Karnataka Next CM: ಸಿದ್ದರಾಮಯ್ಯ ಸಿಎಂ ಮಾಡಲು ಕುರುಬ ಸಂಘಟನೆಗಳ ಒತ್ತಾಯ, ಸಿಎಂ ಮಾಡದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೊಂದರೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Next Cm: ಸಿದ್ದರಾಮಯ್ಯ ಸಿಎಂ ಮಾಡಲು ಕುರುಬ ಸಂಘಟನೆಗಳ ಒತ್ತಾಯ, ಸಿಎಂ ಮಾಡದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೊಂದರೆ

Karnataka Next CM: ಸಿದ್ದರಾಮಯ್ಯ ಸಿಎಂ ಮಾಡಲು ಕುರುಬ ಸಂಘಟನೆಗಳ ಒತ್ತಾಯ, ಸಿಎಂ ಮಾಡದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೊಂದರೆ

Karnataka Next CM: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಪರಿಶ್ರಮ ಹೆಚ್ಚಿದೆ. ಅವರನ್ನೇ ಈ ಬಾರಿ ಸಿಎಂ ಮಾಡಬೇಕು ಎಂದು ತುಮಕೂರಿನಲ್ಲಿ ಕುರುಬ ಸಂಘಟನೆಗಳ ಮುಖಂಡರು ಕಾಂಗ್ರೆಸ್‌ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.

Karnataka Next CM: ಸಿದ್ದರಾಮಯ್ಯ ಸಿಎಂ ಮಾಡಲು ಕುರುಬ ಸಂಘಟನೆಗಳ ಒತ್ತಾಯ
Karnataka Next CM: ಸಿದ್ದರಾಮಯ್ಯ ಸಿಎಂ ಮಾಡಲು ಕುರುಬ ಸಂಘಟನೆಗಳ ಒತ್ತಾಯ

ತುಮಕೂರು: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳ ಸ್ಪಷ್ಟ ಬಹುಮತ ಬರಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರ ಪರಿಶ್ರಮ ಬಹಳ ದೊಡ್ಡದಿದೆ, ಅದರಲ್ಲೂ ಸಿದ್ದರಾಮಯ್ಯ ಅವರ ಪರಿಶ್ರಮ ಜಾಸ್ತಿಯಿದ್ದು, ಈ ಬಾರಿ ಸಿದ್ದರಾಮಯ್ಯವರನ್ನೇ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಬೇಕು ಎಂದು ನಗರದಲ್ಲಿ ಕುರುಬರ ಸಂಘಟನೆಗಳ ಮುಖಂಡರು ಕಾಂಗ್ರೆಸ್ ಹೈಕಮಾಂಡ್‌ನ್ನು ಒತ್ತಾಯಿಸಿದ್ದಾರೆ.

ಸಿಎಂ ಮಾಡದೆ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ತೊಂದರೆ

ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಶ್ರೀಕಾಳಿದಾಸ ವಿದ್ಯಾವರ್ಧಕ ಸಂಘದ ಕಚೇರಿ ಮುಂಭಾಗ ಜಮಾಯಿಸಿದ ಶ್ರೀಕಾಳಿದಾಸ ವಿದ್ಯಾವರ್ಧಕ ಸಂಘ, ಜಿಲ್ಲಾ ಕುರುಬರ ಸಂಘ, ಸಂಗೊಳ್ಳಿ ರಾಯಣ್ಣನ ಸಂಘ, ಕನಕ ಪತ್ತಿನ ಸಹಕಾರ ಸಂಘ, ಕನಕ ಪತ್ತಿನ ಮಹಿಳಾ ಸಹಕಾರ ಸಂಘ, ಕವಿರತ್ನ ಕಾಳಿದಾಸ ಸಂಘ ಸೇರಿದಂತೆ ವಿವಿಧ ಕುರುಬರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರು ಈ ಬಾರಿ ಸಿದ್ದರಾಮಯ್ಯನವರನ್ನೇ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗಲಿದೆ ಎಂಬ ಎಚ್ಚರಿಕೆ ನೀಡಿದರು.

ಶ್ರೀಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ್ ಅವರ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಲಭಿಸುವ ಮೂಲಕ ಸ್ಪಷ್ಟ ಬಹುಮತ ಬಂದಿದೆ, ಇದಕ್ಕೆ ಡಿಕೆಶಿಯವರ ಪರಿಶ್ರಮವೂ ಇದೆ, ಅದರಲ್ಲೂ ಸಿದ್ದರಾಮಯ್ಯನವರ ಶ್ರಮ ಜಾಸ್ತಿ ಇದೆ, ಬಿಜೆಪಿಯ ಭ್ರಷ್ಟಾಚಾರದ ಆಡಳಿತಕ್ಕೆ ತಕ್ಕಪಾಠ ಕಲಿಸಬೇಕಾದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲೇಬೇಕು, ನಮ್ಮೆಲ್ಲರ ಅಪೇಕ್ಷೆ ಸಹ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಲೇಬೇಕು ಎಂಬುದಾಗಿದೆ ಎಂದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕು, ಅವರಿಗೆ ಹೆಚ್ಚಿನ ಶಾಸಕರ ಬೆಂಬಲವೂ ಇದೆ, ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಹಾಗಾಗಿ ಸಿದ್ದರಾಮಯ್ಯ ಅವರನ್ನೆ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ನಮ್ಮ ಹೋರಾಟ ನಿರಂತರವಾಗಿ ಸಾಗುತ್ತದೆ, ಮುಂದಿನ ವರ್ಷ ಲೋಕಸಭಾ ಚುನಾವಣೆ ಬರುತ್ತಿದೆ, ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳಿಗೆ ತಕ್ಕ ಪ್ರತ್ಯುತ್ತರ ಕೊಡುವ ಶಕ್ತಿ ಸಿದ್ದರಾಮಯ್ಯನವರಿಗಿದೆ, ಸಿದ್ದರಾಮಯ್ಯನವರು ಎಂದರೆ ಶಕ್ತಿ, ಎಲ್ಲ ಜನಾಂಗದವರು ಸಹ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕು ಎಂದು ಕಾಯುತ್ತಿದ್ದಾರೆ, ಹೈಕಮಾಂಡ್ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಕನಕ ಪತ್ತಿನ ಮಹಿಳಾ ಸಹಕಾರ ಸಂಘದ ಸುನಿತಾ ನಟರಾಜು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 135 ಸೀಟು ಗೆಲ್ಲುವ ಮೂಲಕ ಜಯಭೇರಿ ಭಾರಿಸಿದೆ, ಈ ಮೂಲ ಸ್ಪಷ್ಟ ಸರ್ಕಾರ ರಚನೆಗೂ ಅವಕಾಶ ದೊರೆತಿದೆ, ಇದಕ್ಕೆಲ್ಲ ಕಾರಣಕರ್ತರಾಗಿರುವ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದರು.

ಸಿದ್ದರಾಮಯ್ಯನವರು ಎಲ್ಲಾ ವರ್ಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು 5 ವರ್ಷ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಳ್ವಿಕೆ ನಡೆಸಿದ್ದಾರೆ, ಸರ್ವ ಜನಾಂಗದ ಶಾಂತಿಯ ತೋಟದಂತೆ ಕ್ಯಾಬಿನೆಟ್ ರಚನೆ ಮಾಡಿದ್ದರು, ಈಗಾಗಲೇ 13 ಬಜೆಟ್ ಮಂಡಿಸಿದ್ದಾರೆ, ಸಿದ್ದರಾಮಯ್ಯನವರು ನಮ್ಮೆಲ್ಲರ ಹಿರಿಯಣ್ಣ, ಹೈಕಮಾಂಡ್‌ಗೆ ಎಷ್ಟೇ ಒತ್ತಡ ಇದ್ದರೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಕರ್ನಾಟಕದ ಉಜ್ವಲ ಭವಿಷ್ಯಕ್ಕೆ ಕಾರಣವಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಸಿ.ಪುಟ್ಟರಾಜು, ಮೈಲಪ್ಪ, ಟಿ.ಆರ್.ಸುರೇಶ್, ನಿರ್ದೇಶಕರಾದ ರಘುರಾಮ್, ಶಂಕರ್, ಶೇಷಗಿರಿ, ಎಸ್.ನಾಗಣ್ಣ, ಟಿ.ಎನ್. ಮಧುಕರ್, ವಕೀಲರಾದ ವಿ.ಆರ್.ವೆಂಕಟೇಶ್, ಧನರಾಜು ಸೇರಿದಂತೆ ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು.

ವರದಿ: ಈಶ್ವರ್‌ ಎಂ

Whats_app_banner