Tumakuru News: ಗಣಪತಿ ವಿಸರ್ಜನೆ ಮಾಡಲು ಹೋಗಿದ್ದ ಮೂವರು ಸಾವು; ಅಪ್ಪ, ಮಗನ ಜೊತೆ ಓರ್ವ ಯುವಕ ದುರ್ಮರಣ
Tumakuru News: ತುಮಕೂರಿನಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಗಣೇಶ ಮೂರ್ತಿ ವಿಸರ್ಜನೆಗೆಂದು ಹೋಗಿದ್ದ ಮೂವರು ಮೃತಪಟ್ಟಿದ್ದಾರೆ. ಈ ಘಟನೆ ತುರುವೇಕರೆ ತಾಲೂಕಿನ ದಂಡಿನಶಿವರ ಹೋಬಳಿಯ ರಂಗನಹಟ್ಟಿ ಕಟ್ಟೆಯಲ್ಲಿ ನಡೆದಿದೆ.
ತುರುವೇಕರೆ (ತುಮಕೂರು): ಗಣಪತಿ ವಿಸರ್ಜನೆ ಮಾಡಲು (Tumkur Ganpati idol immersion) ಹೋಗಿದ್ದ ಅಪ್ಪ, ಮಗ ಮತ್ತು ಓರ್ವ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಮಾರಸಂದ್ರ ಸಮೀಪದ ರಂಗನಹಟ್ಟಿ ಕಟ್ಟೆಯಲ್ಲಿ ನಡೆದಿದೆ.
ರಂಗನಹಟ್ಟಿ ಗ್ರಾಮದ ನಿವಾಸಿಗಳಾದ ರೇವಣ್ಣ (50), ಆತನ ಮಗ ಶರತ್ (25) ಹಾಗೂ ದಯಾನಂದ್ (32) ಮೃತ ದುರ್ದೈವಿಗಳು. ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ವಿಸರ್ಜಿಸುವ ಸಲುವಾಗಿ ಊರಿನ ಯುವಕರು ಬೆಳಗಿನಿಂದ ಮೆರವಣಿಗೆ ಉತ್ಸವ ನಡೆಸಿ ಭಾನುವಾರ ಸಂಜೆ ರಂಗನಕಟ್ಟೆಯಲ್ಲಿ ಗಣೇಶನ ವಿಸರ್ಜನೆ ಮಾಡಲು ಬಂದಿದ್ದರು.
ಗಣೇಶನನ್ನು ವಿಸರ್ಜಿಸುವ ಸಲುವಾಗಿ ಶರತ್ ಮತ್ತು ದಯಾನಂದ್ ಸೇರಿದಂತೆ ಹಲವರು ನೀರಿಗೆ ಇಳಿದಿದ್ದಾರೆ. ನೀರಿನಲ್ಲಿ ಇಳಿಯುತ್ತಿದ್ದಂತೆ ಕಟ್ಟೆಯಲ್ಲಿದ್ದ ಕೆಸರಿನಲ್ಲಿ ಶರತ್ ಮತ್ತು ದಯಾನಂದ್‌ರ ಕಾಲುಗಳು ಹೂತುಕೊಂಡು ಹೊರಬರಲು ಸಾಧ್ಯವಾಗಲಿಲ್ಲ, ಈಜಲು ಸಾಧ್ಯವಾಗದೆ ಕಟ್ಟೆಯ ದಡದಲ್ಲಿದ್ದವರ ಸಹಾಯಕ್ಕೆ ಈರ್ವರೂ ಕೂಗಿಕೊಂಡಿದ್ದಾರೆ.
ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಶರತ್ ಅವರ ತಂದೆ ರೇವಣ್ಣ ಸಹ ನೀರಿಗೆ ಇಳಿದಿದ್ದಾರೆ. ರೇವಣ್ಣನಿಗೂ ಈಜು ಬಾರದ ಕಾರಣ ಅವರೂ ಸಹ ನೀರಿನಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ದಳ ಕಟ್ಟೆಯಲ್ಲಿ ಮುಳುಗಿದ ಸಂಗತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿತು.
ಮುಗಿಲು ಮುಟ್ಟಿದ ಕುಟುಂಸ್ಥರ ಆಕ್ರಂದನ
ಅಗ್ನಿ ಶಾಮಕ ಠಾಣಾಧಿಕಾರಿ ಚನ್ನಾಚಾರಿ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಐದಾರು ಸಿಬ್ಬಂದಿ ಕಟ್ಟೆಗೆ ಇಳಿದು ಹಗ್ಗ, ಕಬ್ಬಿಣದ ಕೊಕ್ಕೆ, ಬಲೂನ್ ಬಳಸಿ ಕೆಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೂವರ ದೇಹಗಳು ಹೊರ ತೆಗಿದ್ದಾರೆ. ವಿಷಯ ತಿಳಿದು ರಂಗನಹಟ್ಟಿ ಕಟ್ಟೆಯ ಸುತ್ತಮುತ್ತ ಸಹಸ್ರಾರು ಮಂದಿ ಜಮಾಯಿಸಿದ್ದರು.
ಮೃತರ ಎರಡೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕೆ ಎಸ್ಪಿ ಅಶೋಕ್, ಸಿಪಿಐ ಲೋಹಿತ್, ದಂಡಿನಶಿವರ ಪಿಎಸ್‌ಐ ಚಿತ್ತರಂಜನ್, ಭೇಟಿ ನೀಡಿದ್ದರು, ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಯನಂದ್ ಪತ್ನಿ ಗರ್ಭಿಣಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಯಾನಂದ್ ಇತ್ತೀಚೆಗೆ ಮದುವೆ ಯಾಗಿದ್ದರು, ಇವರ ಪತ್ನಿ ಗರ್ಭವತಿಯಾಗಿದ್ದಾರೆಂದು ತಿಳಿದು ಬಂದಿದೆ.