸೆಗೆ ಪೋಷಣೆ ನೀಡಿದ್ದು, ಸೇವಾಭಾರತಿ ಸಂಸ್ಥೆ. ಇದರ ಅಧೀನದಲ್ಲಿ ಬರುವ ಕಡಬದ ವಿದ್ಯಾಚೇತನ ವಿಶೇಷ ಶಾಲೆ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದರೆ, ಈಗಾಗಲೇ ಡಿಗ್ರಿ ಮುಗಿಸಿರುವ ಹುಡುಗನಿಗೆ ಐಎಎಸ್ ಆಗುವಾಸೆಯಂತೆ. ಈ ಕುರಿತು ವಿಶೇಷ ವರದಿ ಇಲ್ಲಿದೆ.

ಮೋಹನನಿಗೆ ಬೆಟ್ಟದಷ್ಟು ಛಲ

ಮೋಹನ್
ಮೋಹನ್

ಎಂಡೋಸಲ್ಫಾನ್ ಸಂತ್ರಸ್ತ ಮೋಹನನಿಗೆ ದೃಷ್ಟಿ ಮಂದವಾಗಿದ್ದರೂ ಅಕ್ಕಪಕ್ಕದ ಮನೆಗಳ ಅಡಕೆ ಸುಲಿಯುತ್ತಾ ತನ್ನ ಖರ್ಚಿಗೆ ಬೇಕಾದಷ್ಟನ್ನು ಸಂಪಾದಿಸಿಕೊಳ್ಳುವ ಸ್ವಾವಲಂಬಿ. ಕೆಲಸ ಮಾಡುತ್ತಲೇ ಕಲಿತ ಮೋಹನ, ಇತ್ತೀಚೆಗೆ ಮುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜ ಗ್ರಾಮದ ಕೊಂಡ್ಯಾಡಿ ನಿವಾಸಿಯಾಗಿರುವ ಅಣ್ಣುಪೂಜಾರಿ ಹಾಗೂ ವಾರಿಜಾ ದಂಪತಿಯ ಪುತ್ರ ಮೋಹನನಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ ಛಲ ಮಾತ್ರ ಬೆಟ್ಟದಷ್ಟಿದೆ.

ಪದ್ಮಶೇಖರನಿಗೆ ಹೆಚ್ಚು ಓದುವ ಆಸಕ್ತಿ

ಪದ್ಮಶೇಖರ್‌
ಪದ್ಮಶೇಖರ್‌

ಬೌದ್ಧಿಕ ಶಕ್ತಿ ಎಲ್ಲರಂತಿಲ್ಲ. ಎಂಡೋಸಲ್ಫಾನ್ ಪೀಡಿತನಾದ ಪದ್ಮಶೇಖರ ಸವಣೂರು ಗ್ರಾಮದ ಪರಣೆ ನಿವಾಸಿ ನಾರಾಯಣ ಪೂಜಾರಿ ಮತ್ತು ಶ್ಯಾಮಲಾ ದಂಪತಿಯ ಪುತ್ರ. ಈತನೂ ಪಿಯುಸಿಯಲ್ಲಿ ಪಾಸ್. ಶಾಲೆಗೆ ಹೋಗಬೇಕೆಂದರೆ ಮೂರು ಬಸ್ ಬದಲಾಯಿಸಬೇಕು. ಆದರೂ ಓದುವ ಆಸಕ್ತಿ ಮಾತ್ರ ಸ್ವಲ್ಪವೂ ಕುಂದಿಲ್ಲ.

ಐಎಎಸ್ ಆಗುವ ಬಯಕೆಯ ಅಭಿಷೇಕ್

ಅಭಿಷೇಕ್
ಅಭಿಷೇಕ್

ಸೆರೆಬ್ರಲ್ ಪಾಲ್ಸ್ ಎಂಬ ಸ್ಥಿತಿಗೆ ಒಳಪಟ್ಟಿದ್ದ ಅಭಿಷೇಕ್‌ಗೆ ಒಮ್ಮೆ ಒಂದು ವಿಚಾರ ಹೇಳಿದರೆ ಸಾಕು. ಅದನ್ನು ಮತ್ತೆ ಪುನರಾವರ್ತನೆ ಮಾಡಬೇಕೆಂದಿಲ್ಲ. ಆತನೇ ಅದನ್ನು ವಿವರಿಸುವಷ್ಟು ಸಾಮರ್ಥ್ಯವಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯ ಬಳಿಕ ಪದವಿಯನ್ನೂ ಮುಗಿಸಿದ್ದಾನೆ. ಈತನಿಗೆ ಐಎಎಸ್ ಆಗುವ ಬಯಕೆ.

ಎಂಡೋಸಲ್ಪಾನ್ ತಂದ ಆಪತ್ತು

ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿನ ಭಾಗಗಳಲ್ಲಿ ಎಂಡೋಸಲ್ಫಾನ್ ಎಂಬ ಕೀಟನಾಶಕ ಸಿಂಪಡಣೆಯಿಂದ ಇಲ್ಲಿನ ಜನರ ಬದುಕೇ ನರಕಸದೃಶವಾಗಿದೆ. ದಶಕಗಳ ಹಿಂದಿನ ಕತೆಯ ಮುಂದುವರೆದ ಭಾಗವಿದು. ವಿಶೇಷವಾಗಿ ಕಡಬ ಹಾಗೂ ಕೊಕ್ಕಡದ ಹಲವು ಭಾಗಗಳಲ್ಲಿ ಇದರ ಪರಿಣಾಮ ಹೆಚ್ಚು.

ಸೇವಾಭಾರತಿಯ ಅಧೀನದಲ್ಲಿ ಕಡಬದ ವಿದ್ಯಾಚೇತನ ವಿಶೇಷ ಶಾಲೆಗೆ ಬರುವವರೆಲ್ಲರೂ ಆರ್ಥಿಕವಾಗಿ ಹಿಂದುಳಿದವರೇ. ಖಾಸಗಿಯಾಗಿ ಸಮೀಪದ ಶಾಲೆಗಳಲ್ಲಿ ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ. ಆದರೆ ಯಾರಿಗೂ ಕಮ್ಮಿ ಇಲ್ಲವೆಂಬಂತೆ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಾರೆ.

ಇವರಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಅಡಕೆ ಸುಲಿಯಲು ಹೋಗುವ ಮೋಹನನ ದೃಷ್ಟಿಮಾಂದ್ಯವಾಗಿದೆ. ಶಾಲೆ ಬಿಟ್ಟು ಮನೆಗೆ ಹೋದ ಬಳಿಕ ಅಕ್ಕಪಕ್ಕದರ ಮನೆಗೆ ಅಡಕೆ ಸುಲಿಯಲು ತೆರಳುತ್ತಾನೆ. ಬೆಳಗ್ಗೆ ಬೇಗ ಎದ್ದು ಏಳು ಗಂಟೆಯವರೆಗೂ ಅಡಕೆ ಸುಲಿದು ಬಳಿಕ ಶಾಲೆಗೆ ಹಾಜರಾಗುತ್ತಾನೆ. ವಿಶೇಷವೆಂದರೆ ತನಗೆ ಪರೀಕ್ಷೆ ಬರೆಯಲು ಸಹಕರಿಸಿರುವಾಕೆಗೆ ಈತನೇ ದುಡಿದ ಸಂಪಾದನೆಯಲ್ಲಿ ಮೂರು ಸಾವಿರ ರೂಪಾಯಿ ಗೌರವಧನ ನೀಡಿ ತಾನೊಬ್ಬ ಅಪ್ಪಟ ಸ್ವಾಭಿಮಾನಿ ಎಂಬುದನ್ನು ತೋರಿಸಿ ಮಾದರಿಯಾಗಿದ್ದಾನೆ.

ವಿದ್ಯಾಚೇತನ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕರು, ಸಹಾಯಕರು ಹಾಗೂ ವಿದ್ಯಾರ್ಥಿಗಳು ಸಾಧಕ ವಿದ್ಯಾರ್ಥಿಗಳಿಗ ಸಹಕಾರ ನೀಡಿದ್ದಾರೆ. ಈ ಕುರಿತು ಹಿಂದುಸ್ಥಾನ್ ಟೈಮ್ಸ್ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ ಮುಖ್ಯ ಶಿಕ್ಷಕಿ ಶಶಿಕಲಾ, ‘ನಮ್ಮದು ಸೇವಾಭಾರತಿಯ ಒಂಭತ್ತನೇ ಸಂಸ್ಥೆ’ ಎಂದು ಹೇಳುದ್ದಾರೆ.

'2019ರಲ್ಲಿ ಸಂಸ್ಥೆ ಆರಂಭಗೊಂಡಿತ್ತು. ಐವರು ಸಿಬ್ಬಂದಿ ಇಲ್ಲಿದ್ದಾರೆ. 5 ವರ್ಷಗಳಿಂದ 30 ವರ್ಷಗಳವರೆಗಿನವರು ಇಲ್ಲಿಗೆ ಬರುತ್ತಾರೆ. ಸಿಬ್ಬಂದಿಯೆಲ್ಲರೂ ನುರಿತ ತರಬೇತುದಾರರೇ ಆಗಿದ್ದಾರೆ. ಇಲ್ಲಿಗೆ ಬರುವವರು ತೀರಾ ಹಿಂದುಳಿದ ಕುಟುಂಬದವರು. ಆರ್ಥಿಕವಾಗಿ ಸಬಲರಲ್ಲ. ಆದರೆ ಕಲಿಯಬೇಕು ಎಂಬ ಛಲ ಅವರಿಗಿದೆʼ ಎಂದು ಅವರು ಹೇಳುತ್ತಾರೆ.

ಇಲ್ಲಿ ಉಲ್ಲೇಖಿಸಿದ ಮೂರು ವಿದ್ಯಾರ್ಥಿಗಳಷ್ಟೇ ಅಲ್ಲ. ಉಳಿದ 30 ವಿದ್ಯಾರ್ಥಿಗಳು ಕೂಡಾ ಜೀವನದಲ್ಲಿ ಏನಾದರೂ ಸಾಧಿಸುವ ಗುರಿ ಹೊಂದಿದ್ದಾರೆ. ಆದರೆ, ಸಕಾಲದ ನೆರವಿನ ಜೊತೆಗೆ ಬೆನ್ನು ತಟ್ಟುವ ಸಮಾಜ ಬೇಕಷ್ಟೇ.

ವರದಿ: ಹರೀಶ್‌ ಮಾಂಬಾಡಿ, ಮಂಗಳೂರು

Whats_app_banner