ಪಿಎಸ್ಐ ಪರೀಕ್ಷೆ ಅಕ್ಟೋಬರ್ 3ರಂದು ನಡೆಸಲು ನಿರ್ಧಾರ; ಮಹತ್ವದ ಸಭೆ ಬಳಿಕ ಜಿ ಪರಮೇಶ್ವರ್​ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  ಪಿಎಸ್ಐ ಪರೀಕ್ಷೆ ಅಕ್ಟೋಬರ್ 3ರಂದು ನಡೆಸಲು ನಿರ್ಧಾರ; ಮಹತ್ವದ ಸಭೆ ಬಳಿಕ ಜಿ ಪರಮೇಶ್ವರ್​ ಮಾಹಿತಿ

ಪಿಎಸ್ಐ ಪರೀಕ್ಷೆ ಅಕ್ಟೋಬರ್ 3ರಂದು ನಡೆಸಲು ನಿರ್ಧಾರ; ಮಹತ್ವದ ಸಭೆ ಬಳಿಕ ಜಿ ಪರಮೇಶ್ವರ್​ ಮಾಹಿತಿ

Karnataka PSI Exam 2024: ಪಿಎಸ್ಐ ಪರೀಕ್ಷೆಯನ್ನು ಅಕ್ಟೋಬರ್ 3ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ರಾಜ್ಯ ಪೊಲೀಸ್ ಇಲಾಖೆ ಮಹತ್ವ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರೇ ಮಾಹಿತಿ ನೀಡಿದ್ದಾರೆ.

ಪಿಎಸ್​​ಐ ಪರೀಕ್ಷೆ ಮುಂದೂಡಿಕೆ ಕುರಿತು ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಪಿಎಸ್​​ಐ ಪರೀಕ್ಷೆ ಮುಂದೂಡಿಕೆ ಕುರಿತು ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

ಬೆಂಗಳೂರು: ಪಿಎಸ್​ಐ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರ ಗುಡ್​ನ್ಯೂಸ್ ನೀಡಿದೆ. ಸೆಪ್ಟೆಂಬರ್​​ 28ಕ್ಕೆ ನಿಗದಿಯಾಗಿದ್ದ ಪಿಎಸ್​​ಐ ಪರೀಕ್ಷೆಯನ್ನು (Karnataka PSI Exam 2024) ಅಕ್ಟೋಬರ್​​ 3ರಂದು ನಡೆಸಲು ಸರ್ಕಾರ ತೀರ್ಮಾನಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority)ದ ನಿರ್ದೇಶಕರು ಮತ್ತು ಪೊಲೀಸ್ ಇಲಾಖೆ (Police Department)ಯ ಉನ್ನತ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ನಡೆಸಿದ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwara), ಪಿಎಸ್​ಐ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೆಇಎ 402 ಪಿಎಸ್ಐ ಹುದ್ದೆಗಳಿಗೆ ಸೆಪ್ಟೆಂಬರ್ 22ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ನಂತರ ಮತ್ತೆ ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿತ್ತು. ಇದೀಗ ಅಕ್ಟೋಬರ್ 3ರಂದು ನಡೆಸಲು ತೀರ್ಮಾನ ತೆಗೆದುಕೊಂಡಿರುವುದಾಗಿ ಪರಮೇಶ್ವರ್​ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅವರೇ ಖುದ್ದು ಸ್ಪಷ್ಟನೆ ಕೊಟ್ಟಿದ್ದು, ಶೀಘ್ರದಲ್ಲೇ ಕೆಇಎ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪಿಎಸ್ಐ ಪರೀಕ್ಷೆ ಅಕ್ಟೋಬರ್ 3ಕ್ಕೆ

ನಾನು ಬೆಳಿಗ್ಗೆ (ಸೆಪ್ಟೆಂಬರ್​​ 13) ಮಾತನಾಡುವಾಗ ಸೆಪ್ಟೆಂಬರ್​​ 28ರಂದು ಪರೀಕ್ಷೆ ನಡೆಸುವುದಾಗಿ ಹೇಳಲಾಗಿತ್ತು. ಆದರೆ ಆ ದಿನವೂ ಯುಪಿಎಸ್‌ಸಿ ಪರೀಕ್ಷೆ ಇರುವ ಕಾರಣ ಮತ್ತೊಂದು ದಿನಾಂಕದಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಆ ದಿನ ಯುಪಿಎಸ್‌ಸಿ ಇಂಗ್ಲೀಷ್ ಕಡ್ಡಾಯ ಪರೀಕ್ಷೆ ಇದೆ. ಹಾಗಾಗಿ ಸೆ. 28ರಂದು ನಿಗದಿಯಾಗಿದ್ದ 402 ಪಿಎಸ್ಐ ಹುದ್ದೆಗಳ ಪರೀಕ್ಷೆ ಮುಂದೂಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದೀಗ ಕೆಇಎ ಅವರೊಂದಿಗೆ ಚರ್ಚಿಸಿ ಅಕ್ಟೋಬರ್ 3ರಂದು ನಡೆಸಲು ನಿರ್ಧರಿಸಲಾಗಿದೆ. ಕೆಇಎ ಅವರು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಇಲಾಖಾವಾರು ಪರಿಶೀಲನೆ ನಡೆಸಲಾಗಿದೆ ಎಂದು ಪರಮೇಶ್ವರ್​​ ತಿಳಿಸಿದ್ದಾರೆ. ಇದು ಮೊದಲ ಸಭೆ ಆಗಿರುವುದರಿಂದ ತೀರ್ಮಾನಕ್ಕೆ ಬಂದಿಲ್ಲ. ಎಲ್ಲ ಪ್ರಕರಣಗಳನ್ನು ಪರಿಶೀಲಿಸಿದ್ದೇವೆ. ಹೊಸದಾಗಿ ತನಿಖೆ ಆಗಬೇಕಿರುವುದನ್ನು ಗಮನಿಸಿದ್ದೇವೆ. ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಸಚಿವ ಸಂಪುಟಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.

ವಿರೋಧ ಪಕ್ಷದ ನಾಯಕರ ಹೇಳಿಕೆಗಳಿಗೆ ನಾನು ಏನನ್ನು ಹೇಳಲು ಹೋಗುವುದಿಲ್ಲ. ಅವರು ಏನೇ ಹೇಳಿದರು ಕೆರಳುವುದಿಲ್ಲ. ಸರ್ಕಾರದಲ್ಲಿ ನನಗೆ ಏನು ಜವಾಬ್ದಾರಿ ಕೊಟ್ಟಿದ್ದಾರೆ, ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ಆ‌ ಕೆಲಸವನ್ನು ಮಾಡುತ್ತಿದ್ದೇನೆ. ನನಗೆ ಇದೆಲ್ಲ‌ ಹೊಸತೇನಲ್ಲ. ಮೂರು ಬಾರಿ ಗೃಹ ಸಚಿವನಾಗಿ‌ ಕೆಲಸ‌ ಮಾಡಿದ್ದೇನೆ. ನನ್ನ ಸಾಮಾರ್ಥ್ಯ ರಾಜ್ಯದ ಜನತೆಗೆ ಗೊತ್ತಿದೆ. ನಾನು ಯಾವ ಇಲಾಖೆಯನ್ನು ನಿಭಾಯಿಸಿದ್ದೇನೆ, ಎಲ್ಲ‌ ಸಂದರ್ಭದಲ್ಲಿ ಕೂಡ ನನ್ನ ಸಾಮರ್ಥ್ಯ ಆಯಾ ಇಲಾಖೆಯವರಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಹೇಮಂತ್ ನಿಂಬಾಳ್ಕರ್ ವರ್ಗ; ಪರಂ ಹೇಳಿದ್ದೇನು?

ನಾವೇನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಕಾನೂನು ಬಾಹಿರವಾಗಿ ಕೆಲವು ಪ್ರಕರಣಗಳು ನಡೆದಿವೆ. ಅದನ್ನು ಜನರಿಗೆ ತಿಳಿಸಲು ಚರ್ಚಿಸುತ್ತೇವೆ ಅಂದ ತಕ್ಷಣ‌ ದ್ವೇಷದ ರಾಜಕಾರಣ ಎನ್ನುತ್ತಿದ್ದಾರೆ. ಕೆಲವು ಹಗರಣಗಳ‌ ತನಿಖೆ ಮುಡಾಕ್ಕಿಂತ ಮುಂಚೆಯೇ ನಡೆಯುತ್ತಿವೆ ಎಂದರು. ಗುಪ್ತಚರ ದಳಕ್ಕೆ ಹೇಮಂತ್ ನಿಂಬಾಳ್ಕರ್ ವರ್ಗಾವಣೆ ಕುರಿರು ಪ್ರತಿಕ್ರಿಯಿಸಿ, ಗುಪ್ತಚರ ದಳ ಇಲಾಖೆ ಮುಖ್ಯಮಂತ್ರಿಯವರಿಗೆ ಬರುತ್ತದೆ. ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಯಾರ ಮೇಲೆ ಕಾನ್ಫಿಡೆನ್ಸ್ ಇರುತ್ತದೆಯೋ ಅಂತವರನ್ನು ತೆಗೆದುಕೊಂಡಿರುತ್ತಾರೆ ಎಂದು ಹೇಳಿದ್ದಾರೆ.

Whats_app_banner