ಸಿದ್ದರಾಮಯ್ಯ ತವರು ಕ್ಷೇತ್ರದ ಇಮ್ಮಾವಿನಲ್ಲೇ ಕರ್ನಾಟಕ ಫಿಲ್ಮ್‌ ಸಿಟಿ; ಮತ್ತೆ 50 ಎಕರೆ ಮಂಜೂರಿಗೆ ಅನುಮತಿ, ಮೊದಲನೇ ಹಂತ ಆರಂಭಕ್ಕೆ ಸೂಚನೆ-sandalwood news karnataka film city near mysore cm siddaramaiah directs to start first phase 50 acres for 2nd phase kub ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸಿದ್ದರಾಮಯ್ಯ ತವರು ಕ್ಷೇತ್ರದ ಇಮ್ಮಾವಿನಲ್ಲೇ ಕರ್ನಾಟಕ ಫಿಲ್ಮ್‌ ಸಿಟಿ; ಮತ್ತೆ 50 ಎಕರೆ ಮಂಜೂರಿಗೆ ಅನುಮತಿ, ಮೊದಲನೇ ಹಂತ ಆರಂಭಕ್ಕೆ ಸೂಚನೆ

ಸಿದ್ದರಾಮಯ್ಯ ತವರು ಕ್ಷೇತ್ರದ ಇಮ್ಮಾವಿನಲ್ಲೇ ಕರ್ನಾಟಕ ಫಿಲ್ಮ್‌ ಸಿಟಿ; ಮತ್ತೆ 50 ಎಕರೆ ಮಂಜೂರಿಗೆ ಅನುಮತಿ, ಮೊದಲನೇ ಹಂತ ಆರಂಭಕ್ಕೆ ಸೂಚನೆ

ಫಿಲ್ಮ್‌ ಸಿಟಿ ಯೋಜನೆಯನ್ನು ಕೂಡಲೇ ಆರಂಭಿಸುವಂತೆ ಸೂಚಿಸಿರುವ ಸಿಎಂ ಸಿದ್ದರಾಮಯ್ಯ ಅವರು ಎರಡನೇ ಹಂತಕ್ಕೆ ನೀಡಲು ಹೆಚ್ಚುವರಿ ಭೂಮಿ ಗುರುತಿಸುವಂತೆಯೂ ಸೂಚನೆ ನೀಡಿದ್ದಾರೆ.

ಮೈಸೂರು ಸಮೀಪ ನಿರ್ಮಿಸುತ್ತಿರುವ ಫಿಲ್ಮ್‌ ಸಿಟಿ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು,
ಮೈಸೂರು ಸಮೀಪ ನಿರ್ಮಿಸುತ್ತಿರುವ ಫಿಲ್ಮ್‌ ಸಿಟಿ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು,

ಬೆಂಗಳೂರು: ಬೆಂಗಳೂರು ಹಾಗೂ ಮೈಸೂರು ನಡುವೆ ಎಲ್ಲಿ ನಿರ್ಮಿಸಬೇಕು ಎನ್ನುವ ಹೊಯ್ದಾಟದ ನಡುವೆಯೇ ದಶಕದ ಅವಧಿಯನ್ನು ಕಳೆದ ಕರ್ನಾಟಕ ಫಿಲ್ಮ್‌ ಸಿಟಿ ಮೈಸೂರು ಜಿಲ್ಲೆಯಲ್ಲೇ ಅನುಷ್ಠಾನಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಸ್ವಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರದ ಭಾಗವಾದ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ಇದನ್ನು ಜಾರಿಗೊಳಿಸುತ್ತಿದ್ದು. ಈಗಾಗಲೇ ಭೂಮಿಯನ್ನು ನೀಡಲಾಗಿದೆ. ಆದರೆ ಮೊದಲನೇ ಹಂತದ ಚಟುವಟಿಕೆಯೇ ಇನ್ನೂ ಶುರುವಾಗಿಲ್ಲ. ಇದರ ನಡುವೆ ಫಿಲ್ಮ್‌ ಸಿಟಿಯ ಎರಡನೇ ಹಂತಕ್ಕೆ 50 ಎಕರೆ ಗುರುತಿಸಲು ಸೂಚಿಸಲಾಗಿದ್ದು, ಮಂಜೂರು ಕೂಡ ಆಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಚಿತ್ರನಗರಿ ನಿರ್ಮಿಸುವ ಕುರಿತು ಬೆಂಗಳೂರಿನಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಹಲವಾರು ಸೂಚನೆಗಳನ್ನು ನೀಡಲಾಯಿತು.

ಕೂಡಲೇ ಮೊದಲ ಹಂತದ ಯೋಜನೆಯನ್ನು ಆರಂಭಿಸುವಂತೆಯೂ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಮ್ಮಾವು ಗ್ರಾಮದಲ್ಲಿ ಈಗಾಗಲೇ ಗುರುತಿಸಲಾಗಿರುವ 11೦ ಎಕರೆ ಕೆಐಎಡಿಬಿ ಭೂಮಿ ಹಸ್ತಾಂತರಿಸಿ ಆದೇಶ ಹೊರಡಿಸಬೇಕು. ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಲು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.

ಮೊದಲ ಹಂತದ ಯೋಜನೆಯನ್ನು ಕೂಡಲೇ ಪ್ರಾರಂಭಿಸಬೇಕು. 2015-16 ರಲ್ಲಿ ಆಯವ್ಯಯ ಘೋಷಣೆ ಮಾಡಲಾಗಿತ್ತು. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್‌ ಅಡ್ವೈಸರ್‌ ನೇಮಕ ಮಾಡಲು ಟೆಂಡರ್‌ ಕರೆಯುವಂತೆ ನಿರ್ದೇಶನ ನೀಡಿದರು.

ಭೂಮಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರ ಮಾಡಿದ ನಂತರ ಪಿಪಿಪಿ ಮಾದರಿಯಲ್ಲಿ ಎಕ್ಸ್‌ಪ್ರೆಷನ್‌ ಆಫ್‌ ಇಂಟರೆಸ್ಟ್ ಕರೆಯಲು ಕ್ರಮ ಕೈಗೊಳ್ಳಬೇಕು. ಇಂದಿನ ಚಿತ್ರರಂಗಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನೊಳಗೊಂಡ ಅತ್ಯಾಧುನಿಕ ಮಾದರಿಯ ಚಿತ್ರನಗರಿ ನಿರ್ಮಿಸಲು ಸೂಚಿಸಿದರು.

ಚಿತ್ರನಗರಿಯಲ್ಲಿ ಥಿಯೇಟರ್‌, ಸ್ಟುಡಿಯೋ, ಮಲ್ಟಿಪ್ಲೆಕ್ಸ್‌, ಥೀಮ್‌ ಪಾರ್ಕ್‌, ಹೋಟೆಲ್‌ಗಳನ್ನೂ ನಿರ್ಮಿಸಬೇಕು. ಟ್ರಾನ್ಸಾಕ್ಷನ್‌ ಅಡ್ವೈಸರ್‌ ನೇಮಕವಾದ ನಂತರ ಚಿತ್ರರಂಗದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಚಿತ್ರನಗರಿಯ ರೂಪುರೇಷೆಗಳನ್ನು ಅಂತಿಮಗೊಳಿಸುವಂತೆಯೂ ಸಿದ್ದರಾಮಯ್ಯ ಆದೇಶಿಸಿದರು.

ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಚಿತ್ರ ಪ್ರವಾಸೋದ್ಯಮಕ್ಕೆ (Film Tourism) ಒತ್ತು ನೀಡಬೇಕು. ಇದರಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು ಎನ್ನುವುದು ಸಿಎಂ ಸೂಚನೆ.

ಸಭೆಯಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್‌ ಚಂದ್ರ, ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

mysore-dasara_Entry_Point