Siddramaiah: ಗಾಂಧಿ ವೇಷಧಾರಿಯ ಅಭಿಮಾನದ ಕಾಲ್ನಡಿಗೆ; ಸಿದ್ದರಾಮಯ್ಯ ಹುಟ್ಟೂರಿನಿಂದ ಬೆಂಗಳೂರಿನ ಸಿಎಂ ನಿವಾಸದವರೆಗೆ ಪಾದಯಾತ್ರೆ
ಸಿದ್ದರಾಮಯ್ಯ ಎಂದರೆ ಮುತ್ತುರಾಯಪ್ಪಗೆ ಬಲು ಇಷ್ಟ. ಅವರೇ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇವರಿಗೂ ಇತ್ತು. ಅದು ಈಡೇರುತ್ತಿದ್ದಂತೆ, ಸಿದ್ದರಾಮಯ್ಯ ಹುಟ್ಟೂರು ಮೈಸೂರು ಬಳಿಯ ಸಿದ್ದರಾಮನಹುಂಡಿಯಿಂದ ಗಾಂಧಿ ವೇಷ ಧರಿಸಿ ಪಾದಯಾತ್ರೆ ಆರಂಭಿಸಿದ್ದಾರೆ.
Siddaramaiah: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಅವರ ಅಪಾರ ಅಭಿಮಾನಿ ವಲಯದಲ್ಲಿಯೂ ಇದು ಹೊಸ ಖುಷಿಗೆ ಮತ್ತು ಹುರುಪಿಗೆ ಕಾರಣವಾಗಿದೆ. ಸಿಎಂ ಆದ್ರೆ ಸಿದ್ದರಾಮಯ್ಯನವರೇ ಆಗಬೇಕೆಂದು ಅದೆಷ್ಟೋ ಮಂದಿ ಹರಕೆ ಹೊತ್ತಿದ್ದರು. ನಿತ್ಯ ದೇವರ ಮೊರೆ ಹೋಗಿದ್ದರು. ಆ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ. ಅದರಂತೆ ಬೇಡಿಕೆ ಫಲಿಸಿದ ಹಿನ್ನೆಲೆಯಲ್ಲಿ ಹರಕೆ ತೀರಿಸುವ ಕಾಯಕವೂ ನಡೆಯುತ್ತಿದೆ. ಆ ಪೈಕಿ ಇಲ್ಲೊಬ್ಬ ಅಭಿಮಾನಿ ಸಿದ್ದರಾಮಯ್ಯ ಹುಟ್ಟೂರಿನಿಂದ ಬೆಂಗಳೂರಿನ ಸಿಎಂ ನಿವಾಸದ ವರೆಗೆ ಪಾದಯಾತ್ರೆ ಆರಂಭಿಸಿದ್ದಾರೆ! HT ಕನ್ನಡದ ಜತೆಗೆ ಮಾತನಾಡಿದ್ದಾರೆ.
ಹೆಸರು ಮುತ್ತುರಾಯಪ್ಪ. ಊರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬೂದಿಬೆಟ್ಟ. ಈ ಹಿಂದೆ ಇದೇ ಗ್ರಾಮದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿಯೂ ಮುತ್ತುರಾಯಪ್ಪ ಚುನಾಯಿತರಾಗಿದ್ದರು. ಇವರ ತಾತ ಕೂಡ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡವರು. 1977ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಅಂದಿನಿಂದ ತಾತನ ಹಾದಿಯಲ್ಲಿಯೇ ಕಾಂಗ್ರೆಸ್‌ನ ಕಟ್ಟಾ ಅಭಿಮಾನಿಯಾಗಿದ್ದಾರೆ ಮುತ್ತುರಾಯಪ್ಪ. ಇದೀಗ ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ, ಸಿದ್ದರಾಮನಹುಂಡಿಯಿಂದ ಬೆಂಗಳೂರಿನ ಸಿಎಂ ನಿವಾಸದವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಎಂದರೆ ಮುತ್ತುರಾಯಪ್ಪಗೆ ಬಲು ಇಷ್ಟ. ಅವರೇ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇವರಿಗೂ ಇತ್ತು. ಅದು ಈಡೇರುತ್ತಿದ್ದಂತೆ, ಸಿದ್ದರಾಮಯ್ಯ ಹುಟ್ಟೂರು ಮೈಸೂರು ಬಳಿಯ ಸಿದ್ದರಾಮನಹುಂಡಿಯಿಂದ ಗಾಂಧಿ ವೇಷ ಧರಿಸಿ ಪಾದಯಾತ್ರೆ ಆರಂಭಿಸಿದ್ದಾರೆ. ಹುಟ್ಟೂರಿನಲ್ಲಿನ ಸಿದ್ದರಾಮಯ್ಯ ಅವರ ಸಹೋದರರು, ಗ್ರಾಮಸ್ಥರು ಮುತ್ತುರಾಯಪ್ಪನವರಿಗೆ ಶುಭಕೋರಿ ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ.
ಸಿದ್ದರಾಮನಹುಂಡಿಯಿಂದ ಶುರುವಾದ ಈ ನಡಿಗೆ ಮೇಗಳಾಪುರ, ವರುಣ, ಚಿಕ್ಕಹಳ್ಳಿ, ಯರಗನಹಳ್ಳಿ ಮಾರ್ಗವಾಗಿ ಮೈಸೂರು ತಲುಪಿದ್ದಾರೆ. ಅಲ್ಲಿಂದ ಶ್ರೀರಂಗಪಟ್ಟಣ, ಮಂಡ್ಯ, ರಾಮನಗರ ಮಾರ್ಗವಾಗಿ ಆಗಮಿಸಿ ಸದ್ಯ ಬಿಡದಿ ದಾಟಿದ್ದಾರೆ. "ನಾನು ಗಾಂಧೀಜಿ ಅವರ ಅನುಯಾಯಿ. ಈ ರೀತಿ ಗಾಂಧಿ ವೇಷ ಹಾಕಿ ಪಾದಯಾತ್ರೆ ಮಾಡುವುದು ನನ್ನಿಷ್ಟದ ಕಾಯಕ. ಈ ನನ್ನ ಕೆಲಸಕ್ಕೆ ಮನೆಯಿಂದಲೂ ಸಮ್ಮತಿ ಇದೆ. ಗ್ರಾಮಸ್ಥರೂ ಬೆಂಬಲ ನೀಡಿದ್ದಾರೆ. ಇದರ ಸಂಪೂರ್ಣ ಖರ್ಚು ನನ್ನದೇ. ನಾನು ಓದಿದ್ದು ಪಿಯುಸಿಯಾದರೂ, ಶಾಲಾ ಕಾಲೇಜುಗಳಿಗೂ ಹೋಗಿ ಮಕ್ಕಳಿಗೆ ಗಾಂಧೀಜಿ ಬಗ್ಗೆ ಸ್ಫೂರ್ತಿ ತುಂಬಿ ಬರುತ್ತೇನೆ" ಎಂದಿದ್ದಾರೆ.
ಪ್ರದೀಪ್ ಈಶ್ವರ್‌ಗೆ ಸಚಿವ ಸ್ಥಾನ ನೀಡಿ..
ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸಚಿವ ಸ್ಥಾನದ ನೀಡಬೇಕೆಂಬುದು ಮುತ್ತುರಾಯಪ್ಪನವರ ಆಸೆ. ಆರ್‌ಆರ್ ನಗರದ ಪರಾಜಿತ ಅಭ್ಯರ್ಥಿ ಕುಸುಮಾ ಮತ್ತು ಎಚ್ ಮಹಾದೇವಪ್ಪ ಅವರನ್ನೂ ಸಂಪುಟದಲ್ಲಿ ಸೇರಿಸಿಕೊಳ್ಳಬೇಕೆಂದು ಗಾಂಧಿ ವೇಷಧಾರಿ ತಮ್ಮ ಮನದ ಬಯಕೆಯನ್ನು HT ಕನ್ನಡಕ್ಕೆ ತಿಳಿಸಿದ್ದಾರೆ.
ಬಳ್ಳಾರಿಯಿಂದ ಪಾದಯಾತ್ರೆ..
ಈ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯನವರು ಕರೆಕೊಟ್ಟಿದ್ದ ಪಾದಯಾತ್ರೆಗೂ ಮುತ್ತುರಾಯಪ್ಪ ಭಾಗವಹಿಸಿದ್ದರು. ಗಾಂಧಿ ವೇಷ ಧರಿಸಿ 15 ದಿನಗಳ ಕಾಲ ಬಳ್ಳಾರಿಯಿಂದ ಬೆಂಗಳೂರಿನವರೆಗೂ ಅವರೊಂದಿಗೆ ಹೆಜ್ಜೆಹಾಕಿದ್ದರು. ಅದಾದ ಮೇಲೆ ಅದೇ ಬಳ್ಳಾರಿಯಿಂದ ಬೆಂಗಳೂರಿಗೆ ಒಬ್ಬರೇ ಪಾದಯಾತ್ರೆ ಸಹ ಮಾಡಿದ್ದರು. ಇನ್ನುಳಿದಂತೆ ಮೇಕೆದಾಟು, ಭಾರತ್ ಜೋಡೋ ಸೇರಿ ಕಾಂಗ್ರೆಸ್ ಕರೆ ನೀಡಿದ ಪಾದಯಾತ್ರೆಗಳಲ್ಲಿ ಗಾಂಧಿ ವೇಷ ಧರಿಸಿ ಮುತ್ತುರಾಯಪ್ಪ ಕಾಣಿಸಿಕೊಂಡಿದ್ದಾರೆ.