ಕರ್ನಾಟಕ ಅರಣ್ಯ ಇಲಾಖೆ ಟಿಂಬರ್‌ನಲ್ಲೇ ಮರದ ಬಾಗಿಲು, ಕಿಟಕಿ ಇತ್ಯಾದಿ ಮಾಡಿಸಬಹುದು ಗೊತ್ತೆ? ಹೊಸ ಮನೆ ಕಟ್ಟಿಸುವವರು ಗಮನಿಸಿ
ಹೊಸ ಮನೆ ಕಟ್ಟಿಸುವಾಗ ತಲೆಗೆ ಬರುವ ಪ್ರಮುಖ ವಿಚಾರಗಳಲ್ಲಿ ಕಿಟಕಿ–ಬಾಗಿಲಿನಂತಹ ಮರದ ವಸ್ತಗಳೂ ಕೂಡ ಒಂದು. ಗುಣಮಟ್ಟದ ಮರ ಎಲ್ಲಿ ಸಿಗುತ್ತದೆ ಎಂದು ಹಲವರಲ್ಲಿ ವಿಚಾರಿಸಿದರೂ ನಿಮಗೆ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದರೆ ಬೆಂಗಳೂರಿನ ಟಿಂಬರ್ ಯಾರ್ಡ್ ಲೇಔಟ್‌ನಲ್ಲಿರುವ ಕರ್ನಾಟಕ ಅರಣ್ಯ ಇಲಾಖೆಯ ಟಿಂಬರ್‌ಗೆ ಭೇಟಿ ನೀಡಬಹುದು. ಏನಿದೆ ಅಲ್ಲಿ ಅಂತಹ ವಿಶೇಷ ಎಂಬುದು ನೋಡಿ.
ಮನೆ ಕಟ್ಟುವಾಗ ಪ್ರವೇಶದ್ವಾರ ಅಥವಾ ದ್ವಾರ ಬಾಗಿಲಿಗೆ ಉತ್ತಮ ಗುಣಮಟ್ಟದ ಮರವನ್ನೇ ಬಳಸಬೇಕು ಎಂಬುದು ಹಲವರ ಆಸೆಯಾಗಿರುತ್ತದೆ. ಆದರೆ ದುಡ್ಡು ಕೊಟ್ಟರೂ ಗುಣಮಟ್ಟ ಚೆನ್ನಾಗಿರುವ ಮರ ಎಲ್ಲಿ ಸಿಗುತ್ತೆ ಅಂತ ಬೇಜಾರು ಮಾಡಿಕೊಳ್ಳುವವರೇ ಹೆಚ್ಚು. ಅಂಥವರಿಗಾಗಿ ಕರ್ನಾಟಕ ಅರಣ್ಯ ಇಲಾಖೆಯವರ ಟಿಂಬರ್‌ವೊಂದು ಬೆಂಗಳೂರಿನ ಟಿಂಬರ್ ಯಾರ್ಡ್ ಲೇಔಟ್‌ನಲ್ಲಿದೆ. ಇಲ್ಲಿಗೆ ನೀವು ಒಮ್ಮೆ ಭೇಟಿ ಕೊಟ್ಟರೆ, ಇದು ಎಷ್ಟು ವಿಶೇಷ ಹಾಗೂ ಯಾಕೆ ವಿಶೇಷ ಎಂಬುದು ತಿಳಿಯುತ್ತದೆ.
ಮೊದಲನೆಯದಾಗಿ ಇದು ಕರ್ನಾಟಕ ಅರಣ್ಯ ಇಲಾಖೆಯವರೇ ನಡೆಸುವಂಥ ಟಿಂಬರ್. ಮರದ ಗುಣಮಟ್ಟ, ಸೀಸನಿಂಗ್ ಇತ್ಯಾದಿಗಳ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಇನ್ನು ಇಲ್ಲಿ ಕೆಲಸ ಮಾಡುವ ಕಾರ್ಪೆಂಟರ್‌ಗಳು ನುರಿತ ಹಾಗೂ ಉತ್ತಮ ಕೌಶಲ ಇರುವಂಥವರು.
ಕರ್ನಾಟಕ ಅರಣ್ಯ ಇಲಾಖೆ ಟಿಂಬರ್ (Karnataka Forest Department timber) ಅಂತ ಗೂಗಲ್‌ನಲ್ಲಿ ಹುಡುಕಿದರೆ, ಈ ಸ್ಥಳದ ವಿಳಾಸ ಸಿಗುತ್ತದೆ. ಇನ್ನು ಅಲ್ಲಿಗೆ ಹೋದ ಮೇಲೆ ನಿರ್ದಿಷ್ಟವಾಗಿ ಬಾಗಿಲು - ಕಿಟಕಿ ಇಂಥವುಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಅಂತಲೇ ನರಸಿಂಹ ಮೂರ್ತಿ ಅಂತ ಒಬ್ಬರು ಇದ್ದಾರೆ.
ಅರಣ್ಯ ಇಲಾಖೆ ಟಿಂಬರ್ ಪ್ರವೇಶ ಪ್ರಕ್ರಿಯೆ
ಈ ಟಿಂಬರ್ ಪ್ರವೇಶಿಸುವ ಹಂತದಲ್ಲಿಯೇ ಭದ್ರತಾ ಸಿಬ್ಬಂದಿ ಬಳಿ ಹೆಸರು, ಎಲ್ಲಿಂದ ಬಂದಿರುವುದು, ಉದ್ದೇಶ, ಯಾವ ಸಮಯಕ್ಕೆ ಬಂದಿದ್ದೀರಿ ಎಂಬಿತ್ಯಾದಿ ವಿವರಗಳನ್ನು ನೀಡಬೇಕು. ಅಲ್ಲಿಂದ ನೇರ ನರಸಿಂಹ ಮೂರ್ತಿ ಅವರ ಬಳಿ ಕಳುಹಿಸಲಾಗುತ್ತದೆ. ಅಲ್ಲಿಂದ ಮುಂದೆ ವಿವರಗಳನ್ನು ನೀಡುವವರು ಅರಣ್ಯ ಕೈಗಾರಿಕೆ ನಿಗಮದ ಅಧಿಕಾರಿ ನರಸಿಂಹಮೂರ್ತಿ ಅವರೇ. ಬರ್ಮಾ ಟೀಕ್ ಬೇಕಾ, ಬರ್ಮಾ ಬಾರ್ಡರ್ ಟೀಕ್, ಹೊನ್ನೆ, ಮತ್ತಿ, ಮಹಾಗನಿ, ಅಕೇಶಿಯಾ ಮರಗಳಿಂದ ಕಿಟಿಕಿ- ಬಾಗಿಲು ತಯಾರಿಸಿ ಕೊಡಲಾಗುತ್ತದೆ. ಜೊತೆಗೆ ಪ್ರೆಸ್ ಡೋರ್‌ಗಳು ಇಲ್ಲಿಯಷ್ಟು ಚೆನ್ನಾಗಿ ಎಲ್ಲಿಯೂ ಸಿಗಲ್ಲ. ಕನಿಷ್ಠ ಇಪ್ಪತ್ತು ವರ್ಷ ಬಳಸಬಹುದು- ಹೀಗೆ ಮಾತು ಮುಂದುವರಿಸಿದರು ನರಸಿಂಹ ಮೂರ್ತಿ.
ಆದರೆ ನಮಗೆ ಕಿಟಿಕಿ, ಬಾಗಿಲು ಬೇಡ ಮರ ಮಾತ್ರ ಬೇಕು ಎನ್ನುವ ಉದ್ದೇಶ ಇರುವವರು ಹೋಗಬೇಡಿ. ಏಕೆಂದರೆ ಮರದ ಬಾಗಿಲು, ಕಿಟಕಿ ಮೊದಲಾದವನ್ನು ಮಾಡಿಕೊಡುವ ಸಲುವಾಗಿಯೇ ಇಲ್ಲಿ ಜನರಿದ್ದಾರೆ. ತುಂಬ ಚೆನ್ನಾಗಿರುವ, ಗುಣಮಟ್ಟದ ಮರಗಳು ಅರಣ್ಯ ಇಲಾಖೆಯಿಂದ ಬರುತ್ತದೆ. ನೆನಪಿರಲಿ, ನೈತಿಕವಾಗಿಯೂ ಇಲ್ಲಿ ಮರದ ಕಟಾವು ಎಂಬುದು ವ್ಯಾಪಾರೀಕರಣದ ಉದ್ದೇಶದಿಂದ ಆಗುವಂಥದ್ದಲ್ಲ. ಜನರಿಗೆ ಸಹಾಯ ಆಗಲಿ ಹಾಗೂ ಹಸಿ ಮರಗಳನ್ನು ಕಡಿದು ಹಾಳು ಮಾಡುವುದನ್ನು ನಿಲ್ಲಿಸಲಿ ಎಂಬ ಇರಾದೆಯಿಂದ ಇರುವಂಥ ಸ್ಥಳ ಇದು. ಕೇವಲ ಮರಗಳನ್ನು ಮಾರುವುದಿಲ್ಲ. ಮರದ ಕೆಲಸ ಮಾಡುವವರು, ಪಾಲಿಷ್ ಮೊದಲಾದವನ್ನು ಮಾಡುವಂಥ ಕೆಲಸಗಾರರು ಇಲ್ಲಿಯೇ ಸಿಗುತ್ತಾರೆ. ಒಳ್ಳೆ ಮರ- ಉತ್ತಮ ಕೆಲಸವನ್ನು ನೋಡಬಹುದು.
ಹೊರಗಿಗಿಂತ ಇಲ್ಲಿ ಬೆಲೆ ಜಾಸ್ತಿ ಅಂತೇನಾದರೂ ನೀವು ಅಂದುಕೊಂಡುಬಿಡಬಹುದು ಎಂಬ ಕಾರಣಕ್ಕೆ ಕೆಲವು ವಿಚಾರಗಳನ್ನು ಹೇಳಬೇಕಿದೆ. ಈ ಅರಣ್ಯ ಇಲಾಖೆ ಟಿಂಬರ್‌ನಲ್ಲಿ ಯಾವ ಕಾರಣಕ್ಕೂ ಕಳಪೆ ಮರಗಳನ್ನು ಬಳಸಲ್ಲ ಹಾಗೂ ಅತ್ಯುತ್ತಮ ಮರಗೆಲಸಗಾರರು ಇಲ್ಲಿದ್ದಾರೆ. ಅದ್ದರಿಂದ ನೀವು ಕೊಡುವ ಕಾಸಿಗೆ ‘ಸಿಕ್ಕಿದ್ದೇನು?‘ ಎಂಬುದನ್ನು ಅರಿಯುವುದಕ್ಕೆ ಕನಿಷ್ಠ ಪ್ರಮಾಣದ ಜ್ಞಾನ-ತಿಳಿವಳಿಕೆ ಬೇಕು. ಮುಖ್ಯವಾಗಿ ಯಾರು ಗುಣಮಟ್ಟದ ಮರಗಳನ್ನೇ ಮನೆಯ ಕಿಟಕಿ- ಬಾಗಿಲುಗಳಿಗೆ ಬಳಸಬೇಕು ಅಂತೀರಿ ಅಂಥವರಿಗಾಗಿಯೇ ಈ ಸ್ಥಳ ಇದೆ.
ರೋಸ್‌ವುಡ್ ಪೀಠೋಪಕರಣಗಳೂ ಇಲ್ಲಿ ಲಭ್ಯ
ಇಲ್ಲಿ ರೋಸ್‌ವುಡ್ ಪೀಠೋಪಕರಣಗಳು ಸಹ ದೊರೆಯುತ್ತವೆ. ಡೈನಿಂಗ್ ಟೇಬಲ್, ಮಂಚ, ಸೋಫಾ ಇತ್ಯಾದಿ ರೋಸ್‌ವುಡ್‌ನಲ್ಲಿ ಮಾಡಿರುವುದು ಸಿಗುತ್ತವೆ. ಇಲ್ಲಿನ ಅತಿಮುಖ್ಯವಾದ ನಂಬಿಕೆ ಅಂದರೆ, ನೀವು ಯಾವ ಮರವನ್ನು ಖರೀದಿಸುತ್ತೀರೋ ಅದೇ ಮರವೇ ಸಿಗುತ್ತದೆ, ಯಾವುದೇ ಕಾರಣಕ್ಕೂ ಕಳಪೆ ಅನ್ನುವುದು ಇಲ್ಲ. ಇನ್ನು ಕೆಲಸವು ಸಹ ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಅಂದ ಹಾಗೆ, ಟೀಕ್ ವುಡ್ ಸೇರಿದಂತೆ ಇತರ ಮರಗಳಿಂದ ತಯಾರಾದ ಉತ್ತಮ ಗುಣಮಟ್ಟದ ಪೀಠೋಪಕರಣಗಳು ಇಲ್ಲಿವೆ. ಇಲ್ಲೇ ಯಾವ ಮರ ಅಂತ ನಿರ್ಧರಿಸಬೇಕು, ಇಲ್ಲಿನ ಕಾರ್ಪೆಂಟರ್‌ಗಳಿಗೆ ಹೇಗಿರಬೇಕು ಮತ್ತು ಏನು ಬೇಕು ಎಂಬ ಮಾಹಿತಿ ನೀಡಬೇಕು. ಮೊದಲಿಗೆ ಒಟ್ಟಾರೆ ಮೊತ್ತದ ಶೇ 50ರಷ್ಟು ಅಡ್ವಾನ್ಸ್ ಆಗಿ ನೀಡಬೇಕು. ಡಿಸೈನ್‌ಗಳನ್ನು ಮುಂಚಿತವಾಗಿಯೇ ಅಂತಿಮ ಮಾಡಿಕೊಂಡು ಹೋದರೆ ಸಮಯ ಉಳಿತಾಯ ಆಗುತ್ತದೆ.
ರೋಸ್ ವುಡ್ ಹಾಗೂ ಟೀಕ್ ವುಡ್ ಪೀಠೋಪಕರಣಗಳ ಬಗ್ಗೆ ಬರೆದರೆ ಅದೇ ಒಂದು ಪ್ರತ್ಯೇಕ ಲೇಖನ ಆಗುತ್ತದೆ. ಯಾವುದೋ ಒಂದು ಮರಕ್ಕೆ ಅಷ್ಟು ಸಾವಿರ ಕೊಟ್ಟೆ, ಇಷ್ಟು ಸಾವಿರ ಕೊಟ್ಟೆ ಎಂದು ಹೇಳಿಕೊಳ್ಳುತ್ತೀವಿ. ಆದರೆ ಅದನ್ನು ಇಲ್ಲಿ ಖಾತ್ರಿಯಾಗಿ ಗುಣಮಟ್ಟದ್ದು ಅಂತ ನಿಶ್ಚಿತವಾಗಿ ಹೇಳಬಹುದು. ಇಲ್ಲಿ ಮರವನ್ನು ಮಾತ್ರ ಖರೀದಿಸುತ್ತೀನಿ ಅಂದರೆ ಆಗಲ್ಲ. ಆ ಮರವನ್ನು ಕಿಟಕಿಯೋ ಬಾಗಿಲೋ ಮತ್ತೊಂದು ನಿಶ್ಚಯಿಸಿಕೊಂಡು, ಇಲ್ಲಿರುವವರಿಂದ ಮಾಡಿಸಬೇಕು. ಕುತೂಹಲ ಇದೆಯಾ ಅಥವಾ ಈ ಥರದ ಸ್ಥಳಕ್ಕಾಗಿ ಹುಡುಕಾಟ ನಡೆಸಿದ್ದಿರಿ ಅಂತಾದರೆ ಒಮ್ಮೆ ಭೇಟಿ ನೀಡಿ.
ಬರಹ: ಶ್ರೀನಿವಾಸ ಮಠ