ಕನ್ನಡ ಸುದ್ದಿ  /  ಕರ್ನಾಟಕ  /  Pralhad Joshi: ಹುಬ್ಬಳ್ಳಿ ಧಾರವಾಡ ಪಾಲಿಕೆ ರಾಜಕೀಯದಿಂದ ಪಾರ್ಲಿಮೆಂಟ್‌ವರೆಗೆ, ಪ್ರಲ್ಹಾದ ಜೋಶಿ ಅವರ ಹಿನ್ನೆಲೆ ಏನು

Pralhad Joshi: ಹುಬ್ಬಳ್ಳಿ ಧಾರವಾಡ ಪಾಲಿಕೆ ರಾಜಕೀಯದಿಂದ ಪಾರ್ಲಿಮೆಂಟ್‌ವರೆಗೆ, ಪ್ರಲ್ಹಾದ ಜೋಶಿ ಅವರ ಹಿನ್ನೆಲೆ ಏನು

Karnataka politics ಕರ್ನಾಟಕದ ರಾಜಕಾರಣದಲ್ಲಿ ಕೆಳ ಹಂತದಿಂದಲೇ ಬೆಳೆದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಪ್ರಲ್ಹಾದ ಜೋಶಿ ಸತತ ಐದನೇ ಬಾರಿ ಗೆಲುವಿನೊಂದಿಗೆ ಎರಡನೇ ಬಾರಿ ಕೇಂದ್ರ ಮಂತ್ರಿಯಾಗಿದ್ದಾರೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ

ಅದು ಧಾರವಾಡದ ರಾಜಕಾರಣ. ಅಲ್ಲಿ ಘಟಾನುಘಟಿಗಳ ನಡುವೆಯೇ ಬೆರೆತು ಉನ್ನತ ಹಂತದವರೆಗೂ ಬಿಜೆಪಿಯಲ್ಲಿ ಬೆಳೆದವರು ಪ್ರಲ್ಹಾದ ಜೋಶಿ. ಕೊಟ್ಟ ಅವಕಾಶಗಳನ್ನು ಬಳಸಿಕೊಂಡವರು. ಸಂಘಟನೆ, ಸಾರ್ವಜನಿಕ ಆಡಳಿತ ಎರಡೂ ವಲಯದಲ್ಲೂ ಗುರುತಿಸಿಕೊಂಡವರು, ಹುಬ್ಬಳ್ಳಿ ಧಾರವಾಡ ಪಾಲಿಕೆ ರಾಜಕಾರಣದಿಂದ ಆರಂಭಗೊಂಡು ಅಲ್ಲಿಂದ ಪಾರ್ಲಿಮೆಂಟ್‌ಗೂ ಬಡ್ತಿ ಪಡೆದು ಸತತ ಐದನೇ ಬಾರಿಗೆ ಸಂಸತ್‌ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಧಾರವಾಡ ಕ್ಷೇತ್ರದಲ್ಲಿ ಇತಿಹಾಸ ಬರೆದವರು. ಈಗ ಎರಡನೇ ಬಾರಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

1962ರ ನವೆಂಬರ್ 27, ರಂದು ಕರ್ನಾಟಕದ ಬಿಜಾಪುರದಲ್ಲಿ ಜನಿಸಿದರು ಜೋಶಿ. ತಂದೆ ವೆಂಕಟೇಶ ಜೋಶಿ ರೈಲ್ವೆ ಉದ್ಯೋಗಿ. ತಾಯಿ ಮಾಲತಿ ಬಾಯಿ ಗೃಹಿಣಿ. ಓದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿ ರೈಲ್ವೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಹುಬ್ಬಳ್ಳಿ ನ್ಯೂ ಇಂಗ್ಲಿಷ್‌ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ಶ್ರೀ ಕಾಡಸಿದ್ದೇಶ್ವರ ಕಲಾ ವಿದ್ಯಾಲಯದಿಂದ ಬಿಎ ಪದವಿ ಪಡೆದಿದ್ದಾರೆ.1992ರಲ್ಲಿ ಜ್ಯೋತಿ ಅವರೊಂದಿಗೆ ಜೋಶಿ ಅವರ ವಿವಾಹವಾಗಿ ಅವರಿಗೆ ಮೂರು ಜನ ಹೆಣ್ಣು ಮಕ್ಕಳು.

ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಪ್ರಹ್ಲಾದ್‌ ಜೋಶಿ ರಾಜಕೀಯ ಜೀವನ ಅರಂಭಗೊಂಡಿದ್ದು 1992ರಲ್ಲಿ.

ಡಾ ಮುರಳಿ ಮನೋಹರ ಜೋಶಿಯವರ ನೇತೃತ್ವದ ಕಾಶ್ಮೀರ ಉಳಿಸಿ ಆಂದೋಲನದ ಅಡಿಯಲ್ಲಿ ಸ್ಥಳೀಯ ಆಂದೋಲನ ಸಮಿತಿಯ ನೇತೃತ್ವ ವಹಿಸುವದರೊಂದಿಗೆ ರಾಜಕೀಯ ರಂಗ ಪ್ರವೇಶಿಸಿದರು.

ಹುಬ್ಬಳ್ಳಿ ಈದ್ಗಾ ಮೈದಾನ ಉಳಿಸಿ ಹೋರಾಟದ ವೇಳೆ ರಾಷ್ಟ್ರ ಧ್ವಜ ಹಾರಿಸಿ ಮುಂಚೂಣಿಗೆ ಬಂದರು.

1995ರಲ್ಲಿ ಧಾರವಾಡ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, 1998ರಲ್ಲಿ ಧಾರವಾಡ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿ ಕೆಲಸ ಮಾಡಿದರು. ಈ ವೇಳೆ ಪಾಲಿಕೆ ರಾಜಕಾರಣದಲ್ಲಿದ್ದವರು. ಆಗ ಮೂರು ಬಾರಿ ಸಂಸದರಾಗಿದ್ದ ವಿಜಯಸಂಕೇಶ್ವರ ಬಿಜೆಪಿ ಬಿಟ್ಟು ಹೋದಾಗ ಜೋಶಿ ಅವರಿಗೆ ಪಾರ್ಲಿಮೆಂಟ್‌ ಟಿಕೆಟ್‌ ದೊರೆಯಿತು, 2004ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಅಲ್ಲಿಂದ ಸತತವಾಗಿ 2009, 2014, 2019,2024 ಐದು ಬಾರಿ ಜಯದ ದಾಖಲೆ ಬರೆದು ಹಿಂದುರಿಗಿ ನೋಡಿಲ್ಲ.

2006 ರಿಂದ 2013ರವರೆಗೂ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ 2013ರಿಂದ 2017ರವರೆಗೂ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿಯೂ ಪ್ರಹ್ಲಾದ್‌ ಜೋಶಿ ಕೆಲಸ ಮಾಡಿದ ಹಿರಿಮೆ ಹೊಂದಿದ್ದಾರೆ. ಆನಂತರ ಹಲವು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿಯೂ ಜೋಶಿ ಕೆಲಸ ಮಾಡಿದ್ದಾರೆ.

ಬಿಜೆಪಿ ಕರ್ನಾಟಕ ರಾಜಕಾರಣದ ಜತೆಗೆ ಕೇಂದ್ರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಅನಂತಕುಮಾರ್‌ ಅವರ ನಿಧನದ ನಂತರ ಇವರಿಗೆ ಅವಕಾಶ ದೊರೆಯಿತು.

ಸಂಘಟನೆ, ಸಾರ್ವಜನಿಕ ಜೀವನದ ಅನುಭವದ ಮೇಲೆ ಮೊದಲ ಬಾರಿಗೆ ಜೋಶಿ ಅವರಿಗೆ ಕೇಂದ್ರ ಸಂಪುಟದಲ್ಲಿ ಮೋದಿ ಅವಕಾಶ ನೀಡಿದರು. ಅದನ್ನು ಸಮರ್ಥವಾಗಿಯೇ ಬಳಸಿಕೊಂಡು ಜೋಶಿ ಐದು ವರ್ಷ ವಿವಾದಕ್ಕೆ ಅವಕಾಶ ಮಾಡಿಕೊಡದೇ ಎರಡು ಭಿನ್ನ ಖಾತೆಗಳಲ್ಲೂ ಚೆನ್ನಾಗಿಯೇ ಕೆಲಸ ಮಾಡಿದರು. ಅದರಲ್ಲೂ ಗಣಿ ಹಾಗೂ ಕಲ್ಲಿದ್ದಲು ಹಂಚಿಕೆಯ ಗೊಂದಲಗಳನ್ನು ಬಗೆಹರಿಸಿದರು ಕೂಡ.

ಎರಡು ವರ್ಷದ ಹಿಂದೆ ಬಿಜೆಪಿ ನಾಯಕತ್ವ ಬದಲಾವಣೆ ಮಾಡುವ ವಿಷಯ ಮುನ್ನಲೆಗೆ ಬಂದಾಗ ಪ್ರಲ್ಹಾದ ಜೋಶಿ ಅವರ ಹೆಸರೂ ಇತ್ತು. ಅವರೂ ಸಿಎಂ ಆಗಿ ಬಿಡುತ್ತಾರೆ ಎನ್ನುವ ಚರ್ಚೆಗಳಿದ್ದವು.

ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಜಗದೀಶ್‌ ಶೆಟ್ಟರ್‌ ನಿರ್ಗಮನ, ಈ ಬಾರಿ ಲೋಕಸಭೆ ಚುನಾವಣೆ ವೇಳೆ ಗೊಂದಲಗಳಿದ್ದರೂ ಅವುಗಳನ್ನೆಲ್ಲಾ ನಿಭಾಯಿಸಿದರು ಜೋಶಿ.ಇದೇ ಕಾರಣದಿಂದಲೇ ಮತ್ತೆ ಅವರಿಗೆ ಮಂತ್ರಿ ಭಾಗ್ಯ ಒಲಿದು ಬಂದಿದೆ. ಈ ಬಾರಿ ಭಿನ್ನ ಖಾತೆಯೊಂದಿಗೆ ಕೆಲಸ ಮಾಡಲು ಜೋಶಿ ಅಣಿಯಾಗಿದ್ದಾರೆ.

ವರದಿ: ಎಚ್‌.ಮಾರುತಿ. ಬೆಂಗಳೂರು

ಟಿ20 ವರ್ಲ್ಡ್‌ಕಪ್ 2024