ನಿಲ್ಲಿಸಿದ್ದ ವಾಹನ ಏಕಾಏಕಿ ಹಿಂದಕ್ಕೆ ಚಲಿಸಿ ದುರ್ಘಟನೆ, ಮೂರುವರೆ ವರ್ಷದ ಮಗು ಸಾವು; ಬಂಟ್ವಾಳದ ಲೊರೆಟ್ಟೊಪದವಿನಲ್ಲಿ ಘಟನೆ
ಕೆಲವೊಮ್ಮೆ ಅನಾಹುತಗಳು ಹೇಗೆ ನಡೆಯುತ್ತದೆ ಎಂದು ಊಹಿಸಲೂ ಸಾಧ್ಯವಾಗುವುದಿಲ್ಲ. ಬಂಟ್ವಾಳ ತಾಲೂಕಿನ ಲೊರೆಟ್ಟೊಪದವು ಎಂಬಲ್ಲಿ ನಿಂತಿದ್ದ ವಾಹನವೊಂದು ಏಕಾಏಕಿ ಹಿಂದಕ್ಕೆ ಚಲಿಸಿ ಮೂರುವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಫರಂಗಿಪೇಟೆ ಪತ್ತನಬೈಲ್ ನಿವಾಸಿಗಳಾದ ಉನೈಸ್ ಮತ್ತು ಆಶೂರಾ ದಂಪತಿಯ ಮಗಳು ಆಶಿಕಾ ಮೃತ ದುರ್ದೈವಿ. (ವರದಿ: ಹರೀಶ್ ಮಾಂಬಾಡಿ)
ಮಂಗಳೂರು: ನಿಲ್ಲಿಸಿದ್ದ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ, ಗಾಡಿಯ ಹಿಂಬದಿಯಲ್ಲಿ ಆಟವಾಡುತ್ತಿದ್ದ ಪುಟ್ಟ ಮಗು ವಾಹನದಡಿ ಸಿಲುಕಿ ಸಾವನ್ನಪ್ಪಿದ ಘಟನೆ ಬುಧವಾರ ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊಪದವು ಎಂಬಲ್ಲಿ ನಡೆದಿದೆ.
ಫರಂಗಿಪೇಟೆ ಸಮೀಪದ ಪತ್ತನಬೈಲ್ ನಿವಾಸಿಯಾಗಿರುವ ಉನೈಸ್ ಮತ್ತು ಆಶೂರಾ ದಂಪತಿಯ ಮಗಳು ಆಶಿಕಾ ಎಂಬ ಮೂರುವರೆ ವರ್ಷದ ಹೆಣ್ಣುಮಗು ಗಾಡಿ ಅಡಿ ಸಿಲುಕಿ ಸಾವನ್ನಪ್ಪಿದ್ದಾಳೆ.
ಮಗುವಿನ ತಾಯಿಯ ತವರುಮನೆ ಲೊರೆಟ್ಟೊಪದವಿನ ಟಿಪ್ಪುನಗರದಲ್ಲಿದ್ದು, ತಾಯಿಯೊಂದಿಗೆ ಮಗು ಅಲ್ಲಿಗೆ ಬಂದಿತ್ತು. ತಾಯಿಯ ಸಹೋದರ ಟಾಟಾ ಏಸ್ ವಾಹನವನ್ನು ಹೊಂದಿದ್ದು, ಅದನ್ನು ಮನೆಯಂಗಳದಲ್ಲಿ ನಿಲ್ಲಿಸಿ ಹೋಗಿದ್ದರು. ಮಗು ಹೊರಗಡೆ ಆಟವಾಡುತ್ತಿದ್ದು, ಆ ವೇಳೆ ವಾಹನ ಏಕಾಏಕಿ ಹಿಂದಕ್ಕೆ ಚಲಿಸಿದೆ ಎನ್ನಲಾಗಿದೆ. ಇದ್ದಕ್ಕಿದ್ದಂತೆ ಹಿಂದಕ್ಕೆ ಚಲಿಸಿದ ವಾಹನ ಪುಟ್ಟ ಮಗುವಿನ ಮೇಲೆ ಎರಿಗಿದೆ. ಈ ವಿಷಯ ಮನೆಯವರಿಗೆ ಗೊತ್ತಾದ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವಾಹನದ ಅಪಘಾತದಿಂದ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ದಸ್ತಗಿರಿ
ಬಂಟ್ವಾಳ ಗ್ರಾಮಾಂತರ ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಗ್ರಾಮಾಂತರ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಈತನ ಹೆಸರು ಮೊಹಮ್ಮದ್ ಶರೀಫ್ (44).ಪುತ್ತೂರಿನ ಪಾಣಾಜೆ ನಿವಾಸಿ. ಬಂಟ್ವಾಳ ಗ್ರಾಮಾಂತರ ಠಾಣೆಗೆ ಸಂಬಂಧಿಸಿ 2004ರ ನವೆಂಬರ್ 7ರಂದು ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಹಲವಾರು ವಿಳಾಸ, ಬದಲಾವಣೆ ಮಾಡಿಕೊಂಡು ಬಂಧನಕ್ಕೆ ಸಿಗದೆ ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪುತ್ತಿಗೆ ಎಂಬಲ್ಲಿ ವಾಸವಾಗಿದ್ದ ಆಪಾದಿತನನ್ನು ಪತ್ತೆಮಾಡಲು ಬೇರೆ ಬೇರೆ ಆಯಾಮಗಳಿಂದ ಮಾಹಿತಿ ಕಲೆಹಾಕಿ ನವೆಂಬರ್ 6ರಂದು ಕಾಸರಗೋಡಿನಿಂದ ವಶಕ್ಕೆ ಪಡೆಯಲಾಗಿದೆ. ಇತ್ತೀಚಿಗೆ ಕೇರಳದ ಮಂಜೇಶ್ವರ ಪೊಲೀಸ್ ಠಾಣೆಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ ದಸ್ತಗಿರಿ ಆಗಿ ಇತ್ತೀಚಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಮೊಹಮ್ಮದ್ ಶರೀಪ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ಯಚರಣೆಯನ್ನು ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ವಿಜಯಪ್ರಸಾದ್ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ಅವರ ನೇತೃತ್ವದಲ್ಲಿ ಪಿಎಸ್ಐ ಅವರಾದ ಹರೀಶ್ ಎಂ ಆರ್ ಮತ್ತು ಮೂರ್ತಿ ಹಾಗೂ ಸಿಬ್ಬಂದಿ ಹರಿಶ್ಚಂದ್ರ ಮತ್ತು ಗಣೇಶ ಅವರು ಕಾರ್ಯಚರಣೆ ನಡೆಸಿದ್ದಾರೆ.
ವಿಷ ಪದಾರ್ಥ ಸೇವಿಸಿ ಯುವಕ ಆತ್ಮಹತ್ಯೆ
ವಿಷ ಪದಾರ್ಥ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡೇಶಿವಾಲಯದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಕಂಡಿಗ ನಿವಾಸಿ ಗಣೇಶ್(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಗಣೇಶ್ ಅವರು ಸೋಮವಾರ ಮನೆಯಲ್ಲಿಯೇ ಸಂಜೆ ಹುಲ್ಲಿಗೆ ಬಿಡುವ ವಿಷವನ್ನು ಸೇವಿಸಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇವರು ತಂದೆ, ತಾಯಿ, ಸಹೋದರ, ಬಂಧು ಬಳಗವನ್ನು ಅಗಲಿದ್ದಾರೆ.