Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅತಿವೇಗದ ಚಾಲನೆ; ಒಂದೇ ದಿನ 44 ಚಾಲಕರ ಮೇಲೆ ಕೇಸ್‌ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅತಿವೇಗದ ಚಾಲನೆ; ಒಂದೇ ದಿನ 44 ಚಾಲಕರ ಮೇಲೆ ಕೇಸ್‌ ದಾಖಲು

Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅತಿವೇಗದ ಚಾಲನೆ; ಒಂದೇ ದಿನ 44 ಚಾಲಕರ ಮೇಲೆ ಕೇಸ್‌ ದಾಖಲು

Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅತಿವೇಗದ ಚಾಲನೆ ಸಾಮಾನ್ಯ. ಇದಕ್ಕೆ ಕಡಿವಾಣ ಹಾಕಲು ಮುಂದಾದ ಪೊಲೀಸರ ಬಲೆಗೆ ಒಂದೇ ದಿನ 44 ಚಾಲಕರು ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ  ಒಂದೇ ದಿನ 44 ಅತಿ ವೇಗದ ಚಾಲನೆ ಕೇಸ್‌ ಬುಕ್‌ ಆಗಿದೆ. (ಸಾಂದರ್ಭಿಕ ಚಿತ್ರ)
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಒಂದೇ ದಿನ 44 ಅತಿ ವೇಗದ ಚಾಲನೆ ಕೇಸ್‌ ಬುಕ್‌ ಆಗಿದೆ. (ಸಾಂದರ್ಭಿಕ ಚಿತ್ರ) (HT)

ಬೆಂಗಳೂರು: ರಾಜ್ಯದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಮತ್ತೆ ಸುದ್ದಿಯಲ್ಲಿದೆ. ಮಂಗಳವಾರ ಒಂದೇ ದಿನ ಅತಿವೇಗದ ವಾಹನ ಚಾಲನೆಯ ಕಾರಣ 44 ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿರುವುದು ಇದಕ್ಕೆ ಕಾರಣ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮಂಗಳವಾರ ಒಟ್ಟು 44 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ.

ರಾಮನಗರ ಪೊಲೀಸರು ರೇಡಾರ್‌ ಗನ್‌ಗಳೊಂದಿಗೆ ಎಕ್ಸ್‌ಪ್ರೆಸ್‌ವೇಯಲ್ಲಿ ವೇಗ ತಪಾಸಣೆ ನಡೆಸಿ, ಅನುಮತಿ ಮೀರಿದ ವೇಗದ ಮಿತಿಯಲ್ಲಿ ವಾಹನ ಚಲಾಯಿಸುತ್ತಿದ್ದವರನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ 6 ತಿಂಗಳಲ್ಲಿ 58 ಸಾವು, 147 ಜನರಿಗೆ ಗಾಯ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಾರ್ಚ್‌ನಲ್ಲಿ ಉದ್ಘಾಟನೆಯಾದಾಗಿನಿಂದ, ಮಾರಣಾಂತಿಕ ಅಪಘಾತಗಳು, ಟೋಲ್‌ ಸಂಗ್ರಹದ ವಿಚಾರದಲ್ಲಿ ಸುದ್ದಿಯಾಗುತ್ತ ಬಂದಿದೆ.

ವರದಿಗಳ ಪ್ರಕಾರ, ಈ ವರ್ಷದ ಜನವರಿ 1 ರಿಂದ ಜೂನ್ 25 ರ ನಡುವೆ ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟು 58 ಸಾವುಗಳು ಮತ್ತು 147 ಗಾಯಗೊಂಡಿದ್ದಾರೆ. ಆದ್ದರಿಂದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಪೀಡಿತ ಪ್ರದೇಶಗಳನ್ನು ಗುರುತಿಸಿ, ವೇಗದ ಮಿತಿಯನ್ನು ಗಂಟೆಗೆ 100 ಕಿಲೋಮೀಟರ್ ಎಂದು ಪೊಲೀಸರು ಹೆಚ್ಚಿಸಿದ್ದಾರೆ.

ರಸ್ತೆ ಬೇಲಿ ಕತ್ತರಿಸುತ್ತಿರುವ ಗ್ರಾಮಸ್ಥರು; ಸಂಸದ ಪ್ರತಾಪ ಸಿಂಹ ಅಸಮಾಧಾನ

ಈ ಹಿಂದೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, ರಸ್ತೆಯಲ್ಲಿನ ಬೇಲಿಗಳನ್ನು ಗ್ರಾಮಸ್ಥರೇ ಕತ್ತರಿಸಿದ್ದು, ಇದರಿಂದ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

“ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದಕ್ಷಿಣ ಭಾರತದ ಮೊದಲ ಸಂಪೂರ್ಣ ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಿದೆ. ಅದಕ್ಕಾಗಿಯೇ ರಸ್ತೆಯ ಎರಡೂ ಬದಿಗಳಲ್ಲಿ ಫೆನ್ಸಿಂಗ್‌ಗಳಿವೆ. ಬೆಂಗಳೂರು, ಮಂಡ್ಯ, ರಾಮನಗರ ಮತ್ತು ಮೈಸೂರಿನ ಜನರು ನಿಮ್ಮ ನೆಮ್ಮದಿಗಾಗಿ ಬೇಲಿಗಳನ್ನು ಹಾಳುಗೆಡಹುವುದನ್ನು ತಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ. ಬೇಲಿಯ ಹಾನಿಗೊಳಗಾದ ಭಾಗದ ಮೂಲಕ ಯಾವುದೇ ಪ್ರಾಣಿ ಎಕ್ಸ್‌ಪ್ರೆಸ್‌ವೇಗೆ ಬಂದರೆ, ಅದು ತೀವ್ರ ಅಪಘಾತಕ್ಕೆ ಕಾರಣವಾಗಬಹುದು" ಎಂದು ಪ್ರತಾಪ ಸಿಂಹ ಎಚ್ಚರಿಸಿದ್ದರು.

ಹೀಗಿದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ…

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಒಟ್ಟು 119 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ವೇ. ಇದರ ನಿರ್ಮಾಣ ವೆಚ್ಚ 8,408 ಕೋಟಿ ರೂಪಾಯಿ. ಎಕ್ಸಪ್ರೆಸ್‌ವೇನ ಉದ್ದಕ್ಕೂ ಒಟ್ಟು 52 ಕಿ.ಮೀ. ವ್ಯಾಪ್ತಿಯಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಐದು ಬೈಪಾಸ್‌ಗಳನ್ನು ಸೇರಿಸಲಾಗಿದೆ.

ಈ ಯೋಜನೆಯು 11 ಮೇಲ್ಸೇತುವೆಗಳು, 64 ಅಂಡರ್‌ಪಾಸ್‌ಗಳು, ಐದು ಬೈಪಾಸ್‌ಗಳು, 42 ಸಣ್ಣ ಸೇತುವೆಗಳನ್ನು ಒಳಗೊಂಡಿದೆ. ಎಕ್ಸ್‌ಪ್ರೆಸ್‌ವೇ ಆರು ಲೇನ್‌ಗಳನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ಹೆಚ್ಚುವರಿ ದ್ವಿಪಥದ ಸೇವಾ ರಸ್ತೆಗಳನ್ನು ಹೊಂದಿರುವುದು ವಿಶೇಷ.

Whats_app_banner