ಅಭಿಮತ: ಭವಿಷ್ಯದ ತಲೆಮಾರಿನ ಹಿತಕ್ಕಾಗಿಯಾದರೂ ಕಾರ್ಮಿಕರ ಹಕ್ಕನ್ನು ಜೀವಂತ ಉಳಿಸಬೇಕು
ಶ್ರೀನಿವಾಸ ಮಠ ಬರಹ: ಮುಂದಿನ ತಲೆಮಾರು ಚೆನ್ನಾಗಿರಲಿ ಎನ್ನುವ ಉದ್ದೇಶದಿಂದ ಪರಿಸರ ಸಂರಕ್ಷಣೆ ಬಗ್ಗೆ ಗಮನಕೊಡುವುದನ್ನು ಕರ್ತವ್ಯ ಎಂದುಕೊಳ್ಳುತ್ತೇವೆ. ಅದೇ ರೀತಿ ಉದ್ಯೋಗಿಗಳ ಹಕ್ಕನ್ನು ಜೀವಂತ ಇಡುವುದು ಭವಿಷ್ಯದ ತಲೆಮಾರಿಗಾಗಿಯೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಿಂದಿನ ತಲೆಮಾರಿನವರ ತ್ಯಾಗಕ್ಕೆ ಏನರ್ಥ ಇರುತ್ತದೆ?
ಚೀನಾದ ಆರ್ಥಿಕ ಶಕ್ತಿಯನ್ನು ಮೀರಬೇಕು ಅಂದರೆ ಭಾರತೀಯರು ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರೆ ಅದಕ್ಕೂ “ಅಹುದಹುದು” ಎನ್ನುತ್ತಾರೆ. ಕೊಚ್ಚಿ ಮೂಲದ ಹೆಣ್ಣುಮಗಳು ಕೆಲಸದ ಒತ್ತಡದಲ್ಲಿ ಉಸಿರು ಚೆಲ್ಲಿದಳು ಅಂದರೆ “ಅಯ್ಯೋ” ಎಂದು ಉದ್ಗರಿಸುತ್ತಾರೆ. ಕೆಲಸದ ಒತ್ತಡ ವಿಪರೀತ ಆಯಿತು ಎನ್ನುತ್ತಾರೆ.
ಸರ್ಕಾರಿ ಉದ್ಯೋಗಿಗಳು ಸಹ ಇವತ್ತಿಗೆ ಕೆಲಸದ ಒತ್ತಡದಿಂದ ಹೊರತಾಗಿಲ್ಲ. ಆದರೆ ಖಾಸಗಿ ವಲಯದ ಉದ್ಯೋಗಿಗಳ ಪಾಡು ಶತ್ರುವಿಗೂ ಬೇಡ. ಪರ್ಫಾರ್ಮೆನ್ಸ್ ಅಪ್ರೈಸಲ್ ಎಂಬ ಪದವನ್ನು ಪದೇಪದೇ ಖಾಸಗಿ ಕಂಪನಿ ಉದ್ಯೋಗಿಗಳು ಹೇಳುತ್ತಾರೆ. ಅಂದರೆ ವೇತನ ಹೆಚ್ಚಳ ಮಾಡುವುದಕ್ಕೆ ಬಳಸುವ ಉದ್ಯೋಗಿಯ ಕೆಲಸದಲ್ಲಿನ ಸಾಧನೆ ಇದು ಎಂದು ಎಲ್ಲರೂ ಭಾವಿಸುತ್ತಾರೆ. ವಾಸ್ತವ ಏನೆಂದರೆ, ಕಂಪನಿಯ ಉನ್ನತ ಮಟ್ಟದಲ್ಲಿ ನಿರ್ಧಾರ ಆಗುವ ವೇತನ ಹೆಚ್ಚಳದ ಬಜೆಟ್ ಅನ್ನು ಹಂಚುವುದಕ್ಕೆ ಬಳಸುವ ಬುದ್ಧಿವಂತಿಕೆ ಪದ ಇದು.
ಪ್ರತಿ ಪ್ರಾಜೆಕ್ಟ್, ತಂಡ, ವಿಭಾಗ ಹೀಗೆ ಆಯಾ ಮಟ್ಟದಲ್ಲಿ ಒಂದು ಬಜೆಟ್ ನಿಗದಿ ಆಗುತ್ತದೆ. ಆಯಾ ವರ್ಷಕ್ಕೆ ಇಷ್ಟು ಮೊತ್ತದೊಳಗೆ ವೇತನ ಹೆಚ್ಚಳವನ್ನು ಮಾಡಬೇಕು ಎಂದು ಸಂಬಂಧಪಟ್ಟವರಿಗೆ ಸೂಚನೆ ಹೋಗುತ್ತದೆ. ಆ ನಂತರ ಶುರುವಾಗುತ್ತದೆ ಆಕ್ಷೇಪಣೆಗಳು, ಅಬ್ಬಬ್ಬಾ ಉದ್ಯೋಗಿಗಳು ಕೈ ಮುಗಿದು ಬೇಡಿಕೊಳ್ಳಬೇಕು; ನಮಗೆ ಕೆಲಸ ಉಳಿಸಿಕೊಡಿ ಸಾಕು, ಸಂಬಳ ಹೆಚ್ಚಗೆ ಮಾಡದಿದ್ದರೂ ಪರವಾಗಿಲ್ಲ ಅಂತ. ಸಾಮಾನ್ಯ ಜ್ಞಾನ ಇರುವ ಯಾರಾದರೂ ಇದನ್ನು ಹೇಳಬಹುದು ಅಲ್ಲವಾ?
ಬಾಡಿಗೆ ಮನೆಯಲ್ಲಿ ಇರುವವರು ಮಾಲೀಕರ ಬಳಿ, ನೀವು ಎಷ್ಟು ಚೆನ್ನಾಗಿ ನನ್ನ ಜೊತೆಗೆ ವರ್ತಿಸಿದ್ದೀರಿ ಹಾಗೂ ನಿಮ್ಮ ಪರ್ಫಾರ್ಮೆನ್ಸ್ ಮೇಲೆ ಹೆಚ್ಚಿಗೆ ಬಾಡಿಗೆ ನೀಡಬೇಕಾ ಅಥವಾ ಬೇಡವಾ ಅಂತ ನಿರ್ಧಾರ ಮಾಡುವುದಾಗಿ ಹೇಳಿ ನೋಡಲಿ. ಒಂದು ವೇಳೆ ಮನೆಯಲ್ಲಿ ಕೆಲಸಕ್ಕಾಗಿ ನೇಮಿಸಿಕೊಂಡವರಿಗೆ ಹೀಗೆ ಹೇಳಿ ನೋಡಿ, ನಿಮ್ಮ ಪರ್ಫಾರ್ಮೆನ್ಸ್ ನನಗೆ ಸಮಾಧಾನ ಆಗಿರುವುದು ಇಷ್ಟು ಮಾತ್ರ, ಆದ್ದರಿಂದ ಕೇವಲ ನಾಲ್ಕು ಪರ್ಸೆಂಟ್ ಸಂಬಳ ಹೆಚ್ಚಿಸುತ್ತೇವೆ ಅಂತ.
ಖಾಸಗಿ ವಲಯದಲ್ಲಿ ಆಗುತ್ತಿರುವ ಶೋಷಣೆ ಇದೆಯಲ್ಲಾ ಅದರ ಬಗ್ಗೆ ಧ್ವನಿ ಎತ್ತುವಂತೆಯೇ ಇಲ್ಲ. ಏಕೆಂದರೆ, ಯಾವುದೇ ಉದ್ಯೋಗಿಗಳ ಸಂಘಟನೆಯನ್ನು ಮಾಡಿಕೊಳ್ಳುವಂತಿಲ್ಲ ಹಾಗೂ ಸೇರುವಂತಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡ ನಂತರವೇ ನೇಮಕಾತಿ ಪತ್ರವನ್ನು ಅವರು ನೀಡುತ್ತಾರೆ.
ವೇತನ ಹೆಚ್ಚಳ ಎನ್ನುವುದು ಹಣದುಬ್ಬರಕ್ಕೆ ತಕ್ಕಂತೆ ಯೋಜಿಸಬೇಕಾದಂಥ ಸಂಗತಿ. ಕೆಲವರಿಗೆ ವರ್ಷಗಟ್ಟಲೆ ವೇತನ ಹೆಚ್ಚಳ ಮಾಡಿರುವುದಿಲ್ಲ. ಕಂಪನಿಯು ಲಾಭ ಮಾಡಿಲ್ಲ ಎನ್ನುವುದು ಒಂದು ಕಾರಣವಾದರೆ, ಉದ್ಯೋಗಿಯ ವೈಯಕ್ತಿಕ ಪರ್ಫಾರ್ಮೆನ್ಸ್ ಸರಿಯಿಲ್ಲ ಅಥವಾ ತಾವು ಇಟ್ಟಂಥ ಮಾನದಂಡಕ್ಕೆ ಮುಟ್ಟಿಲ್ಲ ಎಂಬುದು ಮತ್ತೊಂದು ಕಾರಣ.
‘ಗೋಲ್ ಸೆಟ್ಟಿಂಗ್’ ಅನ್ನೋ ಇನ್ನೊಂದು ಭಯಾನಕ ಪದ ಇದೆ. ಅದು ಖಂಡಿತವಾಗಿಯೂ ವಾಸ್ತವಕ್ಕೆ ಸಮೀಪದಲ್ಲೂ ಇರಲ್ಲ. ಭಾರತದಂಥ ಜನಸಂಖ್ಯೆ ವಿಪರೀತ ಇರುವ ದೇಶಗಳಲ್ಲಿ ಕೆಲಸ ಸಿಕ್ಕರೆ ಸಾಕು ಎಂಬ ಧೋರಣೆ ಇರುತ್ತದೆ. ಇನ್ನು ಉದ್ಯೋಗ ಸಿಕ್ಕ ತಕ್ಷಣ ಫೋನ್‌ನಿಂದ ಕಾರಿನ ತನಕ, ಶೂ, ವಾಚ್, ಬಟ್ಟೆಯ ತನಕ, ಕಡೆಗೆ ಹೋಮ್ ಲೋನ್ ತನಕ ಎಲ್ಲವೂ ಇಎಂಐಗೆ ಖರೀದಿಸುವ ಜನ ನಾವು. ಸಂಬಳ ಕಡಿಮೆಯಾದರೆ, ಸಂಬಳವೇ ಬಾರದಿದ್ದರೆ ಬದುಕು ವಿಲವಿಲ ಅಂದುಹೋಗುತ್ತದೆ.
ಸುಖಾಸುಮ್ಮನೆ ಉದ್ಯೋಗದಿಂದ ತೆಗೆದರೆ, ವರ್ಷಗಟ್ಟಲೆ ವೇತನ ಹೆಚ್ಚಳ ಮಾಡದಿದ್ದರೆ, ಮೇಲಧಿಕಾರಿ ಉದ್ಯೋಗಿಗಳ ಹಕ್ಕಿನ ರಜಾವನ್ನು ತೆಗೆದುಕೊಳ್ಳಲು ಬಿಡದೆ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದರೆ… ಇಂಥವುಗಳಿಗೆ ಕಾನೂನಿನ ಮೊರೆ ಹೋಗುವ ಅವಕಾಶವೇ ಇಲ್ಲದಂತಾಗಿದೆ.
ಹೇಗೆ ಪರಿಸರದ ರಕ್ಷಣೆ ಎಂಬುದನ್ನು ನಮ್ಮ ಮುಂದಿನ ತಲೆಮಾರಿಗೆ ಎಂಬ ಉದ್ದೇಶದಿಂದ ಮಾಡುತ್ತೇವೋ ಅದೇ ರೀತಿ ಉದ್ಯೋಗಿಗಳು ಅಥವಾ ಕಾರ್ಮಿಕರ ಹಕ್ಕನ್ನು ಸಹ ಜೀವಂತ ಇಡುವುದು ಭವಿಷ್ಯದ ತಲೆಮಾರಿಗಾಗಿಯೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹಿಂದಿನ ತಲೆಮಾರಿನವರು ಮಾಡಿದ ತ್ಯಾಗ ಹಾಗೂ ಬಲಿದಾನಕ್ಕೆ ಏನರ್ಥ ಇರುತ್ತದೆ?
ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡಬೇಕು ಎನ್ನುವ ವ್ಯಕ್ತಿ ಎಂದಿಗೂ ಉದ್ಯೋಗಿಗಳ ವೇತನ, ದೈಹಿಕ- ಮಾನಸಿಕ ಆರೋಗ್ಯ, ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವುದೇ ಇಲ್ಲ. ದೇಶದ ಶಿಕ್ಷಣ ವ್ಯವಸ್ಥೆ ಬಗ್ಗೆ ವಿಪರೀತ ಆಕ್ಷೇಪಗಳನ್ನು ಹೇಳುವ ಉದ್ಯಮಿಗಳು ತಮಗೆ ಸಿಕ್ಕ ತೆರಿಗೆ ಅನುಕೂಲಗಳ ಸ್ವಲ್ಪ ಭಾಗವನ್ನೂ ಶಿಕ್ಷಣ ವ್ಯವಸ್ಥೆ ಸುಧಾರಿಸುವುದಕ್ಕೆ ಬಳಸುವುದಿಲ್ಲ.
ಆದ್ದರಿಂದ ಯಾವುದಕ್ಕೆ ಜೈ ಎನ್ನಬೇಕೋ ಅಥವಾ ಯಾವುದನ್ನು ಧಿಕ್ಕರಿಸಬೇಕೋ ತಿಳಿಯದಿದ್ದರೆ ಹೇಗೆ?
ಗಮನಿಸಿ: ಈ ಬರಹದಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ. ಅವರ ಬರಹವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಿಬ್ಬಂದಿ ಈ ಬರಹವನ್ನು ಬದಲಿಸಿಲ್ಲ. ಆಸಕ್ತ ಓದುಗರು ತಮ್ಮ ಬರಹ, ಅಭಿಪ್ರಾಯವನ್ನು ht.kannada@htdgital.in ವಿಳಾಸಕ್ಕೆ ಇಮೇಲ್ ಮಾಡಬಹುದು.