Kalaburagi News: ಕಲಬುರಗಿ ಜಿಲ್ಲೆಗೆ ತಡವಾಗಿ ಮುಂಗಾರು ಪ್ರವೇಶ; ಬಿತ್ತನೆಗೆ ಅಣಿಯಾದ ರೈತರು, 8.87 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕಲಬುರಗಿ ಜಿಲ್ಲೆಗೆ ತಡವಾಗಿ ಮುಂಗಾರು ಪ್ರವೇಶ; ಬಿತ್ತನೆಗೆ ಅಣಿಯಾದ ರೈತರು, 8.87 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

Kalaburagi News: ಕಲಬುರಗಿ ಜಿಲ್ಲೆಗೆ ತಡವಾಗಿ ಮುಂಗಾರು ಪ್ರವೇಶ; ಬಿತ್ತನೆಗೆ ಅಣಿಯಾದ ರೈತರು, 8.87 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

Kalaburagi Rain News: ಚಿಂಚೋಳಿ ತಾಲೂಕಿನಲ್ಲಿ ಕೊಂಚಾರವಂ ಪ್ರದೇಶದಲ್ಲಿ ಆರಂಭದ ವೇಳೆ ಉತ್ತಮ ಮಳೆಯಾಗಿರುವುದರಿಂದ ಉದ್ದು, ಹೆಸರು ಬಿತ್ತನೆಯಾಗಿ ನಾಟಿಯಾಗಿವೆ. ಇಲ್ಲಿ ಶೇ.19ರಷ್ಟು ಬಿತ್ತನೆಯಾಗಿದೆ.

ಕಲಬುರಗಿ ಮಳೆ ದೃಶ್ಯ
ಕಲಬುರಗಿ ಮಳೆ ದೃಶ್ಯ

ಕಲಬುರಗಿ : ಅನ್ನದಾತ ಮತ್ತು ಭೂಮಿತಾಯಿಯ ಕೂಗಿಗೆ ಸ್ಪಂದಿಸಿದ ವರುಣದೇವ ಕೊನೆಗೂ ಧರೆಗಳಿದು ಬಂದು ವರ್ಷಾಧಾರೆಗೈದಿದ್ದಾನೆ. ಶುಕ್ರವಾರ ಕಲಬುರಗಿ(Kalaburagi) ಜಿಲ್ಲೆಯ ಕೆಲವು ಕಡೆ ಮಳೆಯಾದರೆ, ಶನಿವಾರ ಜಿಲ್ಲಾದ್ಯಂತ ಸಾಧಾರಣ ಮಳೆಯಾಗಿದೆ. ಭಾನುವಾರ ಕೆಲವು ಕಡೆ ಮಳೆಯಾಗಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಬರಬೇಕಾಗಿದ್ದ ಮುಂಗಾರು ಮಳೆ ಎರಡು ವಾರ ತಡವಾಗಿ ಬಿಸಿಲೂರು ಕಲಬುರಗಿ ಜಿಲ್ಲೆಯನ್ನು ಪ್ರವೇಶಿಸಿದೆ. ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಬಿತ್ತನೆಗೆ ಅಣಿಯಾಗುತ್ತಿದ್ದಾರೆ.

ಭಾನುವಾರ ಮಳೆಯಾಗಿರುವ ವಿವರ

ಭಾನುವಾರ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ 4.4 ಮಿ.ಮೀ.ಮಳೆಯಾಗಿದೆ. ಆಳಂದ ತಾಲೂಕಿನಲ್ಲಿ 3.1 ಮಿ.ಮೀ.ಮಳೆಯಾಗಿದೆ. ಚಿಂಚೋಳಿ ತಾಲೂಕಿನಲ್ಲಿ 3.0 ಮಿ.ಮೀ.ಮಳೆಯಾಗಿದೆ. ಚಿತ್ತಾಪುರ ತಾಲೂಕಿನಲ್ಲಿ 3.4 ಮಿ.ಮೀ.ಮಳೆಯಾಗಿದೆ. ಕಲಬುರಗಿ ತಾಲೂಕಿನಲ್ಲಿ 2.9, ಜೇವರ್ಗಿ ತಾಲೂಕಿನಲ್ಲಿ 2.4, ಸೇಡಂ ತಾಲೂಕಿನಲ್ಲಿ 1.8, ಕಾಳಗಿ ತಾಲೂಕಿನಲ್ಲಿ 1.0, ಕಮಲಾಪುರ ತಾಲೂಕಿನಲ್ಲಿ 1.0, ಯಡ್ರಾಮಿ ತಾಲೂಕಿನಲ್ಲಿ 2.7 ಮತ್ತು ಶಹಾಬಾದ್‌ ತಾಲೂಕಿನಲ್ಲಿ 2.8 ಮಿ.ಮೀ.ಮಳೆಯಾಗಿದೆ.

ಜೂನ್‌ 26ರವರೆಗೆ ಮಳೆ ಪ್ರಮಾಣ

ಕಳೆದ ಜನವರಿ 1ರಿಂದ ಜೂನ್‌ 26ರವರೆಗೆ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ 81 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 18 ಮಿ.ಮೀ ಮಳೆಯಾಗಿದ್ದು, 63 ಮಿ.ಮೀ. ಮಳೆ ಕೊರತೆಯಾಗಿದೆ. ಆಳಂದ ತಾಲೂಕಿನಲ್ಲಿ 85 ಮಿ.ಮೀ.ಮಳೆಯಾಗಬೇಕಿತ್ತು, 16 ಮಿ.ಮೀ.ಮಳೆಯಾಗಿದ್ದು, 42 ಮಳೆ ಕೊರತೆಯಾಗಿದೆ. ಚಿಂಚೋಳಿ ತಾಲೂಕಿನಲ್ಲಿ 9 ಮಿ.ಮೀ.ಕೊರತೆಯಾಗಿದೆ. ಚಿತ್ತಾಪುರ ತಾಲೂಕಿನಲ್ಲಿ 22 ಮಿ.ಮೀ.ಮಳೆ ಕೊರತೆಯಾಗಿದೆ. ಕಲಬುರಗಿ ತಾಲೂಕಿನಲ್ಲಿ 104 ಮಿ.ಮೀ.ಮಳೆಯಾಗಬೇಕಿತ್ತು. ಆದರೆ 34 ಮಿ.ಮೀ.ಮಳೆಯಾಗಿದ್ದು, 70 ಮಿ.ಮೀ.ಮಳೆ ಕೊರತೆಯಾಗಿದೆ.

ಜೇವರ್ಗಿ ತಾಲೂಕಿನಲ್ಲಿ 31 ಮಿ.ಮೀ.ಮಳೆ ಕೊರತೆಯಾಗಿದೆ. ಸೇಡಂ ತಾಲೂಕಿನಲ್ಲಿ 93 ಮಿ.ಮೀ.ಮಳೆಯಾಗಬೇಕಿತ್ತು, 79 ಮಿ.ಮೀ.ಮಳೆಯಾಗಿದ್ದು, 14 ಮಿ.ಮೀ.ಮಳೆ ಕೊರತೆಯಾಗಿದೆ. ಕಾಳಗಿ ತಾಲೂಕಿನಲ್ಲಿ 86 ಮಿ.ಮೀ.ಮಳೆಯಾಗಬೇಕಿತ್ತು, 74 ಮಿ.ಮೀ.ಮಳೆಯಾಗಿದ್ದು, 12 ಮಿ.ಮೀ.ಮಳೆ ಕೊರತೆಯಾಗಿದೆ. ಕಮಲಾಪುರ ತಾಲೂಕಿನಲ್ಲಿ 23 ಮಿ.ಮೀ, ಶಹಾಬಾದ್‌ ತಾಲೂಕಿನಲ್ಲಿ 37 ಮಿ.ಮೀ, ಯಡ್ರಾಮಿ ತಾಲೂಕಿನಲ್ಲಿ 42 ಮಿ.ಮೀ.ಮಳೆ ಕೊರತೆಯಾಗಿದೆ. ಒಟ್ಟು ಜಿಲ್ಲೆಯಲ್ಲಿ 92 ಮಿ.ಮೀ.ಮಳೆ ಬರಬೇಕಿತ್ತು. ಆದರೆ 54 ಮಿ.ಮೀ.ಮಳೆಯಾಗಿದ್ದು, 38 ಮಿ.ಮೀ.ಮಳೆ ಕೊರತೆಯಾಗಿದೆ.

ಮಳೆ ಕೊರತೆಯ ನಡುವೆಯೂ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಕೊಂಚಾರವಂ ಪ್ರದೇಶದಲ್ಲಿ ಆರಂಭದ ವೇಳೆ ಉತ್ತಮ ಮಳೆಯಾಗಿರುವುದರಿಂದ ಉದ್ದು, ಹೆಸರು ಬಿತ್ತನೆಯಾಗಿ ನಾಟಿಯಾಗಿವೆ. ಇಲ್ಲಿ ಶೇ.19ರಷ್ಟು ಬಿತ್ತನೆಯಾಗಿದೆ. ಕಮಲಾಪುರ ತಾಲೂಕಿನಲ್ಲಿ ಶೇ.3, ಸೇಡಂ ತಾಲೂಕುಗಳಲ್ಲಿ ಶೇ.7ರಷ್ಟು ಬಿತ್ತನೆ ಮಾಡಲಾಗಿದೆ. ಈಗ ಮುಂಗಾರು ಮಳೆ ಬಂದಿರುವುದರಿಂದ ಬೆಳೆ ಬಾಡಿಹೋಗುವ ಆತಂಕ ದೂರವಾಗಿದೆ.

ನೀರಿನ ಸಮಸ್ಯೆಯ ಗ್ರಾಮಗಳು

ಮುಂಗಾರು ಮಳೆ ವಿಳಂಬವಾಗಿರುವುದರಿಂದ ಜಿಲ್ಲೆಯ ಆಳಂದ ತಾಲೂಕಿನಲ್ಲಿ ತೊಡೋಳಾ, ತಡಕಲ್, ಜಿರೋಳ್ಳಿ, ಹಲತಡಕಲ್, ನಿರಗುಡಿ, ಸರಸಂಬಾ, ಕಾಳಗಿ ತಾಲೂಕಿನಲ್ಲಿ ಮೋಗಾ, ಚಿತ್ತಾಪುರ ತಾಲೂಕಿನಲ್ಲಿ ಡೋನಗಾಂವ, ಶಹಾಬಾದ್ ತಾಲೂಕಿನಲ್ಲಿ ರೇವೂರ, ಜೇವರ್ಗಿ ತಾಲೂಕಿನಲ್ಲಿ ಮಂದೇವಾಲ, ಯಡ್ರಾಮಿ ತಾಲೂಕಿನಲ್ಲಿ ಸುಂಬಡ, ಕಮಲಾಪುರ ತಾಲೂಕಿನಲ್ಲಿ ಶ್ರೀಚಂದ, ಕಲಬುರಗಿ ತಾಲೂಕಿನಲ್ಲಿ ಸಾವಳಗಿ ಬಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಆಳಂದ ತಾಲೂಕಿನ ಸರಸಂಬಾ ಗ್ರಾಮ, ಚಿತ್ತಾಪುರ ತಾಲೂಕಿನ ರಾಜೋಳ, ಶಹಾಬಾದ್ ತಾಲೂಕಿನ ರೇವೂರ, ಗಾಂಧಿನಗರ, ಜೇವರ್ಗಿ ತಾಲೂಕಿನ ವಂದೇವಾಲ ತಾಂಡಾ, ಯಡ್ರಾಮಿ ತಾಲೂಕಿನ ಅಕ್ಕದಹಳ್ಳಿ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಬೀಜ, ರಸಗೊಬ್ಬರ ವಿತರಣೆ

ಒಟ್ಟು ಜಿಲ್ಲೆಯಲ್ಲಿ 92 ಮಿ.ಮೀ.ಮಳೆ ಬರಬೇಕಿತ್ತು. 54 ಮಿ.ಮೀ.ಮಳೆಯಾಗಿದ್ದು, 38 ಮಿ.ಮೀ.ಮಳೆ ಕೊರತೆಯಾಗಿದೆ. ಆದಾಗ್ಯೂ ರೈತರು ಬಿತ್ತನೆಗೆ ಅಣಿಯಾಗುತ್ತಿದ್ದು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಿಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುವ ಗುರಿ ಹೊಂದಲಾಗಿದೆ. ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು 7 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳ ಮುಖಾಂತರ ರಿಯಾಯಿತಿ ದರದಲ್ಲಿ ರೈತರಿಗೆ ಬೀಜಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.

ವರದಿ: ಎಸ್‌ಬಿ ರೆಡ್ಡಿ, ಕಲಬುರಗಿ

Whats_app_banner