ಇಂತಹ ಅವಮಾನವನ್ನು ನಮ್ಮ ಕನ್ನಡಿಗ ಹಾಡುಗಾರರು ಹೇಗೆ ಸಹಿಸಿಕೊಂಡರು, ಏಕೆ ಸಹಿಸಿಕೊಂಡರು?; ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರಿಂದ ಒಳನೋಟ
ನವೆಂಬರ್ ಇನ್ನೇನು ಬಂದೇ ಬಿಡ್ತು. ಕನ್ನಡ ರಾಜ್ಯೋತ್ಸವ, ಅಭಿಮಾನಗಳ ಸಂದರ್ಭ. ಕನ್ನಡ ಎನ್ನುವುದು ನವೆಂಬರ್ಗೆ ಸೀಮಿತವಾಗಬಾರದು. ಅದು ಉಸಿರಾಗಬೇಕು, ಬದುಕಾಗಬೇಕು ಎಂಬುದು ಆಶಯ. ಹೀಗಾಗಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು, “ಯುವ ದಸಾರಾದಲ್ಲಿ ಇಂತಹ ಅವಮಾನವನ್ನು ನಮ್ಮ ಕನ್ನಡಿಗ ಹಾಡುಗಾರರು ಹೇಗೆ ಸಹಿಸಿಕೊಂಡರು, ಏಕೆ ಸಹಿಸಿಕೊಂಡರು?” ಎಂಬುದರ ಒಳನೋಟ ಕೊಟ್ಟಿದ್ದಾರೆ.
ಕನ್ನಡ ರಾಜ್ಯೋತ್ಸವ ದಿನ ದೂರ ಇಲ್ಲ. ಸಂಭ್ರಮ, ಸಡಗರದ ಹೊತ್ತು. ಕನ್ನಡ ಎಂಬುದು ಕೇವಲ ನವೆಂಬರ್‌ಗೆ ಸೀಮಿತ ಅಲ್ಲ ಎಂಬುದನ್ನು ಅರ್ಥಮಾಡಿಕೊಂಡು ನಾವು ಎಚ್ಚೆತ್ತುಕೊಳ್ಳಬೇಕಾದ ಸಂದರ್ಭವೂ ಹೌದು. ಹೀಗಾಗಿಯೆ, ಕನ್ನಡ ಎನ್ನುವುದು ನವೆಂಬರ್ಗೆ ಸೀಮಿತವಾಗಬಾರದು. ಅದು ಉಸಿರಾಗಬೇಕು, ಬದುಕಾಗಬೇಕು ಎಂಬುದು ಆಶಯದೊಂದಿಗೆ ಲೇಖಕ ರಂಗಸ್ವಾಮಿ ಎನ್ ಆರ್ ಮೂಕನಹಳ್ಳಿ ಅವರು ಇತ್ತೀಚಿನ ವಿದ್ಯಮಾನ ಒಂದರ ಕಡೆಗೆ ಬೆಳಕು ಚೆಲ್ಲಿದ್ದಾರೆ.
ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರ
ದಸರಾ ಹಬ್ಬ ಮುಗಿದರೂ ಇನ್ನು ಜನ ಸಂದಣಿ ಕಡಿಮೆಯಾಗಿಲ್ಲ. ರಾತ್ರಿ ವೇಳೆ ಅರಮನೆಗೆ ೧೫ ನಿಮಿಷ ಹಾಕುವ ಲೈಟ್ ನೋಡಲು ನಿನ್ನೆ ಜನ ಕಿಕ್ಕಿರಿದು ನಿಂತಿದ್ದರು. ಈ ಬಾರಿ ದಸರಾ ಹಬ್ಬದ ಎಲ್ಲಾ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ನಗರದಲ್ಲಿ ನಡೆಸದೆ ಯುವ ದಸರಾ ಕಾರ್ಯಕರ್ಮವನ್ನು ಊರಿನಿಂದ ಹೊರಗೆ ರಿಂಗ್ ರೋಡ್ ಪಕ್ಕದಲ್ಲಿ ಆಯೋಜಿಸಿದ್ದು ಒಳ್ಳೆಯದಾಯ್ತು. ಲಕ್ಷಕ್ಕೂ ಮೀರಿದ ಜನ ಪ್ರತಿ ನಿತ್ಯವೂ ಅಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮ ನೋಡಲು ಸೇರುತ್ತಿದ್ದರು. ಅಲ್ಲಿನ ಅಪವ್ಯಸನಗಳ ಬಗ್ಗೆ ಬರೆದಿದ್ದೇನೆ. ಈಗ ಇನ್ನೊಂದು , ಆತ್ಮಾವಲೋಕನ ಮಾಡಿಕೊಳ್ಳುವಂತದ್ದು !
ದೊಡ್ಡ ದೊಡ್ಡ ಬಿತ್ತಿಪತ್ರಪತ್ರಗಳಲ್ಲಿ ನಾಲ್ಕೈದು ಹಿಂದಿ ಹಾಡುಗಾರರ ಫೋಟೋ , ಹೆಸರು ಹಾಕಿ ಅವರು ಬರುತ್ತಾರೆ ಎನ್ನುವುದನ್ನು ಜಾಹೀರಾತು ಮಾಡಿದ್ದರು, ಅದೂ ತಿಂಗಳುಗಳ ಮುಂಚಿನಿಂದ! ಅಲ್ಲೆಲ್ಲೂ ನಮ್ಮ ಕನ್ನಡಿಗ ಹಾಡುಗಾರರ ಫೋಟೋ ಬೇಡ ಕಣ್ರೀ , ಏರ್‌ಪೋರ್ಟ್‌ನಲ್ಲಿ ಕನ್ನಡ ಅಕ್ಷರ ಹಾಕಿದಂತೆ , ಅತಿ ಸಣ್ಣ ಅಕ್ಷರದಲ್ಲಿ ಅವರ ಹೆಸರು ಹಾಕಿದ್ದರೂ ಸಾಕಿತ್ತು , ಅಬ್ಬಾ ಕನ್ನಡ , ಕನ್ನಡಿಗರು ಇದ್ದಾರೆ ಅಂತ ತೃಪ್ತಿ ಪಟ್ಟುಕೊಳ್ಳುವ ಕನ್ನಡಿಗ ಕಣ್ರೀ ನಾನು (ನಾವು ) ಆದರೆ ನಮ್ಮ ವ್ಯವಸ್ಥಾಪಕರಿಗೆ , ಸಂಘಟಕರಿಗೆ ಅಷ್ಟು ಮಾತ್ರದ ತೃಪ್ತಿ ನಮಗೆ ನೀಡಲೂ ಅಸಡ್ಡೆ !
ಸ್ವಾಭಿಮಾನದ ಕೊರತೆಯೇ
ಕಿಕ್ಕಿರಿದು ತುಂಬಿದ್ದ ಜನರನ್ನು ರಂಜಿಸಲು ಬಹಳಷ್ಟು ಹಾಡುಗಳನ್ನು ಹಾಡಲಾಯಿತು. ಕನ್ನಡ ಹಾಡುಗಳಿಗೆ ಕೊರತೆಯಿಲ್ಲ. ಬಾದ್ ಷಾ ಎನ್ನುವ ಗಾಯಕ ಕನ್ನಡದಲ್ಲಿ ಒಂದೆರೆಡು ಸಾಲು ಮಾತನಾಡಿ ಚಪ್ಪಾಳೆ ಕೂಡ ಗಿಟ್ಟಿಸಿದರು. ಮೊದಲೇ ಹೇಳಿದಂತೆ ಕಾರ್ಯಕರ್ಮದಲ್ಲಿ ಕನ್ನಡತನಕ್ಕೆ ಅಂತಹ ಕೊರತೆ ಕಾಣಲಿಲ್ಲ. ಅಷ್ಟರ ಮಟ್ಟಿಗೆ ಇದು ಓಕೆ. ಆದರೆ ...
ಹಾಡುಗರ ಹೆಸರು ಮತ್ತು ಫೋಟೋದಲ್ಲಿ ಇಂತಹ ಕನ್ನಡ ಹಾಡುಗಾರರು ಕೂಡ ಇದ್ದಾರೆ ಎನ್ನುವ ಜಾಹೀರಾತು ಫಲಕಗಳಲ್ಲಿ ಏಕಿರಲಿಲ್ಲ ? ಕನ್ನಡ ಹಾಡುಗಾರರು ಸಬ್ ಸ್ಟ್ಯಾಂಡರ್ಡ್ ಅಂತಲೋ ಅಥವಾ ಅವರು ಹಿಂದಿ ಹಾಡುಗಾರರಷ್ಟು ಪ್ರಖ್ಯಾತರಲ್ಲ ಎನ್ನುವ ಕಾರಣಕ್ಕೋ ? ಅದೇನೇ ಇರಲಿ ಇಂತಹ ಅವಮಾನವನ್ನು ನಮ್ಮ ಕನ್ನಡಿಗ ಹಾಡುಗಾರರು ಹೇಗೆ ಸಹಿಸಿಕೊಂಡರು ? ಏಕೆ ಸಹಿಸಿಕೊಂಡರು ? ಇದರ ಬಗ್ಗೆ ಅದೇಕೆ ದಿವ್ಯ ಮೌನ ? ಹಾಡುವುದಕೆ ದುಡ್ಡು ಕೊಟ್ಟಿದ್ದಾರೆ , ಫೋಟೋ, ಹೆಸರು ಹಾಕುವುದು ಬಿಡುವುದು ಆಯೋಜಕರ ತಲೆನೋವು ಎನ್ನುವ ಸಿದ್ದಾಂತವೇ ? ಇಲ್ಲ ಸ್ವಾಭಿಮಾನದ ಕೊರತೆಯೇ ?
ನಮ್ಮ ಬಗ್ಗೆ, ನಮ್ಮ ನೆಲ, ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನ ಇಲ್ಲವೆಂದ ಮೇಲೆ ಅನ್ಯರಿಗೆ ಎಲ್ಲಿಂದ ಅಭಿಮಾನ ಹುಟ್ಟುತ್ತದೆ ? ಹೊಟ್ಟೆ ಪಾಡಿಗೆ ಸಾವಿರಾರು ಮೈಲಿ ದೂರದ ದೇಶದಲ್ಲಿ ದಶಕಗಳ ಕಾಲ ದುಡಿದು ಅಲ್ಲಿನ ಮಣ್ಣಿಗೆ ಋಣಿಯಾಗಿ ಅಲ್ಲಿನ ಭಾಷೆ ಕಲಿತವನು ನಾನು, ಹೀಗಾಗಿ ಭಾಷೆಯ ಬಗ್ಗೆ ದುರಭಿಮಾನ ಎಂದಿಗೂ ಇಲ್ಲ. ನನ್ನ ಕನ್ನಡ, ನನ್ನ ತಮಿಳು, ನನ್ನ ತುಳು, ಕೊಂಕಣಿ, ನನ್ನ ಮಲಯಾಳಂ, ನನ್ನ ಹಿಂದಿ ಹೀಗೆ ಎಲ್ಲವೂ ನನ್ನವು, ಭಾರತದ ಪ್ರತಿ ಭಾಷೆಯೂ ನನ್ನ ಭಾಷೆ. ಆದರೆ ಕನ್ನಡ ಅಮ್ಮ ಇದ್ದಹಾಗೆ, ಅದಕ್ಕೆ ಅದು ಮಾತೃ ಭಾಷೆ ಎನ್ನಿಸಿಕೊಂಡಿರುವುದು. ಯಾರು ತನ್ನ ತಾಯಿಯನ್ನು ಗೌರವಿಸುತ್ತಾರೆ ಅವರು ಇತರ ಎಲ್ಲಾ ತಾಯಿಯರನ್ನೂ ಖಂಡಿತ ಗೌರವಿಸುತ್ತಾರೆ. ಈ ಸತ್ಯ ನಮ್ಮ ಆಯೋಜಕರಿಗೆ ತಿಳಿಯಲಿ ಎನ್ನುವ ಉದ್ದೇಶದಿಂದ ಇದನ್ನು ಬರೆದಿದ್ದೇನೆ. ನಮ್ಮ ಕನ್ನಡಿಗ ಹಾಡುಗಾರರಿಗೆ ಸ್ವಲ್ಪ ಆತ್ಮಾಭಿಮಾನ ಕೂಡಾ ಹುಟ್ಟಲಿ ಎನ್ನುವ ಇನ್ನೊಂದು ಆಶಯ ಕೂಡ ಈ ಅಕ್ಷರಗಳ ಜನನಕ್ಕೆ ಕಾರಣವಾಗಿವೆ.
ಕನ್ನಡ ಎನ್ನುವುದು ನವೆಂಬರ್ಗೆ ಸೀಮಿತವಾಗಬಾರದು. ಅದು ಉಸಿರಾಗಬೇಕು , ಬದುಕಾಗಬೇಕು.
ಜೈ ಕನ್ನಡಾಂಬೆ , ಜೈ ಕರ್ನಾಟಕ . ಜೈ ಭಾರತ್ .
- ಲೇಖನ - ರಂಗಸ್ವಾಮಿ ಎನ್ ಆರ್ ಮೂಕನಹಳ್ಳಿ