ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾರ್ಜ್‌ಶೀಟ್ ಅಂಶಗಳ ಪ್ರಕಟಣೆಗೆ ಮಾಧ್ಯಮಗಳಿಗೆ ಹೈಕೋರ್ಟ್ ನಿರ್ಬಂಧ
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿರುವ ಚಾರ್ಜ್ ಶೀಟ್‌ನಲ್ಲಿರುವ ಅಂಶಗಳನ್ನು ಮಾಧ್ಯಮಗಳು ಬಿತ್ತರಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕುರಿತು ಮಧ್ಯಂತರ ಆದೇಶ ಹೊರಡಿಸಿದೆ. ಅತ್ತ, ಕೊಲೆಯಾದ ರೇಣುಕಾಸ್ವಾಮಿಯಿಂದ ನನಗೆ ಯಾವುದೇ ಅಶ್ಲೀಲ ಸಂದೇಶ ಬಂದಿಲ್ಲ ಎಂದು ನಟಿ ರಾಗಿಣಿ ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿರುವ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಮತ್ತು ಅದಕ್ಕೆ ಪೂರಕವಾದ ಇತರೆ ಯಾವುದೇ ಅಂಶಗಳನ್ನು ಮಾಧ್ಯಮಗಳು ಮುದ್ರಣ, ಪ್ರಸಾರ ಮತ್ತು ಹಂಚಿಕೆ ಮಾಡಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಸಂಬಂಧ ದರ್ಶನ್ ತೂಗುದೀಪ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ.
ಅರ್ಜಿದಾರರು ಕೋರಿರುವ ಮನವಿಯು ಮೇಲ್ನೋಟಕ್ಕೆ ಸೂಕ್ತ ಎಂದು ಕಂಡು ಬಂದಿದೆ. ಆದ್ದರಿಂದ ಮಾಧ್ಯಮಗಳು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯಲ್ಲಿರುವ ಗೌಪ್ಯ ಮಾಹಿತಿಯನ್ನು ಮುಂದಿನ ಆದೇಶದವರೆಗೆ ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು. ಈ ಆದೇಶವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪ್ರಕರಣದ ಪ್ರತಿವಾದಿಗಳಾಗಿರುವ 37ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳಿಗೆ ರವಾನಿಸಬೇಕು. ನ್ಯಾಯಾಲಯದ ಆದೇಶ ಮತ್ತು ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ ಎಂದು ತಿಳಿದು ಬಂದಿದೆ.
ನಿನ್ನೆ ಸೋಮವಾರ, ಈ ಸಂಬಂಧ ದರ್ಶನ್ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಚಾರ್ಜ್ ಶೀಟ್‌ನಲ್ಲಿರುವ ಮತ್ತು ಇತರೆ ಯಾವುದೇ ಅಂಶಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿದ್ದರು. ದರ್ಶನ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ ನಾವದಗಿ ಅವರು ವಾದ ಮಂಡಿಸುತ್ತಾ ಸುದ್ದಿ ಮಾಧ್ಯಮಗಳು, ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ದಿನವಿಡೀ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವಾಗ್ರಹ ಪೀಡಿತರಾಗಿರುವಂತೆ ಪ್ರಸಾರ ಮಾಡುತ್ತಿವೆ. ಈ ರೀತಿ ಪ್ರಸಾರ ಮಾಡುವುದು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಂತ್ರಣ ಕಾಯ್ದೆ 1995ರ ಉಲ್ಲಂಘನೆಯಾಗುತ್ತದೆ. ಜತೆಗೆ ದರ್ಶನ್ ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯೂ ಆಗುತ್ತದೆ. ಆದ್ದರಿಂದ ಮಾಧ್ಯಮಗಳನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿಕೊಂಡರು. ಆಗ ನ್ಯಾಯಮೂರ್ತಿಗಳು ಆಕ್ಷೇಪಣೆ ಇರುವ ನಿರ್ಧಿಷ್ಟ ಮಾಧ್ಯಮಗಳ ಪಟ್ಟಿ ನೀಡುವಂತೆ ಸೂಚಿಸಿದ್ದರು. ಅದರಂತೆ ಇಂದು ಮಂಗಳವಾರ 37ಕ್ಕೂ ಹೆಚ್ಚು ಮಾಧ್ಯಮಗಳ ಪಟ್ಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿಯಿಂದ ಅಶ್ಲೀಲ ಸಂದೇಶ ಬಂದಿಲ್ಲ; ರಾಗಿಣಿ
ರೇಣುಕಾಸ್ವಾಮಿಯಿಂದ ನನಗೆ ಯಾವುದೇ ಅಶ್ಲೀಲ ಸಂದೇಶ ಬಂದಿಲ್ಲ ಎಂದು ನಟಿ ರಾಗಿಣಿ ಸ್ಪಷ್ಟಪಡಿಸಿದ್ದಾರೆ. ರೇಣುಕಾಸ್ವಾಮಿ ಚಿತ್ರನಟಿ ರಾಗಿಣಿ ಅವರಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಮಾಹಿತಿ ಚಾರ್ಜ್‌ಶೀಟ್‌ನಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಸಂಬಂಧ ಹೇಳಿಕೆ ನೀಡಿರುವ ರಾಗಿಣಿ ಚಾರ್ಜ್‌ಶೀಟ್‌ನಲ್ಲಿ ಈ ಅಂಶವಿದೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೆ ಈ ಕುರಿತು ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಸೆಲೆಬ್ರೆಟಿಗಳ ಸಾಮಾಜಿಕ ಜಾಲತಾಣಗಳನ್ನು ಏಜೆನ್ಸಿಗಳು ನಿಭಾಯಿಸುತ್ತವೆ. ಅಲ್ಲಿ ಪ್ರಕಟವಾಗುವ ಸಂದೇಶಗಳು ನಮ್ಮವರೆಗೆ ತಲುಪುವುದೇ ಇಲ್ಲ. ಇದೊಂದು ಸಣ್ಣ ವಿಚಾರ. ಪ್ರತಿಯೊಂದು ವಿಷಯಕ್ಕೆ ನಮ್ಮ ಹೆಸರು ತಳುಕು ಹಾಕುವುದು ಹಾಸ್ಯಾಸ್ಪದವಾಗಿ ಕಾಣಿಸುತ್ತದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ದರ್ಶನ್ ಅವರ ಆಪ್ತ ಗೆಳತಿ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ವಿವಿಧ ಜೈಲುಗಳಲ್ಲಿ ಇದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಸಾವಿರ ಪುಟಗಳ ಸುಧೀರ್ಘ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಮಧ್ಯೆ ಶೀಘ್ರದಲ್ಲೇ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ವಿಜಯನಗರ ಎಸಿಪಿ ಚಂದನ್ ಈ ಕೊಲೆ ಪ್ರಕರಣದ ತನಿಖೆ ನಡೆಸಿದ್ದರು. ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ಎಂಟು ವರದಿಗಳು, 231ಕ್ಕೂ ಹೆಚ್ಚು ಸಾಕ್ಷಾದಾರರ ಹೇಳಿಕೆಗಳ ಆಧಾರದಲ್ಲಿ ಚಾರ್ಜ್ ಶೀಟ್ ಸಿದ್ಧಪಡಿಸಲಾಗಿದೆ.
ಪವಿತ್ರಾಗೌಡ ಮೊದಲ ಆರೋಪಿಯಾಗಿದ್ದರೆ, ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಎಫ್‌ಎಸ್ಎಲ್ ವರದಿ, ಡಿಎನ್ಎ ವರದಿ, ಮರಣೋತ್ತರ ಪರೀಕ್ಷಾ ವರದಿ, ಸ್ಥಳ ಮಹಜರು, ಮೊಬೈಲ್ ದತ್ತಾಂಶದ ರಿಟ್ರೀವ್ ಪ್ರಕ್ರಿಯೆಯಲ್ಲಿ ದೊರೆತ ಮಾಹಿತಿಗಳನ್ನೂ ಸೇರಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.