Karnataka Women MLAs: ಶಾಸನ ಸಭೆಯಲ್ಲಿ ಕುಸಿಯುತ್ತಿದೆ ಮಹಿಳಾ ಪ್ರಾತಿನಿಧ್ಯ; 224 ಶಾಸಕರಲ್ಲಿ 10 ಮಂದಿ ಮಾತ್ರ ನಾರಿಯರು
Karnataka political news: ದೇಶ ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿದೆ. ಮಹಿಳೆಯರು ನಿಭಾಯಿಸದ ಜವಾಬ್ದಾರಿಗಳೇ ಇಲ್ಲ. ಅದರಲ್ಲೂ ಕರ್ನಾಟಕ ಪ್ರಗತಿಯಲ್ಲಿ ದಾಪುಗಾಲು ಹಾಕುತ್ತಿದೆ. ಆದರೆ ಶಾಸನ ಸಭೆಗಳಲ್ಲಿ ಮಾತ್ರ ಮಹಿಳೆಯರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಇಳಿಮುಖವಾಗುತ್ತಿದೆ.
ಬೆಂಗಳೂರು: ಶಾಸನ ಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆಯಾಗುತ್ತಲೇ ಇರುವುದು ಆತಂಕದ ಸಂಗತಿ. ಮಹಿಳೆಯರು ಆಯ್ಕೆಯಾಗುವುದೇ ದುಸ್ತರವಾಗಿರುವಾಗ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಗಗನಕುಸುಮವೇ ಸರಿ. 1963ರಲ್ಲಿ 18 ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಇದುವರೆಗೂ ಮಹಿಳಾ ಶಾಸಕಿಯರ ಸಂಖ್ಯೆ ಎರಡಂಕಿ ದಾಟಿಯೇ ಇಲ್ಲ. 1989ರಲ್ಲಿ ಮತ್ತು ಈಗಿನ ವಿಧಾನಸಭೆಯಲ್ಲಿ ಕೇವಲ 10 ಮಹಿಳಾ ಶಾಸಕಿಯರು (Karnataka Women MLAs) ಆಯ್ಕೆಯಾಗಿದ್ದಾರೆ.
ದೇಶ ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿದೆ. ಮಹಿಳೆಯರು ನಿಭಾಯಿಸದ ಜವಾಬ್ದಾರಿಗಳೇ ಇಲ್ಲ. ಅದರಲ್ಲೂ ಕರ್ನಾಟಕ ಪ್ರಗತಿಯಲ್ಲಿ ದಾಪುಗಾಲು ಹಾಕುತ್ತಿದೆ. ಆದರೆ ಶಾಸನ ಸಭೆಗಳಲ್ಲಿ ಮಾತ್ರ ಮಹಿಳೆಯರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಇಳಿಮುಖವಾಗುತ್ತಿದೆ.
ಕೇವಲ ಕರ್ನಾಟಕ ಮಾತ್ರವಲ್ಲ, ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ. 224 ಶಾಸಕರಲ್ಲಿ ಇವರ ಪ್ರಾತಿನಿಧ್ಯ ಶೇ.4ರಷ್ಟು ಮಾತ್ರ. ಪ್ರತಿ ಸಂಪುಟದಲ್ಲಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಅದೂ ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾತ್ರ. ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಗೃಹ ಇಲಾಖೆ, ನೀರಾವರಿ, ಶಿಕ್ಷಣ, ಕಂದಾಯ ಹಣಕಾಸು ಇಂತಹ ಮಹತ್ವದ ಖಾತೆಗಳನ್ನು ನಿಭಾಯಿಸಲು ಮಹಿಳೆ ಅಶಕ್ತಳು ಎಂದು ಅಲಿಖಿತ ನಿಯಮವೇನಾದರೂ ಇದೆಯೇ?
ಜಿಲ್ಲೆ ಮತ್ತು ಜಾತಿಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಪ್ರತಿ ಸಂಪುಟ ವಿಸ್ತರಣೆಯಾದಗಲೆಲ್ಲಾ ಪ್ರತಿಭಟನೆ ನಡೆಯುವುದು ಸರ್ವೇ ಸಾಮಾನ್ಯ. ಬಸ್ಗಳಿಗೆ ಕಲ್ಲು ಹೊಡೆದು ಟೈರ್ಗಳಿಗೆ ಬೆಂಕಿ ಹಚ್ಚಿರುವ ಉದಾಹರಣೆಗಳೂ ಇಲ್ಲದ್ದಿಲ್ಲ. ಆದರೆ ಮಹಿಳೆಯರಿಗೆ ಸೂಕ್ತ ಮತ್ತು ಸಮರ್ಪಕ ಸ್ಥಾನಮಾನ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಯುವುದು ಕಡಿಮೆ.
ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಿದಾಗ ಮಾತ್ರ ತಾರತಮ್ಯ ಸರಿ ಹೋಗಬಹುದೇ?. ಆದರೆ ಈ ಮೀಸಲಾತಿ ನೀಡುವ ಸಂಸತ್ನಲ್ಲಿ ಮಹಿಳಾ ಮಸೂದೆ ನೆನೆಗುದಿಗೆ ಬಿದ್ದಿದೆ. 2014ರಲ್ಲಿ ಸಂಸತ್ನಲ್ಲಿ ಚರ್ಚೆಗೆ ಬಂದಿತ್ತಾದರೂ ಆ ವೇಳೆಗೆ ಚುನಾವಣೆ ಎದುರಾಗಿತ್ತು. ನಂತರದ ಎಂಟು ವರ್ಷಗಳಿಂದ ಕೇವಲ ಚರ್ಚೆ ನಡೆಯುತ್ತಿದೆಯೇ ಹೊರತು ಪ್ರಾಮಾಣಿಕ ಪ್ರಯತ್ನ ಯಾವುದೇ ಪಕ್ಷ ಅಥವಾ ಸರಕಾರ ಮಾಡಲಿಲ್ಲ ಎನ್ನುವುದು ದುರಂತವೇ ಸರಿ.
ರಾಜ್ಯ ಪುನಾರಚನೆಯಾದ 1962ರಿಂದ ಇದುವರೆಗೆ ಆಯ್ಕೆಯಾದ ಮಹಿಳಾ ಶಾಸಕರ ಸಂಖ್ಯೆ ಕೇವಲ 96 ಮಾತ್ರ. ಇದೇ 61 ವರ್ಷಗಳಲ್ಲಿ ರಾಜ್ಯದಲ್ಲಿ 3009 ಪುರುಷ ಶಾಸಕರುಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷ ಟಿಕೆಟ್ ನೀಡುವಾಗ ಮಹಿಳೆಯರನ್ನು ಪರಿಗಣಿಸುವುದೇ ಇಲ್ಲ. ಎಲ್ಲ ಪಕ್ಷಗಳೂ ಶೇ.3-7 ರಷ್ಟು ಮಾತ್ರ ಟಿಕೆಟ್ ನೀಡುತ್ತವೆ. ಹೆಚ್ಚೆಂದರೆ ಒಂದು ಪಕ್ಷ 15 ಮಂದಿ ಮಹಿಳೆಯರನ್ನು ಮಾತ್ರ ಕಣಕ್ಕಿಳಿಸಿದ ಉದಾಹರಣೆ ಸಿಗಬಹುದು.
ಕಳೆದ 61 ವರ್ಷಗಳಲ್ಲಿ ಪುರುಷ ಮತ್ತು ಮಹಿಳಾ ಮತದಾರರ ಸಂಖ್ಯೆ ಸರಿ ಸುಮಾರು ಸಮಾನವಾಗಿಯೇ ಇದೆ. ಪುರುಷ ಮತ್ತು ಮಹಿಳಾ ಅನುಪಾತವು 53.47ರಿಂದ 51.49 ಆಸುಪಾಸಿನಲ್ಲಿಯೇ ಇದೆ. ಹಲವು ಚುನಾವಣೆಗಳಲ್ಲಿ ಮತ್ತು ಹಲವು ಕ್ಷೇತ್ರಗಳಲ್ಲಿ ಮಹಿಳೆಯರೇ ಹೆಚ್ಚು ಮತದಾನ ಮಾಡಿರುವ ದಾಖಲೆ ಇದೆ.
2023ರ ವಿಧಾನಸಭೆಯ ಚಿತ್ರಣ
ಒಂದು ತಿಂಗಳ ಹಿಂದೆ ಮುಗಿದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಮಹಿಳಾ ಶಾಸಕಿಯರ ಸಂಖ್ಯೆ ಕೇವಲ 10. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ನಾಲ್ವರು ಮತ್ತು ಜೆಡಿಎಸ್ ನಿಂದ ಒಬ್ಬರು ಮತ್ತು ಸ್ವತಂತ್ರವಾಗಿ ಒಬ್ಬ ಶಾಸಕಿ ಆಯ್ಕೆಯಾಗಿದ್ದಾರೆ. ಟಿಕೆಟ್ ನೀಡುವಲ್ಲಿಯೂ ತಾರತಮ್ಯ ಈ ಚುನಾವಣೆಯಲ್ಲಿಯೂ ಮುಂದುವರೆದಿದೆ. ಕಾಂಗ್ರೆಸ್ 11, ಬಿಜೆಪಿ 12 ಮತ್ತು ಜೆಡಿಎಸ್ 13 ಮಹಿಳೆಯರನ್ನು ಕಣಕ್ಕಿಳಿಸಿದ್ದವು. ಆಯ್ಕೆಯಾದ ಪ್ರಮಾಣ ಮಾತ್ರ ಶೇ.4.
ಈ ಚುನಾವಣೆಯಲ್ಲಿ ಮಹಿಳಾ ಮತದಾರರ ಪ್ರಮಾಣ ಪುರುಷ ಮತದಾರರಿಗೆ ಸರಿಸಮಾನವಾಗಿಯೇ ಇತ್ತು. ಒಟ್ಟು ಮತದಾರರಲ್ಲಿ ಪುರುಷರು 2.67 ಕೋಟಿಯಷ್ಟಿದ್ದರೆ ಮಹಿಳಾ ಮತದಾರರ ಸಂಖ್ಯೆ 2.64 ಕೋಟಿ. ಅಂದರೆ ಪ್ರತಿ 1000 ಪುರುಷ ಮತದಾರರಿದ್ದರೆ, 989 ಮಹಿಳಾ ಮತದಾರರಿದ್ದಾರೆ. ಮತ ಚಲಾವಣೆಯಲ್ಲಿಯೂ ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಮತ ಚಲಾಯಿಸಿರುವುದು ಕಂಡು ಬರುತ್ತದೆ. ಶೇ.73.68ರಷ್ಟು ಪುರುಷ ಮತ್ತು ಶೇ.72.7ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ. ಆದರೆ ವಿಧಾನಸಬೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಮಾತ್ರ ಶೇ. 4 ಮತ್ತು ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಸಿದ್ದರಾಮಯ್ಯ ಸಂಪುಟ ಸೇರ್ಪಡೆಯಾದ ಏಕೈಕ ಮಹಿಳೆ ಲಕ್ಷ್ಮಿ ಹೆಬ್ಬಾಳ್ಕರ್. ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸರಕಾರ ಖನೀಜ್ ಫಾತಿಮಾ, ರೂಪಕಲಾ ಮತ್ತು ನಯನಾ ಮೋಟಮ್ಮ ಅವರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದರೆ ಇಡೀ ದೇಶದಲ್ಲಿ ರಾಜ್ಯ ಸಚಿವ ಸಂಪುಟಕ್ಕೊಂದು ಮೆರುಗು ಬರುತ್ತಿತ್ತು ಅಲ್ಲವೇ?
ವರದಿ: ಎಚ್ ಮಾರುತಿ