Karnataka Board Exam: 8, 9, 10ನೇ ತರಗತಿಯ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಆದೇಶ
ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ (ಅಕ್ಟೋಬರ್ 21) ತರಾಟೆಗೆ ತೆಗೆದುಕೊಂಡಿದೆ. ಮುಂದಿನ ಸೂಚನೆ ಬರುವವರೆಗೆ 8, 9 ಮತ್ತು 10 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸದಂತೆ ನ್ಯಾಯಾಲಯ ರಾಜ್ಯಕ್ಕೆ ತಡೆಯಾಜ್ಞೆ ನೀಡಿದೆ.
ನವದೆಹಲಿ: ಮುಂದಿನ ಆದೇಶದವರೆಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ನಡೆದಿರುವ 8, 9 ಮತ್ತು 10 ನೇ ತರಗತಿಗಳ ಅರ್ಧ ವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಮುಂದಿನ ಆದೇಶದವರೆಗೆ ಪ್ರಕಟಿಸದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ದ್ವಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗಿದ್ದ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಈ ಪೀಠ ನಡೆಸಿತ್ತು. ವಿದ್ಯಾರ್ಥಿಗಳನ್ನು ಏಕೆ ಶೋಷಿಸುತ್ತೀರಿ? ಈ ರೀತಿ ವರ್ತಿಸಬೇಡಿ. ಸ್ವಪ್ರತಿಷ್ಠೆ ಬೇಡ. ವಿದ್ಯಾರ್ಥಿಗಳ ಏಳಿಗೆ ಕುರಿತು ಕಾಳಜಿ ಇದ್ದರೆ ಸರ್ಕಾರ ಉತ್ತಮ ಶಾಲೆಗಳನ್ನು ತೆರೆಯಲಿ ಎಂದು ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ. ರಾಜ್ಯ ಸರ್ಕಾರದ ಪರ ವಾದಿಸಿದ ದೇವದತ್ತ ಕಾಮತ್ ಅವರನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ದೇಶದ ಯಾವುದೇ ರಾಜ್ಯ ಇಂತಹ ವಿಧಾನವನ್ನು ಅಳವಡಿಸಿಕೊಂಡಿಲ್ಲ. ಮುಂದಿನ ನಾಲ್ಕು ವಾರಗಳಲ್ಲಿ ವಾಸ್ತವಾಂಶ ಕುರಿತು ವರದಿ ಸಲ್ಲಿಸುವಂತೆ ರಾಜ್ಯಕ್ಕೆ ಸೂಚಿಸಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬೋರ್ಡ್ ಪರೀಕ್ಷೆ ನಡೆಸಲಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ತಾರದೇ ಪರೀಕ್ಷೆ ನಡೆಸಲಾಗಿತ್ತು. ಹತ್ತನೇ ತರಗತಿ ಪರೀಕ್ಷೆಗೆ ಎಂಟು ಲಕ್ಷ ವಿದ್ಯಾರ್ಥಿಗಳು.ಪರೀಕ್ಷೆಗೆ ಹಾಜರಾಗಿದ್ದರು.
ಬೋರ್ಡ್ ಪರೀಕ್ಷೆ ವಿವಾದ ಭುಗಿಲೇಳುತ್ತಿದ್ದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಫಲಿತಾಂಶಕ್ಕೆ ಸರ್ಕಾರ ತಡೆ ನೀಡಿತ್ತು. ಸರ್ಕಾರದ ಈ ನಿಲುವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಪರ ವಕೀಲ ಕೆವಿ ಧನಂಜಯ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕಳೆದ ವರ್ಷದ ಆದೇಶ ಉಲ್ಲೇಖಿಸಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ.
ಮದರಸಾಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸ್ಥಳಾಂತರ ಬೇಡ: ಸುಪ್ರೀಂ ಕೋರ್ಟ್
ಮದರಸಾಗಳಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಆದೇಶ ಮತ್ತು ಈ ಸಂಬಂಧ ಕೆಲವು ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ತಡೆಹಿಡಿಯುವ ಅಗತ್ಯವಿದೆ ಎಂದು ಮುಸ್ಲಿಂ ಸಂಘಟನ ಜಮಿಯತ್ ಉಲೇಮಾ-ಇ-ಹಿಂದ್ ವಾದ ಮಂಡಿಸಿತ್ತು.
ಇವರ ವಾದವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಒಪ್ಪಿಕೊಂಡಿದೆ. ಮಾನ್ಯತೆ ಇಲ್ಲದ ಮದರಸಾಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸ್ಥಳಾಂತರಿಸುವ ಕುರಿತು ಉತ್ತರ ಪ್ರದೇಶ ಮತ್ತು ತ್ರಿಪುರಾ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನೂ ಸಂಸ್ಥೆ ಪ್ರಶ್ನಿಸಿತ್ತು. ವಾದ ಆಲಿಸಿದ ನ್ಯಾಯಾಲಯ ಕ್ರಮ ಜರುಗಿಸದಂತೆ ಆದೇಶಿಸಿದೆ. ಎನ್‌ಸಿಪಿಸಿಆರ್ ಅನ್ವಯ ರಾಜ್ಯಗಳು ಹೊರಡಿಸಿರುವ ಆದೇಶಗಳಿಗೂ ತಡೆ ನೀಡಿದೆ.
ವರದಿ-ಎಚ್ ಮಾರುತಿ
ಇದನ್ನೂ ಓದಿ: MLC ಸ್ಥಾನಕ್ಕೆ ಸಿಪಿ ಯೋಗಿಶ್ವರ್ ರಾಜೀನಾಮೆ; ಬಿಜೆಪಿಯಿಂದ ಟಿಕೆಟ್ ಸಿಗದ್ದಕ್ಕೆ ಸ್ವತಂತ್ರವಾಗಿ ಸ್ಪರ್ಧೆ?