Randeep Surjewala: ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ಆರೋಪ; ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ವಿರುದ್ಧ ರಾಜ್ಯಪಾಲರಿಗೆ ದೂರು
ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಸಭೆ ನಡೆಸಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಬಿಜೆಪಿ ಶಾಸಕ ಆರ್ ಅಶೋಕ್ ದೂರು ನೀಡಿದ್ದಾರೆ.
ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ (Randeep Surjewala) ಅವರು ಬೆಂಗಳೂರಿನಲ್ಲಿ (Bengaluru) ಬಿಬಿಎಂಪಿ (BBMP) ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಆರೋಪ ಕೇಳಿಬಂದಿದ್ದು, ಸಂಬಂಧ ಬಿಜೆಪಿ ಹಿರಿಯ ಶಾಸಕ ಆರ್ ಅಶೋಕ್ (R Ashok) ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ( Thawar Chand Gehlot) ಅವರನ್ನು ಭೇಟಿ ಮಾಡಿ ದೂರು ನೀಡಿದ ಬಳಿಕ ಮಾತನಾಡಿರುವ ಆರ್ ಅಶೋಕ್, ರಂದೀಪ್ ಸುರ್ಜೇವಾಲ ರಾಜ್ಯ ಸರ್ಕಾರದ ಸಭೆಯಲ್ಲಿ ಭಾಗವಹಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅಧಿಕಾರಿಗಳ ಸಭೆಯಲ್ಲಿ ಅವರು ಯಾಕೆ ಭಾಗವಹಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಎಟಿಎಂ ಆಗಿ ಪರವರ್ತನೆ ಮಾಡಲು ಬಯಸಿದ್ದಾರೆ. ಸರ್ಕಾರಿ ಸಂಸ್ಥೆಗಳನ್ನು ಎಟಿಎಂಗಳನ್ನಾಗಿ ಮಾಡುವ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಈಗಾಗಲೇ ಆ ಪ್ರಕ್ರಿಯೆಯನ್ನು ಆರಂಭಿಸಿದೆ. ಹೀಗಾಗಿ ಈ ವಿಚಾರ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿರುವುದಾಗಿ ಆರ್ ಅಶೋಕ್ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಖಾಸಗಿ ಹೋಟೆಲ್ ನಲ್ಲಿ ಸುರ್ಜೇವಾಲ ಅವರೊಂದಿಗೆ ನಡೆಸಿರುವುದು ಅಧಿಕೃತ ಸಭೆ. ಸರ್ಕಾರಿ ಅಧಿಕಾರಿ, ಪೊಲೀಸ್ ಅಧಿಕಾರಿ ಹಾಗೂ ನಾಲ್ವರು ಸಚಿವರು ಅಲ್ಲಿದ್ದಾರೆ. ಒಬ್ಬರು ಇಬ್ಬರಲ್ಲ ಹಲವು ಅಧಿಕಾರಿಗಳು ಆ ಸಭೆಯಲ್ಲಿ ಇದ್ದರು ಅಂತ ತಿಳಿಸಿದ್ದಾರೆ.
ತಮ್ಮ ದೂರವನ್ನು ಸ್ವೀಕರಿಸಿರುವ ರಾಜ್ಯಪಾಲರು ಈ ಬಗ್ಗೆ ವಿಚಾರಿಸಿ ತಮ್ಮ ಮಾರ್ಗ ಸೂಚಿಗಳನ್ನು ಸರ್ಕಾರ ಮತ್ತು ಮುಖ್ಯ ಕಾರ್ಯದರ್ಶಿಗೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಜಿ ಕಂದಾಯ ಸಚಿವ ಆಶೋಕ್ ಹೇಳಿದ್ದಾರೆ.
ಇನ್ನ ಇದೇ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಲು ಸುರ್ಜೇವಾಲ ಯಾರು ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿರುವುದು ಸಿದ್ದರಾಮಯ್ಯನವರ ನೇತೃತ್ವದ ಸರಕಾರವೋ ಅಥವಾ ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರಕಾರಕ್ಕಾ? ಅಥವಾ ಕೈಗೊಂಬೆ ಸರಕಾರಕ್ಕಾ??
ಪಾಪ.. ಜನರ ವೋಟು ಹಂಗಿನ ಸರಕಾರದ ಪಾಲಾಗಿದೆ. ಸರಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸರಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡಿನ ನಿಲಯದ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು! ನಾನು ಟ್ಯಾಗ್ ಮಾಡಿರುವ ಫೋಟೋ ಆ ದೈನೇಸಿ ಸ್ಥಿತಿಗೆ ಸಾಕ್ಷಿ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಂದೀಪ್ ಸುರ್ಜೆವಾಲಾ ಅವರಿಗೆ ಸರಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು?
ಸಭೆಯಲ್ಲಿ ಹಿರಿಯ ಸಚಿವರಿದ್ದಾರೆ! ಹಿರಿಯ ಐಎಎಸ್ ಅಧಿಕಾರಿಗಳೂ ಹಾಜರಿದ್ದಾರೆ!! ಅಲ್ಲಿಗೆ ಇದು ಅಧಿಕೃತ ಸಭೆಯೇ ಆಯಿತು. ಆದರೆ, ಅಲ್ಲಿ ಸುರ್ಜೆವಾಲಾ ಸೆಂಟರ್ ಸೀಟಿನಲ್ಲಿದ್ದಾರೆ! ಸಚಿವರು ಸೈಡು ಕುರ್ಚಿಗಳ ಪಾಲಾಗಿದ್ದಾರೆ!! ಇದೇನು ವಿಚಿತ್ರ? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಪ್ರಮುಖ ಸೀಟುಗಳಲ್ಲಿ ಕುಳಿತಿದ್ದಾರೆ. ರಾಜ್ಯ ಸಂಪುಟದ ಇತರ ಸಚಿವರು, ಅಧಿಕಾರಿಗಳು ಪಕ್ಕದಲ್ಲಿ ಸೀಟುಗಳಲ್ಲಿ ಕುಳಿತಿರುವುದು ಫೋಟೋದಲ್ಲಿ ಕಾಣಬಹುದು.