ಕಾಡಿನ ಕಥೆಗಳು: ಮೈಸೂರು ದಸರಾ ಜಂಬೂ ಸವಾರಿ ಗೆಲ್ಲಿಸಿದ ಅಭಿಮನ್ಯು ಆತ್ಮವಿಶ್ವಾಸ, ಮಾವುತ ವಸಂತನ ಮಾಸದ ನಗು; ನಿಮಗೊಂದು ಸಲಾಂ
ಮೈಸೂರು ದಸರಾದ ಮುಖ್ಯ ಭಾಗ ಜಂಬೂ ಸವಾರಿ. ಅಲ್ಲಿ ಅಭಿಮನ್ಯು ಆನೆ, ತಾಯಿ ಚಾಮುಂಡೇಶ್ವರಿಯೇ ಕೇಂದ್ರ ಬಿಂದು. ಜಂಬೂ ಸವಾರಿ ನಿರಾತಂಕವಾಗಿರಲಿ ಎನ್ನುವ ಲಕ್ಷಾಂತರ ಮನಸುಗಳ ಭಾವನೆಯ ಬಿಂಬದಂತೆ ಕಂಡಿದ್ದು ಅಭಿಮನ್ಯು ಮಾವುತ ವಸಂತನ ನಗು ಹಾಗು ನಡೆ. ಈ ವಾರದ ಕಾಡಿನ ಕಥೆಯಲ್ಲಿ ದಸರಾ ಹೀರೋ ವಸಂತ.
ಅಸಂಖ್ಯಾತ ಜನ ಅಲ್ಲಿ ಸೇರಿದ್ದರು.ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಗಣ್ಯಾತಿ ಗಣ್ಯರು ಆಸೀನರಾಗಿದ್ದರು. ಸುಮಾರು ಐದು. ಕಿ.ಮಿ. ಉದ್ದಕ್ಕೂ ಲಕ್ಷಾಂತರ ಮಂದಿ ಕಾತರದಿಂದ ಕಾಯುತ್ತಿದ್ದರು. ಜಂಬೂ ಸವಾರಿ ಸುಸೂತ್ರವಾಗಿ ಮುಗಿದು ಬಿಡಲಿ ಎಂದು ಮನದಲ್ಲಿಯೇ ಅಂದುಕೊಂಡವೂ ಇದ್ದರು. ಗಣ್ಯರು, ಜನರ ಆಶಯದಂತೆಯೇ ದಸರಾ ಸುಸೂತ್ರವಾಗಿ ನಡೆದು ಹೋಯಿತು. ಚಿನ್ನದ ಅಂಬಾರಿ ಹೊತ್ತು ಅದರಲ್ಲಿ ಚಾಮುಂಡೇಶ್ವರಿ ತಾಯಿ ವಿಗ್ರಹದೊಂದಿಗೆ ಹೆಜ್ಜೆ ಹಾಕಿದ ಅಭಿಮನ್ಯು ಎಂದ ಧೀರ- ಶೂರನೂ ಗೆಲ್ಲಿಸಿಯೇ ಬಿಟ್ಟ. ಇದರ ಹಿಂದೆ ಇದ್ದ ವಸಂತ ಎಂಬ ಮಾವುತ ಅಭಿಮನ್ಯುವಿನ ಮೇಲೆ ಕುಳಿತುಕೊಂಡು ಅಂಬಾರಿ ಆರಂಭಗೊಳ್ಳುವ ಮುನ್ನ ಹೊರ ಹೊಮ್ಮಿಸಿದ ನಗು, ಮಾರ್ಗದುದ್ದಕ್ಕೂ ಜನರೆಡೆ ನಗುಮುಖದೊಂದಿಗೆ ಕೈಬಿಸಿದ ವಸಂತರ ಛಾತಿ ನಿಜಕ್ಕೂ ಗ್ರೇಟ್. ಮೈಸೂರು ದಸರಾದಲ್ಲಿ ಸೇರಿದ್ದ ಲಕ್ಷಾಂತರ ಜನರ ನಡುವೆ ಅಭಿಮನ್ಯು ಆತ್ಮವಿಶ್ವಾಸದ ಹೆಜ್ಜೆ, ಮಾವುತ ವಸಂತ ಗೆಲ್ಲುವ ಛಾತಿಯ ಆ ನಗು ಎರಡಕ್ಕೂ ಬೆಲೆ ಕಟ್ಟಲಾಗದು.
ಏನನ್ನೇ ಮಾಡಿದರೂ ಒಂದು ನಗು ಮುಖದ ಮೇಲೆ ಇದ್ದರೆ ಅರ್ಧ ಗೆದ್ದಂತೆ. ಅದೇ ನಗುವನ್ನು ಕೊನೆಯವರೆದು ಕಾದಿಟ್ಟುಕೊಂಡರೆ ಗೆಲುವು ಎನ್ನುವುದು ನೀರು ಕುಡಿದಂತೆ. ದಸರಾದಲ್ಲೂ ಹಾಗೆಯೇ ಆಗಿದ್ದು. ದಸರಾ ಎನ್ನುವುದು ಬರೀ ಉತ್ಸವವಲ್ಲ. ಜನರ ಸಂಬಂಧದ ಹಬ್ಬ. ಆನೆಯ ಮೇಲೆ ಅಂಬಾರಿಯಿಟ್ಟು ಅದರಲ್ಲಿ ಚಾಮುಂಡೇಶ್ವರಿ ನಮ್ಮ ಮುಂದೆ ಬಂದಾಗ ಕಾಣುವ ಸುಖ, ನಿರಾಳ ಭಾವ ವಿಶೇಷವಾದದ್ದು. ಅಂತ ಭಾವವನ್ನು ಜನರಲ್ಲಿ ತುಂಬುವುದು ಅಷ್ಟು ಸುಲಭವಲ್ಲ. ಅದರ ಹಿಂದೆ ಇರುವುದು ಆತ್ಮ ವಿಶ್ವಾಸ ಹಾಗೂ ಅದರ ಪ್ರತಿರೂಪವಾದ ನಗು. ಈ ಬಾರಿಯ ದಸರಾದಲ್ಲೂ ಕಂಡಿದ್ದು ಇದೇ ಮುಖಗಳು.
ಅಂಬಾರಿ ಹೊತ್ತ ಆನೆಗಳ ಆ ದಿನಗಳು
ಹಿಂದೆಲ್ಲಾ ಹದಿನೈದಕ್ಕೂ ಹೆಚ್ಚು ಆನೆಗಳು ಅಂಬಾರಿ ಹೊತ್ತಿವೆ. ಜಯ ಮಾರ್ತಾಂಡ, ರಾಜೇಂದ್ರ, ಐರಾವತ, ವಿಜಯಬಹದ್ದೂರ್, ನಂಜುಂಡ, ದ್ರೋಣ, ಬಲರಾಮ, ಅರ್ಜುನ ಸಹಿತ ಹಲವು ಆನೆಗಳು ತಮ್ಮ ಕಾಯಕವನ್ನು ಅಚ್ಚುಕಟ್ಟಾಗಿ ನಿಭಾಯಿಸಿವೆ. ಮಾವುತರೂ ಕೂಡ ಆನೆಗಳ ಒಡನಾಟದೊಂದಿಗೆ ಜಂಬೂ ಸವಾರಿಗೆ ಹಿರಿಮೆ ತಂದಿದ್ದಾರೆ. ಹಾಗೆ ಆನೆ ಮೇಲೆ ಕುಳಿತು ಜಂಬೂ ಸವಾರಿಯಲ್ಲಿ ಹೊರಟ ಮಾವುತರು ಹೀಗೆ ಆತ್ಮವಿಶ್ವಾಸದ ನಗು ಬೀರಿದ್ದು ಕಡಿಮೆಯೇ. ಬಲರಾಮನ ಮೇಲೆ ಕುಳಿತಿರುತ್ತಿದ್ದ ಸಣ್ಣಪ್ಪ, ತಿಮ್ಮ, ಅರ್ಜುನನ್ನೇ ಬದಲಿಸಿ ಹೀರೋ ಮಾಡಿದ ದೊಡ್ಡ ಮಾಸ್ತಿ, ಅವರ ಮಗ ವಿನು ಕೂಡ ಆನೆ ಮೇಲೆ ಕುಳಿತಿದ್ದರೂ, ವಿಶ್ವಾಸದೊಂದಿಗೆ ಮುನ್ನಡೆಸುತ್ತಿದ್ದರು. ಆದರೆ ವಸಂತ ಈ ಎಲ್ಲಾ ಗುಣಗಳೊಂದಿಗೆ ಆತ್ಮವಿಶ್ವಾಸದ ನಗು ಬೀರಿದ್ದು, ಜನರ ಅಪರಿಮಿತ ಪ್ರೀತಿಯ ಭಾಗವಾಗಿ ಮಾರ್ಗದುದ್ದಕ್ಕೂ ಅವರಿಗೆ ನಮಸ್ಕರಿಸುತ್ತಾ ಹೋದದ್ದು ವಾರೇ ವ್ಹಾ ಎನ್ನುವ ಉದ್ಘಾರಕ್ಕೂ ಕಾರಣವಾಯಿತು.
ಅಭಿಮನ್ಯು ಮಾವುತ ವಸಂತನಿಗೆ ಈಗ ನಲವತ್ತರ ಆಜೂಬಾಜು. ಹುಟ್ಟಿದಾಗಿನಿಂದಲೇ ಆನೆಯೊಂದಿಗೆ ಒಡನಾಟ ಬೆಳೆಸಿಕೊಂಡ ಬಾಲಕ ಈಗ ವಿಶ್ವವಿಖ್ಯಾತ ದಸರಾ ಉತ್ಸವದಲ್ಲಿ ಗಜಪಡೆಯನ್ನು ಗೆಲ್ಲಿಸುವ ಕ್ಷಣದವರೆಗೂ ಬೆಳೆದಿರುವುದು, ಅದೆಷ್ಟೋ ಮಂದಿ ಏನಾಗಲಿದೆಯೋ ಎನ್ನುವ ಆತಂಕದಲ್ಲಿದ್ದರೂ ಅದ್ಯಾವುದರ ಗೊಡವೆಯೇ ಇಲ್ಲದೇ ನಾವೆಲ್ಲ ಗೆದ್ದೇ ಗೆಲ್ಲುತ್ತೇವೆ. ಅಭಿಮನ್ಯು ಆ ತಾಯಿಯನ್ನು ಹೊತ್ತು ಸುಸೂತ್ರವಾಗಿ ಸಾಗಲಿದ್ದಾನೆ. ಎಲ್ಲರಿಗೂ ಆ ತಾಯಿ ದರ್ಶನ ಸಿಗಲಿದೆ. ಇಡೀ ದಸರಾ ಹಬ್ಬ ನಿರಾತಂಕವಾಗಿ ಮುಗಿಯಲಿದೆ ಎಂದು ಆತ್ಮವಿಶ್ವಾಸದ ನಗು ಬೀರುವುದು ಇದೆಯಲ್ಲ. ಅದು ಸುಮ್ಮನೇ ಎಲ್ಲರಿಗೂ ಬರುವುದಿಲ್ಲ. ಅದು ವಿಶ್ವಾಸದ ಸಂಕೇತವೂ ಹೌದು. ವ್ಯಕ್ತಿತ್ವದ ರೂಪವೂ ಹೌದು.
ಬಾಲಕ ವಸಂತನಿಂದ
ಎಂಬತ್ತರ ದಶಕದಲ್ಲಿ ನಾಗರಹೊಳೆಯ ಮತ್ತಿಗೋಡು ಸಮೀಪದ ಹಾಡಿಯಲ್ಲೇ ಜನಿಸಿದ ವಸಂತನ ತಂದೆ ಸಣ್ಣಪ್ಪ ಕೂಡ ಮಾವುತರಾಗಿದ್ದರು. ಅವರು ಮೊದಲು ಒಂದೆರಡು ಆನೆ ನೋಡಿಕೊಂಡು ನಂತರ ಅಭಿಮನ್ಯು ಆನೆ ಮಾವುತರಾಗಿದ್ದರು. ಬಾಲಕ ವಸಂತನನ್ನು ಆನೆಯೊಂದಿಗೆ ಕರೆದೊಯ್ಯುತ್ತಿದ್ದರು. ಕಾಡು ಕುರುಬ ಜನಾಂಗದವರಿಗೆ ಆನೆಗಳನ್ನು ಪಳಗಿಸುವ, ಅವುಗಳೊಂದಿಗೆ ಒಡನಾಡುವ ಕಲೆ ಚೆನ್ನಾಗಿತ್ತು. ಕಾಡಿನಲ್ಲೇ ಹುಟ್ಟಿ ಬೆಳೆದು ಆ ಕೌಶಲ್ಯಗಳನ್ನೆಲ್ಲಾ ಅಲ್ಲಿಯೇ ಅವರು ಕಲಿತು ಬಿಡುತ್ತಾರೆ. ವಸಂತ ಕೂಡ ಅಪ್ಪ ಬಯಸಿದಂತೆಯೇ ಶಾಲೆಗೆ ಹೋಗಿ ಬಂದ ನಂತರ ಆನೆಯೊಂದಿಗೆ ಕಳೆಯುತ್ತಿದ್ದ. ಅವುಗಳ ಪರಿಭಾಷೆ, ಸಾಮಾಜಿಕ ಜೀವನ, ನಿರ್ವಹಿಸುವ ಕೌಶಲ್ಯಗಳನ್ನೆಲ್ಲಾ ಕಲಿತಿದ್ದ. ಆನೆಗಳು ವಸಂತನೊಂದಿಗೆ ಒಗ್ಗಿಕೊಂಡಿದ್ದವು ಕೂಡ. ನಂತರ ವಸಂತನ ತಂದೆ ಸಣ್ಣಪ್ಪನಿಗೆ ಅಭಿಮನ್ಯು ಆನೆಯ ಜವಾಬ್ದಾರಿ ನೀಡಲಾಯಿತು. ಸಣ್ಣಪ್ಪ ಕೂಡ ಆನೆ ಪಳಗಿಸುವ, ಅವುಗಳೊಂದಿಗೆ ಒಡನಾಟ ಇಟ್ಟುಕೊಂಡು ಯಶಸ್ವಿ ಮಾವುತರಾದವರೇ. ಅಭಿಮನ್ಯುವಿನೊಂದಿಗೆ ಹೀಗೆ ವಸಂತನ ಒಡನಾಟ ಎರಡೂವರೆ ದಶಕಕ್ಕೂ ಹೆಚ್ಚಿನ ಕಾಲದ್ದು. ಯುವಕನಾಗಿದ್ದ ವಸಂತ ಅಭಿಮನ್ಯು ಪ್ರೀತಿಯ ಗೆಳಯನೂ ಆಗಿ ಬದಲಾಗಿ ಹೋದ. ಆನೆಗಳು ಒಮ್ಮೆ ಯಾರನ್ನಾದರೂ ಹಚ್ಚಿಕೊಂಡರೆ, ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಬೆಳೆದರೆ ಎಂತಹ ಸನ್ನಿವೇಶದಲ್ಲೂ ಜತೆ ಬಿಡುವುದಿಲ್ಲ. ಮಾತುಗಳನ್ನು ಪಾಲಿಸಿ ಹೇಳಿದಂತೆ ನಡೆಯುವ ಪ್ರಾಣಿಗಳು ಅವು. ವಸಂತನಿಗೆ ಅಂತದೊಂದು ಸಖ್ಯ ಬೆಳೆದು ಅದು ವಿಸ್ತಾರಗೊಳ್ಳುತ್ತಾ ಹೋಯಿತು. ಬಹುತೇಕ ಒಂದು ಆನೆ ಮಾವುತ ಇದ್ದರೆ ಆತನ ಮಗ ಇಲ್ಲವೇ ಕುಟುಂಬದವರಿಗೆ ಕಾವಾಡಿ ಜವಾಬ್ದಾರಿ ನೀಡಲಾಗುತ್ತದೆ. ಅಪ್ಪ ಸಣ್ಣಪ್ಪನ ಅಣತಿಯಂತೆ ಮಗ ವಸಂತ ಕಾವಾಡಿಯಾಗಿ ಸೇರಿಕೊಂಡ. ಅಪ್ಪ- ಮಗನ ಜತೆಯಲ್ಲಿ ಅಭಿಮನ್ಯು ಪಕ್ಕಾ ಆಗುತ್ತಾ ಹೋದ. ಅಭಿಮನ್ಯು ಧೈರ್ಯಶಾಲಿ. ಎಂತಹ ಕಾಡಾನೆಯಾದರೂ ಅದನ್ನು ಹಿಮ್ಮೆಟ್ಟಿಸುವ ಛಾತಿ ಇರುವುದನ್ನು ಗಮನಿಸಿ ಅದರಲ್ಲಿಯೇ ಪಳಗಿಸಿದ್ದರು ಸಣ್ಣಪ್ಪ. ಇದೇ ಕಾರಣದಿಂದ ಅಭಿಮನ್ಯು ಕರ್ನಾಟಕ ಮಾತ್ರವಲ್ಲದೇ ಮಧ್ಯಪ್ರದೇಶ ಸಹಿತ ಹಲವು ರಾಜ್ಯಗಳಿಗೂ ಆನೆ ಸೆರೆ ಕಾರ್ಯಾಚರಣೆಗಳಲ್ಲೂ ಸೈ ಎನ್ನಿಸಿಕೊಂಡಿರುವ ಛಾತಿವಂತ. ಸರ್ಗೂಜ ಎನ್ನುವ ಸಾಕ್ಷ್ಯ ಚಿತ್ರದಲ್ಲಿ ಅಭಿಮನ್ಯುವಿನ ಹಿರಿಮೆಯನ್ನು ದಾಖಲಿಸಲಾಗಿದೆ. ಅಪ್ಪ ನಿವೃತ್ತರಾದ ಬಳಿಕ ವಸಂತನಿಗೆ ಇದೇ ಆನೆ ಮಾವುತನ ಜವಾಬ್ದಾರಿಯೂ ಸಿಕ್ಕಿತು. ಒಂದೆರಡು ವರ್ಷದಲ್ಲಿ ಹುದ್ದೆಯೂ ಕಾಯಂ ಆಯಿತು. ಎಂದೂ ಮೈಮರೆಯದೇ ಪ್ರೀತಿಯಿಂದಲೇ ಅಭಿಮನ್ಯುವನ್ನು ನೋಡಿಕೊಳ್ಳುವ ವಸಂತ ಅವರ ತಂದೆ ಸಣ್ಣಪ್ಪನಂತೆಯೇ ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ವಿಶ್ವಾಸ ತುಂಬುವ ಗುಣ. ನಾನು ನೋಡುವೆ ಬಿಡಿ ಸರ್ ಎಂದು ಒಂದು ಮಾತು ವಸಂತ ಹೇಳಿದರೆ ಮುಗಿದು ಹೋಯಿತು. ಅದು ದಸರಾ ಇರಬಹುದು, ಇನ್ನಾವುದೇ ಉತ್ಸವ ಇರಬಹುದು. ಘಟಾನುಘಟಿ ಆನೆ ಹಿಡಿಯುವ ಕಾರ್ಯಾಚರಣೆಯೇ ಇರಬಹುದು.ಅಲ್ಲಿ ವಸಂತ ಇದ್ದರೆ ಅಭಿಮನ್ಯು ಕೆಲಸದಲ್ಲಿ ಸೈ ಎನ್ನುವಷ್ಟರ ಮಟ್ಟಿಗೆ ವಿಶ್ವಾಸದ ಇಡುಗಂಟು ಗಟ್ಟಿಯಾಗಿದೆ. ಆ ವಿಶ್ವಾಸ ಎನ್ನುವುದೇ ಇಲ್ಲವಾದರೆ ಗೆಲುವು ಎಲ್ಲಿ ಸಾಧ್ಯ ಹೇಳಿ.
ಮೈಸೂರಿಗೆ ಆನೆ ಬಂದಾಗ
ಒಂದೂವರೆ ದಶಕದ ಹಿಂದೆ ಮೈಸೂರು ನಗರಕ್ಕೆ ಕಾಡಾನೆಗಳು ನುಗ್ಗಿ ಜನರನ್ನು ಭಯಗೊಳಿಸಿದ್ದವು. ಆನೆಗಳನ್ನು ಹಿಡಿಯಲು ಬಂದಿದ್ದು ಇದೇ ಅಭಿಮನ್ಯು. ಸೆರೆ ಸಿಕ್ಕ ಕಾಡಾನೆ ಲಾರಿ ಹತ್ತಲು ತಂಟೆ ಮಾಡಿದಾಗ ಅಭಿಮನ್ಯುವಿನ ನಯವಾದ ಏಟಿಗೆ ಬದಲಾದ ಸನ್ನಿವೇಶವನ್ನು ಜನ ಕಣ್ಣಾರೆ ಕಂಡಿದ್ದರು. ಅಭಿಮನ್ಯುವಿನ ಮೇಲೆ ಕುಳಿತು ಸಂಜ್ಞೆ ಕೊಡುತ್ತಿದ್ದವನೇ ವಸಂತ.ಇದೊಂದು ಉದಾಹರಣೆಯಷ್ಟೇ.
ಐದು ವರ್ಷದ ಹಿಂದೆ ಮೈಸೂರು ದಸರಾ ಜಂಬೂ ಸವಾರಿ ಹೊರಿಸುವ ಜವಾಬ್ದಾರಿ ಯಾರಿಗೆ ನೀಡಬೇಕು ಎನ್ನುವ ಪ್ರಶ್ನೆಎದುರಾದಾಗ ಹಿರಿತನದ ಆಧಾರದ ಮೇಲೆ ಅಭಿಮನ್ಯುವಿನ ಹೆಸರೇ ಬಂದಿತು. ಹಿರಿತನ ಒಂದೆಡೆ ಇದ್ದರೂ ಅಭಿಮನ್ಯುವಿನ ಕಾರ್ಯಕ್ಷಮತೆ ಬಗ್ಗೆ ಯಾರಿಗೂ ಅನುಮಾನವೇ ಇರಲಿಲ್ಲ. ಅದಕ್ಕೆ ವಸಂತನೂ ಕಾರಣನಾಗಿದ್ದ. ವಸಂತ- ಅಭಿಮನ್ಯುವಿದ್ದರೆ ಜಂಬೂ ಸವಾರಿ ನಿರಾತಂಕವಾಗಿ ಮುಗಿಯಲಿದೆ ಎಂದು ಆಗಿನ ವನ್ಯಜೀವಿ ಪಶು ವೈದ್ಯಾಧಿಕಾರಿ, ಆನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಾ. ಡಿ.ಎನ್.ನಾಗರಾಜು ವರದಿ ಬರೆದಿದ್ದರು.
ವಸಂತ ಇದ್ದರೆ ಅಭಿಮನ್ಯು ಸುರಕ್ಷಿತ
ವಸಂತ ಇದ್ದಾನೆ ಎಂದರೆ ನಮಗೆ ಅಪಾರ ನಂಬಿಕೆ. ಆತ ಎಲ್ಲವನ್ನೂ ಅಚ್ಚುಕಟ್ಟಾಗಿ ಮುಗಿಸಬಲ್ಲ ಎನ್ನುವ ಅಪರಿಮಿತ ಭಾವನೆ. ಅವರ ತಂದೆ ಕಾಲದಿಂದಲೂ ವಸಂತನನ್ನು ನೋಡಿಕೊಂಡು ಬಂದಿದ್ದೇನೆ. ತಮಗೆ ಸಿಕ್ಕ ಅವಕಾಶವನ್ನು ಕಾಯಕವೇ ಕೈಲಾಸ ಎಂಬಂತೆ ಅಭಿಮಾನದ ಜತೆಗೆ ಶ್ರದ್ದೆಯಿಂದ ಮಾಡಿಕೊಂಡು ಬಂದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ನಮ್ಮ ವಸಂತನೇ ಉದಾಹರಣೆ. ಸಣ್ಣ ವಯಸ್ಸಿಗೆ ಅಂತಹದೊಂದು ವಿಶ್ವಾಸ ಬೆಳೆಸಿಕೊಳ್ಳುವುದು ಸುಮ್ಮನೇ ಅಲ್ಲವಲ್ಲ ಎಂದು ಡಾ.ನಾಗರಾಜು ಹೇಳುತ್ತಾ ಹೋದರು.
ರಂಗಭೂಮಿಯಲ್ಲಿ ಒಂದು ಹಾಡಿದೆ. ಸೋಲಿಸಬೇಡ ಗೆಲ್ಲಿಸಯ್ಯಾ, ಯಾವುದೇ ನಾಟಕ ಆರಂಭಗೊಳ್ಳುವ ಮುನ್ನ ಇದನ್ನು ಹಾಡುತ್ತಾರೆ. ಕನ್ನಡದ ಲೇಖಕಿ, ರಂಗ ತಜ್ಞೆಯಾಗಿದ್ದ ಪ್ರೇಮಾ ಕಾರಂತ ಅವರ ಆತ್ಮಕಥೆಯ ಹೆಸರು ಕೂಡ ಸೋಲಿಸಬೇಡ...ಗೆಲಿಸಯ್ಯ. ಹೀಗೆಯೇ ಕಾಡಿನ ಮಕ್ಕಳು ದಸರಾ ಜಂಬೂ ಸವಾರಿಯನ್ನು ಗೆಲ್ಲಿಸುವ ಈ ಕ್ಷಣವನ್ನು ಕಂಡಾಗಲು ಅನ್ನಿಸಿದ್ದು ವಸಂತನ ನಗುವಿನ ಹಿಂದೆ ಇದ್ದುದೂ ಕೂಡ ಸೋಲಿಸಬೇಡ.ಗೆಲಿಸಯ್ಯ ಎನ್ನುವ ಮನೋಭಾವವೇ.
ಜಂಬೂ ಸವಾರಿ ಮಾರ್ಗದಲ್ಲಿ ಚಾಮುಂಡೇಶ್ವರಿಗೆ ಉಘೇ ಎಂದವರು ವಸಂತನಿಗೂ ಜೈ ಎಂದು ಬಿಟ್ಟರು. ಪ್ರೀತಿಯಿಂದಲೇ ವಸಂತಣ್ಣ ಎಂದೂ ಕೂಗಿದರು. ಅವರಿಗೆಲ್ಲಾ ನಿರಾಶೆ ಮಾಡದೇ ನಕ್ಕು ಕೈ ಬೀಸಿದರು ವಸಂತ. ಮಾಸದ ನಗುವನ್ನು ಸಹಸ್ರಾರು ಮನಸುಗಳಲ್ಲಿ ಸೃಷ್ಟಿಸಿಬಿಟ್ಟರು.
ಅಭಿಮನ್ಯು ಹಾಗೂ ವಸಂತ ನಿಮಗೊಂದು ಸಲಾಂ.