ಬೆಳ್ತಂಗಡಿ ಅಕ್ರಮ ಕಲ್ಲುಗಣಿಗಾರಿಕೆ ಕೇಸ್; ಆರೋಪಿಗಳ ಬಂಧನ, ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್, 10 ವಿದ್ಯಮಾನಗಳಿವು
ಬೆಳ್ತಂಗಡಿ ಅಕ್ರಮ ಕಲ್ಲುಗಣಿಗಾರಿಕೆ ಕೇಸ್‌ಗೆ ಸಂಬಂಧಿಸಿದ ಆರೋಪಿಗಳ ಬಂಧನವಾದ ಕೂಡಲೇ ಶಾಸಕ ಹರೀಶ್ ಪೂಂಜಾ ಅವರ ಬಿಡುಗಡೆಗೆ ಒತ್ತಾಯಿಸಿದ್ದರು. ಪೊಲೀಸ್ ಠಾಣೆಗೆ ಹೋಗಿ ಹೈಡ್ರಾಮಾ ಸೃಷ್ಟಿಸಿದ್ದರು. ಹೀಗಾಗಿ ಹರೀಶ್ ಪೂಂಜಾ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಈ ಕೇಸ್ ಸಂಬಂಧಿಸಿದ 10 ವಿದ್ಯಮಾನಗಳಿವು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ತಹಸೀಲ್ದಾರ್ ಮತ್ತು ಪೊಲೀಸರು ದಾಳಿ ನಡೆಸಿ, ಇಬ್ಬರ ವಿರುದ್ಧ ದೂರು ದಾಖಲಿಸಿ, ಓರ್ವನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಅಧ್ಯಕ್ಷ ಶಶಿರಾಜ ಶೆಟ್ಟಿ (35) ಪರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಮತ್ತು ಬೆಂಬಲಿಗರು ಆಗಮಿಸಿ, ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದರು. ರಾತ್ರೋರಾತ್ರಿ ಶಾಸಕ ಹರೀಶ್ ಪೂಂಜಾ ಆಗಮಿಸಿ, ಆರೋಪಿ ಪರ ಏರುಧ್ವನಿಯಲ್ಲಿ ಪೊಲೀಸರ ವಿರುದ್ಧ ಮಾತನಾಡುವ ಸಂದರ್ಭ, ಕರ್ತವ್ಯನಿರತ ಪೊಲೀಸರನ್ನು ನಿಂದಿಸಿದ್ದಾರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ, ಶಾಸಕ ಹರೀಶ್ ಪೂಂಜ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಪರ, ವಿರೋಧ ಟೀಕೆಗಳು ವ್ಯಕ್ತವಾಗುತ್ತಿವೆ.
ಅಕ್ರಮ ಕಲ್ಲುಗಣಿಗಾರಿಕೆ; ಪೊಲೀಸ್ ಕೇಸ್ ಮತ್ತು 10 ವಿದ್ಯಮಾನಗಳಿವು
1) ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಪೃಥ್ವಿ ಸಾನಿಕಂ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಅದರಂತೆ ಮೇ.18ರಂದು ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ, ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ, ತಹಸೀಲ್ದಾರ್, ಗ್ರಾಮ ಸಹಾಯಕ, ತಾಲೂಕು ಕಚೇರಿ ಸಿಬ್ಬಂದಿ, ಬೆಳ್ತಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿರುತ್ತಾರೆ.
2) ಅಕ್ರಮ ಗಾಣಿಗಾರಿಕೆ ನಡೆಸಿದ ಸ್ಥಳದಲ್ಲಿ ಗಣಿಗಾರಿಕೆ ಮಾಡಿ ತೆಗೆದಿಟ್ಟ ಕಲ್ಲುಗಳ ರಾಶಿ, ಹಿಟಾಚಿ 1, ಟ್ರಾಕ್ಟರ್ 1, ಮದ್ದುಗುಂಡು ಜೀವಂತ 4 ಹಾಗೂ ಬಳಕೆಯಾಗಿರುವ 4 ಮದ್ದುಗುಂಡು ಪತ್ತೆಯಾಗಿರುತ್ತದೆ. ಸ್ಥಳದಲ್ಲಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸಲಾಗಿ, ಅಕ್ರಮ ಗಣಿಗಾರಿಕೆಯನ್ನು, ಆರೋಪಿಗಳಾದ ಪ್ರಮೋದ್ ಉಜಿರೆ ಹಾಗೂ ಶಶಿರಾಜ್ ಎಂಬವರು ನಡೆಸುತ್ತಿರುವುದು ತಿಳಿದುಬಂದಿರುತ್ತದೆ. ಅಧಿಕಾರಿಗಳು ಸ್ಥಳದಲ್ಲಿದ್ದ ಸ್ಪೋಟಕಗಳನ್ನು ಹಾಗು ಇತರೆ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
3) ಆರೋಪಿಗಳಾದ ಪ್ರಮೋದ್ ಉಜಿರೆ ಹಾಗೂ ಶಶಿರಾಜ್ ಎಂಬುವವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 56/2024, ಕಲಂ: 9B(1)(b) ಸ್ಪೋಟಕ ಕಾಯ್ದೆ 1884 ಕಲಂ 5, ಸ್ಫೋಟಕ ವಸ್ತು ಕಾಯ್ದೆ-1908 ರಂತೆ ಪ್ರಕರಣ ದಾಖಲಾಗಿದೆ.
4) ಎಫ್‌ಐಆರ್ ದಾಖಲಾದ ಬಳಿಕ, ಶಶಿರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಶಿರಾಜ್ ರೌಡಿ ಶೀಟರ್. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.
5) ಅಕ್ರಮ ಕಲ್ಲುಗಣಿಗಾರಿಕೆ ಕೇಸ್‌ನ ಆರೋಪಿಗಳಾದ ಶಶಿರಾಜ್ ಶೆಟ್ಟಿ ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ. ಇದೇ ರೀತಿ ಇನ್ನೊಬ್ಬ ಆರೋಪಿ ಪ್ರಮೋದ್ ಉಜಿರೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ.
6) ಕಲ್ಲು ಕೋರೆ ದಾಳಿ ನೆಪದಲ್ಲಿ ಬಿಜೆಪಿ ಕಾರ್ಯಕರ್ತರ ಬಂಧನವಾಗಿದೆ ಎಂದು ಆರೋಪಿಸಿ ಘಟನೆ ಖಂಡಿಸಿ ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತರ ಜೊತೆ ಬೆಳ್ತಂಗಡಿ ಪೊಲೀಸ್ ಠಾಣೆ ಮುಂಭಾಗ ಶಾಸಕ ಹರೀಶ್ ಪೂಂಜಾ ಪ್ರತಿಭಟನೆ ನಡೆಸಿದರು.
7) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಮೂಲಕ ಸುಳ್ಳು ಕೇಸ್ ದಾಖಲಿಸಿ ಪೊಲೀಸರು ಬಂಧಿಸಿ ಅವರನ್ನು ದಮನಿಸುವ ಕೆಲಸ ನಡೆಯುತ್ತಿದೆ ಎಂದು ಹರೀಶ್ ಪೂಂಜಾ ಆರೋಪಿಸಿದ್ದಾರೆ.
8) ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹರೀಶ್ ಪೂಂಜಾ ಅವರ ರೋಷಾವೇಶದ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಅವರೇ, ಕಲ್ಲು ಕಳ್ಳರ ರಕ್ಷಣೆಗೆ ಪೋಲೀಸರ ಮೇಲೆಯೇ ಗೂಂಡಾಗಿರಿ ನಡೆಸಿರುವ ನಿಮ್ಮ ಶಾಸಕ ಹರೀಶ್ ಪೂಂಜಾ ವರ್ತನೆ ಬಗ್ಗೆ ಏನಂತಿರೀ? ಎಂದು ಪ್ರಶ್ನಿಸಿದೆ.
9) ಬೆಳ್ತಂಗಡಿಯಲ್ಲಿ ಬಿಜೆಪಿ ಪದಾಧಿಕಾರಿಯ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆದು ಕಾನೂನು ಕ್ರಮ ಜರುಗಿಸಿದ ಪೊಲೀಸರ ಮೇಲೆ ಬಿಜೆಪಿಯ ರೌಡಿ ಎಂಎಲ್ಎ ಹರೀಶ್ ಪೂಂಜಾ ದಬ್ಬಾಳಿಕೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿ ಟೀಕಿಸಿದೆ.
10) ಬಂಧಿತ ಪ್ರಮುಖ ಆರೋಪಿ, ಬೆಳ್ತಂಗಡಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶಶಿರಾಜ್ ಪರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಇತರರು ಪೊಲೀಸ್ ಠಾಣೆಗೆ ಬಂದು, ಕಾನೂನು ಬಾಹಿರವಾಗಿ ಆತನ ಬಿಡುಗಡೆಗೆ ಠಾಣಾಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಠಾಣಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದು, ಅವಾಚ್ಯ ಶಬ್ದ ಬಳಸಿ ಬೈದಿದ್ದಾರೆ. ಈ ದುರ್ವರ್ತನೆ ತೋರಿದ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಟಾರ್ಗೆಟ್: ಹರೀಶ್ ಪೂಂಜಾ ಹೇಳೋದೇನು?
ಪೊಲೀಸ್ ತಂಡ ದಾಳಿ ನೆಪದಲ್ಲಿ ಮಧ್ಯರಾತ್ರಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಅವರ ಮನೆಗೆ ತೆರಳಿ ಬಂಧಿಸಿದ್ದು ಸರಿಯಲ್ಲ ಎಂದು ವಾದಿಸಿರುವ ಹರೀಶ್ ಪೂಂಜಾ, ಬೆಳ್ತಂಗಡಿ ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತಿದ್ದು ಯಾರೋ ಹೇಳಿದ್ದಾರೆ ಎಂಬ ನೆಪವೊಡ್ಡಿ ಮಧ್ಯರಾತ್ರಿ ಮನೆಗೆ ನುಗ್ಗಿ ಬಂಧಿಸಿರುವುದು ಖಂಡನೀಯ. ಮನೆಯಲ್ಲಿ ಹೆಂಗಸರು ಮಕ್ಕಳ ಎದುರಲ್ಲಿಯೇ ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.
ತಹಶೀಲ್ದಾರ್ ದೂರು ನೀಡಿದ್ದಾರೆ ಎಂಬ ಕಾರಣವೊಡ್ಡಿ ಅಮಾಯಕನನ್ನು ಯಾವುದೇ ದಾಖಲೆ ಇಲ್ಲದೇ ಬಂಧಿಸಿರುವುದು ತಪ್ಪು ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕು. ಆಮಾಯಕ ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯವಾಗುವುದನ್ನು ಶಾಸಕನಾಗಿ ಸಹಿಸುವ ಪ್ರಶ್ನೆಯೇ ಇಲ್ಲ. ಕೊನೆಯ ಕ್ಷಣದಲ್ಲಿ ಶಶಿರಾಜ್ ಅವರನ್ನು ಕಾಂಗ್ರೆಸ್ ನ ಯಾರೋ ಸೂಚಿಸಿದ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಬಂಧಿಸಿರುವುದನ್ನು ಖಂಡಿಸಿ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸುವ ದೌರ್ಜನ್ಯ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.