ನೀರಿನ ಲಭ್ಯತೆ ಖಾತ್ರಿಯಿಲ್ಲದ ಎತ್ತಿನಹೊಳೆ ಯೋಜನೆಗೆ ಚಾಲನೆ, ಕರೆಯುವ ದನದ ಕೆಚ್ಚಲು ಕತ್ತರಿಸುವ ಕಥೆಗೆ ಹೋಲಿಸಿದ ದಿನೇಶ ಹೊಳ್ಳ
Ettinahole scheme: ಎತ್ತಿನಹೊಳೆ ಯೋಜನೆಯಿಂದ ಎಷ್ಟು ನೀರು ಲಭ್ಯವಾಗುತ್ತದೆ ಎನ್ನುವ ವಿವರವೇ ಸಮರ್ಪಕವಾಗಿಲ್ಲ. ಯೋಜನೆಯ ಕಾಮಗಾರಿ ಆರಂಭವಾದ ನಂತರ ಶಿರಾಡಿ ಘಾಟ್‌ನಲ್ಲಿ ಭೂಕುಸಿತ ಹೆಚ್ಚಾಗುತ್ತಿದೆ. ಅತ್ತ ಕರಾವಳಿ, ಇತ್ತ ಬಯಲುಸೀಮೆ; ಎರಡೂ ಪ್ರದೇಶಗಳಿಗೆ ನಷ್ಟ ಉಂಟು ಮಾಡುವ ಯೋಜನೆಯಿದು (ಬರಹ: ದಿನೇಶ ಹೊಳ್ಳ)
ಅಂತೂ, ಇಂತೂ ತೋಳದ ಬಲೆಗೆ ಕುರಿ ಶರಣಾಯಿತು. ನದಿ ಎಂಬ ಮುಗ್ಧ ಹರಿವು ತೋಳ ಎಂಬ ತಿರುವಿಗೆ ಬಲಿಯಾಗಿ ತನ್ನನ್ನೇ ತಾನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ' ಎತ್ತಿನ ಹೊಳೆ ' ಎಂಬ ಅಸಂಬದ್ಧ ಯೋಜನೆಯನ್ನು ಬಲಾತ್ಕಾರದಿಂದ ಮಾಡಿ, ನೀರಿನ ಹರಿವಿನ ಬಗ್ಗೆ ಸುಳ್ಳು ಅಂಕಿ ಅಂಶಗಳನ್ನು ರೂಪಿಸಿ, ಇದೀಗ ಯೋಜನೆಯ ಉದ್ಘಾಟನೆಯ ಹಂತಕ್ಕೆ ಬಂದು ತಲುಪಿದೆ.
ಎತ್ತಿನ ಹೊಳೆ ಯೋಜನೆಯ ಆರಂಭದ ಪರಿಷಕೃತ ಅಧ್ಯಯನ ವರದಿಯಿಂದ (dpr) ಹಿಡಿದು ಇಂದಿನವರೆಗೆ ಸುಳ್ಳು ಅಂಕಿ ಅಂಶಗಳೇ ಸತ್ಯದ ದಾರಿಯಲ್ಲಿ ಹಾದಿ ತಪ್ಪಿಸಿಕೊಳ್ಳುತ್ತಾ ಹೋದದ್ದೇ ಹೊರತು ವಾಸ್ತವಾಂಶಗಳು ಮರೆಯಾಗಿಯೇ ಉಳಿದವು. 24 tmc ನೀರನ್ನು ತಿರುವು ಮಾಡಬಹುದೆಂದು ಯೋಜನೆಯಲ್ಲಿ ಹೇಳಲಾಯಿತಾದರೂ ಈವರೆಗೆ ಅಷ್ಟು ನೀರಿನ ಲಭ್ಯತೆಯ ವೈಜ್ಞಾನಿಕ ವರದಿಯನ್ನು ದೃಢ ಪಡಿಸಲೇ ಇಲ್ಲ. ಎತ್ತಿನ ಹೊಳೆ ಯೋಜನೆಯ ಕಾಮಗಾರಿಯೇ ನೀರಿನ ಶೇಖರಣೆ ಮತ್ತು ತಿರುವಿಗೆ ಕಂಟಕವಾಗುತ್ತಲೇ ಬಂದವು. ಎತ್ತಿನ ಹೊಳೆ ಅಂದರೆ ನೇತ್ರಾವತಿಯ ಪ್ರಮುಖ ಉಪನದಿ ಕೆಂಪುಹೊಳೆಯ ಉಪನದಿ. ಮಳೆಗಾಲದಲ್ಲಿ ಕೆಂಪು ಹೊಳೆಯ ಉಪನದಿಗಳ ಸೂಕ್ಷ್ಮ ಜೈವಿಕ ಪ್ರದೇಶಗಳಲ್ಲಿ ಮಳೆ ನೀರು ಶೇಖರಣೆ ಆದರೆ ಮಾತ್ರ ಎತ್ತಿನ ಹೊಳೆ, ಕೇರಿ ಹೊಳೆ, ಹೊಂಗದ ಹೊಳೆ, ಕಾಡಮನೆ ಹೊಳೆ, ಅಡ್ಡಹೊಳೆಗಳಲ್ಲಿ ನೀರು ತುಂಬಿ ಹರಿಯುವುದು.
ನೀರಿನ ಹರಿವಿನ ಬಗ್ಗೆ ಅಧ್ಯಯನ ಮಾಡಬೇಕು
ಆದರೆ ಕಳೆದ 10 ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆಯ ಕಾಮಗಾರಿಯಾಗುವಾಗ ಇವೆಲ್ಲಾ ಉಪನದಿಗಳ ಪ್ರದೇಶಗಳಲ್ಲಿ ಮಳೆ ನೀರು ಇಂಗಿಸಿಕೊಳ್ಳುವ ಹುಲ್ಲುಗಾವಲು ಪ್ರದೇಶವನ್ನು ಮತ್ತು ಮಳೆ ನೀರು ಸಂಗ್ರಹ ಆಗುವ ಶೋಲಾ ಅಡವಿಯನ್ನು ಛಿದ್ರ ಗೊಳಿಸಿದ ಮೇಲೆ ಈಗ ಅಲ್ಲಿ ಮಳೆ ನೀರು ಸಂಗ್ರಹ ವಾಗುವ ವ್ಯಾಪ್ತಿ ಪ್ರದೇಶ ಕಡಿಮೆಯಾಗುತ್ತಾ ಬಂದಿರುವ ಕಾರಣ ಎತ್ತಿನ ಹೊಳೆ ಯೋಜನೆಗೆ ತಿರುವು ಮಾಡುವ ನೀರು ತೀರಾ ಕಡಿಮೆಯಾಗಿದೆ. ಕಳೆದ 10 ವರುಷಗಳ ಮಳೆ ನೀರಿನ ಸುರಿಯುವಿಕೆ ಮತ್ತು ಹರಿವಿನ ಪ್ರಕಾರ ಈಗ 24 tmc ಬಿಡಿ, 2 tmc ನೀರು ಕೂಡಾ ಶೇಖರಣೆಯಾಗದು. ಪಶ್ಚಿಮ ಘಟ್ಟದ ಕಾನನ, ಕಣಿವೆ, ಕಂದರಗಳ ಸೂಕ್ಷ್ಮ ಪ್ರಾಕೃತಿಕ ಅಂಶಗಳ ವಾಸ್ತವ ವಿಚಾರದಲ್ಲಿ ನದಿಯ ನೀರಿನ ಹರಿವಿನ ಬಗ್ಗೆ ಅಧ್ಯಯನ ಮಾಡಬೇಕೇ ಹೊರತು ನಗರದ ಯಾವುದೋ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಅಧ್ಯಯನ ಮಾಡುವುದಲ್ಲ.
ನದಿ ನೀರು ಸಾಗರ ಸೇರಿದರೇನೇ ಪಶ್ಚಿಮ ಘಟ್ಟದಲ್ಲಿ ಮಳೆಯಾಗುವುದು
ಮಳೆಗಾಲದ ಹೆಚ್ಚುವರಿ ನೀರನ್ನು ಅಂದರೆ ಸಮುದ್ರಕ್ಕೆ ಹೋಗಿ ಸೇರುವ ವ್ಯರ್ಥ ನೀರನ್ನು ಎತ್ತಿನ ಹೊಳೆ ಯೋಜನೆಯಲ್ಲಿ ತಿರುವು ಮಾಡುವುದೆಂದು ಯೋಜನೆಯಲ್ಲಿ ಡಂಗುರ ಸಾರುತ್ತಾ ಬಂದಿದೆ. ಯಾವುದೇ ನದಿಯಲ್ಲಿ ಎಷ್ಟೇ ನೀರಿರಲಿ, ಆ ನೀರು ಸಮುದ್ರ ಸೇರುವುದು ನೈಸರ್ಗಿಕ ನಿಯಮ, ಇಲ್ಲಿ ಹೆಚ್ಚುವರಿ ನೀರು, ಸಮುದ್ರ ಸೇರುವ ವ್ಯರ್ಥ ನೀರು ಎಂದು ಯಾವುದೂ ಇಲ್ಲ. ನದಿ ನೀರು ಸಾಗರ ಸೇರಿದರೇನೇ ಪಶ್ಚಿಮ ಘಟ್ಟದಲ್ಲಿ ಮಳೆಯಾಗುವುದು, ಇದು ನೀರಿನ ಜೈವಿಕ ಚಕ್ರ ಮತ್ತು ನದಿ, ಸಾಗರದ ನಡುವಿನ ಸಂಬಂಧ.
ಮಳೆಗಾಲದಲ್ಲಿ ಮಾತ್ರ ಮಳೆ ನೀರನ್ನು ತಿರುವು ಮಾಡುವುದು ಎಂದಾದರೆ ಈ ಸಲ ಜೂನ್, ಜುಲೈ ತಿಂಗಳಲ್ಲಿ ಭಾರೀ ಮಳೆಯಾಗಿತ್ತು ಆಗ ನೀರು ಹರಿಸದೇ ಇದೀಗ ಮಳೆಗಾಲದ ಅಂತ್ಯ ಭಾಗದಲ್ಲಿ ಹರಿಸುವ ಜರೂರತ್ತು ಏನಿದೆಯೋ?
ಯೋಗಾತ್ಮಕ ಪರೀಕ್ಷೆಯಲ್ಲೇ ಪೈಪ್ ಒಡೆದು ಹೋಗಿದೆ
ಈ ಎತ್ತಿನ ಹೊಳೆ ಯೋಜನೆಯ ಪ್ರಯೋಗಾತ್ಮಕ ಪರೀಕ್ಷೆಯಲ್ಲೇ ಪೈಪ್ ಒಡೆದು ಮತ್ತು ಪ್ರತೀ ಮಳೆಗಾಲದ ಅವಧಿಯಲ್ಲಿ ಶಿರಾಡಿ ಘಾಟಿಯ ಸುತ್ತ ಮುತ್ತ ಭೂಕುಸಿತ ಆಗುತ್ತಲೇ ಇವೆ. ಇನ್ನು ಅದೆಷ್ಟು ಭೂಕುಸಿತ ಗಳು ಆಗುವ ಸಾಧ್ಯತೆಗಳು ಇವೆಯೋ?
ಒಟ್ಟಾರೆ ಈ ಎತ್ತಿನಹೊಳೆ ಯೋಜನೆಯು ಅತ್ತ ಬಯಲು ಸೀಮೆಗೂ ಹರಿಯದೇ, ಇತ್ತ ಕರಾವಳಿಯ ನೇತ್ರಾವತಿಗೂ ಹರಿಯದೇ ನದಿಯ ಅಸ್ತಿತ್ವಕ್ಕೆ ಸಮಸ್ಯೆಯಾಗುವುದೋ ಎಂಬ ಪ್ರಶ್ನೆ ಕಾಡುವುದು ಸಹಜವೇ.
ಈ ಯೋಜನೆ ಹೇಗಿದೆ ಎಂದರೆ... ಒಂದು ಲೋಟ ಹಾಲು ಇದ್ದು ಎರಡು ಪುಟ್ಟ ಮಕ್ಕಳು ಈ ಲೋಟದ ಹಾಲು ನನಗೆ ಬೇಕು, ನನಗೆ ಬೇಕು ಎಂದು ಕಿತ್ತಾಡಿಕೊಳ್ಳುವಾಗ ಜಗಳವಾಗಿ ಕೊನೆಗೆ ಲೋಟ ಕೆಳಗೆ ಬಿದ್ದು ಹಾಲು ಚೆಲ್ಲಿ ಹೋಗಿ ಎರಡು ಮಕ್ಕಳಿಗೂ ಹಾಲು ಸಿಗದೇ ಅಂತ್ಯದಲ್ಲಿ ಹಾಲು ನೀಡಿದ ದನದ ಕೆಚ್ಚಲನ್ನೇ ಕತ್ತರಿಸಿ ಹಾಕುವ ಯೋಜನೆ ಇದು.
- ದಿನೇಶ್ ಹೊಳ್ಳ - ಅವರ ಫೇಸ್‌ಬುಕ್ ಪೋಸ್ಟ್ ಅನ್ನು ಇಲ್ಲಿ ಯಥಾವತ್ತು ಮರುಪ್ರಕಟಿಸಲಾಗಿದೆ
ಇದನ್ನೂ ಓದಿ: Think Positive: ಪ್ರಯತ್ನವಿದ್ದರೆ ಪರಮಾತ್ಮನನ್ನೂ ಪಡೆಯಬಹುದು; ರಂಗಸ್ವಾಮಿ ಮೂಕನಹಳ್ಳಿ ಬರಹ