Mangalore News: ಡಿವೈಎಫ್ ಐ 12ನೇ ರಾಜ್ಯ ಸಮ್ಮೇಳನಕ್ಕೆ ಟಿಪ್ಪು ಕಟೌಟ್: ತೆರವುಗೊಳಿಸಲು ಮಂಗಳೂರು ಪೊಲೀಸ್ ನೋಟಿಸ್
Tippu Issue ಮಂಗಳೂರಿನಲ್ಲಿ ಮುಂದಿನವಾರ ನಡೆಯಲಿರುವ ಡಿವೈಎಫ್ಐ ರಾಜ್ಯ ಸಮ್ಮೇಳನದ ಸ್ಥಳದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿದ್ದು, ಅದರನ್ನು ತೆರವುಗೊಳಿಸುವಂತೆ ಸಂಘಟಕರಿಗೆ ಮಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ಧಾರೆ.ವರದಿ: ಹರೀಶ್ ಮಾಂಬಾಡಿ, ಮಂಗಳೂರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಲತೀರದ ತೊಕ್ಕೊಟ್ಟಿನಲ್ಲಿ ನಡೆಯಲಿರುವ ಡಿವೈಎಫ್ ಐ 12 ನೇ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಹರೇಕಳದ ಡಿವೈಎಫ್ ಐ ಕಚೇರಿ ಬಳಿ ಟಿಪ್ಪು ಸುಲ್ತಾನ್ ನ ಬೃಹತ್ ಕಟೌಟ್ ನಿರ್ಮಿಸಲಾಗಿದ್ದು ಅದನ್ನು ತೆರವುಗೊಳಿಸುವಂತೆ ಕೊಣಾಜೆ ಪೊಲೀಸರು ನೋಟೀಸು ನೀಡಿದ್ದಾರೆ.ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಫೆ. 25,26,27 ರಂದು ನಡೆಯಲಿರುವ ಡಿವೈಎಫ್ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಹರೇಕಳದ ಡಿವೈಎಫ್ ಐ ಕಚೇರಿ ಬಳಿಯಲ್ಲೇ ಸಂಘಟನೆ ಕಾರ್ಯಕರ್ತರು ಟಿಪ್ಪು ಸುಲ್ತಾನ್ ನ ಕಾರ್ಡ್ ಬೋರ್ಡ್ ಪ್ರತಿಮೆ ಅಳವಡಿಸಿದ್ದಾರೆ. ಟಿಪ್ಪುವಿನ ಕಟೌಟ್ ಅಳವಡಿಸಲು ಅನುಮತಿ ಪಡೆಯದಿರುವುದರಿಂದ ಕೊಣಾಜೆ ಪೊಲೀಸ್ ಠಾಣಾ ಠಾಣಾಧಿಕಾರಿ ಟಿಪ್ಪು ಕಟೌಟ್ ತೆರವುಗೊಳಿಸಲು ಹರೇಕಳ ಡಿವೈಎಫ್ ಐ ಮುಖಂಡರಿಗೆ ನೋಟಿಸ್ ನೀಡಿದ್ದಾರೆ.
ಕೊಣಾಜೆ ಠಾಣಾಧಿಕಾರಿ ನೋಟೀಸು ನೀಡಿದ್ದು ಹರೇಕಳ ಪಂಚಾಯಿತಿ ಪಿಡಿಒ ರಜೆಯಲ್ಲಿದ್ದ ಕಾರಣ ಕಟೌಟ್ ತೆರವು ಆಗಿಲ್ಲ. ಹರೇಕಳ ಡಿವೈಎಫ್ ಐ ಕಚೇರಿ ಬಳಿಯಲ್ಲೇ ಕಾರ್ಡ್ ಬೋರ್ಡ್ನಿಂದ 6ಅಡಿ ಉದ್ದದ ಟಿಪ್ಪು ಸುಲ್ತಾನ್ ಕಟೌಟ್ ನಿರ್ಮಿಸಲಾಗಿದೆ. ಕಟೌಟ್ ತೆರವುಗೊಳಿಸಲು ಮುಂದಾದ ಕೊಣಾಜೆ ಪೊಲೀಸರ ವಿರುದ್ಧ ಡಿವೈಎಪ್ ಐ ಜಿಲ್ಲಾಧ್ಯಕ್ಷ ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದ್ದು ರಾಜ್ಯದಲ್ಲಿ ಯಾವ ಸರಕಾರ ಇದೆಯೆಂದು ಕಿಡಿಕಾರಿದ್ದಾರೆ. ಟಿಪ್ಪು ,ರಾಣಿ ಅಬ್ಬಕ್ಕ ಸೇರಿದಂತೆ ಯಾರೊಬ್ಬರ ಕಟೌಟ್ ತೆರವುಗೊಳಿಸದಂತೆ ಡಿವೈಎಫ್ ಐ ಕಾರ್ಯಕರ್ತರು ಕಾವಲಿರುತ್ತಾರೆಂದು ಇಮ್ತಿಯಾಝ್ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆರೊಸಾ ಶಾಲೆ ಪ್ರಕರಣ: ತನಿಖೆ ಆರಂಭ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಜೆರೋಸಾ ಶಾಲೆಯ ಶಿಕ್ಷಕಿ ಶ್ರೀರಾಮನಿಗೆ ಅಪಮಾನ ಮಾಡಿದ ಆರೋಪ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ್.ಎಸ್ ಅವರು ತನಿಖೆ ಆರಂಭಿಸಿದ್ದು, ಘಟನೆ ಬಗ್ಗೆ ದಕ್ಷಿಣಕನ್ನಡ ಡಿಡಿಪಿಐ ವೆಂಕಟೇಶ ಸುಬ್ರಾಯ ಪಟಗಾರ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಜೊತೆಗೆ, ದಾಖಲಿಸಲಾಗಿದ್ದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮಕ್ಕಳು ಹಾಗೂ ಪೋಷಕರ ಲಿಖಿತ ಹೇಳಿಕೆಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದಾರೆ.
ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ವಿಚಾರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ ವರದಿ ಮೇಲೆ ಪ್ರಾಥಮಿಕ ತನಿಖೆ ಮುಂದುವರಿದಿದೆ. ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳು ಹಾಗೂ ಪೋಷಕರ ಹೇಳಿಕೆಗಳುನ್ನು ದಾಖಲಿಸಿಕೊಳ್ಳಲಾಗಿದೆ. ಅದೇ ಲಿಖಿತ ಹೇಳಿಕೆಗಳನ್ನು ಐಎಎಸ್ ಅಧಿಕಾರಿ ಡಾ.ಆಕಾಶ್.ಎಸ್ ಅವರಿಗೆ ಶಿಕ್ಷಣ ಅಧಿಕಾರಿಗಳು ಸಲ್ಲಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕಿ ಸಿಸ್ಟರ್ ಪ್ರಭಾ ಬಗ್ಗೆ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮಕ್ಕಳು ಹಾಗೂ ಪೋಷಕರ ನೀಡಿದ ಲಿಖಿತ ಹೇಳಿಕೆಗಳನ್ನು ಶನಿವಾರದಂದು ದಾಖಲಿಸಿದ್ದರು. ಆ ವರದಿ ಆಧರಿಸಿ ಶಾಲೆಯ ಕೆಲ ಶಿಕ್ಷಕರ ಹೇಳಿಕೆಗಳನ್ನೂ ದಾಖಲಿಸಿದ್ದಾರೆ. ಸದ್ಯ ಈ ಎಲ್ಲಾ ಹೇಳಿಕೆಗಳ ಮೇಲೆ ತನಿಖೆ ಮುಂದುವರಿಸಿದ್ದಾರೆ. ತನಿಖೆ ಬಗ್ಗೆ ಮಾತನಾಡಿದ ತನಿಖಾಧಿಕಾರಿ ಡಾ.ಆಕಾಶ್.ಎಸ್, ಈ ಪ್ರಕರಣದ ಕುರಿತು ಸತ್ಯಾನೇಶ್ವನೆಗೆ, ತನಿಖೆ ಮಾಡೋದಕ್ಕೆ ಬಂದಿದ್ದೇನೆ. ತನಿಖೆ ಪ್ರಗತಿಯಲ್ಲಿದೆ. ಹಂತ ಹಂತವಾಗಿ ತನಿಖೆ ನಡೆಸುತ್ತೇನೆ ಎಂದರು.
ನಮ್ಮ ಅಧಿಕಾರಿಗಳಿಂದಲೂ ಪ್ರಾಥಮಿಕ ಮಾಹಿತಿ ಪಡೆದಿದ್ದೇನೆ. ಇನ್ನು ಹೆಚ್ಚಿನ ದಾಖಲೆ, ಮಾಹಿತಿ ಪಡೆಯಬೇಕಿದೆ. ಇದಕ್ಕೆ ಬೇಕಾದ ಪ್ಲ್ಯಾನ್ ಮಾಡಿಕೊಂಡಿದ್ದೇನೆ ಎಂದರು. ಈ ಹಂತದಲ್ಲಿ ವಿಚಾರಣೆ ಕುರಿತು ಏನೂ ಹೇಳಲ್ಲ. ಆದಷ್ಟು ಬೇಗ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಬೇಕಿದೆ. ನಿರಂತರವಾಗಿ ವಿಚಾರಣೆ ನಡೆಯುತ್ತಿತ್ತು. ಎರಡು ದಿನ ಇಲ್ಲೇ ಇದ್ದು ತನಿಖೆ ಮುಂದುವರೆಸುತ್ತೇನೆ. ಈ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಹಾಕಿ ನಿಷ್ಠೆಯಿಂದ ವಿಚಾರಣೆ ನಡೆಸಿ ಸರಿಯಾದ ವರದಿ ಸಲ್ಲಿಸುತ್ತೇನೆ ಎಂದರು.
(ವರದಿ: ಹರೀಶ್ ಮಾಂಬಾಡಿ, ಮಂಗಳೂರು)