Karnataka Budget: ಕರ್ನಾಟಕ ಸರಕಾರಕ್ಕೆ ಎಲ್ಲೆಲ್ಲಿಂದ ಆದಾಯ ಬರುತ್ತೆ, ಖರ್ಚು ಎಷ್ಟಿರುತ್ತದೆ, ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಒಂದು ಅವಲೋಕನ
ಕರ್ನಾಟಕ ಕಾಂಗ್ರೆಸ್ ಸರಕಾರದ ಬಜೆಟ್ ಮಂಡನೆ (Karnataka Budget 2023)ಗೆ ವೇದಿಕೆ ಸಿದ್ಧವಾಗಿದೆ. ಹಲವು ಗ್ಯಾರಂಟಿ ಯೋಜನೆಗಳನ್ನು ಒಳಗೊಂಡ ಅಂದಾಜು 3.5 ಲಕ್ಷ ಕೋಟಿ ರೂ ವೆಚ್ಚದ ಬಜೆಟ್ ಇದಾಗಿರಲಿದೆ. ರಾಜ್ಯ ಸರಕಾರಕ್ಕೆ ಈ ರೀತಿ ಖರ್ಚು ಮಾಡಲು ಆದಾಯದ ಮೂಲಗಳು ಯಾವುವು, ಸರಕಾರಕ್ಕೆ ಯಾವೆಲ್ಲ ವೆಚ್ಚಗಳು ಇರುತ್ತವೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್ ಕುರಿತು ಎಲ್ಲರೂ ಕುತೂಹಲಗೊಂಡಿದ್ದಾರೆ. ಹಲವು ಗ್ಯಾರಂಟಿ ಯೋಜನೆಗಳ ಜಾರಿಗೆ ಭರ್ಜರಿ ಮೊತ್ತ ಬೇಕಿರುತ್ತದೆ. ಇದರೊಂದಿಗೆ ರಾಜ್ಯದ ಪ್ರತಿನಿತ್ಯದ ಖರ್ಚುವೆಚ್ಚಗಳು ಹಲವು ಕೋಟಿ ಇರಲಿದೆ. ಸರಕಾರ ನಡೆಸುವುದೆಂದರೆ ಕೋಟಿ ಕೋಟಿ ಹಣ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಈ ಬಾರಿಯ ಕರ್ನಾಟಕ ಬಜೆಟ್ ಗಾತ್ರ ಸುಮಾರು 3.35 ಲಕ್ಷ ಕೋಟಿ ರೂಪಾಯಿ. ಈ ಅಂದಾಜನ್ನು ಸಿದ್ದರಾಮಯ್ಯ ಅವರು ಇತ್ತೀಚೆಗೆ ನೀಡಿದ್ದರು. ಈ ರೀತಿ ರಾಜ್ಯ ಸರಕಾರವೊಂದು ಆಡಳಿತ ನಡೆಸಲು ಬೇಕಿರುವ ಆದಾಯದ ಮೂಲಗಳು ಯಾವುವು, ಖರ್ಚುವೆಚ್ಚಗಳು ಎಷ್ಟಿರುತ್ತವೆ ಎಂದು ತಿಳಿದುಕೊಳ್ಳೋಣ.
ಕರ್ನಾಟಕ ರಾಜ್ಯದ ಆದಾಯ ಮೂಲಗಳು ಯಾವುವು?
ಕರ್ನಾಟಕ ರಾಜ್ಯಕ್ಕೆ ಪ್ರಮುಖವಾಗಿ ಕೆಲವು ಆದಾಯ ಮೂಲಗಳು ಇವೆ. ರಾಜ್ಯ ತೆರಿಗೆಯೇತರ ರಾಜಸ್ವದಿಂದ, ಕೇಂದ್ರ ಸರ್ಕಾರದ ಸಹಾಯಾನುದಾನ, ಕೇಂದ್ರದ ತೆರಿಗೆ ಪಾಲಿನಿಂದ, ಸಾರ್ವಜನಿಕ ಲೆಕ್ಕ ನಿವ್ವಳ, ರಾಜ್ಯ ತೆರಿಗೆಯಿಂದ ಮತ್ತು ಸಾಲದಿಂದ ಆದಾಯ ಪಡೆಯುತ್ತದೆ. ಈ ಎಲ್ಲಾ ಆದಾಯ ಮೂಲಗಳನ್ನು ಒಂದು ರೂಪಾಯಿ ಎಂದು ಇಟ್ಟುಕೊಳ್ಳೋಣ. ಈ ಮೇಲಿನ ವಿಷಯಗಳಲ್ಲಿ ಯಾವುದರಿಂದ ಅಂದಾಜು ಎಷ್ಟು ಆದಾಯ ಪಡೆಯುತ್ತದೆ ಎಂದು ತಿಳಿಯೋಣ.
- ರಾಜ್ಯ ತೆರಿಗೆಯೇತರ ರಾಜಸ್ವದಿಂದ 3 ಪೈಸೆ ಆದಾಯ
- ಕೇಂದ್ರ ಸರ್ಕಾರದ ಸಹಾಯಾನುದಾನದಿಂದ 6 ಪೈಸೆ
- ಕೇಂದ್ರದ ತೆರಿಗೆ ಪಾಲಿನಿಂದ 10 ಪೈಸೆ
- ಸಾರ್ವಜನಿಕ ಲೆಕ್ಕ ನಿವ್ವಳದಿಂದ 2 ಪೈಸೆ
- ರಾಜ್ಯ ತೆರಿಗೆಯಿಂದ 50 ಪೈಸೆ
- ಸಾಲದಿಂದ 29 ಪೈಸೆ
ರಾಜ್ಯದ ಆದಾಯ ಮೂಲಗಳ ವಿವರಣೆ
ಮೇಲಿನ ಪೈಸೆ ಲೆಕ್ಕಾಚಾರ ಬಿಟ್ಟು ನೇರವಾಗಿ ಹೇಳುವುದಾದರೆ ಸರಕಾರಕ್ಕೆ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಆದಾಯ ದೊರಕುತ್ತದೆ. ತೆರಿಗೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಯಿಂದ ಆದಾಯ ಬರುತ್ತದೆ. ಭೂಮಿ , ನಿವೇಶನ ಇತ್ಯಾದಿ ಪ್ರಾಪರ್ಟಿ ತೆರಿಗೆ, ಮದ್ಯದ ಮೇಲೆ ತೆರಿಗೆ ಇತ್ಯಾದಿ ಹಲವು ನೇರ ತೆರಿಗೆ ಮೂಲದಿಂದ ಸರಕಾರ ಆದಾಯ ಸಂಗ್ರಹಿಸುತ್ತದೆ. ಸೇವೆ ಮತ್ತು ಸರಕುಗಳಿಗೆ ನೀಡುವ ಜಿಎಸ್‌ಟಿ ತೆರಿಗೆಯಿಂದಲೂ ರಾಜ್ಯಕ್ಕೆ ಪಾಲಿದೆ.
ಶುಲ್ಕ: ತೆರಿಗೆಯೇತರ ಆದಾಯವೂ ರಾಜ್ಯಕ್ಕೆ ದೊರಕುತ್ತದೆ. ಸರಕಾರದಿಂದ ಪಡೆದ ಸೇವೆಗಳಿಗೆ ವಿಧಿಸುವ ಶುಲ್ಕದಿಂದ ಆದಾಯ ಪಡೆಯುತ್ತದೆ. ಶಿಕ್ಷಣ ಶುಲ್ಕ, ಪರವಾನಗಿ ಶುಲ್ಕ, ನೋಂದಣಿ ಶುಲ್ಕ, ಹೊಸ ವ್ಯಾಪಾರ ನೋಂದಣಿ ಶುಲ್ಕ ಇತ್ಯಾದಿಗಳು ಇದಕ್ಕೆ ಉದಾಹರಣೆಗಳಾಗಿವೆ.
ದಂಡ ಮತ್ತು ಪೆನಾಲ್ಟಿ: ಜನರು ತಪ್ಪು ಮಾಡಿದರೆ ಸರಕಾರದ ಆದಾಯ ಹೆಚ್ಚುತ್ತದೆಯೇ? ಹೌದು, ಟ್ರಾಫಿಕ್ ಉಲ್ಲಂಘನೆಯ ಮೂಲಕವೇ ಸಾವಿರಾರು ಜನರು ಸರಕಾರದ ಬೊಕ್ಕಸ ತುಂಬಿಸುತ್ತಿದ್ದಾರೆ. ಪರಿಸರ ಕಾನೂನು, ಕಂಪನಿ ಆಡಳಿತ ಕಾನೂನು, ಟ್ರಾಫಿಕ್ ಕಾನೂನು ಇತ್ಯಾದಿ ಹಲವು ಕಾನೂನು ಉಲ್ಲಂಘನೆಗೆ ಸರಕಾರಕ್ಕೆ ಕಟ್ಟುವ ದಂಡವು ಸರಕಾರಕ್ಕೆ ಆದಾಯದ ಮೂಲಗಳಾಗಿವೆ. ಇದರೊಂದಿಗೆ ಉಡುಗೊರೆ, ಗ್ರಾಂಟ್, ದಾನ ಇತ್ಯಾದಿಗಳ ಮೂಲಕವೂ ಸರಕಾರ ಆದಾಯ ಪಡೆಯುತ್ತದೆ. ಸರಕಾರಕ್ಕೆ ಲಿಕ್ಕರ್ ಪ್ರಮುಖ ಆದಾಯದ ಮೂಲವಾಗಿದೆ. ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗುತ್ತದೆ.
ರಾಜ್ಯ ಸರಕಾರಕ್ಕೆ ಖರ್ಚುಗಳು ಯಾವುವು?
ಈ ಹಣವನ್ನು ಸರಕಾರವೊಂದು ಹೇಗೆ ಬೇಕಾದರೂ ಖರ್ಚು ಮಾಡಬಹುದು. ವಿವಿಧ ಯೋಜನೆ, ವಿಷಯಗಳಿಗೆ ಇಂತಿಷ್ಟು ಅನುದಾನ ನೀಡುವ ಮೂಲಕ ಈ ಖರ್ಚು ವೆಚ್ಚದ ಹಂಚಿಕೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ಸರಕಾರವು ಭಾಗ್ಯಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ, ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಯುವನಿಧಿ ಯೋಜನೆ ಇತ್ಯಾದಿಗಳಿಗೆ ಖರ್ಚು ಮಾಡಬೇಕಿದೆ.
ಈ ವೆಚ್ಚವನ್ನು ಅದರದ್ದೇ ಆದ ಭಾಷೆಯಲ್ಲಿ ಹೇಳುವುದಾದರೆ ಈ ರೀತಿ ಹೇಳಬಹುದು. ವೇತನ ಹಾಗೂ ಭತ್ಯೆಗಳಿಗೆ ಸರಕಾರ ಅತ್ಯಧಿಕ ವೆಚ್ಚ ಮಾಡಬೇಕಾಗುತ್ತದೆ. ಋಣ ಮೇಲುಸ್ತುವಾರಿ, ಬಂಡವಾಳ ವೆಚ್ಚ, ಇತರೆ ರಾಜಸ್ವ ವೆಚ್ಚ, ಸಹಾಯ ಧನ, ಸಾಮಾಜಿಕ ಭದ್ರತಾ ಪಿಂಚಣಿ, ಆಡಳಿತಾತ್ಮಕ ವೆಚ್ಚ ಇತ್ಯಾದಿಗಳಿಗೆ ಸರಕಾರವು ಖರ್ಚು ಮಾಡಬೇಕಿರುತ್ತದೆ. ಇದನ್ನು ಪೈಸೆ ಲೆಕ್ಕಾಚಾರದಲ್ಲಿ ಮುಂದಿನಂತೆ ಲಿಸ್ಟ್ ಮಾಡಬಹುದು.
- ಉದ್ಯೋಗಿಗಳ ವೇತನ ಹಾಗೂ ಭತ್ಯೆಗಳು – 21 ಪೈಸೆ
- ಋಣ ಮೇಲುಸ್ತುವಾರಿ- 18 ಪೈಸೆ
- ಬಂಡವಾಳ ವೆಚ್ಚ- 17 ಪೈಸೆ
- ಇತರೆ ರಾಜಸ್ವ ವೆಚ್ಚ- 16 ಪೈಸೆ
- ಸಹಾಯ ಧನ- 10 ಪೈಸೆ
- ಪಿಂಚಣಿ- 10 ಪೈಸೆ
- ಸಹಾಯಾನುದಾನ ಮತ್ತು ಇತರೆ- 4 ಪೈಸೆ
- ಸಾಮಾಜಿಕ ಭದ್ರತಾ ಪಿಂಚಣಿಗಳು- 3 ಪೈಸೆ
- ಆಡಳಿತಾತ್ಮಕ ವೆಚ್ಚಗಳು- 1 ಪೈಸೆ
ಈಗ ನಿಮಗೆ ರಾಜ್ಯ ಸರಕಾರದ ಆದಾಯ ಮತ್ತು ವೆಚ್ಚದ ಕುರಿತು ಸ್ಪಷ್ಟ ಅಂದಾಜು ದೊರಕಿರಬಹುದು. ನಾಳೆ ಕರ್ನಾಟಕ ಬಜೆಟ್ ಕುರಿತು ಹಿಂದೂಸ್ತಾನ್ ಟೈಮ್ಸ್ ಕನ್ನಡವು ಲೈವ್ ಅಪ್‌ಡೇಟ್ ನೀಡುತ್ತಿದೆ. ಇದರೊಂದಿಗೆ ಕರ್ನಾಟಕ ಬಜೆಟ್‌ಗೆ ಸಂಬಂಧಪಟ್ಟ ಸಾಕಷ್ಟು ವಿಶೇಷ ಲೇಖನಗಳನ್ನೂ ಬರೆದಿದೆ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಕರ್ನಾಟಕ ರಾಜ್ಯ ಬಜೆಟ್ ಬಗ್ಗೆ ಹೆಚ್ಚಿನ ವಿವರ ಪಡೆಯಿರಿ.