ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಕೋರಿ ಮೇ 21ಕ್ಕೆ ಮನವಿ ಬಂದಿದೆ; ಕೇಂದ್ರದಿಂದ ತಡ ಎಂದ ಕಾಂಗ್ರೆಸ್‌ಗೆ ಸಚಿವ ಎಸ್ ಜೈಶಂಕರ್ ತಿರುಗೇಟು
ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲು ಕಾಯ್ದೆ ಇದೆ. ಇದರ ಮೂಲಕವೇ ಕ್ರಮ ಕೈಗೊಳ್ಳಬೇಕು. ಮೇ 21ಕ್ಕೆ ಕರ್ನಾಟಕದಿಂದ ಮನವಿ ಬಂದ ತಕ್ಷಣವೇ ಅದರ ಬಗ್ಗೆ ನಾವು ಗಮನ ಹರಿಸಿದ್ದೇವೆ. ಮೇ 23 ರಂದು ಪ್ರಜ್ವಲ್ ವಿರುದ್ಧ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ ಎಂದು ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ದೆಹಲಿ: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Sexual Assault Case) ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic Passport) ರದ್ದು ಮಾಡುವ ಕುರಿತು ಇದೀಗ ಕೇಂದ್ರ ಹಾಗೂ ಕರ್ನಾಟಕ ಸರ್ಕಾರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಕೋರಿ ಮೇ 21 ರಂದು ಮಾತ್ರ ಮನವಿ ಬಂದಿದೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರವೇ ತಡ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ.
ಪ್ರಜ್ವಲ್ ಪಾಸ್‌ಪೋರ್ಟ್ ಸಂಬಂಧ ಕೇಳಲಾದ ಪ್ರಶ್ನೆಗೆ ಅವರು, ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲು ಪಾಸ್‌ಪೋರ್ಟ್ ಕಾಯ್ದೆ ಇದೆ. ಇದರ ಮೂಲಕವೇ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯ ಅಥವಾ ಪೊಲೀಸರ ಅನುಮತಿಯೂ ಅಗತ್ಯವಾಗಿರುತ್ತದೆ. ಮೇ 21ಕ್ಕೆ ಮನವಿ ಬಂದ ತಕ್ಷಣವೇ ಅದರ ಬಗ್ಗೆ ನಾವು ಗಮನ ಹರಿಸಿದ್ದೇವೆ. ಮೇ 23 ರಂದು ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ ಎಂದು ವಿವರಿಸಿದ್ದಾರೆ. ಅಲ್ಲದೆ, ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡುವ ಸಂಬಂಧ ಅವರಿಗೆ ಇಮೇಲ್ ಮೂಲಕ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಸಂಬಂಧ ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಈವರೆಗೂ ಸ್ಪಂದಿಸಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ (Dr G Parameshwar) ಇತ್ತೀಚೆಗಷ್ಟೇ ತಿಳಿಸಿದ್ದರು. ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದರೆ. ಎಸ್ಐಟಿ ಪತ್ರ ಬರೆದಿದೆ. ಈವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದರು.
ಕೇಂದ್ರ ಸರ್ಕಾರವು ಕಾನೂನಿನ ಚೌಕಟ್ಟಿನಲ್ಲಿ ಸಹಾಯ ಮಾಡಬೇಕು. ಬರೀ ಟೀಕೆ ಮಾಡಿದರೆ ಅರ್ಥವಿಲ್ಲ. ಪ್ರಜ್ವಲ್ ರೇವಣ್ಣ ಅವರ ಮೇಲೆ ವಾರಂಟ್ ಜಾರಿ ಮಾಡಿರುವುದನ್ನು ತಿಳಿಸಲಾಗಿದೆ. ವಾರಂಟ್ ಜಾರಿಯಾದ ನಂತರ ಪಾಸ್‌ಪೋರ್ಟ್ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದ್ದರು.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದರು. ಮೊದಲ ಬಾರಿಗೆ ಬರೆದ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಹೀಗಾಗಿ ಎರಡನೇ ಬಾರಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ ಕೇಂದ್ರ ಸರ್ಕಾರವು ಪ್ರಕರಣದಲ್ಲಿ ಕರ್ನಾಟಕದಿಂದಲೇ ತಡವಾಗಿದೆ ಎಂದು ಹೇಳುತ್ತಿದೆ.
ತಮ್ಮ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋವನ್ನು ಸಂಸದ ಪ್ರಜ್ವಲ್ ರೇವಣ್ಣ ಎದುರಿಸುತ್ತಿದ್ದಾರೆ. ಅಲ್ಲದೆ, ಅತ್ಯಾಚಾರ ಆರೋಪ ಪ್ರಕರಣಗಳೂ ಇವರ ಮೇಲಿವೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯದ ವಿಡಿಯೊ ವೈರಲ್ ವೈರಲ್ ಆಗುತ್ತಿದ್ದಂತೆ ಏಪ್ರಿಲ್ 27 ರಂದು ಪ್ರಜ್ವಲ್ ವಿದೇಶಕ್ಕೆ ತೆರಳಿ ಆ ಬಳಿಕ ತಲೆಮರೆಸಿಕೊಂಡಿದ್ದಾರೆ. ಸುಮಾರು 1 ತಿಂಗಳಿನಿಂದ ವಿದೇಶದಲ್ಲೇ ಉಳಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)