Elephants Death: ಬೇಸಿಗೆ ಬವಣೆ, ಅರಣ್ಯದಲ್ಲಿ ಆನೆಗಳ ಮರಣ ಮೃದಂಗ, 3 ದಿನದಲ್ಲೇ 5 ಕಾಡಾನೆ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Elephants Death: ಬೇಸಿಗೆ ಬವಣೆ, ಅರಣ್ಯದಲ್ಲಿ ಆನೆಗಳ ಮರಣ ಮೃದಂಗ, 3 ದಿನದಲ್ಲೇ 5 ಕಾಡಾನೆ ಸಾವು

Elephants Death: ಬೇಸಿಗೆ ಬವಣೆ, ಅರಣ್ಯದಲ್ಲಿ ಆನೆಗಳ ಮರಣ ಮೃದಂಗ, 3 ದಿನದಲ್ಲೇ 5 ಕಾಡಾನೆ ಸಾವು

Forest news ಕರ್ನಾಟಕದಲ್ಲಿ ಬಿಸಿಲು ಸೇರಿದಂತೆ ಹಲವು ಕಾರಣಗಳಿಂದ ಆನೆಗಳ ಸಾವಿನ ಸಂಖ್ಯೆ ಹೆಚ್ಚಿದೆ.

ಬಿಸಿಲ ಬೇಗೆಯಿಂದ ರಾಮನಗರ ಬಳಿ ಕಾಡಾನೆ ಮೃತಪಟ್ಟಿದೆ,
ಬಿಸಿಲ ಬೇಗೆಯಿಂದ ರಾಮನಗರ ಬಳಿ ಕಾಡಾನೆ ಮೃತಪಟ್ಟಿದೆ,

ಬೆಂಗಳೂರು: ಈ ಬಾರಿ ಬಿಸಿಲಿನ ಬೇಗೆ ಮನುಷ್ಯನಿಗೆ ಮಾತ್ರ ತಟ್ಟಿಲ್ಲ. ವನ್ಯಜೀವಿಗಳ ಮೇಲೂ ಪ್ರಭಾವ ಬೀರಿದೆ. ಅದರಲ್ಲೂ ಕಾಡಾನೆಗಳು ಅರಣ್ಯದಲ್ಲಿ ಬಿಸಿಲ ಕಾರಣಕ್ಕೆ ಸಾಯುತ್ತಿದೆ. ಮೂರು ದಿನದ ಅಂತರದಲ್ಲೇ ಐದು ಆನೆಗಳು ಜೀವ ಬಿಟ್ಟಿರುವುದು ಬಿಸಿಲ ಪರಿಣಾಮವನ್ನು ತೋರುತ್ತಿದೆ. ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಾಡಾನೆಗಳು ಮೃತಪಟ್ಟಿದ್ದು. ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಕೆಲವು ಆನೆಗಳು ನೀರಿನ ಕೊರತೆಯಿಂದ ಮೃತಪಟ್ಟರೆ, ಆಹಾರದಲ್ಲಿ ವ್ಯತ್ಯಯವಾಗಿ ಅನಾರೋಗ್ಯದಿಂದ ಎರಡು ಆನೆಗಳು ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ತಮಿಳುನಾಡು ಗಡಿಯಲ್ಲಿರುವ ಕಾವೇರಿ ವನ್ಯಜೀವಿ ಧಾಮದ ಗೋಪಿನಾಥಂನ ಕಾವೇರಿ ನದಿ ತೀರದಲ್ಲಿ ಭಾರೀ ಗಾತ್ರದ ಆನೆ ಮೃತಪಟ್ಟಿದೆ. ಅಲ್ಲಿಯೇ ಬಿದ್ದು ಮೂರು ದಿನಗಳಾಗಿದ್ದು ದೇಹದ ಭಾಗವನ್ನು ಮೀನುಗಳು ತಿಂದಿವೆ. ನೀರು ಕುಡಿಯಲೆಂದು ಆನೆ ಕಾವೇರಿ ನದಿಗೆ ಬಂದಾಗ ಜಾರಿ ಬಿದ್ದಿದೆ. ಮತ್ತೆ ಮೇಲೆ ಏಳಲು ಆನೆಗೆ ಆಗಿಲ್ಲ.

ಮಾವು ತಿಂದು ಸಾವು

ಬೇಸಿಗೆ ಕಾರಣಕ್ಕೆ ದೂರದಿಂದ ಆನೆ ನೀರು ಕುಡಿಯಲು ಬಂದಾಗ ಬಿದ್ದು ಮೃತಪಟ್ಟಿರುವ ಅನುಮಾನಗಳಿವೆ. ಆನೆಯ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದ ಭಾಗವನ್ನು ವಿಧಿವಿಜ್ಞಾನ ಪ್ರಯೋಗಾಲಕ್ಕೆ ರವಾನಿಸಲಾಗಿದ್ದು. ವರದಿ ಬಂದ ನಂತರ ಆನೆಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕಾವೇರಿ ವನ್ಯಧಾಮದ ಡಿಸಿಎಫ್‌ ಸುರೇಂದ್ರ ಹೇಳುತ್ತಾರೆ.

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನಲ್ಲಿ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡ ಅರಣ್ಯದಲ್ಲಿ 11 ವರ್ಷದ ಆನೆ ಮಾವು ತಿಂದು ಮೃತಪಟ್ಟಿದೆ. ಆಹಾರ ಸೇವಿಸುವ ಮೇಳೆ ಮಾವಿನ ಕಾಯಿಗಳನ್ನು ಆನೆ ತಿಂದಿದೆ. ಅದು ಕರುಳಿನಲ್ಲಿ ಸಿಲುಕಿಕೊಂಡು ಆನೆ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದೆ. ಆಹಾರದ ವ್ಯತ್ಯಯವೇ ಆನೆ ಸಾವಿಗೆ ಕಾರಣ ಇರಬಹುದು ಎನ್ನುವುದು ಕನಕಪುರ ಎಸಿಎಫ್‌ ಗಣೇಶ್‌ ನೀಡುವ ವಿವರಣೆ.

ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನದ ಕೋಡಿಹಳ್ಳಿ ವಲಯದಲ್ಲಿ ಮಖನಾ( ಗಂಡೂ ಅಲ್ಲ ಹೆಣ್ಣೂ ಅಲ್ಲ) ಆನೆ ಜೀವ ಬಿಟ್ಟಿದೆ. ಈ ಆನೆಯೂ ಬಿಸಿಲಿನಿಂದ ಜೀವ ಕಳೆದುಕೊಂಡಿರುವುದು ಕಂಡು ಬಂದಿದೆ. ರಾಮನಗರ ಸಮೀಪದಲ್ಲೇ ದೇಹದಲ್ಲಿ ನೀರಿನ ಕೊರತೆಯಿಂದಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿಬಿರದ ಆನೆ ಸಾವು

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಿರಿಯಾಪಟ್ಟಣ ತಾಲ್ಲೂಕಿನ ಆನೆಚೌಕೂರು ಶಿಬಿರದಲ್ಲಿ ಆನೆಯೊಂದು ಮೃತಪಟ್ಟಿದೆ. ಐದು ತಿಂಗಳ ಹಿಂದೆಯಷ್ಟೇ ಸೆರೆ ಹಿಡಿದಿದ್ದ ವಿರಾಟ್‌ ಎನ್ನುವ ಆನೆಯು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಇಲಾಖೆ ಪ್ರಕಟಣೆ ತಿಳಿಸಿದೆ.

ನಾಗರಹೊಳೆ ವ್ಯಾಪ್ತಿಯ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಕಾಡಿನಿಂದ ಹೊರ ಬಂದು ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸೆರೆ ಹಿಡಿಯಲಾಗಿತ್ತು. ಅದಕ್ಕೆ ವಿರಾಟ್‌ ಎನ್ನುವ ಹೆಸರಿಟ್ಟು ಆನೆ ಚೌಕೂರು ಶಿಬಿರದಲ್ಲಿ ಪಳಗಿಸಲಾಗುತ್ತಿತ್ತು. ಆನೆ ಕಾಲಿಗೆ ಸೆರೆ ಹಿಡಿಯುವಾಗಲೇ ಗಾಯವಾಗಿತ್ತು. ಈಗ ಆನೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿ ಆನೆ ಶವವನ್ನು ಹೂಳಲಾಗಿದೆ.

ಕರ್ನಾಟಕದಲ್ಲಿ ಹಿಂದೆ ಈ ಪ್ರಮಾಣದಲ್ಲಿ ಬೇಸಿಗೆ ವೇಳೆ ಆನೆಗಳು ಮೃತಪಟ್ಟಿದ್ದು ಕಡಿಮೆ. ಈ ಬಾರಿ ಸಂಖ್ಯೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯವರು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಪರಿಸರವಾದಿ ಜೋಸೆಫ್‌ ಹೂವರ್‌ ಹೇಳುತ್ತಾರೆ.

Whats_app_banner