ಕನ್ನಡ ಮಾಧ್ಯಮ ಪ್ರವೇಶ ಪರೀಕ್ಷೆಗೆ 16 ಸಾವಿರ ಅರ್ಜಿ; ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಗೆ ಇಷ್ಟು ಮಕ್ಕಳು ಬರೋದೇಕೆ?
Mangaluru News: 2024-25ನೇ ಶೈಕ್ಷಣಿಕ ವರ್ಷಕ್ಕೆ ಈಗಲೇ ಸಿದ್ಧತೆ ನಡೆಯುತ್ತಿದೆ. ಮೂಡುಬಿದಿರೆಯ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಕಳೆದ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ 32 ಶೈಕ್ಷಣಿಕ ಜಿಲ್ಲೆಗಳ 19244 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 15986 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಕರ್ನಾಟಕದಲ್ಲಿ ಕನ್ನಡ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂಬ ಕೊರಗು ಕನ್ನಡ ಪ್ರೇಮಿಗಳಲ್ಲಿ ಕಾಡುತ್ತಿರುವ ಹೊತ್ತಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯಲು ಪ್ರವೇಶ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಸಂಖ್ಯೆ15,986. ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಬಾಗಿಲು ಹಾಕುತ್ತಿರುವ ಹೊತ್ತಿನಲ್ಲೇ ಆಳ್ವಾಸ್ ಗೆ ಇಷ್ಟೊಂದು ಮಕ್ಕಳು ಯಾಕೆ ಬರುತ್ತಿದ್ದಾರೆ ಎನ್ನುವುದಕ್ಕೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಪೂರ್ಣ ಉಚಿತವಾಗಿರುತ್ತದೆ ಹಾಗೂ ಹೈಟೆಕ್ ಸೌಲಭ್ಯವೂ ದೊರೆಯುತ್ತದೆ ಅನೋದೇ ಉತ್ತರ.
ರಾಜ್ಯದ ನಂಬರ್ 1 ಕನ್ನಡ ಮಾಧ್ಯಮ ಶಾಲೆ ಇದು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ರಾಜ್ಯದ ನಂ. 1 ಕನ್ನಡ ಮಾಧ್ಯಮ ಶಾಲೆಯಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2024-25ನೇ ಸಾಲಿನ, 6 ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆ, ಮೂಡುಬಿದಿರೆಯ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಭಾನುವಾರ ನಡೆಯಿತು. ರಾಜ್ಯಾದ್ಯಂತ 32 ಶೈಕ್ಷಣಿಕ ಜಿಲ್ಲೆಗಳ 19244 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 15986 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 6 ನೇ ತರಗತಿಗೆ 11795, 7ನೇ ತರಗತಿಗೆ 1438, 8ನೇ ತರಗತಿಗೆ 1889 ಹಾಗೂ 9ನೇ ತರಗತಿಗೆ 864 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ 5237 ವಿದ್ಯಾರ್ಥಿಗಳು, ಬಾಗಲಕೋಟೆ ಹಾಗೂ ವಿಜಯಪುರದಿಂದ ಕ್ರಮವಾಗಿ 2783 ಹಾಗೂ 1554 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
ಈ ಬಾರಿ ಆನ್‌ಲೈನ್‌ನಲ್ಲೇ ಅರ್ಜಿ ಸ್ವೀಕಾರ
ಪರೀಕ್ಷಾ ಅರ್ಜಿ ಸಲ್ಲಿಕಾ ವ್ಯವಸ್ಥೆಯು ಕಳೆದ ವರ್ಷದವರೆಗೆ ಕೈ ಬರಹದಲ್ಲಿ ಸಲ್ಲಿಕೆಯಾಗುತ್ತಿತ್ತು. ಪ್ರತಿಭಾನ್ವಿತ ಮಕ್ಕಳನ್ನು ತಲುಪುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಕ್ಯೂಆರ್ ಕೋಡ್ ಸಹಿತವಾಗಿ ವ್ಯವಸ್ಥೆಗೊಳಿಸಿಲಾಗಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರಿಂದ 7 ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಆಳ್ವಾಸ್ ವಿದ್ಯಾಗಿರಿ ಹಾಗೂ ಪುತ್ತಿಗೆ ಕ್ಯಾಂಪಸ್‌ನ ಯಶೋಕಿರಣ ಬ್ಲಾಕ್, ಆಳ್ವಾಸ್ ಪದವಿ ಪೂರ್ವ ವಿಭಾಗದ ಬಿ ಬ್ಲಾಕ್, ಕಾಮರ್ಸ್ ಬ್ಲಾಕ್, ಆಳ್ವಾಸ್ ಪದವಿ ಕಾಲೇಜು, ನುಡಿಸಿರಿ ವೇದಿಕೆಯ ಸ್ಟಡಿ ಹಾಲ್, ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲೂ ಪ್ರವೇಶ ಪರೀಕ್ಷೆ ನಡೆಸಲಾಗಿದೆ.
6 ಮತ್ತು 7ನೇ ತರಗತಿಯವರೆಗೆ ಎಲ್ಲಾ ಪಠ್ಯ ವಿಷಯಗಳು ಸೇರಿದಂತೆ ತಾರ್ಕಿಕ ಸಾಮರ್ಥ್ಯ ಆಧಾರಿತವಾಗಿ 120 ಅಂಕಗಳಿಗೆ 2 ಗಂಟೆಯ ಪರೀಕ್ಷೆ ನಡೆದಿದ್ದು, 8 ಮತ್ತು 9 ನೇ ತರಗತಿಗೆ ಎಲ್ಲಾ ಪಠ್ಯ ವಿಷಯಗಳು ಮತ್ತು ತಾರ್ಕಿಕ ಸಾಮರ್ಥ್ಯ ಸೇರಿ ಒಟ್ಟು 2 ಗಂಟೆ 30 ನಿಮಿಷದಂತೆ 150 ಅಂಕಗಳಿಗೆ ಪರೀಕ್ಷೆ ನಡೆದಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
ಪ್ರಾಥಮಿಕ ಹಂತದಲ್ಲಿ ಒಎಮ್‌ಆರ್ ಆಧಾರಿತ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯಂತೆ ಪ್ರಶ್ನೆ ಪ್ರತ್ರಿಕೆಗಳನ್ನು ಎಬಿಸಿಡಿ ಸಿರೀಸ್‌ನಲ್ಲಿ ನೀಡಲಾಗಿದೆ. ವಿದ್ಯಾರ್ಥಿಯ ಚಿಂತನಾ ಸಾಮರ್ಥ್ಯವನ್ನು ಗುರುತಿಸಿದ ನಂತರ, ಸಂಸ್ಥೆ ನಿಗದಿ ಪಡಿಸಿದ ಮಾನದಂಡ ಗಳಿಸಿದವರು ಮುಖ್ಯ ಹಂತಕ್ಕೆ ಆಯ್ಕೆಯಾಗಲಿದ್ದಾರೆ. ಮುಖ್ಯ ಹಂತದಲ್ಲಿ ಬರವಣಿಗೆ ಆಧಾರಿತ ಪರೀಕ್ಷೆ ಇದ್ದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತು ಕೌಶಲ್ಯಗಳನ್ನು ಗಮನಿಸಿ ಸಂದರ್ಶನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ಹಂತದಲ್ಲಿ ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರಿದ್ದ ತಂಡವನ್ನು ರಚಿಸಲಾಗಿದ್ದು ಖುದ್ದು ತಂಡದ ಮುಖ್ಯಸ್ಥರಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ. ಮೋಹನ ಆಳ್ವರವರು ಸಂದರ್ಶನ ನಡೆಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ, ಭಾಷಾ ಸಾಮರ್ಥ್ಯ ಮತ್ತು ಆಳ್ವಾಸ್‌ನ ಕಲಿಕಾ ವ್ಯವಸ್ಥೆಗಳಿಗೆ ಪೂರಕವಾಗಿರುವವರನ್ನು, ಜೊತೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪಾಲಕರ ಮಕ್ಕಳಿಗೆ, ತಂದೆ ತಾಯಿಯವರನ್ನು ಕಳೆದುಕೊಂಡ ಮಕ್ಕಳಿಗೆ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಿಗೆ ವಿಶೇಷ ಆದ್ಯತೆಯನ್ನು ನೀಡಿ ದಾಖಲಾತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಕ್ರೀಡೆ, ಸಾಂಸ್ಕೃತಿಕ ವಿಭಾಗದ ಆಯ್ಕೆ ಪ್ರಕ್ರಿಯೆ
ಈಗಾಗಲೇ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶೇಷ ಆದ್ಯತೆಯನ್ನು ನೀಡಿ ಪ್ರತ್ಯೇಕ ಆಯ್ಕೆ ಶಿಬಿರಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. 30,000ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆ ವತಿಯಿಂದ, ವ್ಯವಸ್ಥಿತ ಶೌಚಾಲಯದೊಂದಿಗೆ ಉಚಿತ ತಂಗುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಯಾಕೆ ಆಳ್ವಾಸ್?
ಕನ್ನಡ ಮಾಧ್ಯಮದ ಉಚಿತ ಶಿಕ್ಷಣ ಸೌಲಭ್ಯದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ವಿದ್ಯಾರ್ಥಿ ನಿಲಯ, ಪಠ್ಯ ಪುಸ್ತಕ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಶಾಲಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸ್ಪರ್ಧಾತ್ಮಕವಾದ ಬುದ್ಧಿಮತ್ತೆ ಜತೆಗೆ ಸುಸಂಸ್ಕೃತ ಮನಸ್ಸನ್ನು ಕಟ್ಟುವ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಸದ್ಯ ಇಡೀ ಕನ್ನಡ ಮಾಧ್ಯಮ ಶಾಲೆಯಲ್ಲಿ 6 ರಿಂದ 10ನೇ ತರಗತಿಯವರೆಗೆ 600ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ವಸತಿ, ಊಟ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಾರ್ಷಿಕವಾಗಿ ಓರ್ವ ವಿದ್ಯಾರ್ಥಿಗೆ ಸಂಸ್ಥೆಯ ವತಿಯಿಂದ 1 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದ್ದು, ಒಟ್ಟು 7 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು