ಕರ್ನಾಟಕದ 5,8,9,11ನೇ ತರಗತಿಗೆ ಬೋರ್ಡ್ ಪರೀಕ್ಷೆ ಗೊಂದಲ; ಮತ್ತೆ ಮುಂದೂಡಿಕೆ, ವಿಭಾಗೀಯ ಪೀಠದಲ್ಲಿ ವಿಚಾರಣೆ-education news supreme court of india halts board examination in karnataka for classes 5 8 9 11 court news uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ 5,8,9,11ನೇ ತರಗತಿಗೆ ಬೋರ್ಡ್ ಪರೀಕ್ಷೆ ಗೊಂದಲ; ಮತ್ತೆ ಮುಂದೂಡಿಕೆ, ವಿಭಾಗೀಯ ಪೀಠದಲ್ಲಿ ವಿಚಾರಣೆ

ಕರ್ನಾಟಕದ 5,8,9,11ನೇ ತರಗತಿಗೆ ಬೋರ್ಡ್ ಪರೀಕ್ಷೆ ಗೊಂದಲ; ಮತ್ತೆ ಮುಂದೂಡಿಕೆ, ವಿಭಾಗೀಯ ಪೀಠದಲ್ಲಿ ವಿಚಾರಣೆ

ಕರ್ನಾಟಕದ 5,8,9,11ನೇ ತರಗತಿಗೆ ಬೋರ್ಡ್ ಪರೀಕ್ಷೆ ಗೊಂದಲ ಮುಂದುವರಿದಿದೆ. ಇನ್ನು 4 ಪರೀಕ್ಷೆಗಳಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಗೊಂದಲವೂ ಮುಂದುವರಿದಿದೆ. ಇದರ ವಿಚಾರಣೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಮುಂದುವರಿಯಲಿದೆ.

ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌ (HT_PRINT)

ನವದೆಹಲಿ: ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ (ಕೆಎಸ್‌ಇಬಿ) 5, 8, 9 ಹಾಗೂ 11ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವ ಕರ್ನಾಟಕ ಸರಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ಮಂಗಳವಾರ (ಮಾರ್ಚ್ 12) ತಡೆಯಾಜ್ಞೆ ನೀಡಿದೆ.

ಇದರಂತೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಮೂಲಕ ಪ್ರಸ್ತುತ ನಡೆಸುತ್ತಿದ್ದ ರಾಜ್ಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಪರೀಕ್ಷೆಯನ್ನು ಶಾಲಾ ಶಿಕ್ಷಣ ಇಲಾಖೆ ಮುಂದೂಡಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಪಂಕಜ್‌ ಮಿಥಾಲ್ ಅವರನ್ನು ಒಳಗೊಂಡ ನ್ಯಾಯಪೀಠವು ಮಾರ್ಚ್ 7ರಂದು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶದ ವಿರುದ್ಧ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ.

5, 8, 9 ಹಾಗೂ 11 ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ಇಲ್ಲ, ಇದೆ, ಇಲ್ಲ…

ಹೈಕೋರ್ಟ್ ಏಕಸದಸ್ಯ ಪೀಠವು 5, 8, 9 ಹಾಗೂ 11 ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಸರಕಾರದ ಕ್ರಮವನ್ನು ರದ್ದುಪಡಿಸಿತ್ತು. ಆದರೆ, ಈ ಆದೇಶವನ್ನು ಮಾರನೇ ದಿನವೇ ಹೈಕೋರ್ಟ್‌ನ ವಿಭಾಗೀಯ ಪೀಠ ವಜಾಗೊಳಿಸಿ, ಪರೀಕ್ಷೆ ನಡೆಸುವುದಕ್ಕೆ ಅವಕಾಶ ನೀಡಿತ್ತು.

ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ಕೆಲವು ಪಾಲಕರು ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು. ಈ ದಾವೆಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ಸರ್ಕಾರ ಸಲ್ಲಿಸಿರುವ ಅರ್ಜಿ ಕುರಿತು ವಿಸ್ತೃತ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ನಿರ್ದೇಶನ ನೀಡಿದೆ.

ಮಾ.11ರಿ೦ದ 18ರವರೆಗೆ ನಿಗದಿಯಾಗಿದ್ದ ಪರೀಕ್ಷೆಗಳ ಪೈಕಿ ಈಗಾಗಲೇ ಕನ್ನಡ ಮತ್ತು ಇಂಗ್ಲೀಷ್ ಪರೀಕ್ಷೆಗಳು ನಡೆದಿದ್ದು, ಬುಧವಾರದಿಂದ ಮುಂದಿನ ದಿನ ನಡೆಯಬೇಕಿರುವ ಉಳಿಕೆ ವಿಷಯಗಳ ಪರೀಕ್ಷೆಗಳನ್ನು ಸುಪ್ರೀಂ ಕೋರ್ಟ್‌ನ ಮುಂದಿನ ಆದೇಶ ಬರುವವರೆಗೆ ಮುಂದೂಡಿರುವುದಾಗಿ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.

ಬೋರ್ಡ್ ಪರೀಕ್ಷೆ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದವರು

5, 8, 9 ನೇ ತರಗತಿಗಳಿಗೆ ಕೆಎಸ್‌ಇಎಬಿಯಿಂದ ಮೌಲ್ಯಾಂಕನ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಅವರ್ ಸ್ಕೂಲ್ಸ್, ರುಪ್ಸಾ ಕರ್ನಾಟಕ ಸಂಘಟನೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಇದರ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು ಸರ್ಕಾರ ಪರೀಕ್ಷೆ ನಡೆಸಲು ಹೊರಡಿಸಿದ್ದ ಸುತ್ತೋಲೆ ಕಾನೂನಾತ್ಮಕವಾಗಿಲ್ಲ ಎಂದು ರದ್ದುಪಡಿಸಿತ್ತು. ಇದರ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಿದಾಗ ಆದೇಶಕ್ಕೆ ದ್ವಿಸದಸ್ಯ ಪೀಠ ತಡೆ ನೀಡಿ ಪರೀಕ್ಷೆಗೆ ಮಧ್ಯಂತರ ಆದೇಶ ನೀಡಲಾಗಿತ್ತು.

ಈ ಆದೇಶದ ವಿರುದ್ಧ ಖಾಸಗಿ ಶಾಲಾ ಸಂಘಟನೆಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ಮಂಗಳವಾರ ವಿಚಾರಣೆ ನಡೆಸಿದ ಸವೋಚ್ಚ ನ್ಯಾಯಾಲಯ ಹೈಕೋರ್ಟ್‌ ದ್ವಿಸದಸ್ಯ ಪೀಠದ ಮಧ್ಯಂತರ ತೀರ್ಪು ರದ್ದುಪಡಿಸಿ ಮುಂದಿನ ವಿಚಾರಣೆಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿದೆ.

ಈ ಮಧ್ಯೆ ಏಕಸದಸ್ಯ ಪೀಠದ ಆದೇಶದ ವಿರುದ್ಧ ನೀಡಿದ್ದ ತಡೆಯಾಜ್ಞೆ ರದ್ದುಪಡಿಸಿದೆ. ವಿಚಾರಣೆ ವೇಳೆ ನ್ಯಾಯಪೀಠವು ಹೇಳಿಕೆ ನೀಡಿ, ಹೈಕೋರ್ಟ್‌ ವಿಭಾಗೀಯ ಪೀಠ ಮುಖ್ಯ ಅರ್ಜಿಯ ವಿಚಾರಣೆ ಪೂರ್ಣಗೊಳಿಸುವವರೆಗೆ ಬೋರ್ಡ್ ಪರೀಕ್ಷೆ ನಡೆಸಕೂಡದು ಎಂದು ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point