ಹುಬ್ಬಳ್ಳಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ನ ಐವರು ಖಾಕಿ ಬಲೆಗೆ; ಕಲಘಟಗಿಯಲ್ಲಿ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ
ಹುಬ್ಬಳ್ಳಿಯಲ್ಲಿ ವ್ಯಾಪಾರಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಅಶೋಕ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ: ನಗರದಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆಯರಿಬ್ಬರು ಸೇರಿದಂತೆ ಐವರನ್ನು ಇಲ್ಲಿನ ಅಶೋಕ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಜೋಯಾ ಅಲಿಯಾಸ್ ಶಬಾನಾ ಬೇಗಂ ನದಾಫ್, ಪರವೀನ್ ಬಳ್ಳಾರಿ, ಸಯಿದ್ ತಹಶೀಲ್ದಾರ್, ತೌಸೀಫ್ ಅಲಿಯಾಸ್ ಮೆಹಬೂಬಸಾಬ್ ನಾಲಬಂದ, ಅಬ್ದುಲ್ ರೆಹಮಾನ್ ಬಿಲ್ಲೆವಾಲೆ ಬಂಧಿತರು. ಇವರು ಹುಬ್ಬಳ್ಳಿಯವರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಮಹಾನಿಂಗ ನಂದಗಾವಿ ಅವರು, ವ್ಯಾಪಾರಿಯೊಬ್ಬರು ನೀಡಿದ ದೂರಿನನ್ವಯ ಐವರನ್ನು ಬಂಧಿಸಲಾಗಿದೆ.
ಅವರಿಂದ ವಿವಿಧ ಕಂಪನಿಯ 5 ಮೊಬೈಲ್, 2 ದ್ವಿಚಕ್ರ ವಾಹನ ಮತ್ತು 9 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು 93 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ಅವರು ಇದೇ ಮಾದರಿಯ ಇತರ ಪ್ರಕರಣಗಳನ್ನು ಮಾಡಿರುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೇ, ಇಂತಹ ಪ್ರಕರಣಗಳಲ್ಲಿ ಸಿಲುಕಿರುವ ಇತರೆ ನೊಂದ ವ್ಯಕ್ತಿಗಳ ಬಗ್ಗೆ ಹಾಗೂ ಇದೇ ಪ್ರಕರಣ ನಡೆಸುತ್ತಿರುವ ಇತರ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಲ್ಲ ಪ್ರಕರಣ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬೋನಿಗೆ ಬಿದ್ದ ಚಿರತೆ
ಕಲಘಟಗಿ: ತಾಲೂಕಿನ ಅರಣ್ಯ ಪ್ರದೇಶದ ಅಂಚಿನಲ್ಲಿರುವ ತಬಕದಹೊನ್ನಹಳ್ಳಿ ಬೀರವಳ್ಳಿ ಮಾರ್ಗದ ಹತ್ತಿರದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸಿಕ್ಕು ಬಿದ್ದಿದೆ. ಇದರೊಂದಿಗೆ ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ. ಹಲವು ದಿನಗಳಿಂದಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದ ಕಾರಣ ರೈತರು ಜಮೀನಿಗೆ ಹೋಗುವುದು ಕಷ್ಟವಾಗಿತ್ತು. ಅಲ್ಲದೆ, ಮನೆಯಲ್ಲಿದ್ದ ನಾಯಿಯನ್ನೂ ಹೊತ್ತೊಯ್ದಿದ್ದು ಸುತ್ತಲಿನ ಗ್ರಾಮಸ್ಥರಿಗೆ ಭೀತಿ ಹೆಚ್ಚಿಸಿತ್ತು. ಹೀಗಾಗಿ, ವಲಯ ಅರಣ್ಯಾಧಿಕಾರಿ ಅರುಣ್ ಅಷ್ಟಗಿ ನೇತೃತ್ವದ ತಂಡವು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.