Breaking News: ಮೈಸೂರಿನ ಚಲುವಾಂಬ ಆಸ್ಪತ್ರೆ ವೈದ್ಯಾಧಿಕಾರಿ ಅನುಮಾನಾಸ್ಪದ ಸಾವು, ವೈದ್ಯ ಪತಿ ವಿರುದ್ದ ಕೊಲೆ ದೂರು
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಮೈಸೂರಿನ ಚಲುವಾಂಬ ಆಸ್ಪತ್ರೆ ವೈದ್ಯಾಧಿಕಾರಿ ಅನುಮಾನಾಸ್ಪದ ಸಾವು, ವೈದ್ಯ ಪತಿ ವಿರುದ್ದ ಕೊಲೆ ದೂರು

Breaking News: ಮೈಸೂರಿನ ಚಲುವಾಂಬ ಆಸ್ಪತ್ರೆ ವೈದ್ಯಾಧಿಕಾರಿ ಅನುಮಾನಾಸ್ಪದ ಸಾವು, ವೈದ್ಯ ಪತಿ ವಿರುದ್ದ ಕೊಲೆ ದೂರು

ಮೈಸೂರಿನ ಚಲುವಾಂಬ ಆಸ್ಪತ್ರೆಯ ವೈದ್ಯಾಧಿಕಾರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು. ಆಕೆಯ ಪತಿ ವಿರುದ್ದ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಮೈಸೂರಿನ ವೈದ್ಯೆ ಡಾ.ವಿದ್ಯಾಧರೆ, ಪತಿ ಡಾ.ಷಣ್ಮುಖ.
ಮೃತಪಟ್ಟ ಮೈಸೂರಿನ ವೈದ್ಯೆ ಡಾ.ವಿದ್ಯಾಧರೆ, ಪತಿ ಡಾ.ಷಣ್ಮುಖ.

ಮೈಸೂರು: ಮೈಸೂರಿನ ಪ್ರತಿಷ್ಠಿತ ಚಲುವಾಂಬ ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಮನೆಯಲ್ಲಿಯೇ ವೈದ್ಯಾಧಿಕಾರಿ ಮೃತಪಟ್ಟ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಈ ಕುರಿತು ವೈದ್ಯರೇ ಆಗಿರುವ ಆಕೆಯ ಪತಿ ವಿರುದ್ದ ದೂರನ್ನು ಆಕೆಯ ಕುಟುಂಬಸ್ಥರು ದಾಖಲಿಸಿದ್ದಾರೆ. ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಎರಡು ದಶಕದಿಂದ ಸ್ತ್ರೀ ರೋಗ ತಜ್ಞ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ, ಮಂಡ್ಯ ಮೂಲದ ಖ್ಯಾತ ಪ್ರಸೂತಿ ತಜ್ಞೆ ಜಿ.ಎಸ್.ವಿದ್ಯಾಧರೆ ಮೃತರು. ಇವರ ಪತಿ,ಕೆ.ಆರ್.ಆಸ್ಪತ್ರೆಯ ಪ್ರಖ್ಯಾತ ಮೂಳೆ ತಜ್ಞ ಡಾ. ಷಣ್ಮುಖ ಹಾಗೂ ಕುಟುಂಬದವರ ವಿರುದ್ದ ಕೊಲೆ ಆರೋಪಗಳು ಕೇಳಿ ಬಂದಿದ್ದು, ದೂರು ಕೂಡ ದಾಖಲಾಗಿದೆ. ಮೈಸೂರಿನ ಲಕ್ಷ್ಮೀ ಪುರಂ ಠಾಣೆ ಪೊಲೀಸರು ಮೊಕದ್ದಮೆಯನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

ಮಂಡ್ಯದ ಗೌಡಗೆರೆಯ ನಿವಾಸಿಯಾಗಿದ್ದ ವಿದ್ಯಾಧರೆಯನ್ನು ಡಾ. ಷಣ್ಮುಖ ವಿವಾಹವಾಗಿದ್ದರು. ಇಬ್ಬರೂ ಕೂಡ ಮೈಸೂರಿನ ಎರಡು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಎರಡು ದಶಕದಿಂದ ಕೆಲಸ ಮಾಡಿಕೊಂಡಿದ್ದರು. 14 ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಗೆ ಮೂವರು ಪುಟ್ಟ ಹೆಣ್ಣು ಮಕ್ಕಳು ಇದ್ದಾರೆ.

6-7 ವರ್ಷಗಳಿಂದ‌ ಗಂಡ- ಹೆಂಡತಿ ನಡುವೆ ವಿರಸ ಉಂಟಾಗಿತ್ತು. ನಾಲ್ಕೈದು ತಿಂಗಳಿಂದ ಮನಸ್ಥಾಪ ಹೆಚ್ಚಾಗಿತ್ತು.ಒಂದೇ ಅಪಾರ್ಟ್ ಮೆಂಟ್‌ನ ಬೇರೆ ಬೇರೆ ಫ್ಲೋರ್‌ಗಳಲ್ಲಿ ಪ್ರತ್ಯೇಕ ವಾಸಕ್ಕೆ ನ್ಯಾಯ ಪಂಚಾಯ್ತಿ ಮಾಡಿಕೊಂಡಿದ್ದರು ಎಂದು ಕುಟುಂಬದವರು ಹೇಳುತ್ತಾರೆ.

ಇದೇ ವಿಚಾರವಾಗಿ ಜಗಳವಾಗಿ ಮಂಡ್ಯಕ್ಕೆ ತೆರಳಿದ್ದ ವಿದ್ಯಾಧರೆ ತವರು ಮನೆಯಿಂದ ಗಂಡನ ಮನೆಗೆ ಭಾನುವಾರ ಬಂದಿದ್ದರು. ಮೈಸೂರಿನ ಆರ್‌ಟಿಓ ಸರ್ಕಲ್‌ ಬಳಿ ಇರುವ ಡೆನ್ಮಾರ್ ಅಪಾರ್ಟ್ಮೆಂಟ್ ನಲ್ಲಿದ್ದ ವೇಳೆ ಭಾನುವಾರ ರಾತ್ರಿ ಮೃತಪಟ್ಟಿದ್ದು. ಸೋಮವಾರ ಬೆಳಿಗ್ಗೆ ಕುಟುಂಬದವರು ಗಮನಿಸಿದ್ದಾರೆ.

ಆಕೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನಿದ್ರೆ ಮಾತ್ರೆ ಅತೀಯಾಗಿ ಸೇವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಪತಿ ಹಾಗೂ ಪತ್ನಿ ನಡುವೆ ಆಗಾಗ್ಗೆ ಜಗಳಗಳು ನಡೆದಿದ್ದವು. ಕೆಲವು ದಿನದಿಂದ ಬೇರೆಯಾಗಿಯೂ ವಾಸಿಸುತ್ತಿದ್ದರು. ಮೂವರು ಹೆಣ್ಣು ಮಕ್ಕಳು ತಾಯಿ ಜತೆಯಲ್ಲಿಯೇ ಇದ್ದರು. ಈ ವಿಚಾರವಾಗಿ ಹಲವು ಬಾರಿ ರಾಜೀ ಪಂಚಾಯಿತಿಗಳು ನಡೆದಿದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ. ಭಾನುವಾರವೂ ಮಂಡ್ಯದಲ್ಲಿ ಡಾ.ವಿದ್ಯಾಧರೆ ಇದ್ದರು. ಸಂಜೆ ನಂತರ ವಾಪಾಸ್‌ ಬಂದಿದ್ದು. ಈ ರೀತಿಯಲ್ಲಿ ಸಾವಾಗಿದೆ. ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಹೋಗಬಾರದಿತ್ತು ಎಂದು ಕುಟುಂಬಸ್ಥರು ಕಣ್ಣೀರಾದರು.

ಈ ಕುರಿತು ವಿಧ್ಯಾದರೆ ತಾಯಿ, ತಮ್ಮ ಹಾಗೂ ಸಂಬಂಧಿಕರು ಡಾ.ಷಣ್ಮುಖ ವಿರುದ್ದ ಕೊಲೆ ಆರೋಪ ಹೊರೆಸಿದ್ದಾರೆ. ಅವರ ಕಿರುಕುಳದಿಂದಲೇ ನಮ್ಮ ಮಗಳು ಮೃತಪಟ್ಟಿದ್ದು. ಇದು ಕೊಲೆ. ಈ ಕುರಿತು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೈಸೂರಿನ ಕೆ.ಆರ್.ಆಸ್ಪತ್ರೆಯ ಪ್ರಖ್ಯಾತ ಮೂಳೆ ತಜ್ಞರಾಗಿರುವ ಡಾ.ಷಣ್ಮುಖ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಡಾ.ವಿದ್ಯಾಧರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Whats_app_banner