Davanagere News: ಗಗನಕ್ಕೇರುತ್ತಿರುವ ಕಾಫಿಪುಡಿ ಬೆಲೆ; ಆತಂಕದಲ್ಲಿ ವರ್ತಕರು; ಕಾಫಿ ಮಂಡಳಿಗೆ ಜವಾಬ್ದಾರಿ ನೀಡುವಂತೆ ಒತ್ತಾಯ
ಕಾಫಿಪುಡಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಕಾರಣ ಕಾಫಿಪುಡಿ ಕೊಳ್ಳುವವರ ಸಂಖ್ಯೆ ಕುಸಿಯುತ್ತಿದೆ. ಇದು ವರ್ತಕರನ್ನು ಚಿಂತೆಗೀಡು ಮಾಡುವಂತೆ ಮಾಡಿದೆ. ಹಿಂದೆ 70ರೂಪಾಯಿಗೆ ಮಾರಾಟವಾಗುತ್ತಿದ್ದ ಕಾಫಿಪುಡಿ ಈಗ 400 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ವರ್ತಕರಿಗೆ ನುಂಗುಲಾರದ ತುತ್ತಾಗಿ ಪರಿಣಮಿಸಿದೆ.
ದಾವಣಗೆರೆ: ದಿನದಿಂದ ದಿನಕ್ಕೆ ಕಾಫಿಪುಡಿ ಬೆಲೆ ನಿಯಂತ್ರಣಕ್ಕೆ ಸಿಗದೆ ಏರಿಕೆ ಆಗುತ್ತಿರುವುದರಿಂದ ಕಾಫಿ ವರ್ತಕರು ನಷ್ಟ ಅನುಭವಿಸುತ್ತಿದ್ದು, ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ.
ಎರಡು ದಶಕಗಳ ಹಿಂದೆ ಕಾಫಿಪುಡಿ ಬೆಲೆ ಕೇವಲ 70 ರೂ.,ಗೆ ಮಾರಾಟವಾಗುತ್ತಿದ್ದಾಗ ಜಿಲ್ಲಾ ಕೇಂದ್ರವಾದ ದಾವಣಗೆರೆಯಲ್ಲಿಯೇ ತಿಂಗಳಿಗೆ ಸುಮಾರು 8 ಕೋಟಿ ರೂ., ವರೆಗೆ ವಹಿವಾಟು ನಡೆಯುತ್ತಿತ್ತು. ಆದರೆ, ಪ್ರಸ್ತುತ, ಕಾಫಿ ಪುಡಿ ಬೆಲೆ 400 ರೂ., ಗಿಂತ ಅಧಿಕ ಬೆಲೆಯಲ್ಲಿ ಮಾರಾಟ ಆಗುತ್ತಿರುವುದರಿಂದ ಪ್ರತಿ ತಿಂಗಳಿಗೆ 2 ಕೋಟಿಯನ್ನೂ ದಾಟದೆ ಕಾಫಿ ವರ್ತಕರು ನಷ್ಟ ಅನುಭವಿಸಿ ಆತಂಕಕ್ಕೀಡಾಗಿದ್ದಾರೆ.
ಕಾಫಿಪುಡಿ ಬೆಲೆ ಏರಿಕೆ ಆಗಿರುವುದರಿಂದ ಕಾಫಿಪುಡಿ ಕೊಂಡು ಕುಡಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದರಿಂದ ಮಾರಾಟವಾಗದೆ ಕಾಫಿ ವರ್ತಕರ ಹೊಟ್ಟೆಗೆ ಬರೆ ಎಳೆಯುವ ವಾತಾವರಣ ನಿರ್ಮಾಣವಾಗಿದೆ.
ದೇಶದಲ್ಲಿ ಬೆಳೆಯಲಾಗುವ 4 ಲಕ್ಷ ಟನ್ ಕಾಫಿ ಬೆಳೆಯಲ್ಲಿ ಕರ್ನಾಟಕದ್ದೇ ಶೇ.70 ರಷ್ಟು ಪಾಲಿದೆ. 40 ರಿಂದ 50 ಟನ್ ಕಾಫಿ ಮಾತ್ರ ದೇಶದಲ್ಲಿ ಬಳಕೆಯಾಗುತ್ತಿದ್ದು, ಉಳಿದಿದ್ದು ಅನ್ಯ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ಕಾಫಿ ಪುಡಿಗೆ ಹೆಚ್ಚು ಬೇಡಿಕೆ ಇಲ್ಲ. ಹೆಚ್ಚು ಖರೀದಿ ಆಗುವುದೇನಿದ್ದರೂ ಮಧ್ಯಕರ್ನಾಟಕದ ದಾವಣಗೆರೆಯಿಂದ ಇತರೆ ಜಿಲ್ಲೆಗಳಲ್ಲಿ ಮಾತ್ರ ಎನ್ನುತ್ತಾರೆ ವರ್ತಕರು.
ದಾವಣಗೆರೆಯಲ್ಲಿ ಮೊದಲು ಸುಮಾರು 40ಕ್ಕೂ ಅಧಿಕ ಕಾಫಿಪುಡಿ ಮಾರಾಟದ ಅಂಗಡಿಗಳಿದ್ದವು. ಆದರೆ, ಈಗ ಬದಲಾದ ಕಾಫಿ ಬೆಲೆಯಿಂದ ಕೇವಲ ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಂಡಿವೆ. ಕಾಫಿ ಬೆಲೆ ಹೀಗೆ ಮುಂದುವರಿದರೆ ಕಾಫಿ ವರ್ತಕರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎನ್ನುತ್ತಾರೆ ಕಾಫಿ ವರ್ತಕರ ಸಂಘದ ಅಧ್ಯಕ್ಷ ಸಿ.ಎ. ಶಿವರಾಂ.
ಕಾಫಿ ಮಂಡಳಿಗೆ ಜವಾಬ್ದಾರಿ ಕೊಡಿ!
ಈ ಮೊದಲು ಕಾಫಿ ಮಂಡಳಿ ಆಂತರಿಕ ಬಳಕೆಗಾಗಿ ನಿಯಮಿತವಾಗಿ ನಿಗದಿತ ಬೆಲೆಗೆ ಕಾಫಿಯನ್ನು ಆಂತರಿಕ ಮಾರುಕಟ್ಟೆಗೆ ಪೂರೈಕೆ ಮಾಡಿ, ಉಳಿದಿರುವುದರನ್ನು ಮಾತ್ರ ಇತರೆ ದೇಶಗಳಿಗೆ ರಫ್ತು ಮಾಡುತ್ತಿತ್ತು. ಆದರೆ, ಈಗ ಮುಕ್ತ ಮಾರುಕಟ್ಟೆಯಲ್ಲಿ ಕಾಫಿ ಮಾರಾಟ ಆಗುತ್ತಿರುವುದರಿಂದ ಗೃಹಬಳಕೆಗೆ ಬೇಕಾದಷ್ಟು ಸಿಗದೆ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ವರ್ತಕರ ಮೇಲೆ ಮತ್ತು ಗ್ರಾಹಕರ ಮೇಲೆ ಪರಿಣಾಮ ಬಿದ್ದಿದೆ. ಆದ್ದರಿಂದ, ಕೇಂದ್ರ ಸರ್ಕಾರ ಕಾಫಿ ಮಂಡಳಿಗೆ ಮತ್ತೆ ಜವಾಬ್ದಾರಿ ನೀಡಿದರೆ ಬೆಲೆಗೆ ಕಡಿವಾಣ ಬೀಳಲಿದೆ. ವರ್ತಕರಿಗೂ ಅನುಕೂಲವಾಗಲಿದೆ.
ಕಲಬೆರಕೆ ಕಾಫಿಪುಡಿ!
ಕಾಫಿಪುಡಿ ಬೆಲೆಯಲ್ಲಿ ಆಗುತ್ತಿರುವ ಹೆಚ್ಚಳಕ್ಕೆ ಕಡಿವಾಣ ಬೀಳದಿದ್ದರೆ, ಕಲಬೆರಕೆ ಕಾಫಿಯು ಮಾರುಕಟ್ಟೆಗೆ ಲಗ್ಗೆ ಇಡುವ ಎಲ್ಲಾ ಮುನ್ಸೂಚನೆ ಇರುವುದು ಮೇಲ್ನೋಟಕ್ಕೆ ಬಹಿರಂಗವಾಗಿದೆ. ಆದ್ದರಿಂದ ಕಾಫಿ ಮಂಡಳಿಗೆ ಮತ್ತೆ ಮರುಜೀವ ನೀಡಿದ್ದಲ್ಲಿ ಗ್ರಾಹಕರ ಆರೋಗ್ಯವನ್ನೂ ಕೂಡ ಕಾಪಾಡಬಹುದು.
ಈ ಸುದ್ದಿಯನ್ನೂ ಓದಿ
Breaking News: ಜುಲೈ 14ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಆರಂಭ ಸಾಧ್ಯತೆ
Gruhalakshmi Yojane: ಬಹು ನಿರೀಕ್ಷೆಯ ಗೃಹಲಕ್ಷ್ಮಿ ಯೋಜನೆಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ಇದರ ಅರ್ಜಿ ಬಿಡುಗಡೆ ಜುಲೈ 14ಕ್ಕೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು: ಕರ್ನಾಟಕದ ಜನತೆ ಕಾತರದಿಂದ ನಿರೀಕ್ಷಿಸುತ್ತಿರುವ ಗೃಹಲಕ್ಷ್ಮಿ ಯೋಜನೆ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.