Davanagere Rain: ಮಳೆ ಆರ್ಭಟಕ್ಕೆ ಬೆಣ್ಣೆನಗರಿ ಜನತೆ ಸುಸ್ತು; ದಾವಣಗೆರೆಯ 7 ಮನೆಗಳು ಸಂಪೂರ್ಣ ಜಖಂ
Davanagere News: ಮಳೆಯ ಆರ್ಭಟದಿಂದ ದಾವಣಗೆರೆ ಜಿಲ್ಲೆಯಲ್ಲಿ 7 ಮನೆಗಳು ಸಂಪೂರ್ಣ ಹಾನಿಗೀಡಾಗಿ 6 ಲಕ್ಷ ನಷ್ಟ ಸಂಭವಿಸಿದ್ದು, 15 ಮನೆಗಳು ಭಾಗಶಃ ಹಾನಿಗೀಡಾಗಿವೆ. ಈಲ್ಲೆಯಲ್ಲಿ 10.53 ಲಕ್ಷ ಅಂದಾಜು ನಷ್ಟ ಸಂಭವಿಸಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಿಸುವುದಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ದಾವಣಗೆರೆ: ಮುಗಿಲಿಗೆ ತೂತು ಬಿದ್ದಂತೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆ ಅಕ್ಷರಶಃ ತತ್ತರಿಸಿದ್ದು, ರಸ್ತೆಗಳಲ್ಲಿ ಮಳೆಯ ನೀರು ಕೋಡಿ ಬಿದ್ದು ಹರಿಯುತ್ತಿರುವುದರಿಂದ ಜನರು ಹೊಸ್ತಿಲು ದಾಟಲು ಯೋಚಿಸುವ ವಾತಾವರಣ ಸೃಷ್ಠಿಯಾಗಿದೆ.
ಸೋಮವಾರವೂ ಸಹ ವರುಣಾರ್ಭಟ ಮುಂದುವರೆದಿದ್ದರಿಂದ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಮಳೆಯ ಪರಿಸ್ಥಿತಿ ಅರಿತು ರಜೆ ಘೋಷಿಸುವಂತೆ ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಭಾನುವಾರ ಸಂಜೆ ಹೊತ್ತಿಗೆ ಸೂಚನೆ ನೀಡಿದ್ದರು.
ಅದರಂತೆ, ಸೋಮವಾರ ಚನ್ನಗಿರಿ, ಜಗಳೂರು, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ನೀಡಿರುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಇಂದು ಸೋಮವಾರ ಮುಂಜಾನೆಯಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ದಾವಣಗೆರೆಯ ದಕ್ಷಿಣ, ಉತ್ತರ ಮತ್ತು ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದರು.
ಈ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಒಟ್ಟಾರೆ 3.2 ಮಿಮೀ ಆಗಬೇಕಿದ್ದ ಮಳೆ, ನಿಗಧಿಗಿಂತ 20.5 ಮಿಮೀ ಸುರಿದಿದ್ದು, ದಾವಣಗೆರೆಯಲ್ಲಿ 2.8 ಮಿಮೀ ಆಗಬೇಕಿದ್ದ ಮಳೆ ವಾಡಿಕೆಗಿಂತ 16.4ರಷ್ಟು ಸುರಿದಿದೆ. ಚನ್ನಗಿರಿಯಲ್ಲಿ 4.6 ಆಗಬೇಕಿತ್ತು 25.8 ಮಿಮೀ, ಹರಿಹರ 3.0 ಆಗಬೇಕಿತ್ತು 18.2 ಮಿಮೀ, ಹೊನ್ನಾಳಿ 2.8 ಆಗಬೇಕಿರುವುದು 30.2 ಮಿಮೀ., ಜಗಳೂರು 2.2 ಆಗಬೇಕಿದ್ದ ಮಳೆ 7.8 ಹಾಗೂ ನ್ಯಾಮತಿಯಲ್ಲಿ 3.2 ಮಿಮೀ ಆಗಬೇಕಿದ್ದ ಮಳೆ 36.5 ಮಿಮೀ ನಷ್ಟು ಸುರಿದು ಜಿಲ್ಲೆಯ ಜನರಿಗೆ ಸಂಕಷ್ಟ ತಂದೊಡ್ಡಿದೆ.
ಮಳೆರಾಯನ ಆರ್ಭಟದಿಂದ ಜನರು ಮಾತ್ರವಲ್ಲ ಜಾನುವಾರುಗಳು ತತ್ತರಿಸಿ ಹೋಗಿವೆ. ಜೂನ್ ತಿಂಗಳಲ್ಲಿ ಮತ್ತು ಜುಲೈ ಮೊದಲಾರ್ಧದಲ್ಲಿ ಮಳೆ ಬಾರದೆ ಪೇಚಿಗೆ ಸಿಲುಕಿದ್ದ ರೈತರು ಮತ್ತು ಜನರು ಈಗ ಮಳೆ ಸ್ವಲ್ಪ ಬಿಡುವು ಕೊಟ್ಟರೆ ಸಾಕೆಂದು ಪ್ರಾರ್ಥಿಸುತ್ತಿದ್ದಾರೆ.
ಜೂನ್ ತಿಂಗಳಲ್ಲಿಯೇ ಮುಂಗಾರು ಬಿತ್ತನೆಗಾಗಿ ಉತ್ಸಾಹದಲ್ಲಿದ್ದ ರೈತ ಮಳೆ ಕಾಣದೆ ಚಿಂತಾಕ್ರಾಂತನಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದ. ಆದರೆ, ಜುಲೈನಲ್ಲಿ ತಿಂಗಳ ಕೊನೆಯಾರ್ಧದಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ನಾಟಿಗೆ ಮುಂದಾಗಿದ್ದಾರೆ. ಒಂದು ಕಡೆ ಮಳೆಯಾಗುತ್ತಿರುವ ಸಂತಸವಾದರೆ, ಮತ್ತೊಂದೆಡೆ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದರಿಂದ ಫಸಲು ಕೈತಪ್ಪುವ ಆತಂಕದಲ್ಲಿ ರೈತರಿದ್ದಾರೆ.
ಮಳೆಯ ಆರ್ಭಟದಿಂದ ಜಿಲ್ಲೆಯಲ್ಲಿ 7 ಮನೆಗಳು ಸಂಪೂರ್ಣ ಹಾನಿಗೀಡಾಗಿ 6 ಲಕ್ಷ ನಷ್ಟ ಸಂಭವಿಸಿದ್ದು, 15 ಮನೆಗಳು ಭಾಗಶಃ ಹಾನಿಗೀಡಾಗಿವೆ. ಈಲ್ಲೆಯಲ್ಲಿ 10.53 ಲಕ್ಷ ಅಂದಾಜು ನಷ್ಟ ಸಂಭವಿಸಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಿಸುವುದಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ವರದಿ: ಅದಿತಿ, ದಾವಣಗೆರೆ