Mangaluru: ಪರೀಕ್ಷೆ ಬರೆಯುವ ಹೊತ್ತಲ್ಲೇ ಮಂಗಳೂರು ಮಕ್ಕಳಿಗೆ ಮಂಗನಬಾವು ಕಾಟ
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಹಲವು ಮಕ್ಕಳು ಕೆಪಟ್ರಾಯ ಎಂದೇ ಸ್ಥಳೀಯ ಭಾಷೆಯಲ್ಲಿ ಹೇಳುವ ಮಂಪ್ಸ್ ಸೋಂಕಿನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯ ಸುಮಾರು ಆರೇಳು ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಇದೆ. ಹೆಚ್ಚಿನವರು ವೈದ್ಯರ ಬಳಿ ಹೋಗಿದ್ದರೆ, ಕೆಲವರು ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. (ವರದಿ: ಹರೀಶ ಮಾಂಬಾಡಿ)
ಮಂಗಳೂರಿನ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಆ ಬಾಲಕ ಓದಿನಲ್ಲಿ ಜಾಣ. ಆಟದಲ್ಲೂ ಅಷ್ಟೇ. ಆದರೆ ಪರೀಕ್ಷೆಯ ಸಿದ್ಧತೆಯಲ್ಲಿರುವ ಪುಟಾಣಿಗೆ ಇದ್ದಕ್ಕಿದ್ದಂತೆ ಜ್ವರ. ಆಯಾಸ. ಸ್ನಾಯುನೋವು. ಕೊಟ್ಟ ಆಹಾರ ನುಂಗಲೂ ಆಗದಂಥ ಸ್ಥಿತಿ. ಮೊದಮೊದಲು ಇದು ವಿಪರೀತ ಸೆಖೆಯಿಂದ ಕೋಲ್ಡ್ ನೀರು ಕುಡಿದು ಉಂಟಾಗುವ ಜ್ವರ ಎಂದು ಹೆತ್ತವರು ತಿಳಿದುಕೊಂಡು ಮನೆಮದ್ದು ನೀಡುತ್ತ ಬಂದಿದ್ದರೂ ಇದು ಕಡಿಮೆ ಆಗಲೇ ಇಲ್ಲ. ವೈದ್ಯರ ಬಳಿ ಪರಿಶೀಲಿಸಿದಾಗ ಮಂಪ್ಸ್ ಅಥವಾ ಮಂಗನಬಾವು, ಅಥವಾ ಕೆಪ್ಪಟರಾಯ (ಕೆಪ್ಪಟ್ರಾಯ) ಸಮಸ್ಯೆಯ ಲಕ್ಷಣವಿದು ಎಂದು ಹೇಳಿದರು. ಇದೀಗ ಆ ಬಾಲಕ ಮನೆಯಲ್ಲಿದ್ದಾನೆ. ಇವನಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಹಲವು ಮಕ್ಕಳು ಕೆಪಟ್ರಾಯ ಎಂದೇ ಸ್ಥಳೀಯ ಭಾಷೆಯಲ್ಲಿ ಹೇಳುವ ಮಂಪ್ಸ್ ಸೋಂಕಿನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯ ಸುಮಾರು ಆರೇಳು ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಇದೆ. ಹೆಚ್ಚಿನವರು ವೈದ್ಯರ ಬಳಿ ಹೋಗಿದ್ದರೆ, ಕೆಲವರು ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ವಿಶೇಷವಾಗಿ ಬಂಟ್ವಾಳ ನಗರ ಸುತ್ತಮುತ್ತ ಅಲ್ಲದೆ ವಿಟ್ಲ ಭಾಗದ ಕೆಲವೆಡೆಯೂ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಈ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ವೈದ್ಯರ ಬಳಿ ಬರುತ್ತಿದ್ದಾರೆ. ತಾಲೂಕು ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸರಾಸರಿಯಾಗಿ ದಿನ್ಕಕೆ ಏಳೆಂಟು ಪ್ರಕರಣಗಳು ಕಳೆದ ವಾರದವರೆಗೂ ಬರುತ್ತಿದ್ದವು. ಮಂಗಳೂರಿನ ಮಕ್ಕಳ ತಜ್ಞರ ಬಳಿ ಪ್ರತಿ ದಿನ ಕೆಪ್ಪಟ್ರಾಯ ಪ್ರಕರಣಗಳು ಕನಿಷ್ಠ ನಾಲ್ಕೈದಾದರೂ ಇರುತ್ತವೆ.
ಮಂಗನಬಾವಿಗೆ ತುತ್ತಾದವರ ಆರೈಕೆ ಹೇಗಿರುತ್ತದೆ?
ಕೆಪ್ಪಟ್ರಾಯ, ಕೆಪ್ಪಟೆ, ಮಂಗನಬಾವು ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲವಾದರೂ ತೊಂದರೆಗಳಿಗೆ ಚಿಕಿತ್ಸೆ ಅಗತ್ಯ. ಹೀಗಾಗಿ ರೋಗಿಯ ಬಾಯಿಯನ್ನು ಸ್ವಚ್ಛವಾಗಿರಿಸಬೇಕು. ರೋಗಿ ದ್ರವಾಹಾರ ಅಥವಾ ಮೆತ್ತಗಿರುವ ಆಹಾರವನ್ನು ಸೇವಿಸಬೇಕು. ನೋವು ನಿವಾರಕ ಗುಳಿಗೆಗಳನ್ನು ವೈದ್ಯರು ನೀಡುತ್ತಾರೆ. ಅಲ್ಲದೆ ರೋಗಿಯ ಗುಣಲಕ್ಷಣಗಳಿಗೆ ಅನುಸಾರವಾಗಿ ಜೀವನಿರೋಧಕಗಳನ್ನು ನೀಡಲಾಗುತ್ತದೆ. ನಾಲ್ಕೈದು ದಿನ ರೆಸ್ಟ್ ಪಡೆಯುವುದು ಉತ್ತಮ ಮಾರ್ಗೋಪಾಯ.
ಹೇಗೆ ಹರಡುತ್ತದೆ? ಶಾಲಾ ಮಕ್ಕಳಲ್ಲಿ ಯಾಕೆ ಜಾಸ್ತಿ:
ಮಂಗನಬಾವು ಶಾಲೆಗೆ ಹೋಗುವ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ವೈರಸ್ ಜೊಲ್ಲಿನ ತುಂತುರು ಹನಿಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ರೋಗ ದೇಹದಲ್ಲಿ 14 ರಿಂದ 21ದಿನಗಳ ಅವಧಿಯಲ್ಲಿ ಬೆಳೆಯುತ್ತದೆ. ಸಣ್ಣಗೆ ಜ್ವರ, ಗಂಟಲುನೋವು, ಕಿವಿನೋವುಗಳ ಜೊತೆಗೆ ಬಾಯಾಡಿಸುವಾಗ ನೋವು ಕಾಣಿಸಿಕೊಂಡುತ್ತದೆ. ಕೆನ್ನೆಯನ್ನು ಮುಟ್ಟಿದರೂ ನೋವಾಗುತ್ತದೆ. ಲಾಲಾರಸ ಸ್ರವಿಸುವ ಗ್ರಂಥಿಯ ನಾಳದ ಕೊನೆಯಲ್ಲಿ ಊತ ಕೆಂಪಾಗಿ ಕಾಣಿಸುತ್ತದೆ. ಊತ ಹೆಚ್ಚಿದಂತೆ ಜ್ವರ ಜಾಸ್ತಿಯಾಗುತ್ತದೆ. ಹೀಗಾಗಿ ಶಾಲಾಮಕ್ಕಳಲ್ಲಿ ಈ ರೋಗ ಬೇಗ ಹರಡುತ್ತದೆ.
ಎಂಎಂಆರ್ ಲಸಿಕೆ ಅವಶ್ಯ:
ಸಕಾಲಕ್ಕೆ ಎಂಎಂಆರ್ ವ್ಯಾಕ್ಸಿನ್ (ದಡಾರ, ಮಂಗನ ಬಾವು ಮತ್ತು ರುಬೆಲ್ಲಾ) ಪಡೆದರೆ ಉತ್ತಮ. ಮಗುವಿಗೆ 12ರಿಂದ 15 ತಿಂಗಳ ಅವಧಿಯಲ್ಲಿ ಒಮ್ಮೆ ಮತ್ತು 4ರಿಂದ ಆರು ವರ್ಷಗಳ ನಡುವೆ ಮತ್ತೊಮ್ಮೆ ಚುಚ್ಚುಮದ್ದು ನೀಡಿದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು. 'ಕೆಪ್ಪಟೆಗೆ ಯಾವುದೇ ನಿರ್ದಿಷ್ಟ ಆಂಟಿ ವೈರಲ್ ಚಿಕಿತ್ಸೆ ಇಲ್ಲ. ಎಂಎಂಆರ್ ಲಸಿಕೆ ಕೆಪ್ಪಟೆಯ ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿಯಾಗಿದೆ. ಈ ಲಸಿಕೆ ದೀರ್ಘಾವಧಿಯ ಪ್ರತಿರಕ್ಷೆ ಒದಗಿಸುತ್ತದೆ' ಎನ್ನುತ್ತಾರೆ ತಜ್ಞವೈದ್ಯರು.
ಕಳೆದ ವಾರದವರೆಗೆ ನಮ್ಮ ತಾಲೂಕು ಆಸ್ಪತ್ರೆಗೆ ಏಳರಿಂದ ಎಂಟು ಪ್ರಕರಣಗಳು ಬರುತ್ತಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಕರಣಗಳು ಇಳಿಮುಖವಾಗಿದ್ದು, ಒಂದೆರಡು ಮಂದಿಯಷ್ಟೇ ರೋಗಲಕ್ಷಣವುಳ್ಳ ಮಕ್ಕಳು ಆಗಮಿಸುತ್ತಿದ್ದಾರೆ. ಆದರೂ ಜಾಗೃತಿ ಅವಶ್ಯ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ. ಈಗ ಮಂಗನಬಾವು ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ದಿನಕ್ಕೆ ಐದರಿಂದ ಆರು ಪ್ರಕರಣಗಳು ಬರುತ್ತಿವೆ. ಲಕ್ಷಣಗಳು ಕಂಡುಬಂದರೆ ವೈದ್ಯರ ಸಂಪರ್ಕ ಮಾಡಿರಿ ಎಂದು ಸಲಹೆ ನೀಡುತ್ತಾರೆ ಕೈಕಂಬದ ಮಕ್ಕಳ ತಜ್ಞ ಡಾ. ಮಹೇಶ್.
ವರದಿ: ಹರೀಶ ಮಾಂಬಾಡಿ, ಮಂಗಳೂರು
ಇದನ್ನೂ ಓದಿ: ಹೆಚ್ಚು ಪ್ರೋಟೀನ್ ಇರುವ 5 ಸೂಪರ್ಫುಡ್