Sudha Murty: ವಯಸ್ಸಾದರೂ 6 ಗಂಟೆಗೆ ಎದ್ದು ವೋಟ್ ಹಾಕಲು ಬಂದಿದ್ದೇವೆ; ಮತದಾನ ಮೌಲ್ಯ ವ್ಯಾಖ್ಯಾನಿಸಿದ ಸುಧಾಮೂರ್ತಿ
ಮತದಾನವು ಪ್ರಜಾಪ್ರಭುತ್ವದ ಪವಿತ್ರ ಭಾಗವಾಗಿದೆ. ಮತದಾನವು ಜನರಿಗೆ ಮಾತನಾಡುವ ಶಕ್ತಿ ನೀಡುತ್ತದೆ. ನಾವು ಯಾರಿಗೆ ಮತದಾನ ಮಾಡುತ್ತೇವೆ ಎಂಬುದಕ್ಕಿಂತ ಮತದಾನ ಮಾಡುವುದು ತುಂಬಾ ಮುಖ್ಯ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಯುವ ಮತದಾರರಿಗೆ ಸ್ಫೂರ್ತಿ ತುಂಬಿದ್ದಾರೆ.
ಇನ್ಫೋಸಿಸ್ ಸಹಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾ ಮೂರ್ತಿ, ಇಂದು ಬೆಳಗ್ಗೆ ಮತ ಚಲಾಯಿಸಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಬೆಳಗ್ಗೆ ಬೇಗನೆ ಮತ ಚಲಾಯಿಸಿದ ದಂಪತಿ, ಯುವಕರು ಮತದಾನದ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಶಿಕ್ಷಣತಜ್ಞೆ ಸುಧಾ ಮೂರ್ತಿ "ದಯವಿಟ್ಟು ನಮ್ಮನ್ನು ನೋಡಿ. ನಾವು ವಯಸ್ಸಾದವರು. ಆದರೂ ಬೆಳಗ್ಗೆ ಬೇಗನೆ 6 ಗಂಟೆಗೆ ಎದ್ದು ಇಲ್ಲಿಗೆ ಬಂದು ಮತ ಚಲಾಯಿಸುತ್ತೇವೆ. ಮತದಾನವು ಪ್ರಜಾಪ್ರಭುತ್ವದ ಪವಿತ್ರ ಭಾಗವಾಗಿದೆ. ಮತದಾನವು ಜನರಿಗೆ ಮಾತನಾಡುವ ಶಕ್ತಿ ನೀಡುತ್ತದೆ. ನಾವು ಯಾರಿಗೆ ಮತದಾನ ಮಾಡುತ್ತೇವೆ ಎಂಬುದಕ್ಕಿಂತ ಮತದಾನ ಮಾಡುವುದು ತುಂಬಾ ಮುಖ್ಯ" ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಯುವ ಮತದಾರರಿಗೆ ಸ್ಫೂರ್ತಿ ತುಂಬಿದ್ದಾರೆ.
ಮತ್ತೊಂದೆಡೆ ಬುಧವಾರ ಬೆಳಗ್ಗೆಯಷ್ಟೇ ವಿದೇಶದಿಂದ ಭಾರತಕ್ಕೆ ಆಗಮಿಸಿರುವ ನಾರಾಯಣ ಮೂರ್ತಿ ಕೂಡಾ, ಇಂದು ಮತ ಚಲಾಯಿಸಿದ್ದಾರೆ. ಯುವಕರು ಮತದಾನ ಮಾಡುವಂತೆ ಪ್ರೇರೇಪಿಸುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದ ಅವರು, ಮತದಾನದ ಪ್ರಾಮುಖ್ಯತೆ ಏನು ಎಂದು ಸಲಹೆ ನೀಡುವುದು ಹಿರಿಯರ ಜವಾಬ್ದಾರಿಯಾಗಿದೆ ಎಂದರು.
“ಮತದಾನ ಮಾಡದ ಜನರಿಗೆ ಯಾರನ್ನೂ ಟೀಕಿಸುವ ಹಕ್ಕು ಇಲ್ಲ. ನಾವು ಮತ ಹಾಕಿದರೆ, ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ಹೇಳಬಹುದು. ಆದರೆ. ನಾವು ಮತದಾನವೇ ಮಾಡದಿದ್ದರೆ ಟೀಕೆ ಮಾಡುವ ಹಕ್ಕು ನಮಗಿಲ್ಲ” ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.
ರಾಜ್ಯದಲ್ಲಿ ಬೆಳಗ್ಗೆ 11 ಗಂಟೆಗೆ ಶೇ 20.99 ಪ್ರಮಾಣದಲ್ಲಿ ಮತದಾನವಾಗಿದೆ. ಹೊತ್ತು ಏರಿದಂತೆ ಮತದಾನವೂ ಚುರುಕಾಗುತ್ತಿದೆ. ಕುಂದಾಪುರದಲ್ಲಿ ಶೇ. 32ರಷ್ಟು ಮತದಾನವಾಗಿದ್ದು, ಸುಳ್ಯದಲ್ಲಿ ಶೇಕಡ 30.52 ಮತದಾನವಾಗಿದೆ.