Tumakuru News: ಕೈಯಲ್ಲಿ ಹಿಡಿದ ಜಿಲಟಿನ್ ಕಡ್ಡಿ ಸ್ಪೋಟ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಬೆರಳುಗಳು ಕಟ್
Gelatin Sticks Explosion: ಕೈಯಲ್ಲಿ ಹಿಡಿದ ಜಿಲಟಿನ್ ಕಡ್ಡಿ ಸ್ಪೋಟಗೊಂಡ ಹಿನ್ನೆಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಬೆರಳುಗಳು ಕಟ್ ಆಗಿರುವ ಘಟನೆ ಗುಬ್ಬಿ ತಾಲೂಕಿನ ಸಿಎಸ್ ಪುರ ಹೋಬಳಿ ಇಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ತುಮಕೂರು: ಶಾಲಾ ಕಾಂಪೌಂಡ್ ನಿರ್ಮಾಣಕ್ಕೆಂದು ತಂದು ಜಲ್ಲಿ ಕಲ್ಲುಗಳಲ್ಲಿ ಇಟ್ಟಿದ್ದ ಜೀವಂತ ಜಿಲಟಿನ್ ಕಡ್ಡಿ ಮುಟ್ಟಿದ್ದ ಹಿನ್ನೆಲೆ ಸ್ಫೋಟಗೊಂಡು ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ತನ್ನ ಕೈ ಬೆರಳುಗಳು ತುಂಡಾಗಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಸಿಎಸ್ ಪುರ ಹೋಬಳಿ ಇಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ದಸರಾ ರಜೆ ಹಿನ್ನೆಲೆ 10ನೇ ತರಗತಿಯ ವಿದ್ಯಾರ್ಥಿಗಳು ಸ್ಪೆಷಲ್ ಕ್ಲಾಸ್ಗೆ ಆಗಮಿಸಿದ್ದರು. ಈ ವೇಳೆ ಇಡಗೂರು ಗ್ರಾಮದ ವಿದ್ಯಾರ್ಥಿ ಮೋನಿಶ್ ಗೌಡ (15) ಕಲ್ಲು ಬಂಡೆ ಚೂರುಗಳ ಮಧ್ಯೆ ಕಂಡ ವೈರ್ ಸಹಿತ ಇದ್ದ ಜಿಲಟಿನ್ ಕಡ್ಡಿ ತೆಗೆದುಕೊಂಡಿದ್ದ. ಆದರೆ ಅದನ್ನು ಕುತೂಹಲದಿಂದ ತೆಗೆದುಕೊಂಡು ಶಾಲಾ ಆವರಣಕ್ಕೆ ತೆರಳಿದ್ದ.
ಎಸೆಯುವಷ್ಟರಲ್ಲಿ ಜಿಲಟಿನ್ ಕಡ್ಡಿ ಸ್ಫೋಟ
ಸ್ವಲ್ಪ ಸಮಯದ ನಂತರ ಬಿಸಿಯಾದ ಕಾರಣ ಭಯಗೊಂಡು ಕಡ್ಡಿ ಎಸೆಯಲು ಮುಂದಾದ. ಆದರೆ, ಅದನ್ನು ಇನ್ನೇನು ಬಿಸಾಡ ಎನ್ನುವಷ್ಟರಲ್ಲೇ ಸ್ಫೋಟಗೊಂಡು ಬಲಗೈ ಬೆರಳುಗಳು ತುಂಡಾದವು. ಇಡೀ ಗ್ರಾಮಕ್ಕೆ ಸ್ಫೋಟದ ಶಬ್ದ ಕೇಳಿಸಿದೆ. ಗಾಯಾಳು ವಿದ್ಯಾರ್ಥಿಯನ್ನು ತುಮಕೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ.
ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಇಡಗೂರು ಗ್ರಾಮ ಪಂಚಾಯಿತಿಯು ಈ ಕಲ್ಲುಗಳನ್ನು ತಂದಿತ್ತು. ನರೇಗಾ ಯೋಜನೆಯಡಿ ಕೆಲಸ ಆರಂಭಿಸಿ ಅಲ್ಲಿನ ಹಳ್ಳ ಮುಚ್ಚಲು ಬೆಳ್ಳೂರು ಕ್ರಾಸ್ ಸಮೀಪದಿಂದ ತಂದ ಬಂಡೆ ಕಲ್ಲುಗಳನ್ನು ತರಲಾಗಿತ್ತು. ಆದರೆ ಬಂಡೆಗಳ ರಾಶಿಯಲ್ಲಿ ವೈರ್ ಸಹಿತ ಜೆಲಟಿನ್ ಕಡ್ಡಿಗಳು ಇದ್ದವು.
ಸ್ಥಳಕ್ಕೆ ಆಗಮಿಸಿದ ಸಿಪಿಐ ಗೋಪಿನಾಥ್ ತಕ್ಷಣ ಘಟನೆ ನಡೆದ ಸ್ಥಳ ಪರಿಶೀಲಿಸಿದರು. ಇನ್ನೂ ಜೀವಂತ ಜಿಲಟಿನ್ ಕಡ್ಡಿ ಇರುವ ಬಗ್ಗೆ ಖಚಿತಪಡಿಸಿಕೊಂಡು 100 ಮೀಟರ್ ನಿರ್ಬಂಧ ಹೇರಿದರು. ಸ್ಥಳಕ್ಕೆ ಭೂ ಮತ್ತು ಗಣಿಗಾರಿಕೆ ಉಪ ನಿರ್ದೇಶಕ ಲೋಕೇಶ್ ಕುಮಾರ್ ಹಾಗೂ ಭೂ ವಿಜ್ಞಾನಿ ಸಂತೋಷ್ ಕುಮಾರ್ ಭೇಟಿ ನೀಡಿ ಜಿಲಟಿನ್ ಕಡ್ಡಿ ಬಗ್ಗೆ ಪರಿಶೀಲನೆ ನಡೆಸಿದರು. ತಾಪಂ ಇಓ ಶಿವಪ್ರಕಾಶ್, ಕಂದಾಯ ನಿರೀಕ್ಷಕಿ ಪ್ರಮೀಳಾ, ಗ್ರಾಮ ಲೆಕ್ಕಿಗ ಅಭಿಷೇಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
