ಫಿರಂಗಿ ಸದ್ದಿಗೂ ಜಗ್ಗದ, ಬಗ್ಗದ ಮೈಸೂರು ಗಜಪಡೆ; ಕುಶಾಲುತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ
Mysore Dasara 2024: ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆ, ಕುದುರೆಗಳಿಗೆ ಕುಶಾಲು ತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆಯಿತು.ಮಾಹಿತಿ: ಪಿ.ರಂಗಸ್ವಾಮಿ, ಮೈಸೂರು
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಶುರುವಾಗಿರುವ ನಡುವೆಯೇ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆ ಮತ್ತು ಅಶ್ವಗಳ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸುವ ಮೊದಲ ಹಂತದ ತಾಲೀಮು ನಡೆಯಿತು. ಗುರುವಾರ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ನಡೆದ ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಭಾಗಿಯಾಗಿದ್ದವು. ಪೊಲೀಸ್ ಸಿಬ್ಬಂದಿ ಕುಶಾಲು ತೋಪು ಒಂದೊಂದಾಗಿ ಸಿಡಿಸುತ್ತಿದ್ದರೆ ಸಾಲಂಕೃತವಾಗಿ ನಿಂತಿದ್ದ ದಸರಾ ಆನೆಗಳು ಬೆಚ್ಚಲಿಲ್ಲ.ಹಿರಣ್ಯ ಮತ್ತು ಏಕಲವ್ಯ ಆನೆಗಳು ಸ್ವಲ್ಪ ವಿಚಲಿತವಾದಂತೆ ಕಂಡರೂ ಒಂದು ಕ್ಷಣದಲ್ಲೇ ಸಹಜ ಸ್ಥಿತಿಗೆ ಬಂದಿದ್ದು ಕಂಡು ಬಂದಿತು. ಒಟ್ಟು 21 ಸುತ್ತಿನಲ್ಲೂ ಆನೆಗಳ ಪ್ರತಿಕ್ರಿಯೆ ಒಂದೇ ರೀತಿಯಾಗಿತ್ತು.
ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ಅಶ್ವಾರೋಹಿ ದಳದ ಕುದುರೆಗಳು ಭಾಗಿಯಾದವು.
ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳಿಂದ ಕುಶಾಲತೋಪು ಸಿಡಿಸುವ ಮೊದಲ ಹಂತದ ತಾಲೀಮು ಯಶಸ್ವಿಯಾಯಿತು. ಏಳು ಪಿರಂಗಿ ಗಾಡಿಗಳ ಮೂಲಕ, ತಲಾ ಮೂರು ಬಾರಿಯಂತೆ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಿದರು ಸಿಎಆರ್ ಸಿಬ್ಬಂದಿ. ಕುಶಾಲತೋಪು ಸಿಡಿಸಿದ ವೇಳೆ ಹೊರ ಹೊಮ್ಮಿದ ಕಿವಿಗಡಚ್ಚಿಕ್ಕುವ ಶಬ್ದಕ್ಕೆ ಹೆದರದೇ ನಿಂತಿದ್ದವು ಗಜಪಡೆ, ಅಶ್ವಗಳು. ಹಲವು ಕಿ ಮೀ ವರೆಗೆ ಮಾರ್ಧನಿಸಿದ ಭಾರೀ ಶಬ್ದಕ್ಕೆ ಬೆದರದೇ ನಿಲ್ಲುವ ಮೂಲಕ ನಾವು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಿದ್ದ ಎಂಬ ಸಂದೇಶ ರವಾನಿಸಿದವು.
ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆ ಹಾಗು ಅಶ್ವಾರೋಹಿದಳದ ಸಮ್ಮುಖದಲ್ಲಿ ನಡೆಸಿದ ಮೊದಲ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿದೆ. ಅಶ್ವಾರೋಹಿದಳದ 35 ಕುದುರೆಗಳು ಹಾಗು ಸಿಬ್ಬಂದಿಗಳ ಜೊತೆಗೆ ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿಗಳು ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ಭಾಗಿಯಾಗಿದ್ದಾರೆ. ಸಿಡಿಮದ್ದಿನ ಶಬ್ದಕ್ಕೆ ಕುದುರೆಗಳು ವಿಚಲಿತವಾಗಿಲ್ಲ. ಎಲ್ಲಾ ಕುದುರೆಗಳು ಆತ್ಮಸ್ಥೈರ್ಯ ಪ್ರದರ್ಶಿಸಿವೆ ಎಂದು ಮೈಸೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ಹೇಳಿದರು.
ಮೊದಲ ಹಂತದ ತಾಲೀಮು ನಡೆಸಿದ್ದು, ಯಶಸ್ವಿಯಾಗಿದೆ. 14 ಆನೆಗಳು ಕೂಡ ಇಂದಿನ ತಾಲೀಮಿನಲ್ಲಿ ಭಾಗಿಯಾಗಿವೆ. ಯಾವುದೇ ಆನೆ ಶಬ್ದಕ್ಕೆ ಬೆಚ್ಚಲಿಲ್ಲ.ಏಕಲವ್ಯ ಮೊದಲ ಬಾರಿ ಆಗಮಿಸಿದ್ದರೂ ಬೆಚ್ಚದೇ ನಿಂತಿತ್ತು. ಕುಶಾಲತೋಪು ಸಿಡಿಸುವ ಮೊದಲ ಹಂತದ ತಾಲೀಮು ಯಶಸ್ವಿಯಾಗಿದೆ.ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ಇನ್ನೂ ಎರಡು ಬಾರಿ ಕುಶಾಲತೋಪು ಸಿಡಿಸುವ ತಾಲಿಮು ನಡೆಸುತ್ತೇವೆ ಎನ್ನುವುದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಪ್ರಭುಗೌಡರ ವಿವರಣೆ. .
ಶ್ರೀರಂಗಪಟ್ಟಣ ದಸರಾಗೆ ಆನೆಗಳ ಆಯ್ಕೆ ಅಂತಿಮಗೊಂಡಿದೆ. ಮಹೇಂದ್ರ, ಹಿರಣ್ಯ, ಲಕ್ಷ್ಮಿ ಆನೆಗಳನ್ನು ಶ್ರೀರಂಗಪಟ್ಟಣ ದಸರಾಗೆ ಕಳುಹಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಎಲ್ಲಾ ಆನೆಗಳ ಸಾಮರ್ಥ್ಯ ಪರೀಕ್ಷೆ ಮಾಡಿ ಮೂರು ಆನೆಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದನ್ನು ಅಂತಿಮಗೊಳಿಸುವ ಜವಾಬ್ದಾರಿ ಮೆಲ್ಮಟ್ಟದ ಅಧಿಕಾರಿಗಳಿಗೆ ಸೇರಿದೆ. ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿರುವ ನೌಪತ್ ಆನೆ, ನಿಶಾನೆ ಆನೆಗಳನ್ನು ಸದ್ಯದಲ್ಲೇ ಆಯ್ಕೆ ಮಾಡುತ್ತೇವೆ ಎಂದು ಪ್ರಭುಗೌಡ ಈ ವೇಳೆ ಹೇಳಿದರು.
ಇನ್ನೂ ಎರಡು ದಿನ ಇದೇ ತಾಲೀಮು ನಡೆಯಲಿದ್ದು, ಆನಂತರ ಜಂಬೂ ಸವಾರಿಯ ಅಂಬಾರಿ ಹೊರುವ ಮೆರವಣಿಗೆ ತಾಲೀಮು ಅರಮನೆ ಆವರಣದಲ್ಲಿ ನಡೆಯಲಿದೆ. ಬಳಿಕ ತಾಲೀಮು ಪ್ರಕ್ರಿಯೆ ಅಂತಿಮಗೊಳ್ಳಲಿದೆ.