Hubballi News: ಮಕ್ಕಳ ಆರೈಕೆ, ಪೋಷಣೆ ಮತ್ತು ಸುರಕ್ಷೆಗೆ ಕೂಸಿನ ಮನೆ ಯೋಜನೆ; ಆ.15ರಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ
Hubballi: ಮಕ್ಕಳ ಅಪೌಷ್ಟಿಕತೆ ಮತ್ತು ಶಿಶು ಮರಣ ತಡೆಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನು ಇರಿಸಿದ್ದು, ಮಕ್ಕಳ ಪೋಷಣೆ, ಆರೈಕೆ, ಸುರಕ್ಷೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಿಶು ಪಾಲನಾ ಕೇಂದ್ರ (ಕೂಸಿನ ಮನೆ) ಸ್ಥಾಪನೆಗೆ ಮುಂದಾಗಿದೆ. ಇದೇ ಆ.15ರಂದು ಕೇಂದ್ರಗಳಿಗೆ ಅಧಿಕೃತ ಚಾಲನೆ ಸಿಗಲಿದೆ.
ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಶಿಶು ಪಾಲನಾ ಕೇಂದ್ರ (ಕೂಸಿನ ಮನೆ) ಸ್ಥಾಪನೆಯೂ ಒಂದು. ಮೊದಲ ಹಂತವಾಗಿ ಬೆಳಗಾವಿ ಹಾಗೂ ಕಲ್ಬುರ್ಗಿ ವಿಭಾಗದ 13 ಜಿಲ್ಲೆಗಳ ಗ್ರಾಮ ಪಂಚಾಯತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳ ಆರಂಭಕ್ಕೆ ಆಯಾ ಜಿಲ್ಲಾ ಪಂಚಾಯ್ತಿಗೆ ಆದೇಶ ನೀಡಿದೆ.
ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಜ್ಯದಲ್ಲಿ 4000 ಗ್ರಾಮ ಪಂಚಾಯತಿಗಳಲ್ಲಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗಾಗಿ ಸರ್ಕಾರ ಈಗಾಗಲೇ ಅಗತ್ಯ ಅನುದಾನ ಬಿಡುಗಡೆ ಮಾಡಿದೆ.
ಮಕ್ಕಳ ಅಪೌಷ್ಟಿಕತೆ ಮತ್ತು ಶಿಶು ಮರಣ ತಡೆಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನು ಇರಿಸಿದ್ದು, ಮಕ್ಕಳ ಪೋಷಣೆ, ಆರೈಕೆ, ಸುರಕ್ಷೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಿಶು ಪಾಲನಾ ಕೇಂದ್ರ (ಕೂಸಿನ ಮನೆ) ಸ್ಥಾಪನೆಗೆ ಮುಂದಾಗಿದೆ. ಇದೇ ಆ.15ರಂದು ಕೇಂದ್ರಗಳಿಗೆ ಅಧಿಕೃತ ಚಾಲನೆ ಸಿಗಲಿದೆ.
ಬೆಳಗಾವಿ-ಕಲಬುರಗಿ ವಿಭಾಗದಲ್ಲಿ
ಮೊದಲ ಹಂತವಾಗಿ ಬೆಳಗಾವಿ ಹಾಗೂ ಕಲ್ಬುರ್ಗಿ ವಿಭಾಗದ 13 ಜಿಲ್ಲೆಗಳ ಗ್ರಾಮ ಪಂಚಾಯತಿಗಳಲ್ಲಿ ಶಿಶು ಪಾಲನಾ ಕೇಂದ್ರಗಳ ಆರಂಭಕ್ಕೆ ಆಯಾ ಜಿಲ್ಲಾ ಪಂಚಾಯ್ತಿಗೆ ಆದೇಶ ನೀಡಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 2142 ಶಿಶು ಪಾಲನಾ ಕೇಂದ್ರಗಳ ಆರಂಭಗೊಳ್ಳಲಿವೆ. ಹಂತ, ಹಂತವಾಗಿ ರಾಜ್ಯಾದ್ಯಂತ ಕೇಂದ್ರಗಳನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.
ಈಚೆಗೆ ಮೈಸೂರಿನಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ (ಮಾಸ್ಟರ್ ಟ್ರೈನರ್) ತರಬೇತಿ ನೀಡಲಾಗಿದೆ.
ಮಕ್ಕಳ ಸರ್ವತೋಮುಖ ಬೆಳವಣಿಗೆ
ಆರು ತಿಂಗಳಿಂದ ಹಿಡಿದು ಆರು ವರ್ಷದ ಮಕ್ಕಳಿಗೆ ಪೌಷ್ಟಿಕ ಆಹಾರ, ಸುರಕ್ಷಿತೆ, ಪೋಷಣೆ, ಆರೋಗ್ಯ ಸುಧಾರಣೆ, ಮಕ್ಕಳ ದೈಹಿಕ ಅರಿವಿನ ಸಾಮಾಜಿಕ, ಭಾವಾತ್ಮಕ ಬೆಳೆವಣಿಗೆ ಸೇರಿದಂತೆ ಒಟ್ಟಾರೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೇಂದ್ರಗಳು ಸಹಕಾರಿಯಾಗಲಿವೆ.
ಸಮಿತಿ ರಚನೆ
ಶಿಶು ಪಾಲನಾ ಕೇಂದ್ರಗಳ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಾಗಿ ಜಿಪಂ ಕಾರ್ಯನಿರ್ವಾಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದೆ. ಮೂಲ ಸೌಲಭ್ಯ ಹೊಂದಿರುವಂತ ಗ್ರಾಮ ಪಂಚಾಯತಿಗಳನ್ನು ಗುರುತಿಸಲು ತಾಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ರಚಿಸಲಾಗಿದೆ. ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಐ.ಇ.ಸಿ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡ, ಸೂಕ್ತ ಗ್ರಾಮ ಪಂಚಾಯತಿಗಳನ್ನು ಗುರುತಿಸಿವೆ.
ಕೇಂದ್ರಗಳ ನಿರ್ವಹಣೆ
ಕೇಂದ್ರಗಳಲ್ಲಿ ಮಕ್ಕಳ ಪಾಲನೆ, ಆರೈಕೆಗಾಗಿ ವಿಶೇಷವಾಗಿ ಹತ್ತನೇ ತರಗತಿ ಪಾಸಾದ ನರೇಗಾ ಮಹಿಳಾ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲು ಮುಂದಾಗಿದೆ. ಅವರ ಜಾಬ್ ಕಾರ್ಡ್ ಆಧಾರದ ಮೇಲೆ ವರ್ಷವಿಡೀ ಕಾರ್ಯಪಾಲನೆಗೆ ತಲಾ ಒಂದು ಕೇಂದ್ರಕ್ಕೆ 8 ಜನ ಕಾರ್ಮಿಕರನ್ನು ಆಯ್ಕೆ ಮಾಡಿಕೊಂಡಿದ್ದು, ಆ. 7 ರಂದು ಅವರಿಗೆ ತರಬೇತಿ ನೀಡಿ ಅಣಿಗೊಳಿಸಲಾಗುತ್ತಿದೆ.
ನಿರ್ವಹಣೆ ಅವಧಿ
6 ರಿಂದ 6 ವರ್ಷದ ವರೆಗೆ 30 ಮಕ್ಕಳನ್ನು ಶಿಶು ಪಾಲನಾ ಕೇಂದ್ರಗಳಲ್ಲಿ ಹೊಂದಬಹುದಾಗಿದೆ. ಮಾಸದಲ್ಲಿ 26 ದಿನಗಳ ಕಾಲ ಪ್ರತಿದಿನ 6 ರಿಂದ 8 ತಾಸು ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಗ್ರಾಮೀಣ ಭಾಗದಲ್ಲಿ ಹೊಲ-ಗದ್ದೆಗಳಲ್ಲಿ ನಿತ್ಯ ಕೆಲಸ ಮಾಡುವ ರೈತ ಮಹಿಳಾ ಕಾರ್ಮಿಕರಿಗೆ, ಕೂಲಿ ಕಾರ್ಮಿಕರು, ತರಕಾರಿ, ಹಾಲು, ಮೊಸರು ಮಾರಾಟಕ್ಕಾಗಿ ತಾಲೂಕು ಕೇಂದ್ರಗಳಿಗೆ ತೆರಳುವ ಮಹಿಳೆಯರಿಗೆ ಹೆಚ್ಚು ಶಿಶು ಕೇಂದ್ರಗಳು ಅನುಕೂಲವಾಗಲಿವೆ. ಗ್ರಾಮೀಣ ಮಹಿಳೆಯರ ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಕೂಸಿನ ಮನೆ ಮುನ್ನುಡಿ ಬರೆಯಲಿದೆ.
ಮಕ್ಕಳಿಗೆ ಆರೋಗ್ಯ ತಪಾಸಣೆ
ಸ್ಥಳೀಯ ಮಟ್ಟದ ಆರೋಗ್ಯ ಕೇಂದ್ರದ ವೈದ್ಯರು ಕಾಲಕಾಲಕ್ಕೆ ಶಿಶು ಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ತಪಾಸಣೆ ನಡೆಸಿ, ಮಕ್ಕಳ ವಯಸ್ಸು, ತೂಕದ ಆಧಾರಿಸಿ ಸಮತೋಲನ ಆಹಾರ ನೀಡಲು ಸಲಹೆ ನೀಡುತ್ತಾರೆ. ವೈದ್ಯರ ಸಲಹೆ ಮೇರೆಗೆ ಮಕ್ಕಳಿಗೆ ಆಹಾರ ನೀಡಲಾಗುತ್ತದೆ. ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಅನಾಜ್ ಮಿಶ್ರಣ, ಆರೋಗ್ಯವಂತ ಮಕ್ಕಳಿಗೆ ಪೌಷ್ಟಿಕಾಂಶ ಒಳಗೊಂಡ ಕಿಚಿಡಿ ನೀಡಲಾಗುತ್ತದೆ. ಜೊತೆಗೆ ಬೆಳಗ್ಗೆ, ಸಂಜೆ ಎರಡು ಹೊತ್ತು ಮಕ್ಕಳಿಗೆ ತಿಂಡಿ, ತಿನಿಸು ವಿತರಣೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಜೊತೆಗೆ ಆಟ-ಪಾಠ ಹೇಳಿ ಕಲಿಕೆಗೆ ಅಣಿಗೊಳಿಸಲಾಗುತ್ತದೆ.
(ವರದಿ: ಪ್ರಹ್ಲಾದಗೌಡ ಬಿ.ಜಿ.)