Mangaluru News: ಕುಮಾರಪರ್ವತ ಚಾರಣಪ್ರಿಯರ ಅಚ್ಚುಮೆಚ್ಚಿನ ಅನ್ನದಾತ ಗಿರಿಗದ್ದೆ ಮಹಾಲಿಂಗ ಭಟ್ ಇನ್ನಿಲ್ಲ
Mangaluru News: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತ ಚಾರಣಿಗರಿಗೆ ಊಟ, ವಸತಿ ವ್ಯವಸ್ಥೆ ಮಾಡುತ್ತಿದ್ದ ಗಿರಿಗದ್ದೆಯ ಮಹಾಲಿಂಗ ಭಟ್ ನಿಧನರಾಗಿದ್ದಾರೆ. ಕಳೆದ ಕೆಲವರು ದಿನಗಳ ಹಿಂದೆ ಅವರಿಗೆ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಮಂಗಳೂರು: ಕುಮಾರಪರ್ವತ ಚಾರಣಿಗರ ಅನ್ನದಾತ ಗಿರಿಗದ್ದೆ ಮಹಾಲಿಂಗ ಭಟ್ ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಗಿರಿಗದ್ದೆ ಮಹಾಲಿಂಗ ಭಟ್ (67) ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪ ಕುಮಾರ ಪರ್ವತ ಏರುವ ಸಾಹಸಿಗರಿಗೆಲ್ಲರಿಗೂ ಈ ಭಟ್ರು ಬಹಳ ಪರಿಚಯ.
ಮಹಾಲಿಂಗ ಭಟ್ ಕುಮಾರಪರ್ವತ ಚಾರಣಿಗರಿಗೆ ಗಿರಿಗದ್ದೆಯ ಮನೆಯಲ್ಲಿ ವಿಶ್ರಾಂತಿ, ಕಾಫಿ, ಊಟ, ತಿಂಡಿ, ಚಹಾ ವ್ಯವಸ್ಥೆ ಒದಗಿಸುತ್ತಿದ್ದರು. ವಾರದ ಹಿಂದೆ ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಅತ್ತಾವರ ಕೆಎಂಸಿಗೆ ದಾಖಲಾಗಿ ಗುಣಮುಖರಾಗಿದ್ದರು. ಮಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದವರಿಗೆ ಮತ್ತೆ ಎದೆನೋವು ಕಾಣಿಸಿ ಹೃದಯಸ್ಥಂಭನದಿಂದ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಮೂವರು ಸಹೋದರರು, ಇಬ್ಬರು ಸಹೋದರಿಯರು, ಪುತ್ರ, ಮೂವರು ಪುತ್ರಿಯರಿದ್ದಾರೆ.
ಗಿರಿಗದ್ದೆ ಭಟ್ರ ಮನೆ
ಕುಕ್ಕೆಯಿಂದ 13 ಕಿಮೀನಷ್ಟು ಏರುಹಾದಿಯಲ್ಲಿ ಚಾರಣಕ್ಕೆಂದು ನಡೆಯಬೇಕು. ಈ ಹಂತದಲ್ಲಿ ಚಾರಣಿಗರಿಗೆ ಆಶ್ರಯ ನೀಡುವವರು ಗಿರಿಗದ್ದೆಯ ಭಟ್ಟರ ಮನೆಯವರು. ಇಲ್ಲಿ ಮಹಾಲಿಂಗ ಭಟ್ ಮತ್ತು ನಾರಾಯಣ ಭಟ್ ಇದರ ನಿರ್ವಹಣೆ ಹೊತ್ತಿದ್ದಾರೆ. ಕಳೆದ ಮೇ 17ರಂದು ನಿಧನ ಹೊಂದಿದ್ದ ವೆಂಕಟ್ರಮಣ ಭಟ್ಟರು ಪಾಕಶಾಲೆ ಸಹಾಯ ಮಾಡುತ್ತಿದ್ದರು. ಕುಮಾರ ಪರ್ವತ ಚಾರಣದ ಬಹುತೇಕ ಅರ್ಧ ದಾರಿ ಸುಮಾರು 5 ಕಿಮೀ ದೂರ ಸಾಗುವಾಗ ಭಟ್ಟರ ಮನೆ ಸಿಗುತ್ತದೆ. ಹಿಂದಿನ ದಿನ ರಾತ್ರಿ ಅವರ ಮನೆಯಲ್ಲಿ ಉಳಿದುಕೊಂಡು ಬೆಳಗ್ಗೆ ಬೇಗನೆ ಎದ್ದು ಚಾರಣ ಮುಂದುವರಿಸುವವರೂ ಇದ್ದಾರೆ. ಆ ದಿನ ಬೆಟ್ಟದ ತುದಿಗೆ ನೇರವಾಗಿ ಹೋಗಿ, ರಾತ್ರಿ ಅಲ್ಲಿ ಉಳಿದುಕೊಂಡು, ಮರುದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವವರೂ ಇದ್ದಾರೆ. ರಾತ್ರಿ ವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ, ಸರಳ ಶೌಚಾಲಯವೂ ಇದೆ. ಶುಚಿರುಚಿಯಾದ ಊಟದ ವ್ಯವಸ್ಥೆಯನ್ನೂ ಭಟ್ಟರು ಮಾಡುತ್ತಿದ್ದರು.
ಕಲ್ಲುಮಣ್ಣಿನ ಹಾದಿ
ಕಲ್ಲುಮಣ್ಣಿನ ಹಾದಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪೇಟೆಯಿಂದ ಗಿರಿಗದ್ದೆಗೆ ತಲುಪಲು ಸುಮಾರು ಎರಡೂವರೆ ತಾಸು ಬೇಕು. ಮರದ ಬೇರುಗಳು, ಚರಳುಕಲ್ಲು, ಜಾರುವ ಬಂಡೆಗಳು, ನಡಿಗೆಯ ವೇಗವನ್ನು ಕುಗ್ಗಿಸುತ್ತದೆ. ಭಟ್ಟರ ಮನೆಯವರು ಇದನ್ನು ಒಂದೂವರೆ ಗಂಟೆಯಲ್ಲೇ ಕ್ರಮಿಸುತ್ತಾರೆ. ಅಂಗಡಿಗೆ ಭಟ್ಟರ ಮನೆಯವರು ಬರಬೇಕಾದರೆ, ಇದೇ ಹಾದಿಯಲ್ಲಿ ಬರಬೇಕು. ಚಾರಣಿಗರು ಕುಮಾರ ಪರ್ವತವೇರಲು ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಬರುತ್ತಾರೆ. ಆದರೆ ಭಟ್ಟರ ಮನೆಯವರು ಸುಮಾರು 10 ಕಿಮೀನಷ್ಟು ನಡೆಯಲೇಬೇಕು. ಅಕ್ಕಿ, ಬೇಳೆ ಇತ್ಯಾದಿಗಳನ್ನು ಹೊತ್ತುಕೊಂಡು ಹೋಗಬೇಕು.
1976ರಲ್ಲಿ ದಿ.ಪರಮೇಶ್ವರ ಜೋಯಿಸರು ಗಿರಿಗದ್ದೆಯಲ್ಲಿ ನೆಲೆಸಿದ್ದರು. ಬಳಿಕ ಅವರ ಮಕ್ಕಳಾದ ಮಹಾಲಿಂಗ ಭಟ್ ಮತ್ತು ನಾರಾಯಣ ಭಟ್ ಇಲ್ಲಿನ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದರು. ಇವರು ಅಡಕೆ ಕೃಷಿ, ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಮನೆಯಲ್ಲಿ ಸೌರಶಕ್ತಿ ವ್ಯವಸ್ಥೆ ಇದೆ. ತೋಟ ಮತ್ತು ಅರಣ್ಯದ ನಡುವಿನ ಕಣಿವೆಯಂಥ ಭಾಗದಲ್ಲಿದೆ. ಹೆಂಚು, ಶೀಟಿನ ಛಾವಣಿಯ ಮನೆ. ಪಕ್ಕದಲ್ಲಿ ಚಾರಣಿಗರಿಗೋಸ್ಕರ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ. ರಾತ್ರಿ ಉಳಿದುಕೊಳ್ಳಲು ಪ್ರವಾಸಿಗರು ಟೆಂಟುಗಳನ್ನುಹಾಕಿಕೊಳ್ಳುತ್ತಾರೆ. ಪ್ರತಿದಿನ ನೂರಾರು ಮಂದಿ ಇಲ್ಲಿಗೆ ಬರುವ ಕಾರಣ, ಇಲ್ಲಿನ ಪಾಕಶಾಲೆಯಲ್ಲಿ ಅನ್ನ ಬೇಯುತ್ತಲೇ ಇರುತ್ತದೆ. ಚಾರಣಿಗರನ್ನು ಸ್ವಾಗತಿಸಲು ಪ್ರತಿದಿನವೂ ಭಟ್ಟರ ಮನೆ ತೆರೆದಿರುತ್ತದೆ.
5 ಸ್ಟಾರ್ ಹೋಟೆಲ್ ರೀತಿಯ ಆತಿಥ್ಯ
ಕುಮಾರ ಪರ್ವತ ಚಾರಣ ಒಂದು ದಿನದಲ್ಲಿ ಮುಗಿಯುವಂಥದ್ದಲ್ಲ. ಹೀಗಾಗಿ ಗಿರಿಗದ್ದೆ ಭಟ್ರ ಮನೆಯಲ್ಲಿ ಒಂದು ದಿನ ನಿಂತು ಮಾರನೇ ದಿನ ಪರ್ವತ ಹತ್ತಿ ಇಳಿಯಬೇಕು. ಆ ಒಂದು ದಿನದಲ್ಲಿ ಭಟ್ರು ಕೊಡುವ ಅನ್ನ, ತಿಳಿ ಸಾರು, ಮಜ್ಜಿಗೆ ಉಪ್ಪಿನಕಾಯಿ ಯಾವುದೇ 5ಸ್ಟಾರ್ ಹೋಟೆಲಿಗೆ ಕಡಿಮೆ ಇಲ್ಲ ಎನ್ನುವುದು ಚಾರಣಿಗರ ಮಾತು. ಪಾಕಪ್ರವೀಣರೆಂದೇ ಹೆಸರು ಗಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಗಿರಿಗದ್ದೆ ಕುಮಾರ ಪರ್ವತ ಬಳಿ ನಿವಾಸಿ ವೆಂಕಟ್ರಮಣ ಜೋಯಿಸರು ಅನಾರೋಗ್ಯದಿಂದ ಮೇ 17ರಂದು ನಿಧನ ಹೊಂದಿದ್ದರು. ಇದೀಗ ಮಹಾಲಿಂಗ ಭಟ್ಟರು ನಿಧನ ಹೊಂದಿದ್ದಾರೆ. ಗಿರಿಗದ್ದೆ ಮನೆಯಲ್ಲೀಗ ಅನಾಥ ಭಾವ ಕಾಡುತ್ತಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು