Karnataka Police: ನೇಮಕಾತಿ ನಿಯಮದ ಲೋಪ ದುರ್ಬಳಕೆ?; ಪೊಲೀಸ್ ಇಲಾಖೆಯಲ್ಲಿದ್ದಾರಂತೆ ಗರಿಷ್ಠ ಅವಧಿ ಮೀರಿದ ಪ್ರೊಬೇಷನರಿಗಳು!
Karnataka Police: ಇಲಾಖೆ ನಿಗದಿ ಮಾಡಿದ ಗರಿಷ್ಠ ಪ್ರೊಬೇಷನರಿ ಕಾಲಮಿತಿ ಮೀರಿದರೂ, ಇಲಾಖಾ ಪರೀಕ್ಷೆ ಉತ್ತೀರ್ಣರಾಗದ, ತರಬೇತಿ ಮುಗಿಸದ ಅಧಿಕಾರಿ, ಸಿಬ್ಬಂದಿ ವರ್ಗದ ವಿರುದ್ಧ ಕ್ರಮ ಜರುಗಿಸುವುದಕ್ಕೆ ಡಿಜಿಪಿ ಸೂಚನೆ ನೀಡಿದ್ದಾರೆ ಎಂಬುದು ಈ ಸಂಚಲನಕ್ಕೆ ಕಾರಣ. ಪೊಲೀಸ್ ಇಲಾಖೆಯಲ್ಲಿ ಪ್ರೊಬೇಷನರಿ ಅವಧಿಯು ಕನಿಷ್ಠ 2 ವರ್ಷ 6 ತಿಂಗಳು.
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪ್ರೊಬೇಷನರಿಯ ಗರಿಷ್ಠ ಅವಧಿ ಮೀರಿದರೂ ಪ್ರೊಬೇಷನರಿಯಾಗಿಯೇ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ವರ್ಗದ ವಿಚಾರ ಪೊಲೀಸ್ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಡಿಜಿಪಿ ರವಾನಿಸಿರುವ ಸೂಚನೆ ಈ ಸಂಚಲನ ಸೃಷ್ಟಿಸಿದೆ.
ಇಲಾಖೆ ನಿಗದಿ ಮಾಡಿದ ಗರಿಷ್ಠ ಪ್ರೊಬೇಷನರಿ ಕಾಲಮಿತಿ ಮೀರಿದರೂ, ಇಲಾಖಾ ಪರೀಕ್ಷೆ ಉತ್ತೀರ್ಣರಾಗದ, ತರಬೇತಿ ಮುಗಿಸದ ಅಧಿಕಾರಿ, ಸಿಬ್ಬಂದಿ ವರ್ಗದ ವಿರುದ್ಧ ಕ್ರಮ ಜರುಗಿಸುವುದಕ್ಕೆ ಡಿಜಿಪಿ ಸೂಚನೆ ನೀಡಿದ್ದಾರೆ ಎಂಬುದು ಈ ಸಂಚಲನಕ್ಕೆ ಕಾರಣ. ಪೊಲೀಸ್ ಇಲಾಖೆಯಲ್ಲಿ ಪ್ರೊಬೇಷನರಿ ಅವಧಿಯು ಕನಿಷ್ಠ 2 ವರ್ಷ 6 ತಿಂಗಳು.
ಡಿಜಿಪಿಯವರ ಸೂಚನೆ ಎಂದು ಹೇಳಲಾಗಿರುವ ಸೂಚನೆಯಲ್ಲಿರುವುದೇನು?
ಡಿಜಿಪಿ ಕಚೇರಿ ಮೂಲಗಳ ಪ್ರಕಾರ,
- ಪ್ರೊಬೇಷನರಿ ಅವಧಿಯಲ್ಲೇ ವಿನಾಯಿತಿ ನೀಡದೇ ಅಧಿಕಾರಿ, ಸಿಬ್ಬಂದಿಯನ್ನು ಕೆಲಸದಲ್ಲಿ ನಿಯೋಜಿಸುವ ಕೆಲಸವನ್ನು ನೇಮಕ ಪ್ರಾಧಿಕಾರ/ಉನ್ನತಾಧಿಕಾರಿಗಳು ಮಾಡಬೇಕು.
- ಪ್ರೊಬೇಷನರಿ ಅವಧಿಯಲ್ಲಿ ಮುಗಿಸಬೇಕಾದ ತರಬೇತಿ ಮತ್ತು ಉತ್ತೀರ್ಣರಾಗಬೇಕಾದ ಪರೀಕ್ಷೆಗಳಿಗೆ ಅವರನ್ನು ಒಳಪಡಿಸಬೇಕು. ಇದನ್ನು ಪ್ರಾಮಾಣಿಕವಾಗಿ ಮಾಡಿದವರ ಅವಧಿ ವಿಸ್ತರಣೆಗೆ ಶಿಫಾರಸು ಮಾಡಬಹುದು. ಉಳಿದವರನ್ನು ಕೈಬಿಡಬೇಕು.
- ತೀರಾ ಅನಿವಾರ್ಯ, ನಿರ್ದಿಷ್ಟ ಆರೋಗ್ಯ ಸಮಸ್ಯೆ ಇದ್ದರೆ ಮಾತ್ರವೇ ಪ್ರೊಬೇಷನರಿ ಅವಧಿ ವಿಸ್ತರಣೆಗೆ ಅವಕಾಶ ನೀಡಬೇಕು. ಅವಧಿ ವಿಸ್ತರಣೆ ಬಳಿಕವೂ ನಿಶ್ಚಿತ ಮಾನದಂಡಗಳನ್ನು ಪೂರೈಸದೇ ಇದ್ದರೆ ಅಂಥವರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು.
ಪ್ರೊಬೇಷನರಿ ನಿಯಮ ಹೇಳುವುದೇನು?
ಕರ್ನಾಟಕ ಸಿವಿಲ್ ಸೇವೆಗಳ (ಪೊಬೇಷನ್) ನಿಯಮಗಳು 1977 - ಇದು ರಾಜ್ಯದ ಎಲ್ಲ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ಅನ್ವಯವಾಗುವ ಪ್ರೊಬೇಷನರಿ ನಿಯಮ.
ಸೇವೆ ಖಾಯಮಾತಿಗೆ ಮೊದಲಿನ ಸೇವಾ ಖಾಯಂ ಪೂರ್ವ ತರಬೇತಿ, ಇಲಾಖಾ ಪರೀಕ್ಷೆಗಳನ್ನು ಪೂರೈಸುವುದಕ್ಕಾಗಿ ಸರ್ಕಾರಿ ನೌಕರರು, ಅಧಿಕಾರಿಗಳು ಪ್ರೊಬೇಷನರಿ ಅವಧಿ ಪೂರ್ಣಗೊಳಿಸುವುದು ಕಡ್ಡಾಯ. ಇದರ ಪ್ರಕಾರ, ಈ ಅವಧಿಯಲ್ಲಿ ಆಯಾ ಇಲಾಖೆ, ನೇಮಕಾತಿ ಪ್ರಾಧಿಕಾರ ನಿಗದಿಪಡಿಸುವ ಪ್ರೊಬೇಷನರಿ ಅವಧಿ ಕನಿಷ್ಠ 2 ವರ್ಷಕ್ಕಿಂತ ಕಡಿಮೆ ಇರಬಾರದು. ಅಕಸ್ಮಾತ್ ಈ ಅವಧಿಯಲ್ಲಿರುವ ನೌಕರ ಅಥವಾ ಅಧಿಕಾರಿ ಅನಿವಾರ್ಯ ಕಾರಣಕ್ಕೆ ರಜಾದಲ್ಲಿದ್ದರೆ ಆ ರಜಾ ಅವಧಿಯನ್ನು ಹೊರತುಪಡಿಸಿ ಪ್ರೊಬೇಷನರಿ ಅವಧಿ ಪರಿಗಣಿಸಬೇಕು.
ಇನ್ನು ಪ್ರೊಬೇಷನರಿ ಅವಧಿ ವಿಸ್ತರಣೆ ಅಥವಾ ಅವಧಿ ಕಡಿಮೆ ಮಾಡುವ ಅಧಿಕಾರ ಮೊದಲ ಹಂತದಲ್ಲಿ ನೇಮಕ ಪ್ರಾಧಿಕಾರ, ಬಳಿಕ ಸರ್ಕಾರ ಮತ್ತು ರಾಜ್ಯಪಾಲರ ಅಧೀನದಲ್ಲಿರುತ್ತದೆ.
ಅನಿವಾರ್ಯ ಮತ್ತು ನಿರ್ದಿಷ್ಟ ಕಾರಣಗಳನ್ನು ಹೊರತುಪಡಿಸಿ ಪ್ರೊಬೇಷನರಿ ಅವಧಿ ವಿಸ್ತರಿಸುವುದಕ್ಕೆ ಅಥವಾ ಕಡಿಮೆ ಮಾಡಲು ಸರ್ಕಾರಿ ನೌಕರರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇಲ್ಲ.
ಪ್ರೊಬೇಷನರಿ ಅವಧಿ ಎಂದರೇನು?
ಆಯಾ ಇಲಾಖೆಯ ನೇಮಕಾತಿ ಪ್ರಾಧಿಕಾರವು ಪ್ರೊಬೇಷನರಿ ಅವಧಿಯಲ್ಲಿ ಅಧಿಕಾರಿ/ಸಿಬ್ಬಂದಿಯನ್ನು ನಿರ್ದಿಷ್ಟ ಹುದ್ದೆಗೆ ನೇಮಿಸಿರುತ್ತದೆ. ಆ ಹುದ್ದೆಯನ್ನು ನಿಭಾಯಿಸಲು ಆತ/ಆಕೆ ಅರ್ಹತೆ ಹೊಂದಿದ್ದಾನೆ/ಳೆ ಎಂಬುದನ್ನು ಪರಿಗಣಿಸಲು ಇಲಾಖಾ ಪರೀಕ್ಷೆ ಹಾಗೂ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಉತ್ತೀರ್ಣರಾದರೆ ನೇಮಕಾತಿ ಪ್ರಾಧಿಕಾರ, ಪ್ರೊಬೇಷನರಿ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾನೆ/ಳೆ ಎಂದು ಘೋಷಿಸುತ್ತದೆ.
ಅಕಸ್ಮಾತ್ ವಿಶೇಷ ಪರೀಕ್ಷೆ, ಉಪಪರೀಕ್ಷೆಯನ್ನು ಅಭ್ಯರ್ಥಿಯು ಬಾಕಿ ಉಳಿಸಿಕೊಂಡಿದ್ದರೆ ಆಗ ಸೇವಾ ನಿಯಮದ 4ನೇ ನಿಯಮ ಪ್ರಕಾರ ಪ್ರೊಬೇಷನರಿ ಅವಧಿಯಲ್ಲಿಯೇ ಸೇವೆಯಿಂದ ಮುಕ್ತಗೊಳಿಸಬಹುದು. ಅದೇ ರೀತಿ, ಈ ಅವಧಿಯಲ್ಲಿ ದುರ್ನಡತೆ ತೋರಿದರೆ ಕೆಲಸದಿಂದ ವಜಾಗೊಳಿಸುವುದಕ್ಕೆ ಅವಕಾಶ ಇದೆ. ಇದರ ವಿರುದ್ಧ ಅಭ್ಯರ್ಥಿಯು ಮೇಲ್ಮನವಿ ಸಲ್ಲಿಸುವುದಕ್ಕೂ ಅವಕಾಶ ಇರುವುದಿಲ್ಲ.
ಪೊಲೀಸ್ ಇಲಾಖೆಯಲ್ಲಿ ಪ್ರೊಬೇಷನರಿ ಅವಧಿಯು ಕನಿಷ್ಠ 2 ವರ್ಷ 6 ತಿಂಗಳು. ಗರಿಷ್ಠ ಅವಧಿಯು ನೇಮಕ ಪ್ರಾಧಿಕಾರದ ವ್ಯಾಪ್ತಿಯಲ್ಲಿ 5 ವರ್ಷ, ಅದು ಮೀರಿದರೆ ಸರ್ಕಾರ ಮತ್ತು ರಾಜ್ಯಪಾಲರ ವ್ಯಾಪ್ತಿಯಲ್ಲಿ ವಿವೇಚನೆಗೆ ಒಳಪಟ್ಟ ವಿಚಾರವಾಗಿದೆ.
ಪೊಲೀಸ್ ಇಲಾಖೆಯ ಮಾದರಿಯಲ್ಲೇ ಬೇರೆ ಬೇರೆ ಇಲಾಖೆಗಳಲ್ಲೂ ಪ್ರೊಬೇಷನರಿ ಅವಧಿಯಲ್ಲಿ ಗರಿಷ್ಠ ವರ್ಷದ ವಿಚಾರ ಚರ್ಚೆಗೆ ಒಳಗಾಗಿದೆ.