ಕೇಂದ್ರ ಸೇವೆಗೆ ಹೊರಡುತ್ತಿರುವ ಕರ್ನಾಟಕದ ಪ್ರತಿಭಾವಂತ ಐಎಫ್‌ಎಸ್ ದಂಪತಿ: ಅರಣ್ಯ ಇಲಾಖೆಯಿಂದ ಹೊರ ಹೋಗ ಬಯಸಿದ್ದಕ್ಕೆ ಕಾರಣ ವಾದರೂ ಏನು?
ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಲೆಂದೇ ಬರುವ ಅಧಿಕಾರಿಗಳಿಗೆ ಅನಗತ್ಯ ಕಿರಿಕಿರಿಯಾದರೆ ಕೇಂದ್ರ ಸೇವೆಗೆ ತೆರಳಿದರೆ ಹೊಡೆತ ಬೀಳುವುದು ಕರ್ನಾಟಕಕ್ಕೆ. ಈಗ ಐಎಫ್‌ಎಸ್ ದಂಪತಿ ಕೇಂದ್ರ ಸೇವಗೆ ಹೊರಟಿದ್ದಾರೆ. ಕಾರಣವೇನು. ಇಲ್ಲಿದೆ ವಿವರ.
ಮೈಸೂರು: ಕರ್ನಾಟಕದ ಯುವ ಐಎಫ್‌ಎಸ್ ಅಧಿಕಾರಿಗಳು ಕೇಂದ್ರ ಸೇವೆಗೆ ಹೋಗಲು ಅಣಿಯಾಗಿದ್ದಾರೆ. ಕರ್ನಾಟಕದಲ್ಲಿಯೇ ಇದ್ದು ಅರಣ್ಯ ಇಲಾಖೆ ಅಥವಾ ಸರ್ಕಾರದ ಇತರೆ ಇಲಾಖೆಯಲ್ಲಿ ಸೇವೆ ಮಾಡುವಷ್ಟು ಪ್ರತಿಭಾವಂತ ಹಾಗೂ ದಕ್ಷ ಅಧಿಕಾರಿ ದಂಪತಿ ಕರ್ನಾಟಕದಿಂದ ಕೇಂದ್ರ ಸೇವೆಗೆ ಹೋಗುತ್ತಿದ್ದು. ಸದ್ಯವೇ ಬಿಡುಗಡೆ ಹೊಂದಲಿದ್ದಾರೆ. ಈಗಾಗಲೇ ಕೆಲವು ಕರ್ನಾಟಕ ಕೇಡರ್‌ನ ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳು ಕೇಂದ್ರ ಸೇವೆಯಲ್ಲಿ ನಿರತರಾಗಿದ್ದಾರೆ. ಈಗ ಹೊಸ ಅಧಿಕಾರಿಗಳ ಸೇರ್ಪಡೆಯಾಗಲಿದೆ. ಕೆಲವರು ಹುದ್ದೆ ಬಯಸಿ ಹೋದರೆ, ಕರ್ನಾಟಕದಲ್ಲಿ ಚೆನ್ನಾಗಿಯೇ ಕೆಲಸ ಮಾಡಿದರೂ ಅರಣ್ಯ ಇಲಾಖೆಯಲ್ಲಿ ಹುದ್ದೆ ಕೊಡದ ಬೇಸರದಿಂದ ಕೇಂದ್ರ ಸೇವೆಯತ್ತ ಮುಖ ಮಾಡಿದ್ದಾರೆ ಎನ್ನುವ ಮಾತುಗಳು ಇಲಾಖೆ ಹಂತದಲ್ಲಿ ಕೇಳಿ ಬರುತ್ತಿವೆ.
ಯಾರೀ ದಂಪತಿ
2011ನೇ ಸಾಲಿನ ಐಎಫ್‌ಎಸ್ ಅಧಿಕಾರಿಗಳಾದ ಡಿ.ಮಹೇಶ್‌ಕುಮಾರ್ ಹಾಗೂ ಅದೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ದೀಪ್ ಕಂಟ್ರಾಕ್ಟರ್ ಅವರು 13 ವರ್ಷದಿಂದ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಡಿ. ಮಹೇಶ್ ಕುಮಾರ್ ಧಾರವಾಡ ಡಿಸಿಎಫ್ ಆಗಿ, ನಂತರ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿ ಉತ್ತಮವಾಗಿ ಕೆಲಸ ಮಾಡಿದ ಹೆಸರು ಪಡೆದವರು. ಹಾಳಾಗಿದ್ದ ಆಡಳಿತ ವ್ಯವಸ್ಥೆಯನ್ನು ನಾಗರಹೊಳೆಯಲ್ಲಿ ಸರಿದಾರಿಗೆ ತಂದವರು. ಈಗ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಂಟಾರ್ಟಿಕ ಏರಿದ ದೀಪ್
ಅವರ ಪತ್ನಿ ದೀಪ್ ಕಂಟ್ರಾಕ್ಟರ್ ಮೂಲತಃ ಗುಜರಾತ್‌ನವರು. ಪ್ರೀತಿಸಿ ಮಹೇಶ್ ಕುಮಾರ್ ಅವರನ್ನು ವರಿಸಿದ ನಂತರ ಕರ್ನಾಟಕ ಕೇಡರ್‌ಗೆ ಬಂದವರು. ಧಾರವಾಡದಲ್ಲಿ ಕೆಲಸ ಮಾಡಿದವರು. ನಂತರ ಮೈಸೂರು ಕಾರ್ಯಯೋಜನೆ ಡಿಸಿಎಫ್ ಆಗಿದ್ದರು. ಬಿಳಿಗಿರಿರಂಗನಬೆಟ್ಟ ಹುಲಿಧಾಮ ನಿರ್ದೇಶಕರಾಗಿದ್ದವರು. ಹುಲಿ ಯೋಜನೆ ನಿರ್ದೇಶಕರಾದ ಕರ್ನಾಟಕದ ಮೊದಲ ಮಹಿಳಾ ಐಎಫ್‌ಎಸ್ ಅಧಿಕಾರಿ ಎಂಬುದು ಅವರ ಹಿರಿಮೆ. ಅಷ್ಟೇ ಅಲ್ಲದೇ ಚಾರಣದಲ್ಲೂ ತೊಡಗಿಸಿಕೊಂಡಿರುವ ದೀಪ್ ಅವರು ಕಠಿಣ ಅಂಟಾರ್ಟಿಕಾ ಯಾತ್ರೆ ಕೈಗೊಂಡು ಬಂದ ಭಾರತದ ಮೊದಲ ಅರಣ್ಯ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದವರು. ಬಿಆರ್‌ಟಿಯಲ್ಲೂ ನಿರ್ದೇಶಕರಾಗಿ ಎರಡು ವರ್ಷ ಚೆನ್ನಾಗಿಯೇ ಕೆಲಸ ಮಾಡಿದವರು.
ದಂಪತಿ ಬೇಸರಕ್ಕೆ ಕಾರಣ ಏನು
ಆಗಸ್ಟ್‌ನಲ್ಲಿ ದೀಪ್ ಅವರನ್ನು ಯಾವುದೇ ಹುದ್ದೆ ನೀಡದೇ ವರ್ಗ ಮಾಡಲಾಗಿತ್ತು. ಚೆನ್ನಾಗಿ ಕೆಲಸ ಮಾಡಿದರೂ ಹುದ್ದೆ ನೀಡದೇ ವರ್ಗ ಮಾಡಿದ್ದು ಅವರಿಗೆ ಬೇಸರ ತಂದಿತ್ತು. ಇದಾಗಿ ಮೂರು ತಿಂಗಳಾಗುತ್ತಾ ಬಂದಿದ್ದರೂ ಹುದ್ದೆ ನೀಡಿರಲಿಲ್ಲ. ನಂತರ ಬಾಗಲಕೋಟೆ ಡಿಸಿಎಫ್ ಆಗಿ ಹುದ್ದೆ ನೀಡುವ ಪ್ರಸ್ತಾವನೆ ಹೋದರೂ ಆದೇಶವಾಗಿರಲಿಲ್ಲ. ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ಸಂರಕ್ಷಣಾಧಿಕಾರಿ(ಸಿಎಫ್) ಬಡ್ತಿಗೆ ಇನ್ನು ಎರಡೇ ತಿಂಗಳು ಇದೆ. ಬಿಆರ್‌ಟಿಯಲ್ಲೇ ಮುಂದುವರೆಸಲು ಕೋರಿದ್ದರೂ ಹುದ್ದೆ ನೀಡದೇ ವರ್ಗ ಮಾಡಿದ್ದು ಅವರಿಗೆ ಬೇಸರ ತಂದಿತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆ, ಹಿರಿಯ ಅರಣ್ಯಾಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದರೂ ಹುದ್ದೆ ನೀಡಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಬಿಆರ್‌ಟಿಯಲ್ಲಿ ಬೆಂಕಿ ಪ್ರಕರಣ, ಆನೆ ಸಾವಿನ ಪ್ರಕರಣದಲ್ಲಿ ತಮ್ಮ ಹೆಸರು ಸೇರಿಸಿದ್ದು ದೀಪ್‌ಗೆ ಬೇಸರ ತಂದಿತ್ತು ಎನ್ನಲಾಗುತ್ತಿದೆ.
ಹುದ್ದೆ ಸಿಗದೇ ಇದ್ದುದರಿಂದ ಬೇಸರಗೊಂಡ ದೀಪ್ ಅವರ ಜತೆಗೆ ಮಹೇಶ್ ಕುಮಾರ್ ಕೂಡ ಕೇಂದ್ರ ಸೇವೆಗೆ ಹೋಗಲು ನಿರ್ಧರಿಸಿ ಪ್ರಸ್ತಾವನೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರದಿಂದ ಅನುಮತಿ ಬಂದಿದೆ. ಹಿಮಾಚಲ ಪ್ರದೇಶದ ಮಸ್ಸೂರಿನಲ್ಲಿರುವ ಲಾಲ್‌ಬಹದ್ದೂರು ಶಾಸ್ತ್ರಿ ಅಕಾಡೆಮಿಗೆ ನಿಯೋಜನೆ ಮೇಲೆ ದಂಪತಿ ತೆರಳಿದ್ದಾರೆ. ಅದು ಕೇಂದ್ರ ಸೇವೆಗೆ ಆಯ್ಕೆಯಾಗುವ ಅಧಿಕಾರಿಗಳಿಗೆ ತರಬೇತಿ ನೀಡುವ ಸಂಸ್ಥೆ, ಅಲ್ಲಿ ದಂಪತಿ ಅಧ್ಯಾಪಕರಾಗಿ ಕೆಲಸ ಮಾಡಲಿದ್ದಾರೆ.
ಸದ್ಯವೇ ಬಡ್ತಿ ಸಮಯ
ಇಬ್ಬರಿಗೂ ಎರಡು ತಿಂಗಳಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಸಿಗಲಿದೆ. ಇದರ ನಡುವೆ ಮಹೇಶ್ ಕುಮಾರ್ ಹಾಗೂ ದೀಪ್ ಕಂಟ್ರಾಕ್ಟರ್ ಅವರು ಕೇಂದ್ರ ಸೇವೆಗೆ ಮರಳಲಿದ್ದಾರೆ. ಐದು ವರ್ಷ ಅಲ್ಲಿ ಕೆಲಸ ಮಾಡಲು ಅವಕಾಶವಿದ್ದು, ಅಗತ್ಯವಿದ್ದರೆ ವಿಸ್ತರಣೆಗೂ ಅವಕಾಶವಿದೆ. ಸದ್ಯವೇ ಬಿಡುಗಡೆಯಾಗಿ ಕೇಂದ್ರ ಸೇವೆಗೆ ತೆರಳಲಿದ್ದಾರೆ ಎಂದು ಹಿರಿಯ ಐಎಫ್ಎಸ್ ಅಧಿಕಾರಿಯೊಬ್ಬರು ಖಚಿತಪಡಿಸಿದರು.
ಹಿಂದೆ ಇದೇ ರೀತಿ ಹಲವಾರು ಅಧಿಕಾರಿಗಳು ಕೇಂದ್ರ ಸೇವೆಗೆ ಹೋದ ಉದಾಹರಣೆಯಿದೆ. ಈಗಲೂ ಹಲವು ಅಧಿಕಾರಿಗಳು ಕೇಂದ್ರ ಸೇವೆಯಲ್ಲಿದ್ದಾರೆ. ಐಎಫ್‌ಎಸ್ ಅಧಿಕಾರಿಗಳಾದ ಮೀನಾಕ್ಷಿ ನೇಗಿ, ಜಗಮೋಹನ್ ಶರ್ಮ, ವಿಜಯರಂಜನ್ ಸಿಂಗ್ ಸಹಿತ ಹಲವರು ಇದ್ಧಾರೆ. ಕರ್ನಾಟಕ ಕೇಡರ್‌ನ ಐಎಎಸ್, ಐಪಿಎಸ್ ಅಧಿಕಾರಿಗಳು ಕೇಂದ್ರ ಸೇವೆಯಲ್ಲಿದ್ಧಾರೆ.
ವಿಭಾಗ