ಕನ್ನಡ ಸುದ್ದಿ  /  Karnataka  /  Free Bus Travel For Women In Karnataka Cm Siddaramaiah To Turn As Bus Conductor On June 11 Knoqw About Shakti Scheme Mg

Free Bus: ಜೂನ್​ 11 ರಂದು ಬಸ್​ ಕಂಡಕ್ಟರ್​ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ; ಫ್ರೀ ಎಂದು ಬಸ್​ ಹತ್ತುವ ಮಹಿಳೆಯರು ತಿಳಿಯಬೇಕಾಗಿದ್ದಿಷ್ಟು

Free bus travel for women in Karnataka: ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಾದರೆ ʻಶಕ್ತಿ ಸ್ಮಾರ್ಟ್‌ ಕಾರ್ಡ್‌ʼ ಹೊಂದುವುದು ಕಡ್ಡಾಯ. ಈ ಕಾರ್ಡ್​ಗಳನ್ನು ಸೇವಾ ಸಿಂಧು ಪೋರ್ಟಲ್​ ಮೂಲಕ ಅರ್ಜಿಗಳನ್ನು ಸಲ್ಲಿಸಿ ಪಡೆಯಬೇಕು. ಆದರೆ ಈ ಕಾರ್ಡ್‌ಗಳನ್ನು ಸರ್ಕಾರ ಯಾವಾಗ ವಿತರಿಸಲು ಪ್ರಾರಂಭಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಜೂನ್​ 11 ರಂದು ‘ಶಕ್ತಿ ಯೋಜನೆ’ಗೆ ಚಾಲನೆ
ಜೂನ್​ 11 ರಂದು ‘ಶಕ್ತಿ ಯೋಜನೆ’ಗೆ ಚಾಲನೆ

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka CM Siddaramaiah) ಅವರು ನಾಳೆ ಭಾನುವಾರ ( ಜೂನ್ 11) ಬಸ್ ಕಂಡಕ್ಟರ್ ಪಾತ್ರ ನಿರ್ವಹಿಸಲು ಸಿದ್ಧರಾಗಿದ್ದಾರೆ. ಬಸ್​ ಕಂಡಕ್ಟರ್ ಆಗಿ ಬದಲಾಗುವ ಸಿದ್ದರಾಮಯ್ಯ ಮಹಿಳೆಯರಿಗೆ ಫ್ರೀ ಟಿಕೆಟ್​ ನೀಡಲಿದ್ದಾರೆ.

ಸರಳವಾಗಿ ಹೇಳಬೇಕೆಂದ್ರೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free bus travel for women in Karnataka)ಒದಗಿಸುವ ಕಾಂಗ್ರೆಸ್​ ಗ್ಯಾರಂಟಿಗಳಲ್ಲಿ ಒಂದಾದ ಮಹಾತ್ವಾಕಾಂಕ್ಷಿ‘ಶಕ್ತಿ ಯೋಜನೆ’ಗೆ ನಾಳೆ ಚಾಲನೆ ಸಿಗಲಿದೆ. ಕರ್ನಾಟಕದ ಮುಖ್ಯಮಂತ್ರಿಗಳ ಕಚೇರಿಯ ಪ್ರಕಾರ, ಸಿದ್ದರಾಮಯ್ಯ ಅವರು ಭಾನುವಾರ ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ಹತ್ತಲಿದ್ದಾರೆ ಮತ್ತು ಬಸ್‌ನಲ್ಲಿ ಮಹಿಳೆಯರಿಗೆ 'ಪಿಂಕ್ ಟಿಕೆಟ್' ನೀಡಲಿದ್ದಾರೆ. ಅವರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ವಿಧಾನಸೌಧಕ್ಕೆ ಬಿಎಂಟಿಸಿ ಬಸ್‌ನಲ್ಲಿ ತೆರಳಲಿದ್ದಾರೆ.

ಜಾತಿ, ಮತ, ಮತ ಬೇಧವಿಲ್ಲದೆ ರಾಜ್ಯದ ಎಲ್ಲ ಫಲಾನುಭವಿಗಳಿಗೆ ಶಕ್ತಿ ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಎಲ್ಲಾ ಸಚಿವರು ಮತ್ತು ಶಾಸಕರಿಗೆ ಸೂಚಿಸಿದ್ದಾರೆ. ವರದಿಗಳ ಪ್ರಕಾರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.

ಫ್ರೀ ಎಂದು ಬಸ್​ ಹತ್ತುವ ಮಹಿಳೆಯರು ತಿಳಿಯಬೇಕಾಗಿದ್ದಿಷ್ಟು

1. ಎಲ್ಲ ಮಹಿಳೆಯರಿಗೂ ಅನ್ವಯ, ಆದ್ರೆ ರಾಜ್ಯದೊಳಗೆ ಮಾತ್ರ: ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಶಕ್ತಿ ಯೋಜನೆ ಅನ್ವಯವಾಗುತ್ತೆದೆ. ಕರ್ನಾಟಕ ರಾಜ್ಯದೊಳಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲಾ ಮಹಿಳೆಯರು ಸರ್ಕಾರಿ ಬಸ್​​ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸಲು ಇದು ಅನ್ವಯಿಸುವುದಿಲ್ಲ.

2. ಯಾವ್ಯಾವ ಬಸ್​ಗಳಲ್ಲಿ ಉಚಿತ ಪ್ರಯಾಣ?: ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ), ಕೆಎಸ್​ಆರ್​ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ), ಎನ್​​​​ಡಬ್ಲ್ಯೂಕೆಆರ್​​ಟಿಸಿ (ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಮತ್ತು ಕೆಕೆಆರ್​ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ) ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.

3. ಯಾವ ಬಸ್​ಗಳಲ್ಲಿ ಫ್ರೀ ಇಲ್ಲ?: ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್​, ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್ ಬಸ್​ಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

3. ಪುರುಷರಿಗಾಗಿ ಶೇ.50 ಸೀಟು ಮೀಸಲು: ಬಿಎಂಟಿಸಿ ಬಸ್ಸುಗಳನ್ನು ಹೊರತುಪಡಿಸಿ, ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್​ಆರ್​ಟಿಸಿ, ಎನ್​​​​ಡಬ್ಲ್ಯೂಕೆಆರ್​​ಟಿಸಿ ಮತ್ತು ಕೆಕೆಆರ್​ಟಿಸಿ ಬಸ್‌ಗಳಲ್ಲಿ ಪುರುಷರಿಗಾಗಿ ಶೇ.50 ಆಸನಗಳನ್ನು ಕಾಯ್ದಿರಿಸಲಾಗಿರುತ್ತದೆ.

4. ಫ್ರೀ ಆದ್ರೂ ಟಿಕೆಟ್​ ಪಡೆಯಲೇಬೇಕು: ಉಚಿತ ಎಂದು ಬಸ್​ ಹತ್ತಿದ ಬಳಿಕ ಕಂಡೆಕ್ಟರ್​ ಟಿಕೆಟ್​ ಪಡೆಯುವಂತೆ ಸೂಚಿಸಿದ್ರೆ ನೀವು ವಿರೋಧ ವ್ಯಕ್ತಪಡಿಸಿ ಅವರೊಂದಿಗೆ ಜಗಳ ಮಾಡುವಂತಿಲ್ಲ. ಫ್ರೀ ಆದ್ರೂ ಕೂಡ ಅದಕ್ಕೆ ಒಂದು ಟಿಕೆಟ್​ ನೀಡಲಾಗುವುದು. ಅದನ್ನು ತಪ್ಪದೇ ಪಡೆಯಬೇಕು. ಅದರಲ್ಲಿ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸುತ್ತೀರಿ ಎಂಬುದು ನಮೂದಾಗಿರುತ್ತದೆ.

5. ಪಿಂಕ್​ ಟಿಕೆಟ್​: ಒಂದು ವೇಳೆ ಟಿಕೆಟ್​ ನೀಡಲು ತಾಂತ್ರಿಕ ದೋಷವಾದಲ್ಲಿ ಕಂಡಕ್ಟರ್ ನಿಮಗೆ ಪಿಂಕ್​ ಟಿಕೆಟ್​ ನೀಡುತ್ತಾರೆ, ಅದನ್ನು ಪಡೆಯಿರಿ.

6. ಶಕ್ತಿ ಸ್ಮಾರ್ಟ್‌ ಕಾರ್ಡ್‌: ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಾದರೆ ʻಶಕ್ತಿ ಸ್ಮಾರ್ಟ್‌ ಕಾರ್ಡ್‌ʼ ಹೊಂದುವುದು ಕಡ್ಡಾಯ. ಈ ಕಾರ್ಡ್​ಗಳನ್ನು ಸೇವಾ ಸಿಂಧು ಪೋರ್ಟಲ್​ ಮೂಲಕ ಅರ್ಜಿಗಳನ್ನು ಸಲ್ಲಿಸಿ ಪಡೆಯಬೇಕು. ಆದರೆ ಈ ಕಾರ್ಡ್‌ಗಳನ್ನು ಸರ್ಕಾರ ಯಾವಾಗ ವಿತರಿಸಲು ಪ್ರಾರಂಭಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

7. ಶಕ್ತಿ ಸ್ಮಾರ್ಟ್‌ ಕಾರ್ಡ್‌ ಸಿಗುವವರೆಗೆ ಆಧಾರ್​ ಕಾರ್ಡ್​, ಪಾನ್​ ಕಾರ್ಡ್​, ಮತದಾರರ ಗುರುತಿನ ಚೀಟಿ ಸೇರಿದಂತೆ ಭಾರತ ಸರ್ಕಾರ ಅಥವಾ ಕರ್ನಾಟಕ ಸರ್ಕಾರ ಅಥವಾ ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ನಿಮ್ಮ ಭಾವಚಿತ್ರ ಹಾಗೂ ವಸತಿ ವಿಳಾಸವಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಿ ಉಚಿತ ಟಿಕೆಟ್‌ ಪಡೆಯಬಹುದು.