Karnataka Budget 2023: ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಭರಪೂರ ಕೊಡುಗೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Budget 2023: ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಭರಪೂರ ಕೊಡುಗೆ

Karnataka Budget 2023: ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಭರಪೂರ ಕೊಡುಗೆ

Karnataka Budget 2023: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.ಮೀಸಲಿಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವುದು ಇದರಿಂದ ಸಾಬೀತಾಗಿದೆ.

ಕಲ್ಯಾಣ ಕರ್ನಾಟಕ
ಕಲ್ಯಾಣ ಕರ್ನಾಟಕ

ಕಲಬುರಗಿ: ನೂತನ ಕಾಂಗ್ರೆಸ್‌ ಸರಕಾರದ ಚೊಚ್ಚಲ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಭರಪೂರ ಕೊಡುಗೆ ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಲ್ಯಾಣ ಕರ್ನಾಟದ ಭಾಗದ ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್‌, ಶರಣಬಸಪ್ಪಗೌಡ ದರ್ಶನಾಪುರ, ಈಶ್ವರ ಖಂಡ್ರೆ, ರಹೀಮ್‌ ಖಾನ್‌, ಎನ್.ಎಸ್.ಬೋಸರಾಜು ಮತ್ತು ಶಿವರಾಜ ತಂಗಡಗಿ, ಬಿ.ನಾಗೇಂದ್ರ ಸೇರಿ 8 ಜನ ಸಚಿವರ ಮುತುವರ್ಜಿಯಿಂದಾಗಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.ಮೀಸಲಿಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವುದು ಇದರಿಂದ ಸಾಬೀತಾಗಿದೆ.

ಕರ್ನಾಟಕ ಅಭಿವೃದ್ಧಿಗಾಗಿ 371 (ಜೆ) ವಿಧಿ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾಗಿತ್ತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಹಿಂದಿನ ಬಿಜೆಪಿ ಸರಕಾರ 5 ಸಾವಿರ ಕೋಟಿ ರೂ.ನೀಡುವುದಾಗಿ ಘೋಷಣೆ ಮಾಡಿದ್ದರೂ ಸಹ ಕೇವಲ 3 ಸಾವಿರ ಕೋಟಿ ರೂ. ಅನುದಾನ ನೀಡಿತ್ತು. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಈ ಮಂಡಳಿಗೆ 5 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿತ್ತು. ಕೊಟ್ಟ ಮಾತಿನಂತೆ ಸರಕಾರ ನಡೆದುಕೊಂಡು ಅನುದಾನ ಘೋಷಣೆ ಮಾಡಿದೆ.

ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ಬೀದರ್‌, ಕೊಪ್ಪಳ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಸ್ತು ಎಂದಿದೆ. ಇದರ ಮೂಲಕ ಈ ಭಾಗದಲ್ಲಿ ನೀರಿನ ಸಮಸ್ಯಗೆ ಮುಕ್ತಿ ದೊರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಂಜೂರು. ಆಶಾಕಿರಣ ಯೋಜನೆಯಡಿಯಲ್ಲಿ ಕಣ್ಣಿನ ಶಿಬಿರ, ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನೀಡಲು ರಾಯಚೂರು ಜಿಲ್ಲೆಯಲ್ಲಿ ಆಶಾಕಿರಣ ಮಂಜೂರು.

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್‌ ಮತ್ತು ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ ಸ್ಥಾಪನೆ. ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ನಿರ್ಮಾಣ ಪೂರ್ಣಗೊಳಿಸಲು ಅಸ್ತು ಎಂದಿರುವುದು ಈ ಭಾಗದ ರೋಗಿಗಳಿಗೆ ಅನುಕೂಲ ಕಲ್ಪಿಸುವಂತಾಗಿದೆ.

ಕಲಬುರಗಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರಾಯೋಗಾಲಗಳ ಘಟಕ ಸ್ಥಾಪನೆ. ಕಲಬುರಗಿ ಜಿಮ್ಸ್‌ ಆಸ್ಪತ್ರೆಯಲ್ಲಿ 200 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ವತಿಯಿಂದ ಕಲಬುರಗಿಯಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ ಸಂಶೋಧನಾ ಕೇಂದ್ರ, ಒಳಾಂಗಣ ಕ್ರೀಡಾ ಸೌಲಭ್ಯ.

ಕಲಬುರಗಿಯಲ್ಲಿ ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜು ಸ್ಥಾಪನೆ. ಕಲಬುರಗಿಯಲ್ಲಿ ಟ್ರಾಮಾ ಕೇರ್‌ ಸೆಂಟರ್‌ ಸ್ಥಾಪನೆಗೆ ಅಸ್ತು. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಿಂದ ಕಲಬುರಗಿಯಲ್ಲಿ ಕ್ಯಾನ್ಸರ್‌ ಪ್ರಾದೇಶಿಕ ಘಟಕ ಸ್ಥಾಪನೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತವನ್ನು ಬಲಪಡಿಸಲು ಪ್ರತಿ ತಾಲೂಕಿನಲ್ಲಿ ಒಬ್ಬ ನುರಿತ ಯುವ ಪದವೀಧರರನ್ನು 24 ತಿಂಗಳ ಅವಧಿಗೆ ಮುಖ್ಯಮಂತ್ರಿ ಫೆಲೋಶಿಫ್‌ಗೆ ಆಯ್ಕೆ ಮಾಡಲಾಗಿದ್ದು, ಇದಕ್ಕೆರ 10 ಕೋಟಿ ರೂ. ಮೀಸಲು.

ಕಲ್ಯಾಣ ಕರ್ನಾಟಕದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣ ತಲಾ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ. ಇದಕ್ಕೆ 100 ಕೋಟಿ ರೂ.ಮೀಸಲು.

ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವ ನಿಟ್ಟಿನಲ್ಲಿ ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರ ಬಳಿಯ ಬಳ್ಳಾರಿ-ಲಿಂಗಸೂರು ರಸ್ತೆ ವೃತ್ತದವರೆಗೆ ಒಟ್ಟು 78 ಕಿ.ಮೀ. ಉದ್ದದ ರಸ್ತೆಯನ್ನು 1.696 ಕೋಟಿ ಮೊತ್ತದಲ್ಲಿ ಹೈಬ್ರಿಡ್‌ ಆನ್ಯೂಟಿ ಮಾದರಿಯಲ್ಲಿ ಅಭಿವೃದ್ಧಿಗೆ ಅಸ್ತು.

ಸಣ್ಣ ಕೈಗಾರಿಕೆಗೆ ಪ್ರೋತ್ಸಾಹಿಸಲು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ, ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಹೊಸದಾಗಿ ಕೈಗಾರಿಕಾ ವಸಾಹತು ಸ್ಥಾಪನೆ.

ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಲೋಕ ಸ್ಥಾನೆಗೆ ಸರಕಾರ ಅಸ್ತು ಎಂದಿದೆ.

ಕಲ್ಯಾಣ ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಕಲಬುರಗಿ ಜಿಲ್ಲೆಯ ಗಾಣಗಾಪುರ, ಮಳಖೇಡ ಯಾದಗಿರಿ ಜಿಲ್ಲೆಯ ಮೈಲಾರ, ಬೀದರ್‌, ರಾಯಚೂರು, ಕಲಬುರಗಿ ಕೋಟೆಗಳ ಸಮಗ್ರ ಅಭಿವೃದ್ಧಿ ಘೋಷಣೆ ಮಾಡಿರುವುದು ಪ್ರವಾಸಿಗರಿಗೆ ಹರ್ಷವನ್ನುಂಟು ಮಾಡಿದೆ.

ಬೀದರ್‌ ಜಿಲ್ಲೆಯಲ್ಲಿ ಕೃಷ್ಣ ಮೃಗಗಳ ಸಂತತಿ ಹೆಚ್ಚಾಗಿದ್ದು, ಅವುಗಳ ಸಂರಕ್ಷಣೆಗೆ ಕೃಷ್ಣಮೃತ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆ ಮಾಡಿದ್ದು, ಅದಕ್ಕೆ 2 ಕೋಟಿ ರೂ.ಮೀಸಲಿಟ್ಟಿದೆ.

ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಸರಕಾರ ಅಸ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದು ನಾಗರಿಕರು ಕಚೇರಿಯಿಂದ ಕಚೇರಿಗೆ ಅಲೆಯುವುದು ತಪ್ಪಲಿದೆ.

ತೊಗರಿ ಮಂಡಳಿಗೆ ಅನುದಾನ ಸಿಗಲೇ ಇಲ್ಲ

ಎಸ್.ಎಂ.ಕೃಷ್ಣ ಸಿಎಂ ಆಗಿರುವ ಸಂದರ್ಭದಲ್ಲಿ ತೊಗರಿ ಅಭಿವೃದ್ಧಿ ಮಂಡಳಿ ರಚನೆಯಾಗಿತ್ತು. ಹೆಸರಿಗಷ್ಟೇ ಮಂಡಳಿ ಇದೆ. ಈ ಮಂಡಳಿಗೆ ಯಾವ ಸರಕಾರವೂ ಅನುದಾನ ಬಿಡುಗಡೆ ಮಾಡಿಲ್ಲ. ಕೆಎಂಎಫ್‌ ಮಾದರಿಯಲ್ಲಿ ಈ ಮಂಡಳಿ ರಚನೆಯಾಗಬೇಕೆಂಬುದು ಈ ಭಾಗದ ರೈತರ ಬೇಡಿಕೆಯಾಗಿತ್ತು. ಮಂಡಳಿಯಿಂದ ಹೊಸ ತಳಿಗಳ ಸಂಶೋಧನೆ, ತೊಗರಿ ಬೇಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಮಂಡಳಿಗೆ ಕನಿಷ್ಠ 100 ಕೋಟಿ ರೂ. ಅನುದಾನದ ಬೇಡಿಕೆ ಇತ್ತು. ಆದರೆ, ಇಲ್ಲಿಯವರೆಗೂ ಯಾವ ಮುಖ್ಯಮಂತ್ರಿಯೂ ಈ ಮಂಡಳಿ ಬಗ್ಗೆ ಕಾಳಜಿ ತೋರಿಸಿರಲಿಲ್ಲ. ಈ ಸರಕಾರವೂ ಮಂಡಳಿಗೆ ಅನುದಾನ ಘೋಷಣೆ ಮಾಡಲೇ ಇಲ್ಲ.

ಕಲ್ಯಾಣ ಕರ್ನಾಟಕದ ಹಲವು ಗ್ಯಾರಂಟಿ ಈಡೇರಿಲ್ಲ

ಚುನಾವಣೆಯಲ್ಲಿ ಕಾಂಗ್ರೆಸ್‌ ಐದು ಗ್ಯಾರಂಟಿ ನೀಡಿದಂತೆ ಕಲ್ಯಾಣ ಕರ್ನಾಟಕಕ್ಕೆ ಅಭಿವೃದ್ಧಿಗಾಗಿಯೇ ನೀಡಿರುವ 10 ಭರವಸೆಗಳು ನೀಡಿತ್ತು. ಅವುಗಳಲ್ಲಿ ತಾಯಿ, ಮಕ್ಕಳ ಸ್ಪೆಸಾಲಿಟಿ ಆಸ್ಪತ್ರೆ, ಕಲಬುರಗಿ ಜಿಮ್ಸ್‌ ಆಸ್ಪತ್ರೆಯಲ್ಲಿ 200 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ. ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ವತಿಯಿಂದ ಕಲಬುರಗಿಯಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ ಸಂಶೋಧನಾ ಕೇಂದ್ರ, ಒಳಾಂಗಣ ಕ್ರೀಡಾ ಸೌಲಭ್ಯ.

ಕಲಬುರಗಿಯಲ್ಲಿ ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜು ಸ್ಥಾಪನೆ. ಕಲಬುರಗಿಯಲ್ಲಿ ಟ್ರಾಮಾ ಕೇರ್‌ ಸೆಂಟರ್‌ ಸ್ಥಾಪನೆಗೆ ಅಸ್ತು. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಿಂದ ಕಲಬುರಗಿಯಲ್ಲಿ ಕ್ಯಾನ್ಸರ್‌ ಪ್ರಾದೇಶಿಕ ಘಟಕ ಸ್ಥಾಪನೆಗೆ ಅಸ್ತು ಎಂದು ಹೇಳಿದೆ ಉಳಿದ ಗ್ಯಾರಂಟಿಗಳಾದ 371 (ಜೆ) ವಿಧಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಕುರಿತು, ಖಾಲಿ ಇರುವ 32 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡುವುದು. ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕಾ ಕಾರಿಕಾರ್‌ ನಿರ್ಮಾಣ, ಒಂದು ಲಕ್ಷ ಉದ್ಯೋಗವನ್ನು ಖಾಸಗಿ ವಲಯವೊಂದರಲ್ಲಿ ಸೃಷ್ಟಿಸುವುದು. ಕೃಷ್ಣಾ ಮತ್ತು ಗೋದಾವರಿ ಜಲಾನಯನ ಪ್ರದೇಶದ ಎಲ್ಲ ನೀರಾವರಿ ಯೋಜನೆಗಳನ್ನು 24 ತಿಂಗಳೊಳಗೆ ಕಾಮಗಾರಿ ಕೈಗೆತ್ತಿಕೊಳ್ಳುವುದು. ಜಿಲ್ಲಾ ಕೇಂದ್ರಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದು. ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದು. ಪ್ರತಿ ಗ್ರಾಪಂಗೆ ಒಂದು ಕೋಟಿ ರೂ. ಅನುದಾನ ನೀಡುವ ಗ್ಯಾರಂಟಿಗಳಿಗೆ ಯಾವುದೇ ಘೋಷಣೆ ಮಾಡದೇ ಇರುವುದು ಈ ಭಾಗದ ಜನರಿಗೆ ಬೇಸರವನ್ನುಂಟು ಮಾಡಿದೆ.

ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಯಾಗಿಲ್ಲ

ಎಲ್ಲ ಕ್ಷೇತ್ರಗಳಂತೆ ಕೈಗಾರಿಕಾ ಕ್ಷೇತ್ರವೂ ತೀರಾ ಹಿಂದುಳಿದಿದೆ. ವಿಮಾನ ನಿಲ್ದಾಣ ಇಲ್ಲದೆ ಕೈಗಾರಿಕೆಗಳ ಅಭಿವೃದ್ಧಿ ಅಸಾಧ್ಯವೆಂದು ಹೇಳಲಾಗುತ್ತಿತ್ತು. ಆದರೆ, ಹಲವು ವರ್ಷಗಳೇ ಕಳೆದವು ಇಲ್ಲಿ ವಿಮಾನ ನಿಲ್ದಾಣವಾಗಿಲ್ಲ. ಆದರೆ, ಕೈಗಾರಿಕೆಗಳು ಸ್ಥಾಪನೆ ಆಗಲೇ ಇಲ್ಲ. ಹೀಗಾಗಿ ಕೈಗಾರಿಕಾ ಅಭಿವೃದ್ಧಿಯಾಗಲೇ ಬೇಕು. ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಹೇಳಿದ್ದರು. ಆದರೆ, ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡದೆ ಇರುವುದು ಕೈಗಾರಿಕ್ಯೋದಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

(ವರದಿ:ಎಸ್.ಬಿ.ರೆಡ್ಡಿ)

Whats_app_banner