ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಭಾರೀ ಮಳೆ ನಿರೀಕ್ಷೆ; ಬೆಂಗಳೂರಲ್ಲೂ ಗುಡುಗು ಸಹಿತ ಮಳೆ
ಕರ್ನಾಟಕದ ಕರಾವಳಿ ಭಾಗದಲ್ಲಿ ಇನ್ನೂ ಮಳೆ ಪ್ರಮಾಣ ಕಡಿಮೆಯಾಗಿಲ್ಲ. ಬುಧವಾರವೂ ಭಾರೀ ಮಳೆಯಾಗುವ ಸೂಚನೆಯಿದ್ದು, ಎರಡು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು: ಕಳೆದ ಒಂದು ವಾರದಿಂದ ಸತತವಾಗಿ ಕರಾವಳಿ ಭಾಗದಲ್ಲಿ ಮಳೆ ಸುರಿಯುತ್ತಿರುವ ನಡುವೆ ಬುಧವಾರವೂ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದ್ದು ಎರಡೂ ಜಿಲ್ಲೆಗಳಲ್ಲಿ ಯಲ್ಲೋ ಅನ್ನು ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ. ಬೆಂಗಳೂರು ನಗರದಲ್ಲೂ ಬುಧವಾರ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು ಎನ್ನುವ ಸೂಚನೆಯನ್ನು ನೀಡಲಾಗಿದೆ. ಮಂಗಳವಾರದಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಕರ್ನಾಟಕದಲ್ಲಿಯೇ ಅತ್ಯಧಿಕ ಮಳೆಯಾಗಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಕೆಲವೆಡೆ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿದೆ.
ಎಲ್ಲೆಲ್ಲಿ ಮಳೆಯಾಗಬಹುದು
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಎರಡೂ ಜಿಲ್ಲೆಗಳಲ್ಲೂ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರೀಯಿಂದ ಸಾಧಾರಣ ಮಳೆಯಾಗಬಹುದು.
ಉತ್ತರ ಒಳನಾಡು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಗುಡುಗು ಸಹಿತ ಆಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಗುರುವಾರವೂ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಶುಕ್ರವಾರದಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಬಹುದು.
ವಿಜಯದಶಮಿ ದಿನದಂದು ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಬೆಂಗಳೂರು ಹವಾಮಾನ
ಬುಧವಾರ ಹಾಗೂ ಗುರುವಾರದಂದು ಬೆಂಗಳೂರಿ ನಗರದಲ್ಲಿ ಮಳೆಯಾಗಲಿದೆ. ಗುಡುಗು ಸಹಿತ ಮಳೆಯೂ ಕೆಲವು ಭಾಗದಲ್ಲಿ ಆಗಬಹುದು. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗಬಹುದು. ಎರಡೂ ದಿನವೂ ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು.
ಎಲ್ಲೆಲ್ಲಿ ಮಳೆಯಾಗಿದೆ
ಕರ್ನಾಟಕದ ಕರಾವಳಿ ಭಾಗದಲ್ಲಿ ಮಂಗಳವಾರವೂ ಮಳೆಯಾಗಿದೆ. ಉಡುಪಿಯ ಕುಂದಾಪುರದಲ್ಲಿ ಅತೀ ಹೆಚ್ಚು 10 ಸೆ.ಮೀ ಮಳೆ ಸುರಿದಿದೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ, ಚಾಮರಾಜನಗರ, ದಕ್ಷಿಣ ಕನ್ನಡದ ಧರ್ಮಸ್ಥಳ, ಬೆಳ್ತಂಗಡಿ, ಮುಲ್ಕಿ, ಉಡುಪಿ ಜಿಲ್ಲೆ ಕೋಟ, ಸಿದ್ದಾಪುರ, ಉಡುಪಿ, ಕಾರ್ಕಳ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಗೋಕರ್ಣ, ಕದ್ರಾ, ಕ್ಯಾಸಲ್‌ರಾಕ್, ಗೇರುಸೊಪ್ಪ, ಸಿದ್ದಾಪುರ, ಹೊನ್ನಾವರ, ಕಿರವತ್ತಿ, ಬೇಲಿಕೇರಿ, ಶಿರಾಲಿ, ಕಾರವಾರ, ಕಿರವತ್ತಿ, ಚಿಕ್ಕಮಗಳೂರಿನ ಕಮ್ಮರಡಿ, ಕಳಸ, ಕಡೂರು, ಚಿಕ್ಕಮಗಳೂರು, ಕೊಡಗಿನ ನಾಪೊಕ್ಲು, ಕೋಲಾರ, ಶಿವಮೊಗ್ಗದ ಆಗುಂಬೆ, ತ್ಯಾಗರ್ತಿ, ಬೆಳಗಾವಿ ಜಿಲ್ಲೆ ಲೋಂಡಾ, ಕಲಬುರಗಿ ಜಿಲ್ಲೆಯ ಚಿಂಚೋಳಿ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಳೆಯಾಗಿದೆ.
ಹವಾಮಾನ ಕುಸಿತ
ಕರ್ನಾಟಕದ ಕರಾವಳಿ, ಉತ್ತರ ಕರ್ನಾಟಕದ ಕೆಲವೆಡೆ ಉಷ್ಣಾಂಶ ಕುಸಿತವಾಗಿದೆ. ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲಿ ಅತಿ ಹೆಚ್ಚು -6.3 ಡಿಗ್ರಿ ಉಷ್ಣಾಂಶ ಕುಸಿತ ಕಂಡು ಕನಿಷ್ಠ ಉಷ್ಣಾಂಶ 17.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯಪುರದಲ್ಲಿ -2.5 ಡಿಗ್ರಿ ಕುಸಿತ ಕಂಡು 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಕಂಡು ಬಂದಿದೆ. ಚಿಕ್ಕಮಗಳೂರಿನಲ್ಲೂ -2.7 ಡಿಗ್ರಿ ಕುಸಿತ ಕಂಡು ಕನಿಷ್ಠ ಉಷ್ಣಾಂಶವು 15.6 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಮಡಿಕೇರಿಯಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣವು 19.8 ಡಿಗ್ರಿ ಸೆಲ್ಸಿಯಸ್ ಇತ್ತು.