ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್​​ಡಿ ಹೆಗಡೆ ಆಲ್ಮನೆ ಆಯ್ಕೆ; ಅವರ ಪರಿಚಯ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್​​ಡಿ ಹೆಗಡೆ ಆಲ್ಮನೆ ಆಯ್ಕೆ; ಅವರ ಪರಿಚಯ ಇಲ್ಲಿದೆ

ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್​​ಡಿ ಹೆಗಡೆ ಆಲ್ಮನೆ ಆಯ್ಕೆ; ಅವರ ಪರಿಚಯ ಇಲ್ಲಿದೆ

ಆರ್​​ಡಿ ಹೆಗಡೆ ಆಲ್ಮನೆ ಅವರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 3 ಮತ್ತು 4ರಂದು ಶಿರಸಿಯಲ್ಲಿ ಸಮ್ಮೇಳನ ನಡೆಯಲಿದೆ.

ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್​​ಡಿ ಹೆಗಡೆ ಆಲ್ಮನೆ ಆಯ್ಕೆ
ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್​​ಡಿ ಹೆಗಡೆ ಆಲ್ಮನೆ ಆಯ್ಕೆ

ಬೆಂಗಳೂರು: ಶಿರಸಿಯಲ್ಲಿ ಡಿಸೆಂಬರ್ 3 ಮತ್ತು 4ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಆರ್​​ಡಿ ಹೆಗಡೆ, ಆಲ್ಮನೆ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿಎನ್ ವಾಸರೆ ತಿಳಿಸಿದ್ದಾರೆ. ಅಕ್ಟೋಬರ್ 26ರ ಶನಿವಾರ ದಾಂಡೇಲಿಯ ಸಾಹಿತ್ಯ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಒಮ್ಮತದ ಆಯ್ಕೆ ಪ್ರಕ್ರಿಯೆ ನಡೆಯಿತು. ಸರ್ವಾಧ್ಯಕ್ಷತೆಗೆ ಜಿಲ್ಲೆಯ ಕೆಲವು ಸಾಹಿತಿಗಳ ಹೆಸರುಗಳ ಪ್ರಸ್ತಾವನೆ ಮತ್ತು ಚರ್ಚೆಯ ನಂತರ ಸಭೆಯಲ್ಲಿ ಅಂತಿಮವಾಗಿ ಸರ್ವಾನುಮತದಿಂದ ಆರ್​​ಡಿ ಹೆಗಡೆ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಘೋಷಿಸಲಾಯಿತು ಎಂದು ಬಿಎನ್ ವಾಸರೆ ತಿಳಿಸಿದ್ದಾರೆ.

ಆರ್​​​ಡಿ ಹೆಗಡೆ ಪರಿಚಯ

ಶಿರಸಿ ತಾಲೂಕಿನ ಆಲ್ಮನೆಯವರಾಗಿರುವ ಆರ್​​ಡಿ ಹೆಗಡೆ (ರಘುನಾಥ ದೇವರು ಹೆಗಡೆ) 75 ವರ್ಷದ ಇಳಿ ಪ್ರಾಯದವರು. ಕನ್ನಡ, ಇಗ್ಲೀಷ್, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವ ಇವರು ಸಂಸ್ಕೃತ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಶಾಸನ ಶಾಸ್ತ್ರದಲ್ಲಿ ಡಿಪ್ಲೋಮಾ ಪದವಿ ಪಡೆದವರು. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 17 ವರ್ಷ ಉಪನ್ಯಾಸಕರಾಗಿ, 15 ವರ್ಷ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 2007ರಲ್ಲಿ ನಿವೃತ್ತಿಯಾಗಿ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ವಿಶೇಷವಾಗಿ ವಿಮರ್ಶಕರು. ಉತ್ತಮ ವಾಗ್ಮಿಗಳೂ, ವೈಚಾರಿಕ ಚಿಂತಕರೂ ಆಗಿರುವ ಆಲ್ಮನೆಯವರು ತಮ್ಮ ಸಾಹಿತ್ಯ, ವಿಮರ್ಶೆ ಮತ್ತು ಅಂಕಣ ಬರಹಗಳ ಮೂಲಕ ನಾಡಿನ ಗಮನ ಸೆಳೆದವರು. ನೇರ ನಿಷ್ಠುರವಾದಿಗಳಾದರೂ ಸಹೃದಯಿಗಳು.

ಆಲ್ಮನೆ ಅವರ ಪ್ರಕಟಿತ ಸಾಹಿತ್ಯ

ಸತ್ಯಮೇವ ಜಯತೆ ಹಾಗೂ ಇತರ ಕಥೆಗಳು

ಪುಟ್ಟ ಗುಲಾಬಿ (ಕಥಾಸಂಕಲನ)

ದಾರಿ (ಕಾದಂಬರಿ)

ಭಗವದ್ಗೀತೆ, ಅಪರಾಧ ಮತ್ತು ಶಿಕ್ಷೆ (ವಿಚಾರ ಸಾಹಿತ್ಯ) (ನವ ಕರ್ನಾಟಕ ಪ್ರಕಾಶನದಿಂದ 3 ಬಾರಿ ಮುದ್ರಣ)

ಉಪನಿಷತ್ತುಗಳು ಅರ್ಥಲೋಕ: ತತ್ವಶಾಸ್ತ್ರ (3 ಬಾರಿ ಮುದ್ರಣ)

ಜೆನ್ ಮಹಾಯಾನ: ಬೌದ್ಧ ತತ್ವಶಾಸ್ತ್ರ, ಕೃತಿ ಚಿತ್ತ (ಸಾಹಿತ್ಯ ವಿಮರ್ಶೆ)

ಸಂಕಥನ (ಅಂಕಣ ಬರಹ) ಆದಿತ್ಯ ಪ್ರಕಾಶನ ದಿಂದ 2 ಬಾರಿ ಮುದ್ರಣ

ಭಾರತದಲ್ಲಿ ಶಿಕ್ಷಣ: ಸವಾಲು ಮತ್ತು ಸಾಧ್ಯತೆ: (ಸೋಷಿಯಲ್ ಸೈಂಟಿಸ್ಟ್ ಕೃತಿಯ ಅನುವಾದ)

ಮಾನವತ್ವದ ಸಾರ: (George Thomsan ನ Human Essence ಕೃತಿಯ ಅನುವಾದ)

ಕಡಲಾಚೆಯ ಕಥೆಗಳು (ವಿಶ್ವಕಥಾ ಸಾಹಿತ್ಯದಿಂದ ಆಯ್ದ ಕಥೆಗಳ ಅನುವಾದ)

ತುಂಬಿದ ಬಟ್ಟಲು ಹಾಗೂ ಇತರ ಬರಹಗಳು (ಸಾಹಿತ್ಯ ಪ್ರಬಂಧಗಳು)

ಸೆಕೆಂಡ್ ಜನರೇಶನ್ (ಕಥಾ ಪ್ರಬಂಧಗಳು)

ಕವಿ ವಿಜಿ ಭಟ್ಟ (ವ್ಯಕ್ತಿ ಮತ್ತು ಸಾಹಿತ್ಯ)

ಪೂರ್ಣಚಂದ್ರ ತೇಜಸ್ವಿ: (ವ್ಯಕ್ತಿ ಮತ್ತು ಸಾಹಿತ್ಯ)

ಅಲೆಮಾರಿಯ ಸ್ವಗತಗಳು, ಮನೋವ್ಯಾಪಾರದ ಬಿಂಬಗಳು (ಅಚ್ಚಿನಲ್ಲಿದೆ)

The Infidel And Other Essays In Indian Philosophy: (ಗೀರ್ವಾಣ ಸುಧಾ ಮುಂಬಯಿ ಪ್ರಕಟಣೆ)

ಭಾಸನಾಟಕ ಕಥಾಃ ಸಂಸ್ಕೃತದಲ್ಲಿ (ಗೀರ್ವಾಣ‌ಸುಧಾ)

ರಾಮಾಯಣ ಸುಭಾಷಿತಾನಿ: (ಸಂಸ್ಕೃತದಲ್ಲಿ)

ಅಂಕಣ ಬರಹಗಳು: (ಲಂಕೇಶ್ ಮತ್ತು ವಿವಿಧ ಪತ್ರಿಕೆಗಳಲ್ಲಿ ಬಂದ ಅಂಕಣ ಬರಹಗಳ ಸಂಗ್ರಹ) ಸೇರಿಂದಂತೆ 20 ಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. ಜೊತೆಗೆ ವಿವಿಧ ಪತ್ರಿಕೆಗಳಲ್ಲಿ ಬಿಡಿ ಬರಹಗಳು, ಸಾಹಿತ್ಯ ಪರಾಮರ್ಶೆ ಮತ್ತು ಕಥೆಗಳು ಪ್ರಕಟಗೊಂಡಿವೆ.

ಆಲ್ಮನೆಯವರಿಗೆ ಸಂದ ಗೌರವಗಳು

2013ರಲ್ಲಿ ಶಿರಸಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಸಭೆಯ ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ಕದಂಬೋತ್ಸವಗಳಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿಯ ಅಧ್ಯಕ್ಷತೆ, ಬಿಎಚ್ ಶ್ರೀಧರ ಪುಸ್ತಕ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಗುಲ್ಬರ್ಗಾದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ರಾಜ್ಯೋತ್ಸವದ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ಸನ್ಮಾನಗಳು ಇವರಿಗೆ ದೊರೆತಿವೆ.

1973ರಿಂದ ಧಾರವಾಡ, ಸಾಗರ, ಮಂಗಳೂರು, ಮೈಸೂರು ಹಾಗೂ ಸಿರ್ಸಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಒಡನಾಟ ಹಾಗೂ ಪರಿಷತ್ತಿನ ಆಜೀವ ಸದಸ್ಯತ್ವ, ಪುಣೆ ಹಾಗೂ ಶಾಂತಿನಿಕೇತನದಲ್ಲಿ ಭಾರತೀಯ ತತ್ವ ಶಾಸ್ತ್ರದ ಕುರಿತು ಇಂಗ್ಲಿಷ್​​​ನಲ್ಲಿ ಪ್ರಬಂಧ ಮಂಡನೆ, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳಲ್ಲಿ 6 ಬಾರಿ ಅಧ್ಯಕ್ಷತೆ, ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಿವಮೊಗ್ಗದಲ್ಲಿ ಉಪನಿಷತ್ತುಗಳ ಕುರಿತು ದಿಕ್ಸೂಚಿ ಭಾಷಣ ಸೇರಿದಂತೆ ಆಲ್ಮನೆಯವರು ಹಲವು ಗೌರವ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದವರಾಗಿದ್ದಾರೆ.

ಇವರ ವಿವಿಧ ಪ್ರಕಾರದ ಬರಹಗಳು ನವ ಕರ್ನಾಟಕ ಪ್ರಕಾಶನ, ಅಕ್ಷಯ ಪ್ರಕಾಶನ, ಆದಿತ್ಯ ಪ್ರಕಾಶನ, ಅಧ್ಯಯನ ಪ್ರಕಾಶನ, ಪ್ರೇಮ ಪ್ರಕಾಶನ, ಶೃತಿ ಪ್ರಕಾಶನ, ಚೇತನ ಪುಸ್ತಕ ಮಾಲೆ, ಮುಂಬೈನ ಗಿರ್ವಾಣ ಸುಧಾ ಪ್ರಕಾಶನಗಳಿಂದ ಪ್ರಕಟಣೆಗೊಂಡಿರುವು ಹಾಗೂ ಕೆಲವು ಕೃತಿಗಳು ಮೂರಕ್ಕೂ ಹೆಚ್ಚು ಬಾರಿ ಮರು ಮುದ್ರಣಗೊಂಡಿರುವುದು ವಿಶೇಷವಾಗಿದೆ.

Whats_app_banner