ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು
ಕನ್ನಡ ಸುದ್ದಿ  /  ಕರ್ನಾಟಕ  /  ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು

ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮೇ 10ರಂದು ನಡೆದ ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನವಾಗಿದೆ. ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಆತನ ಕಾಲಿಗೆ ಗುಂಡೇಟು ತಗುಲಿದೆ. ರಿಯಲ್‌ ಎಸ್ಟೇಟ್‌ ವ್ಯಾಪಾರಿ ಹೇಮಂತ ಗೌಡ ಹತ್ಯೆ ಪ್ರಕರಣದ ಪೂರ್ಣ ವಿವರ ಇಲ್ಲಿದೆ.

ದೊಡ್ಡಬಳ್ಳಾಪುರ: ಹೇಮಂತಗೌಡ (ಬಲಚಿತ್ರ) ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನವಾಗಿದ್ದು, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು ತಗುಲಿದೆ. ಘಟನಾ ಸ್ಥಳದಲ್ಲಿ ಪೊಲೀಸರು (ಎಡಚಿತ್ರ).
ದೊಡ್ಡಬಳ್ಳಾಪುರ: ಹೇಮಂತಗೌಡ (ಬಲಚಿತ್ರ) ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನವಾಗಿದ್ದು, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು ತಗುಲಿದೆ. ಘಟನಾ ಸ್ಥಳದಲ್ಲಿ ಪೊಲೀಸರು (ಎಡಚಿತ್ರ).

ದೊಡ್ಡಬಳ್ಳಾಪುರ: ಹೊರವಲಯದ ಬಾಶೆಟ್ಟಿಹಳ್ಳಿ ಸಮೀಪ ಮೇ 10 ರಂದು ನಡೆದಿದ್ದ ಹೇಮಂತ್ ಗೌಡ ಕೊಲೆ ಪ್ರಕರಣದ 2ನೇ ಪ್ರಮುಖ ಆರೋಪಿಯ ಬಂಧನಕ್ಕೆ ಪೊಲೀಸರು ತೆರಳಿದ್ದ ವೇಳೆ ಗುಂಡಿನ ದಾಳಿ ನಡೆಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಪೊಲೀಸರು ಶೂಟೌಟ್‌ ವಿಚಾರವನ್ನು ಅಲ್ಲಗಳೆದಿದ್ದಾರೆ.

ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮನಹಳ್ಳಿಯ ಮನೆಯೊಂದರಲ್ಲಿ ಆರೋಪಿ ಶ್ರೀನಿವಾಸ್ ಇರುವುದನ್ನು ಖಚಿತ ಪಡಿಸಿಕೊಂಡು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆತ ಇದ್ದ ಮನೆಗೆ ಮುತ್ತಿಗೆ ಹಾಕಿದ್ದರು. ಆಗ, ಶ್ರೀನಿವಾಸ್ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದ. ಚಾಕುವಿನಿಂದ ಇರಿಯಲು ಪ್ರಯತ್ನಿಸಿದ ಕಾರಣ, ಆತನ ಕಾಲಿಗೆ ಗುಂಡು ಹಾರಿಸಿ ಬಂಧನಕ್ಕೊಳಪಡಿಸಲಾಗಿದೆ. ಆತನಿಗೆ ಚಿಕಿತ್ಸೆಯನ್ನೂ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಮಂತ್ ಗೌಡ ಕೊಲೆ ಪ್ರಕರಣ; ಏನಿದು ಗುಂಡಿನ ದಾಳಿ

ಹೇಮಂತ್ ಗೌಡ ಕೊಲೆ ಪ್ರಕರಣದ ಮೊದಲ ಆರೋಪಿ ನರಸಿಂಹ ಮೂರ್ತಿ ಅಲಿಯಾಸ್ ಮಿಟ್ಟೆ ಎಂಬಾತನ ಸಹೋದರ ಮೇಡಹಳ್ಳಿ ನಿವಾಸಿ ಶ್ರೀನಿವಾಸ್‌ ಎರಡನೇ ಆರೋಪಿ. ಈತನನ್ನು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ, ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದ. ಹೆಡ್ ಕಾನ್‌ಸ್ಟೆಬಲ್ ಚಂದ್ರಶೇಖರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸಾದಿಕ್ ಪಾಷ ಶ್ರೀನಿವಾಸ್ ಎಡಗಾಲಿಗೆ ಗುಂಡು ಹಾರಿಸಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಹೇಮಂತ್ ಗೌಡ ಹತ್ಯೆ ಪ್ರಕರಣದಲ್ಲಿ ಈವರೆಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಶ್ರೀನಿವಾಸ್, ನರಸಿಂಹಮೂರ್ತಿ ಬಂಧಿತ ಆರೋಪಿಗಳು. ಈ ಇಬ್ಬರ ಮೇಲೂ ಈಗಾಗಲೇ ಕೊಲೆ ಯತ್ನ, ಡಕಾಯಿತಿ ದೂರುಗಳು ದಾಖಲಾಗಿದ್ದು ರೌಡಿಶೀಟರ್ ಪಟ್ಟಿಯಲ್ಲಿದ್ದಾರೆ.

ಹೇಮಂತ್ ಗೌಡ ಕೊಲೆ ಪ್ರಕರಣ

ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ಸಮೀಪದ ಜೆಪಿ ಬಾರ್‌ನಲ್ಲಿ ಮೇ 10 ರಂದು ರಾತ್ರಿ 11 ಗಂಟೆ ಸುಮಾರಿಗೆ ಹೇಮಂತ ಗೌಡ (27)ನ ಮೇಲೆ ಒಂದು ಗ್ಯಾಂಗ್ ಹಲ್ಲೆ ನಡೆಸಿತ್ತು. ಹಲ್ಲೆ ನಡೆಯುತ್ತಿರುವಾಗಲೇ ಹೇಮಂತ್ ಮನೆಯವರಿಗೆ ಅಲ್ಲಿದ್ದವರು ಫೋನ್ ಮಾಡಿ ತಿಳಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹಲ್ಲೆ ನಡೆಸಿದ ಬಳಿಕ ಗಂಭೀರ ಗಾಯಗೊಂಡ ಯುವಕನನ್ನು ಟೆಂಪೋ ಒಂದರಲ್ಲಿ ಹಾಕಿ ಊರೆಲ್ಲ ಸುತ್ತಾಡಿದ್ದಾರೆ. ತೀವ್ರ ರಕ್ತಸ್ರಾವಕ್ಕೆ ಒಳಗಾದ ಯುವಕ ಮೃತಪಟ್ಟ ಬಳಿಕ ಊರ ಹೊರಗೆ ನವೋದಯ ಶಾಲೆ ಸಮೀಪ ಶವ ಬಿಸಾಕಿ ಹೋಗಿದ್ದರು. ಮಾರನೇ ದಿನ ಮುಂಜಾನೆ ಯುವಕ ಹೇಮಂತ ಗೌಡನ ಶವ ಪತ್ತೆಯಾಗಿತ್ತು.

ಹೇಮಂತ ಗೌಡ ಹೊಸ್ಕೂರ್ ಗ್ರಾಮದವನು. ರಿಯಲ್ ಎಸ್ಟೇಟ್, ಸೆಕ್ಯೂರಿಟಿ ಎಜೆನ್ಸಿ ನಡೆಸುತ್ತಿದ್ದ. ಹೇಮಂತನ ಹತ್ಯೆ ಮಾಡಿದ್ದು ಆತನ ಸ್ನೇಹಿತನಾಗಿದ್ದ ನರಸಿಂಹಮೂರ್ತಿ ಅಲಿಯಾಸ್ ಸಂತು ಅಲಿಯಾಸ್ ಮಿಟ್ಟೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಬಹಿರಂಗವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಾತನಾಡಬೇಕು ಎಂದು ಫೋನ್ ಮಾಡಿ ಹೇಮಂತ ಗೌಡನನ್ನು ಜೆಪಿ ಬಾರ್‌ ಬಳಿ ಕರೆಯಿಸಿಕೊಂಡ ನರಸಿಂಹ ಮೂರ್ತಿ, ಅಲ್ಲೇ ಇದ್ದ ತನ್ನ ಗ್ಯಾಂಗ್‌ ಮೂಲಕ ಹಲ್ಲೆ ನಡೆಸಿದ್ದ. ಲಾಂಗ್‌ ಮಚ್ಚು ಕೈಗೆತ್ತಿಕೊಂಡ ಕಾರಣ ಹೇಮಂತ ಗೌಡನ ಇತರ ಸ್ನೇಹಿತರು ಸ್ಥಳದಿಂದ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner