HD Devegowda: ಸಿದ್ದರಾಮಯ್ಯ, ಡಿಕೆಶಿ ವಿರುದ್ದ ದೇವೇಗೌಡರ ಮಾತಿನ ಚಾಟಿ, ಹೇಗಿತ್ತು ಗೌಡರ ಘರ್ಜನೆ
ಮೈಸೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಜೆಡಿಎಸ್ ಜಂಟಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್ ಡಿದೇವೇಗೌಡ ಅವರು ಗಟ್ಟಿಯಾಗಿಯೇ ಮಾತನಾಡಿದರು.
ಮೈಸೂರು: ಮೈಸೂರಿನಲ್ಲಿ ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ದ ಟೀಕಾ ಪ್ರಹಾರವನ್ನೇ ನಡೆಸಿದರು. ಆರೂವರೆ ಕೋಟಿ ಜನರ ಪ್ರತಿನಿಧಿ ನಮ್ಮ ಮುಖ್ಯಮಂತ್ರಿ ಹೇಗೆ ನಡೆದುಕೊಳ್ಳುತ್ತಾರೆ. ಅದೇ 150 ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಿ ನರೇಂದ್ರ ಮೋದಿ ಹೇಗೆ ನಡೆದುಕೊಳ್ಳುತ್ತಾರೆ ನೋಡಿ ಎಂದು ಸಿದ್ದರಾಮಯ್ಯ ಅವರ ವಿರುದ್ದ ತಮ್ಮದೇ ಮಾತಿನ ಶೈಲಿಯಲ್ಲಿ ತಿವಿದರು. ಅಲ್ಲದೇ ಪಕ್ಷದ ಹೈ ಕಮಾಂಡ್‌ಗೆ ಹಣ ಕಳುಹಿಸುವ ಉದ್ದೇಶದಿಂದಲೇ ಬೆಂಗಳೂರಿನ ಪ್ರಮುಖ ಇಲಾಖೆಗಳ ಖಾತೆ ಹಾಗೂ ನೀರಾವರಿ ಇಲಾಖೆಯನ್ನು ಡಿಕೆಶಿವಕುಮಾರ್ ಪಡೆದುಕೊಂಡಿದ್ದಾರೆ ಎಂದೂ ದೇವೇಗೌಡರು ಆರೋಪಿಸಿದರು.
91 ವರ್ಷ ಇಳಿ ವಯಸ್ಸಿನಲ್ಲೂ ಮೈಸೂರಿನಲ್ಲಿ ಬೃಹತ್ ರಾಜಕೀಯ ವೇದಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾನುವಾರ ಹಂಚಿಕೊಂಡ ದೇವೇಗೌಡರು ತೀಕ್ಷ್ಣವಾಗಿಯೇ ಮಾತನಾಡಿದರು. 20 ನಿಮಿಷದ ಭಾಷಣದಲ್ಲ ಮೋದಿ ಅವರನ್ನು ಹೊಗಳಿದರು. ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಅವರ ವಿರುದ್ದ ಮಾತಿನ ಬಾಣ ಹರಿಸಿದರು. ಮೈಸೂರಿನಲ್ಲಿ ರಾಜವಂಶದ ಕುಡಿಯನ್ನು ಏಕೆ ಗೆಲ್ಲಿಸಬೇಕು ಎಂದು ಹೇಳಿದರು. ನನ್ನ ಈ ಇಳಿ ವಯಸ್ಸಿನಲ್ಲಿ ಜೆಡಿಎಸ್ ಯಾಕೆ ಬಿಜೆಪಿ ಜತೆಗೆ ಸೇರಿಕೊಂಡಿತು ಎಂದು ಗೌಡರು ಸ್ಪಷ್ಟನೆ ನೀಡಿದರು.
ನನ್ನ ಆರು ದಶಕಗಳ ರಾಜಕೀಯ ಇತಿಹಾಸದಲ್ಲಿ ಈ ರೀತಿ ಕೆಲಸ ಮಾಡುವ ಪ್ರಧಾನಿ ನೋಡಿರಲಿಲ್ಲ. ಹತ್ತು ವರ್ಷ ಆಡಳಿತ ನಡೆಸಿ ಇಡೀ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ನಾನು ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಬೇಕಾಗಿತ್ತು. ಮಂಡಿ ನೋವಿನ ಕಾರಣಕ್ಕೆ ಆಗಲಿಲ್ಲ. ಅವರು ದೇಶಕ್ಕೋಸ್ಕರವೇ ಅವರು ಕೆಲಸ ಮಾಡುತ್ತಿದ್ದಾರೆ. ಅವರು 150 ಕೋಟಿ ಜನರ ಪ್ರತಿನಿಧಿಯಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಹೊಗಳಿಕೆಗೆ ಈ ಮಾತು ಹೇಳುತ್ತಿಲ್ಲ. ಅವರ ಪಕ್ಕದಲ್ಲಿಯೇ ಕುಳಿತು ಇಲ್ಲಿ ಈ ಮಾತು ಹೇಳಲು ಸಂತಸವಾಗುತ್ತಿದೆ ಎಂದು ಹೇಳಿದರು.
ಆದರೆ ಕರ್ನಾಟಕದಲ್ಲಿ ಆರೂವರೆ ಕೋಟಿಯ ಇಬ್ಬರು ಪ್ರತಿನಿಧಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ನೋಡಿ. ಇಬ್ಬರು ಮಹಾನುಭಾವರು ಇದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಹೆಸರು ಹೇಳದೇ ಕಾಲೆಳದರು ಗೌಡರು. ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಪ್ರಮುಖ ಇಲಾಖೆಗಳ ಖಾತೆ ತಮ್ಮ ಬಳಿ ಇಟ್ಟುಕೊಂಡರು. ನೀರಾವರಿ ಇಲಾಖೆಯನ್ನು ಪಡೆದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢಕ್ಕೆ ಇಲ್ಲಿಂದಲೇ ದುಡ್ಡು ಹೋಗಬೇಕಿತ್ತು. ಅದಕ್ಕಾಗಿಯೇ ಈ ಖಾತೆ ಪಡೆದುಕೊಂಡರಾ ಎಂದು ಟೀಕಾ ಪ್ರಹಾರವನ್ನು ನಡೆಸಿದರು.
ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಪಂಚರತ್ನ ಹಾಗೂ ಜಲಧಾರೆ ಯೋಜನೆಯನ್ನು ಘೋಷಿಸಿ ಜನರಲ್ಲಿ ವಿಶ್ವಾಸ ತುಂಬಿದರು. ಆದರೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿತು ಎಂದು ಆರೋಪಿಸಿದರು.
ಜೀವನದ ಕೊನೆ ದಿನಗಳಲ್ಲಿ ಇವರೇಕೆ ಬಿಜೆಪಿಯೊಂದಿಗೆ ಹೋದರು ಎಂದು ಕೆಲವರು ಮಾತನಾಡಿದರು. ಜೆಡಿಎಸ್ ಹೊಂದಾಣಿಕೆ ಬೇಕಿತ್ತೇ ಎಂದರು. ಆದರೆ ನಮ್ಮ ಪಕ್ಷಕ್ಕಿಂತ ದೇಶದ ಉಳಿವಿಗೋಸ್ಕರವೇ ಈ ಮೈತ್ರಿ ಮಾಡಿಕೊಂಡಿದ್ದೇವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಭಾರತದ ಪರ ಕೆಲಸಗಳಿಂದಲೇ ನಾವು ಆ ಪಕ್ಷದ ಜತೆಗೆ ಸೇರಿದ್ದೇವೆ ಎಂದು ದೇವೇಗೌಡರು ಹೇಳಿದರು.
ಮೈಸೂರಿಗೆ ಮಹಾರಾಜರ ಕೊಡುಗೆ ದೊಡ್ಡದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ಪ್ರಗತಿಗೆ ಮಾಡಿದ ಕೆಲಸವನ್ನು ಮರೆಯುವ ಹಾಗಿಲ್ಲ. ಮಹಾರಾಜರನ್ನು ನಾವು ನೆನಪಿಸಿಕೊಳ್ಳಬೇಕು. ರಾಜವಂಶಸ್ಥದ ಯದುವೀರ್ ಒಡೆಯರ್ ಅವರು ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.