ಕನ್ನಡ ಸುದ್ದಿ / ಕರ್ನಾಟಕ /
ಫಲಿತಾಂಶ ವಿಶ್ಲೇಷಣೆ: ಸಿದ್ದರಾಮಯ್ಯ, ಯಡಿಯೂರಪ್ಪ, ಎಚ್ಡಿಕೆ, ಡಿಕೆಶಿಗೆ ಮತದಾರ ಕೊಟ್ಟ ಸಂದೇಶವೇನು
Karnataka Result: ಕರ್ನಾಟಕದ ಲೋಕಸಭೆ ಚುನಾವಣೆ ಫಲಿತಾಂಶ ಈ ನಾಲ್ವರಿಗೆ ಸಂದೇಶವನ್ನಂತೂ ನೀಡಿದೆ. ಯಾರಿಗೆ ಮತ್ತು ಏನು ಸಂದೇಶ.. ಇಲ್ಲಿದೆ ಫಲಿತಾಂಶ ವಿಶ್ಲೇಷಣೆ.
ಸಿದ್ದರಾಮಯ್ಯ, ಡಿಕೆಶಿವಕುಮಾರ್, ಯಡಿಯೂರಪ್ಪ, ಕುಮಾರಸ್ವಾಮಿ ಅವರಿಗೆ ಚುನಾವಣೆ ಸಂದೇಶವನ್ನಂತೂ ರವಾನಿಸಿದೆ.
ಯಾವುದೇ ಚುನಾವಣೆ ಎಂದರೆ ಮತದಾರ ಸುಮ್ಮನೇ ಮತ ಹಾಕುವುದಿಲ್ಲ. ಅದರ ಹಿಂದೆ ಆಯಾ ಪಕ್ಷಗಳ ಮುಖ್ಯಸ್ಥರಿಗೆ ಒಂದು ಸಂದೇಶ ಇದ್ದೇ ಇರುತ್ತದೆ. ನಿಮ್ಮ ಆಡಳಿತ, ನಡವಳಿಕೆ. ನೀತಿ ನಿರೂಪಣೆ, ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಎದುರಿಸಿದ ರೀತಿ, ಅದಕ್ಕೆ ಬಳಸಿದ ಮಾರ್ಗಗಳನ್ನು ಗಮನಿಸಿ ಮತದ ಹಕ್ಕಿನ ಮೂಲಕ ಉತ್ತರ ನೀಡುತ್ತದೆ. ಒಟ್ಟಾರೆ ಫಲಿತಾಂಶದಲ್ಲಿ ಅದು ಅಡಗಿರುತ್ತದೆ. ಕರ್ನಾಟಕದಲ್ಲೂ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ( CM Siddaramaiah), ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್( DCM DK Shivakumar) , ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ( BS Yeddyurappa), ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ( HD Kumaraswamy) ಅವರು ಪ್ರಮುಖರು. ಇಲ್ಲಿದೆ ಆ ಅಂಶಗಳು.
ಸಿದ್ದರಾಮಯ್ಯ
- ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳು ಕಳೆದ ಬಾರಿ ನೀಡಿದಷ್ಟು ಮತವನ್ನು ತಂದುಕೊಟ್ಟಿಲ್ಲ. ಗ್ಯಾರಂಟಿ ಯೋಜನೆ ಪರಿಣಾಮಕಾರಿ ಜಾರಿ ಹಾಗೂ ಅರ್ಹರಿಗೆ ತಲುಪುವಂತೆ ನೋಡಬೇಕು ಎನ್ನುವ ಸಂದೇಶವನ್ನು ಸಾರಿದೆ.
- ಸಿದ್ದರಾಮಯ್ಯ ಅವರು ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದರು. ಇದರಲ್ಲಿ ಗೆದ್ದಿರುವುದು ಕೊಪ್ಪಳ, ಚಿಕ್ಕೋಡಿ, ಚಾಮರಾಜನಗರ, ರಾಯಚೂರು, ಬಳ್ಳಾರಿ ಮಾತ್ರ. ಉಳಿದ ಕಡೆ ಗೆಲ್ಲಲು ಆಗಿಲ್ಲ. ದಾವಣಗೆರೆಯಲ್ಲಿ ಬೇರೆಯವರ ಪರ ಇದ್ದರೂ ಅಲ್ಲಿ ಶಾಮನೂರು ಕುಟುಂಬ ಗೆದ್ದಿದೆ.
- ತವರು ಕ್ಷೇತ್ರ ಮೈಸೂರಿನಲ್ಲಿ ಪ್ರತಿಷ್ಠೆಯಿಂದಲೇ ಅಭ್ಯರ್ಥಿಯನ್ನಾಗಿ ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿದ್ದರು. ಮೊದಲಿನಿಂದಲೂ ರಾಜವಂಶಸ್ಥರ ವಿಚಾರವಾಗಿ ಭಿನ್ನ ಅಭಿಪ್ರಾಯಗಳನ್ನು ಇಟ್ಟುಕೊಂಡು ಬಂದಿರುವ ಸಿದ್ದರಾಮಯ್ಯ ಅವರಿಗೆ ಮೈಸೂರು ಎಂದರೆ ರಾಜವಂಶಸ್ಥರ ಊರು ಎನ್ನುವ ಸಂದೇಶವನ್ನೂ ರವಾನಿಸಿದೆ.
ಡಿಕೆಶಿ
- ಡಿಕೆಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಹಲವು ಕಡೆ ಹಠ ಹಿಡಿದು ಟಿಕೆಟ್ ಕೊಡಿಸಿದ್ದರು. ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಟಿಕೆಟ್ ಕೊಡಿಸಿದ್ದರು. ಇದರಲ್ಲಿ ದಾವಣಗೆರೆ, ಹಾಸನದಲ್ಲಿ ಮಾತ್ರ. ಅವರಿಗೂ ಭಾರೀ ಹಿನ್ನಡೆಯೇ ಆಗಿದೆ.
- ವಿಶೇಷವಾಗಿ ಅವರ ಸಹೋದರ ಡಿ.ಕೆ.ಸುರೇಶ್ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಭಾರೀ ಅಂತರದಲ್ಲಿಸೋತಿರುವುದು ಕೂಡ ಮರ್ಮಾಘಾತವನ್ನೂ ನೀಡಿದೆ. ಅಧಿಕಾರದ ವೇಳೆ ನಡುವಳಿಕೆಯ ಮುಖ್ಯವಾಗುತ್ತದೆ ಎನ್ನುವ ಸಂದೇಶ ಸಾರಿದ್ದಾರೆ.
- ಡಿಕೆಶಿ ಆಪ್ತ ಬಣದ ಲಕ್ಷ್ಮಿ ಹೆಬ್ಬಾಳಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳಕರ್‌ಗೆ ಟಿಕೆಟ್ ನೀಡಿದ್ದು. ಅಲ್ಲಿಯೂ ಸೋಲಾಗಿರುವುದು ಕೂಡ ಹಿನ್ನಡೆಯನ್ನುಂಟು ಮಾಡಿದೆ.
- ಇನ್ನು ಪೆನ್‌ಡ್ರೈವರ್ ವಿಚಾರದಲ್ಲಿ ಡಿಕೆಶಿವಕುಮಾರ್ ಇರುವ ಪಾತ್ರದ ಕುರಿತು ಗಂಭೀರವಾಗಿಯೇ ಆರೋಪಗಳು ಕೇಳಿ ಬಂದಿದ್ದವು. ಇಂತಹ ವಿಚಾರದಲ್ಲಿ ಸೂಕ್ಷ್ಮತೆ ಮುಖ್ಯ ಫಲಿತಾಂಶದ ಮೂಲಕ ಮತದಾರ ಎಚ್ಚರಿಕೆ ಸಂದೇಶ ನೀಡಿದಂತಿದೆ.
ಬಿಎಸ್ ವೈ
- ಬಿಜೆಪಿಯಲ್ಲಿ ತಮ್ಮ ಬಿಗಿ ಹಿಡಿತದ ಮೂಲಕ ಹೆಚ್ಚು ಸ್ಥಾನ ಪಡೆಯಲು ಮುಂದಾದ ಯಡಿಯೂರಪ್ಪ ಅವರಿಗೆ ನಿರೀಕ್ಷೆಯಷ್ಟು ಸ್ಥಾನಗಳನ್ನು ನೀಡಿಲ್ಲ. ಅವರ ಪುತ್ರ ವಿಜಯೇಂದ್ರ ಅವರಿಗೆ ಅಧಿಕಾರ ನೀಡಿದರೂ ಹೆಚ್ಚು ಸ್ಥಾನ ಪಡೆಯಲು ಆಗಿಲ್ಲ.
- ತಮ್ಮ ಆಪ್ತ ಬಳಗಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಹಲವು ಕಡೆ ಸೋಲಾಗಿದೆ. ಬೀದರ್, ಕಲಬುರಗಿ, ಬಳ್ಳಾರಿ, ಚಾಮರಾಜನಗರ ಸಹಿತ ಹಲವು ಕಡೆಗೆ ಸೋಲಾಗಿದೆ. ತಮ್ಮದೇ ಹಿಡಿತ ಅಸಾಧ್ಯ ಎನ್ನುವ ಸಂದೇಶವನ್ನು ಫಲಿತಾಂಶ ಸಾರಿದೆ.
- ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ , ಹಿಂದಿನ ಲೋಕಸಭೆ ಚುನಾವಣೆ ಫಲಿತಾಂಶ ಗಮನಿಸಿದರೆ ಸುಮಾರು ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಇದು ಕೂಡ ಅವರ ಹಿರಿತನಕ್ಕೆ ಸಿಕ್ಕ ಫಲಿತಾಂಶ ಅಲ್ಲ ಎನ್ನುವುದನ್ನು ಹೇಳುತ್ತಿದೆ.
ಎಚ್‌ಡಿಕೆ
- ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ ಅವರು ಹಿಂದೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಫಲವಾಗಿ ಪಕ್ಷಕ್ಕೆ ಹಿನ್ನಡೆಯಾಗಿತ್ತು.ತಂದೆ, ಮಗ ಸೋತಿದ್ದರು. ಈ ಬಾರಿ ಬಿಜೆಪಿ ಜತೆಗೆ ಹೋಗಿದ್ದರಿಂದ ಎರಡು ಕ್ಷೇತ್ರದಲ್ಲಿ ಗೆದ್ದಿದ್ದು. ಭಾವ ಡಾ.ಮಂಜುನಾಥ್ ಕೂಡ ಜಯಶಾಲಿಯಾಗಿದ್ದಾರೆ. ಮೈತ್ರಿ ವಿಚಾರದಲ್ಲಿ ನಿರ್ಣಯ ಹೇಗಿರಬೇಕು ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
- ಜೆಡಿಎಸ್ ಕುಟುಂಬಕ್ಕೆ ಸೀಮಿತ ಪಕ್ಷ ಎನ್ನುವ ಆರೋಪಗಳಿದ್ದರೂ ಜನಮುಖಿ ಕೆಲಸಗಳಿಂದಲೂ ಗಮನ ಸೆಳೆದಿದೆ. ಅದನ್ನು ಬಿಡದೇ ಪಕ್ಷ ಸಂಘಟನೆಗೆ ಒತ್ತು ನೀಡಿ ಎನ್ನುವುದನ್ನು ಸಾರಿದೆ.
- ಕುಟುಂಬದ ಹಿಡಿತ ಒಂದು ಕಡೆಯಾದರೂ ಲೈಂಗಿಕ ದೌರ್ಜನ್ಯದಂತಹ ಚಟುವಟಿಕೆಗಳನ್ನು ಸಹಿಸಿಕೊಳ್ಳುವುದಿಲ್ಲ ಎನ್ನವುದನ್ನೂ ಹಾಸನದ ಮತದಾರರು ಸಾರಿದ್ದಾರೆ.