Mysore Dasara 2024: ಮೈಸೂರು ದಸರಾ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ, ಡಿಸಿಎಂ ಜೋಡಿ; ಕರ್ನಾಟಕದಲ್ಲಿ ಬರದ ತಾಲ್ಲೂಕೇ ಇಲ್ಲ ಎಂದ ಸಿಎಂ
ಮೈಸೂರು ದಸರಾದ ಜಂಬೂ ಸವಾರಿ ಆರಂಭಕ್ಕೂ ಮುನ್ನ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಪೂಜೆ ಸಲ್ಲಿಸಿದರು. ಆನಂತರ ಜಂಬೂ ಸವಾರಿಗೆ ಚಾಲನೆ ಕೂಡ ನೀಡಲು ಅಣಿಯಾದರು.
ಮೈಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೂ ಮುನ್ನ ನಂದಿ ಪೂಜೆ ನೆರವೇರಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು ಹಾಗೂ ಶಾಸಕರೊಂದಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ದಸರಾ ಹಬ್ಬದ ಭಾಗವಾಗಿ ಶನಿವಾರ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಬಾರಿ ಕರ್ನಾಟಕದಲ್ಲಿ ಮಳೆ ಉತ್ತಮವಾಗಿ ಜಲಾಶಯಗಳು ತುಂಬಿವೆ. ಉತ್ತಮ ಫಸಲು ಬಂದು ಜನರ ಜೀವನ ಇನ್ನಷ್ಟು ಸುಭಿಕ್ಷವಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು ಆಶಿಸಿದರು. ನಂದಿ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಅರಮನೆ ಒಳಗೆ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಅವರು ಜಂಬೂ ಸವಾರಿಗೂ ಚಾಲನೆ ನೀಡುವರು.
ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ವಿಶೇಷ ಬಸ್ ನಲ್ಲಿ ಆಗಮಿಸಿದ ಸಿಎಂ ಹಾಗೂ ಡಿಸಿಎ ಹಾಗೂ ಸಚಿವರು ಮಧ್ಯಾಹ್ನ 1:55ರ ಸುಮಾರಿಗೆ ನಡೆದ ನಂದಿ ಧ್ವಜ ಪೂಜೆ ಸಲ್ಲಿಸಿದರು.ಸಿಎಂ ಸಿದ್ದರಾಮಯ್ಯಗೆ ಸಾತ್ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಮಹದೇವಪ್ಪ, ಶಿವರಾಜ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ್, ಮಂಕಾಳ್ ವೈದ್ಯ,ಡಾ.ಎಂ.ಸಿ.ಸುಧಾಕರ್, ಡಿ.ಸುಧಾಕರ್ ಹಾಗು ಕೆಲ ಶಾಸಕರು ಜತೆಯಾದರು.
ಮಲ್ಲೇಶಪ್ಪ,ಮಹಾದೇವಪ್ಪ ಮತ್ತಿತರರ ಕುಟುಂಬದವರು ನಂದಿ ಧ್ವಜವನ್ನು ವಿಶೇಷವಾಗಿ ಅಲಂಕರಿಸಿದ್ದರು. ಮುವತ್ತು ಅಡಿ ಉದ್ದನೆಯ ನಂದಿ ಧ್ವಜಕ್ಕೆ ಪುಷ್ಪಾರ್ಚನೆಯನ್ನು ಸಿಎಂ ಮಾಡಿದರು. ಅವರಿಗೆ ಸಚಿವರು ಸಾಥ್ ಕೊಟ್ಟರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಿದೆ. ಯಾವುದೇ ತಾಲ್ಲೂಕಿನಲ್ಲಿ ಬರ ಇಲ್ಲ ಎನ್ನುವುದು ಸಂತಸದ ವಿಚಾರ. ಎಲ್ಲೆಡೆ ಜಲಾಶಯಗಳು ತುಂಬಿವೆ. ಬಿತ್ತನೆ ಕಾರ್ಯವೂ ನಡೆದಿದೆ. ಇದರಿಂದ ಉತ್ತಮ ಫಲಸು ಬಂದು ಜನರ ಬದುಕು ಹಸನಾಗಲಿ ಎಂದು ಆಶಿಸಿದರು.
ಹಿಂದಿನ ವರ್ಷ ಬರ ಇತ್ತು. ಈ ಬಾರಿ ಮಳೆ ಉತ್ತಮವಾಗಿ ಸ್ಥಿತಿ ಬದಲಾಗಿದೆ. ಈ ಕಾರಣದಿಂದ ವಿಜೃಂಭಣೆಯಿಂದ ದಸರಾ ಆಚರಿಸಲು ಸಚಿವ ಮಹದೇವಪ್ಪ ಅವರಿಗೆ ಸೂಚಿಸಿದ್ದೆ. ಅದರಂತೆ ದಸರಾವನ್ನು ಚೆನ್ನಾಗಿ ನಡೆಸಿದ್ಧಾರೆ, ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನಡೆದಿವೆ ಎಂದು ಮೆಚ್ಚುಗೆ ಸೂಚಿಸಿದರು.
ನಾವು ಈ ಬಾರಿ ಪುಷ್ಪಾರ್ಚನೆ ಮಾಡೋಲ್ಲ ಎಂದು ಯಾರೋ ಮೂರ್ಖರು ಹೇಳಿದ್ದರು. ಅದರ ಬಗ್ಗೆ ನಾನೂ ಮಾತನಾಡೋಲ್ಲ. ದಸರಾ ಉದ್ಘಾಟನೆ ವೇಳೆಯೂ ಭಾಗಿಯಾಗಿದ್ದೇನೆ. ವಿಜಯದಶಮಿಗೂ ಬಂದಿದ್ದೇನೆ ಎಂದು ನುಡಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಈ ಬಾರಿ ಲಕ್ಷಾಂತರ ಮಂದಿ ದಸರಾಕ್ಕೆ ಬಂದಿದ್ದಾರೆ. ಎಲ್ಲರಿಗೂ ಅರಮನೆ ಒಳಗೆ ಬರಲು ಸಾಧ್ಯವಾಗಿಲ್ಲ. ಅವರೆಲ್ಲರೂ ಮುಂದಿನ ಹತ್ತು ದಿನ ಕಾಲ ನಡೆಯುವ ದೀಪಾಲಂಕಾರವನ್ನು ವೀಕ್ಷಿಸಬೇಕು ಎಂದು ಹೇಳಿದರು.
ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಮಾತನಾಡಿ, ದಸರಾ ಕರ್ನಾಟಕದ ಸಡಗರದ ಹಬ್ಬ.ಎಲ್ಲಾ ದಿನದಲ್ಲೂ ದಸರಾ ಕಾರ್ಯಕ್ರಮಗಳು ಚೆನ್ನಾಗಿ ನಡೆದಿವೆ. ಹೆಚ್ಚು ಜನ ಬಂದಿದ್ದಾರೆ. ಇದ ಖುಷಿಯ ವಿಚಾರ ಎಂದರು.