Bengaluru Mysuru Expressway: ಮರಣಕೂಪವಾಯಿತೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ; ಐದೇ ತಿಂಗಳಲ್ಲಿ 570 ಅಪಘಾತ, 55 ಮಂದಿ ಸಾವು
Bengaluru-Mysuru road accidents: ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದೆ. ಬೇಗ ನಗರ ತಲುಪುವ ಧಾವಂತದಲ್ಲಿ ಸ್ಪೀಡ್ ಲಿಮಿಟ್ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ.
ಬೆಂಗಳೂರು: ಕರ್ನಾಟಕದ ಎರಡು ಟೆಕ್ ಟೌನ್‌ಗಳ ನಡುವಿನ ಸಂಪರ್ಕವನ್ನು ಸುಧಾರಿಸಲು ನಿರ್ಮಿಸಲಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru Mysuru Expressway) ರಸ್ತೆ ಅಪಘಾತಗಳ ಕೇಂದ್ರವಾಗಿದೆ. ಐದು ತಿಂಗಳ ಅವಧಿಯಲ್ಲಿ ಈ ದಶಪಥ ರಸ್ತೆ 570 ಅಪಘಾತಗಳನ್ನು ಕಂಡಿದೆ, ಅಲ್ಲದೇ ಈ ಅಪಘಾತಗಳಲ್ಲಿ 55 ಜನರು ಸಾವನ್ನಪ್ಪಿದ್ದಾರೆ.
ವರದಿಯ ಪ್ರಕಾರ, 570 ಅಪಘಾತಗಳಲ್ಲಿ 55 ಮಂದಿ ಪ್ರಾಣಕಳೆದುಕೊಂಡಿದ್ದರೆ, 52 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೂ 279 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ದಕ್ಷಿಣ ಭಾರತದ ಮೊದಲ ಎಕ್ಸ್‌ಪ್ರೆಸ್‌ವೇ ಆಗಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿವೆ.
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ನಿರ್ಬಂಧದಂತಹ ಹಲವು ಕ್ರಮಗಳನ್ನು ಸರ್ಕಾರ ಈಗಾಗಲೇ ಕೈಗೊಂಡಿದೆ. ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಕೆಲವೆಡೆ ಗ್ರಾಮಸ್ಥರು ಬೇಲಿ ಕಿತ್ತಿದ್ದರಿಂದ ರಸ್ತೆ ಮೇಲೆ ಪ್ರಾಣಿಗಳೂ ಓಡಾಡುತ್ತಿವೆ. ಜನನಿಬಿಡ ಎಕ್ಸ್‌ಪ್ರೆಸ್‌ವೇಯಲ್ಲಿ ಕೆಲವು ಭಾರಿ ವಾಹನಗಳು ತಪ್ಪು ಮಾರ್ಗದಲ್ಲಿ ಬರುವುದನ್ನೂ ಕಾಣಬಹುದಾಗಿದೆ.
ಇತ್ತೀಚೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಎಕ್ಸ್‌ಪ್ರೆಸ್‌ವೇಯಲ್ಲಿನ ಬೇಲಿಗಳನ್ನು ನಾಶಪಡಿಸದಂತೆ ಗ್ರಾಮಸ್ಥರ ಬಳಿ ಮನವಿ ಮಾಡಿದ್ದರು. “ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದಕ್ಷಿಣ ಭಾರತದ ಮೊದಲ ಸಂಪೂರ್ಣ ನಿಯಂತ್ರಿತ ಹೆದ್ದಾರಿಯಾಗಿದೆ, ಅದಕ್ಕಾಗಿಯೇ ರಸ್ತೆಯ ಎರಡೂ ಬದಿಗಳಲ್ಲಿ ಬೇಲಿಗಳಿವೆ. ಬೆಂಗಳೂರು, ಮಂಡ್ಯ, ರಾಮನಗರ ಮತ್ತು ಮೈಸೂರಿನ ಜನರು ತಮ್ಮ ಸೌಕರ್ಯಕ್ಕಾಗಿ ಬೇಲಿ ಕೀಳುವುದನ್ನು ತಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ. ಬೇಲಿಯ ಹಾನಿಗೊಳಗಾದ ಭಾಗದ ಮೂಲಕ ಯಾವುದೇ ಪ್ರಾಣಿ ಎಕ್ಸ್‌ಪ್ರೆಸ್‌ವೇಗೆ ಬಂದರೆ, ಅದು ತೀವ್ರ ಅಪಘಾತಕ್ಕೆ ಕಾರಣವಾಗಬಹುದು ಎಂದು ಪ್ರತಾಪ್ ಸಿಂಹ ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದರು.
119 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇಯನ್ನು ರೂ. 8,408 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಬೆಂಗಳೂರು ಮತ್ತು ಮೈಸೂರು ನಗರಗಳ ನಡುವಿನ ಸಂಚಾರ ಅವಧಿಯನ್ನು ಮೂರು ಗಂಟೆಗಳಿಂದ ಕೇವಲ 75 ನಿಮಿಷಗಳಿಗೆ ಇದು ಕಡಿಮೆ ಮಾಡಲಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಲ್ಲಿ ಸಂಚಾರ ಸ್ವಲ್ಪ ಮೊದಲೇ ಆರಂಭವಾಗಿತ್ತಾದರೂ ಈ ವರ್ಷ ಮಾರ್ಚ್ 12 ರಂದು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಉದ್ಘಾಟನೆಯ ದಿನವೇ ಮದ್ದೂರು ಸಮೀಪ ಅಪಘಾತ ಸಂಭವಿಸಿತ್ತು. ದಶಪಥ ರಸ್ತೆಯಲ್ಲಿ ವೇಗದ ಮಿತಿಯ ಸೂಚನಾ ಫಲಕವಿಲ್ಲದೇ ಇರುವುದರಿಂದ ವಾಹನ ಸವಾರರು ಯರ್ರಾಬಿರ್ರಿ ವಾಹನ ಚಲಾಯಿಸುತ್ತಿರುವುದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.
ಅಪಘಾತಗಳನ್ನು ತಪ್ಪಿಸಲು ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಎಕ್ಸ್‌ಪ್ರೆಸ್‌ವೇ 4 ರೈಲು ಮೇಲ್ಸೇತುವೆಗಳು, 9 ದೊಡ್ಡ ಸೇತುವೆಗಳು, 42 ಸಣ್ಣ ಸೇತುವೆಗಳು ಮತ್ತು 64 ಅಂಡರ್‌ಪಾಸ್‌ಗಳು ಮತ್ತು 5 ಬೈಪಾಸ್ಗಳನ್ನು ಹೊಂದಿದೆ. ಆದರೆ ಎಲ್ಲಿಯೂ ವೇಗದ ಮಿತಿಯ ಸೂಚನಾ ಫಲಕವಿಲ್ಲ.
ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದೆ. ಬೇಗ ನಗರ ತಲುಪುವ ಧಾವಂತದಲ್ಲಿ ಸ್ಪೀಡ್ ಲಿಮಿಟ್ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ.
ಇನ್ನೊಂದು ಮುಖ್ಯ ಅಂಶವೆಂದರೆ, ಈ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ಗಾಯಾಳುಗಳಿಗೆ ತುರ್ತು ವೈದ್ಯಕೀಯ ಸೌಲಭ್ಯಗಳು ಸಿಗುವುದಿಲ್ಲ. ಹೆದ್ದಾರಿಯ ಮಧ್ಯದಲ್ಲಿ ರಸ್ತೆ ವಿಭಜಕವಿದ್ದು, ಕಬ್ಬಿಣದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಹಾಗೂ ಯೂಟರ್ನ್ ಇಲ್ಲ. ಹೀಗಾಗಿ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುವುದಿಲ್ಲ.