Kalaburagi Crime: ರೈತನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು 40 ಲಕ್ಷ ವಂಚನೆ, ನಕಲಿ ದಾಖಲಾತಿ ಸೃಷ್ಟಿಸಿ ಕಾರ್ಮಿಕರಿಗೆ ಮೋಸ
ರೈತನನ್ನು ವಂಚಿಸಿದ ಘಟನೆ ಸಂಬಂಧ ಎಸ್‌ಬಿಐ ವ್ಯವಸ್ಥಾಪಕರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರಗಿ: ಕೆಲವು ವಂಚಕರು ಮೆಣಸಿನಕಾಯಿ ಮಾರಲು ಬಂದ ರೈತನನ್ನು ನಂಬಿಸಿ ರೈತನ ಬಳಿಯಿಂದ ಎಲ್ಲ ದಾಖಲೆಗಳನ್ನು ಪಡೆದು ಬ್ಯಾಂಕ್ ಖಾತೆ ತೆರೆದು ಮುಗ್ದ ರೈತರಿಗೆ ತಿಳಿಯದಂತೆ 40 ಲಕ್ಷ ರೂ. ಬ್ಯಾಂಕ್ ಸಾಲ ಪಡೆದು ಆ ಹಣ ಬೇರೆ ಖಾತೆಗಳಿಗೆ ವರ್ಗಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಜೇವರ್ಗಿ ತಾಲೂಕಿನ ಬೇಲೂರ ಗ್ರಾಮದ ರೈತ ಪೀರಣ್ಣ ಸೈಬಣ್ಣ ಎಂಬ ರೈತ ವಂಚನೆಗೊಳಗಾದವರು.
ಕಲಬುರಗಿಯ ರಿಂಗ್ ರೋಡ್ ಸಮೀಪದ ಮಿರ್ಚಿ ಗೋದಾಮ ಮಾಲೀಕ, ವ್ಯವಸ್ಥಾಪಕ, ರಫೀಕ್, ಮೌಲಾಲಿ, ಹುಸೇನ್ ಗಾರ್ಡನ್ ಎಸ್‌ಬಿಐ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಮತ್ತು ಕೆಲ ಸಿಬ್ಬಂದಿ ವಿರುದ್ಧ ಪೀರಣ್ಣ ಅವರು ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ದೂರು ನೀಡಿದ್ದಾರೆ.
7-8 ವರ್ಷಗಳ ಹಿಂದೆ ಪರಿಚಯಸ್ಥ ರಫೀಕ್ ಮತ್ತು ಮೌಲಾಲಿ ಸಹಾಯದಿಂದ ಮೆಣಸಿನಕಾಯಿ ಮಾರಲು ಕಲಬುರಗಿ ನಗರದ ರಿಂಗ್ ರೋಡ್ ಸಮೀಪದ ಮಿರ್ಚಿ ಗೋದಾಮಿಗೆ ಬಂದಿದ್ದೆ. ಮಾರಿದ ಮೆಣಸಿನಕಾಯಿಗೆ ನಗದು ಹಣ ನೀಡಿದ್ದರು. ಮುಂದಿನ ಬಾರಿ ಮಾರಲು ಬಂದಾಗ ನನ್ನ ಖಾತೆಗೆ ಹಣ ಜಮೆ ಆಗುತ್ತದೆ ಎಂದು ನಂಬಿಸಿದ ಗೋದಾಮು ವ್ಯವಸ್ಥಾಪಕ, ಪರಿಚಯಸ್ಥ ಇಬ್ಬರೂ ಬಲವಂತ ಮಾಡಿ, ನನ್ನ ಆಧಾರ್ ಕಾರ್ಡ, ಪೋಟೊ, ಕೆಲವು ಹಾಳೆಗಳ ಮೇಲೆ ಹೆಬ್ಬೆಟ್ಟು ಸಹಿ ಪಡೆದಿದ್ದರು' ಎಂದು ಪೀರಣ್ಣ ದೂರಿನಲ್ಲಿ ವಿವರಿಸಿದ್ದಾರೆ.
ಕಲಬುರಗಿ ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿದ್ದ ಖಾತೆಯನ್ನು ನಗರದ ಬ್ರಾಂಚ್‌ನಿಂದ ತಮ್ಮ ಗ್ರಾಮದ ಸಮೀಪದ ಎಸ್‌ಬಿಐ ಬ್ಯಾಂಕ್‌ಗೆ ವರ್ಗಾವಣೆ ಮಾಡಲೆಂದು ಇತ್ತೀಚೆಗೆ ಬ್ಯಾಂಕ್ ಶಾಖೆಗೆ ಹೋಗಿದ್ದೆ. ನಿನ್ನ ಹೆಸರಿನಲ್ಲಿ ಈಗಾಗಲೇ ಖಾತೆ ಇದ್ದು, ಅದರಲ್ಲಿ 10 ಲಕ್ಷ ಸಾಲ ಇದೆ. ವರ್ಗಾವಣೆ ಬರುವುದಿಲ್ಲ. ಹಿಂದೆಯೂ ಇದೇ ರೀತಿ 3 ಬಾರಿ ತಲಾ 10 ಲಕ್ಷದಂತೆ 30 ಲಕ್ಷ ಸಾಲ ತೆಗೆದುಕೊಂಡಿದ್ದಾಗಿ ಬ್ಯಾಂಕ್ ವ್ಯವಸ್ಥಾಪಕರು ಹೇಳಿದ್ದಾರೆ. ಹಾಗಿದ್ದರೆ ಸಾಲದ ಹಣ ಎಲ್ಲಿಗೆ ಹೋಯಿತು? ನನ್ನ ಖಾತೆಯಲ್ಲಿ ಹಣ ಎಲ್ಲಿದೆ ಎಂದು ಪ್ರಶ್ನಿಸಿದಾಗ, ವ್ಯವಸ್ಥಾಪಕ ಸಮರ್ಪಕವಾಗಿ ಉತ್ತರ ನೀಡಲಿಲ್ಲ ಎಂದು ದೂರುದಾರ ಪೊಲೀಸರಿಗೆ ತಿಳಿಸಿದ್ದಾರೆ.
ನನ್ನ ಮಗನ ನೆರವಿನಿಂದ ವರ್ಷದ ಸ್ಟೇಟ್‌ಮೆಂಟ್ ಪಡೆದೆ. ಅದರಲ್ಲಿ 2023ರ ಮಾರ್ಚ್ 2ರಂದು 10 ಲಕ್ಷ ಸಾಲದ ಹಣ ಜಮೆ ಆಗಿತ್ತು. ಅದೇ ದಿನವೇ ಇನ್ನೊಂದು ಖಾತೆಗೆ ಅಷ್ಟೂ ಹಣ ವರ್ಗಾವಣೆಯಾಗಿದೆ. ಆ ಖಾತೆ ಯಾರದು ಎಂಬುದು ತಿಳಿದಿಲ್ಲ, 2021ರ ಏ.15ರಂದು 10 ಲಕ್ಷ ಜಮೆಯಾಗಿ, 9.99 ಲಕ್ಷವಿತ್ ಡ್ರಾ ಮಾಡಿಕೊಂಡಿದ್ದಾರೆ. ಆದರೆ, ನಾನು ಆ ಹಣ ಪಡೆದಿಲ್ಲ. ನನ್ನ ಹೆಸರಿನಲ್ಲಿ ನನಗೆ ಗೊತ್ತಿಲ್ಲದೆ ಖಾತೆ ತೆರೆದು 2016ರಿಂದ 2023ರ ನಡುವೆ ಹಲವು ಬಾರಿ ಒಟ್ಟು 40 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ. ಇದಕ್ಕೆ ರಿಂಗ್ ರೋಡ್ ಸಮೀಪದ ಮಿರ್ಚಿ ಗೋದಾಮ ಮಾಲೀಕ, ವ್ಯವಸ್ಥಾಪಕ, ರಫೀಕ್, ಮೌಲಾಲಿ, ಹುಸೇನ್ ಗಾರ್ಡನ್ ಎಸ್‌ಬಿಐ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಮತ್ತು ಕೆಲ ಸಿಬ್ಬಂದಿ ಕಾರಣ ಎಂದು ಆರೋಪಿಸಿದ್ದಾರೆ. ಈ ಕುರಿತು ಕಲಬುರಗಿಯ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ನಕಲಿ ದಾಖಲಾತಿ ಸೃಷ್ಟಿಸಿ ಕಾರ್ಮಿಕರ ಕಾರ್ಡ್ ಪಡೆದು ವಂಚನೆ
ಕಲಬುರಗಿ ಜಿಲ್ಲೆಯಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಕಟ್ಟಡ ಕಾರ್ಮಿಕರಲ್ಲದ ಇತರರು ಕಟ್ಟಡ ಕಾರ್ಮಿಕರ ಕಾರ್ಡ್ ಪಡೆದು ಸರಕಾರದ ವಿವಿಧ ಯೋಜನೆಗಳ ಲಾಭ ಪಡೆದು ವಂಚಿಸುತ್ತಿರುವ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಎಚ್ಚೆತ್ತುಕೊಂಡು ಕೂಡಲೇ ಅನರ್ಹರು ಕಟ್ಡಡ ಕಾರ್ಮಿಕರ ಕಾರ್ಡ್ ವಾಪಸ್ ನೀಡುವಂತೆ ಇಲಾಖೆ ಸೂಚನೆ ನೀಡಿದೆ.
ನಕಲಿ ದಾಖಲಾತಿ ಸೃಷ್ಟಿಸಿ ಕಟ್ಟಡ ಕಾರ್ಮಿಕರಲ್ಲದ ಅನರ್ಹರು ಕಟ್ಟಡ ಕಾರ್ಮಿಕರ ಕಾರ್ಡ್ ಪಡೆದಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದ್ದು, ಕೂಡಲೇ ಅನರ್ಹರು ಸ್ವ-ಇಚ್ಛೆಯಿಂದಲೆ ಮಂಡಳಿ ಅಥವಾ ಕಾರ್ಮಿಕ ಇಲಾಖೆಗೆ ಕಾರ್ಡ್ ವಾಪಸ್ ಮಾಡಬೇಕು. ಇಲ್ಲದಿದ್ದಲ್ಲಿ ಅಂತಹವರ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ್ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಯನಿರ್ವಹಿಸುವ ಮಂಡಳಿಯಲ್ಲಿ ನೋಂದಣಿಯಾಗುವ ಕಾರ್ಮಿಕರಿಗಾಗಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಶೈಕ್ಷಣಿಕ, ಮದುವೆ, ಹೆರಿಗೆ, ವೈದ್ಯಕೀಯ, ಅಂತ್ಯ ಸಂಸ್ಕಾರ, ಪಿಂಚಣಿ ಇತರೆ ಸಹಾಯಧನ ನೀಡಲಾಗುತ್ತಿದೆ.
ಮಂಡಳಿಯ ಈ ಜನಪರ ಯೋಜನೆಗಳ ಸೌಲಭ್ಯ ಪಡೆಯಲು ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದ ಟೇಲರ್, ಗ್ರಾಮ ಪಂಚಾಯತ್ ಪಂಪ್ ಆಪರೇಟರ್, ಖಾಸಗಿ ಶಾಲಾ ಶಿಕ್ಷಕರು, ಆರ್.ಎಮ್.ಪಿ ವೈದ್ಯಾಧಿಕಾರಿಗಳು, ಹೋಟೆಲ್ ಕಾರ್ಮಿಕರು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿನ ಕಾರ್ಮಿಕರು, ಗ್ಯಾರೇಜ್ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಹಮಾಲರು, ಕ್ಷೌರಿಕರು, ಮನೆ ಕೆಲಸ ಮಾಡುವವರು, ತರಕಾರಿ ಮಾರುವವರು, ಅಟೋ ಮತ್ತು ಕಾರು ವಾಹನ ಚಾಲಕರು (ತ್ರಿ ಮತ್ತು ನಾಲ್ಕು ಚಕ್ರ ವಾಹನ), ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು ಹಾಗೂ ಇತರರು ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಮಂಡಳಿ ನೀಡುವ ಸೌಲಭ್ಯಗಳನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದು ಮಂಡಳಿಯ ನಿಯಮ ಹಾಗೂ ನಿಬಂಧನೆಗಳಿಗೆ ವಿರುದ್ಧವಾಗಿರುತ್ತದೆ. ಇಂತಹ ನಕಲಿ ಕಾರ್ಡ್ ಪತ್ತೆ ಹಚ್ಚಲು ಬೋಗಸ್ ಕಾರ್ಡ್ ನೋಂದಣಿ ರದ್ದತಿ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)