ಶಾಲೆಗೆ ಹೋಗಲು ಹಂಬಲಿಸಿದ ಬಾಲಕನ ಬದುಕು ಬದಲಾದ ಕಥೆ; ಕನಸುಗಣ್ಣಿನ ಹುಡುಗನಿಗೆ ಸ್ಪೂರ್ತಿಯಾದ ಲೇಖಕಿ ಮಮತಾ ಅರಸೀಕೆರೆ-a life changing story of a boy who longed to go to school writer mamata araseikere is the inspiration for the boy smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಶಾಲೆಗೆ ಹೋಗಲು ಹಂಬಲಿಸಿದ ಬಾಲಕನ ಬದುಕು ಬದಲಾದ ಕಥೆ; ಕನಸುಗಣ್ಣಿನ ಹುಡುಗನಿಗೆ ಸ್ಪೂರ್ತಿಯಾದ ಲೇಖಕಿ ಮಮತಾ ಅರಸೀಕೆರೆ

ಶಾಲೆಗೆ ಹೋಗಲು ಹಂಬಲಿಸಿದ ಬಾಲಕನ ಬದುಕು ಬದಲಾದ ಕಥೆ; ಕನಸುಗಣ್ಣಿನ ಹುಡುಗನಿಗೆ ಸ್ಪೂರ್ತಿಯಾದ ಲೇಖಕಿ ಮಮತಾ ಅರಸೀಕೆರೆ

ಅಲೆಮಾರಿ ಕುಟುಂಬದ ಬಾಲಕ ಶಾಲೆ ಸೇರಿದ ಕಥೆ ಇದು. ಬೆಂಗಳೂರಿನ ನಾಟಕ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ಅಲೆಮಾರಿ ಬಾಲಕನ ಬದುಕಿನಲ್ಲಾದ ಬದಲಾವಣೆ, ಆ ಬಾಲಕನ ಉತ್ಸಾಹ ಎಲ್ಲವನ್ನೂ ತಮ್ಮ ಫೇಸ್ಬುಕ್ ಪೋಸ್ಟ್‌ನಲ್ಲಿ ಲೇಖಕಿ ಮಮತಾ ಅರಸೀಕೆರೆ ಹಂಚಿಕೊಂಡಿದ್ದಾರೆ.

ಅಲೆಮಾರಿ ಕುಟುಂಬದ ಬಾಲಕ ಶಾಲೆ ಸೇರಿದ ಕಥೆ
ಅಲೆಮಾರಿ ಕುಟುಂಬದ ಬಾಲಕ ಶಾಲೆ ಸೇರಿದ ಕಥೆ

ಪುಟ್ಟ ಮಕ್ಕಳು ಶಾಲೆಗೆ ಹೋಗೋದನ್ನು ಕಂಡರೇ ಖುಷಿ ಆಗುತ್ತದೆ. ಇನ್ನು ಆ ಮಕ್ಕಳಿಗೆ ಇನ್ನೆಷ್ಟು ಖುಷಿ ಆಗಬಹುದಲ್ವಾ? ತಾವು ಶಾಲೆಗೆ ಹೋಗಿ ಚೆನ್ನಾಗಿ ಓದಿ, ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಆಸೆ ಇದ್ದೇ ಇರುತ್ತದೆ. ಜೊತೆಗೆ ಅವರ ತಂದೆ, ತಾಯಿ ಕಣ್ಣುಗಳನ್ನೂ ಈ ಆಸೆ ಎದ್ದು ಕಾಣುವುದು ಸಹಜ. ಆದರೆ ಶಾಲೆಗೆ ಹೋಗದ ಆದರೆ ಓದಲು ಇಷ್ಟ ಇರುವ ಒಬ್ಬ ಪುಟ್ಟ ಬಾಲಕ ಲೇಖಕಿ ಮಮತಾ ಅರಸಿಕೆರೆಯವರಿಗೆ ಸಿಕ್ಕಿದ್ದ ಮುಂದೇನಾಯ್ತು ಎಂಬುದನ್ನು ಅವರ ಮಾತಲ್ಲೇ ಕೇಳಿ.

ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಾಟಕ ಅಕಾಡೆಮಿಯ ಮೀಟಿಂಗ್ ಹೋಗಿದ್ದೆ. ಸಭೆ ನಡೆಯುತ್ತಿರುವಾಗಲೇ ಟೀ , ಕಾಫಿ , ಬಿಸ್ಕತ್ತು ವಿತರಣೆಯಾಗ್ತಿತ್ತು. ವಿತರಿಸುವಾಗ ದೊಡ್ಡವರ ಜೊತೆ ಈ ಫೋಟೊದಲ್ಲಿರೊ ಹುಡುಗನೂ ಬಂದು ಬಿಸ್ಕತ್ ಕೊಡ್ತಿದ್ದ.

ನಮ್ಮ ಟೀಚರ್ ಬುದ್ದಿ ಜಾಗೃತವಾಗದೆ ಎಲ್ಲಿಹೋಗತ್ತೆ? ಶಾಲೆಗೆ ಹೋಗ್ತಿದಿಯೇನೊ? ಯಾವ ತರಗತಿಯೊ? ಅಂದೆ. ಇಲ್ಲ ಇನ್ನೂ ಹೋಗುತ್ತಿಲ್ಲ ಅಂದ. ತಕ್ಷಣ ಕೈ ಹಿಡಿದು , ತಾಯಿ ತಂದೆ ಎಲ್ಲಿದ್ದಾರೆ, ಕೇಳಿದೆ. ಅವರಮ್ಮ ಕೂಲಿ ಕೆಲಸ ಮಾಡುವವರು. ಈ ಮೊದಲು ಅದಾವುದೊ ಬಡಾವಣೆಯ ಹಾಸ್ಟೆಲ್‌ನಲ್ಲಿದ್ರು. ಇವನೂ ಅವರೊಂದಿಗಿದ್ದು ಆ ಏರಿಯಾದ ಶಾಲೆಗೆ ಹೋಗ್ತಿದ್ದ. ಅವರಮ್ಮ ಈಗ ಈ ಏರಿಯಾ ಕಡೆ ಕೆಲಸಕ್ಕೆ ಬಂದಿದ್ದಾರೆ. ಇನ್ನೂ ಸರಿಯಾಗಿ ಸೆಟಲ್ ಆಗಿಲ್ಲ. ನಂತರ ಶಾಲೆಗೆ ಸೇರ್ತಿನಿ ಅಂದ. ಹಾಸ್ಟೆಲ್‌ಗೆ ಸೇರಿಬಿಡು , ಅಮ್ಮ ಕೆಲಸಕ್ಕೆ ಹೋದ ಕಡೆಯಲ್ಲೆಲ್ಲ ನೀನೂ ತಿರುಗಾಡೋಕೆ ಕಷ್ಟ, ಓದೋಕೆ ತೊಂದರೆ ಅಂದೆ. ಕೆಲವರಿಗೆ ಫೋನ್ ಮಾಡಿ ಇವನನ್ನು ಹಾಸ್ಟೆಲ್ ಅಥವಾ ಶಾಲೆಗೆ ಸೇರಿಸೋಕೆ ಏನು ಮಾಡ್ಬೇಕು ಅಂತ ವಿಚಾರಿಸಿಕೊಂಡೆ. ಅವ ಇಲ್ಲ ಆಂಟಿ ಶಾಲೆಗೆ ಹೋಗ್ತೇನೆ ಅಂದ.

ಇನ್ನೊಮ್ಮೆ 8-10 ದಿನಗಳ ನಂತರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಿಕ್ಕು, ಆಂಟಿ ಅಂತ ಗುರುತು ಹಿಡಿದು ಅವನೇ ಓಡಿ ಬಂದ. ನನ್ನ ಮೊದಲ ಪ್ರಶ್ನೆ ಶಾಲೆಗೆ ಸೇರಿದ್ಯಾ? ಅಂತ. ಇನ್ನು ಇಲ್ಲ, ಇರಿ ಅಮ್ಮ ಇಲ್ಲೇ ಇದ್ದಾರೆ ಕರ್ಕೊಂಡು ಬರ್ತೀನಿ , ಅನ್ನುತ್ತಾ ಓಡಿ ಹೋಗಿ ಕರ್ಕೊಂಡು ಬಂದ.

ಅವನ ಅಮ್ಮನ ಹೆಸರು ಕೂಡ " ಮಮತಾ"! ಹುಡುಗನ ಹೆಸರು ಬೇಡ . ಅವನಿಗೆ ಶಾಲೆಗೆ ಹೋಗೋಕೆ ಅಪಾರ ಆಸಕ್ತಿ. ಓದಿ ಕೆಲಸಕ್ಕೆ ಸೇರ್ತೀನಿ ಅಂತ ಕನಸುಗಣ್ಣುಗಳಿಂದ ಹೇಳೋಕೆ ಶುರು ಮಾಡಿದ. ಮೊದಲು ಓದು, ಇಲ್ಲಾಂದ್ರೆ ನಿಮ್ಮಮ್ಮನ ರೀತಿ ಅಲ್ಲಿ ಇಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡ್ಬೇಕಾಗುತ್ತೆ ' ಅಂದೆ. "ಚೆನ್ನಾಗಿ ಓದಿದ್ರೇ ನಿಮ್ ಥರ ಕೆಲಸಕ್ಕೆ ಸೇರಬಹುದು!! ಅಂದ. ಅವನ ಅಮ್ಮ ತನ್ನ ಪರಿಸ್ಥಿತಿ ಹೇಳಿ, ಖಂಡಿತ ಶಾಲೆಗೆ ಸೇರಿಸ್ತಿನಿ ಅಂದ್ರು.

ಚಟಪಟ ಮಾತನಾಡುವ ಹುಡುಗ ಬಹಳವೇ ಚುರುಕಾಗಿದ್ದ. ಮೊನ್ನೆ ನಾಟಕ ಅಕಾಡೆಮಿಯ ಪ್ರಶಸ್ತಿ ವಿತರಣಾ ಸಮಾರಂಭದ ಸಮಯದಲ್ಲಿ ಮತ್ತೆ ಸಿಕ್ಕಿದ್ದ. ಸಮವಸ್ತ್ರ ಧರಿಸಿ ಮುದ್ದಾಗಿ ಕಾಣ್ತಿದ್ದ. ಅವನೇ ಗುರುತು ಹಿಡಿದು ಓಡಿ ಬಂದ.

' ಶಾಲೆಗೆ ಸೇರ್ಕೊಂಡಿದೀನಿ ಅಂದ. ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತೀನಿ 'ಅಂತ ಹುರುಪಿನಿಂದ ಹೇಳಿದ. ಸ್ವಲ್ಪ ಹಣ ಕೊಡಲು ಹೋದರೆ ತೆಗೆದುಕೊಳ್ತನೇ ಇಲ್ಲ ಪೋರ! ಫೋನಿನ ಮೂಲಕ ವ್ಯವಹಾರ ಮಾಡುತ್ತಾ ಕೈಯಲ್ಲಿ ನೋಟುಗಳನ್ನೇ ಇಡ್ತಿಲ್ಲ ನಾನು. ಇದ್ದ ಕೆಲವೇ ನೋಟನ್ನ ಬಲವಂತವಾಗಿ ತುರುಕಿದರೆ, " ಈ ಹಣದಿಂದ ಪುಸ್ತಕ, ಪೆನ್ನು ತಗೋತೀನಿ " ಅಂತ ಅವನೇ ಮುಂಚಿತವಾಗಿ ಹೇಳಿದ!

ಅವನ ಲವಲವಿಕೆ , ಆ ಬೆರಗುಗಣ್ಣುಗಳು ಮರುಳು ಮಾಡಿದ್ವು! ಮುಂದಿನ ಬಾರಿ ನಾನು ಬಂದಾಗ ಇಲ್ಲೇ ಸಿಗು ಅಂದಿದೀನಿ.

ಇವರ ಪೋಸ್ಟ್‌ಗೆ ತುಂಬಾ ಉತ್ತಮ ಪ್ರಕ್ರಿಯೆಗಳು ಬಂದಿದೆ

ತಾಯಿ‌ ಹೃದಯ‌ ಜಾಗೃವಾಯಿತು ಅವ್ವನಂತಾ ಕರೆ

ಹೆಸರಿನಲ್ಲಿಯುಂಟು ಮಮತೆಯ ಅರಸಿ- ಕೆರೆ ಎಂದು ನೀಲಕಂಠೇಗೌಡ ಹೊನ ಕಾಮೆಂಟ್ ಮಾಡಿದ್ದಾರೆ.

"ಶಿಕ್ಷಕರೆಂದರೆ ಪರಿವರ್ತನೆ ಹರಿಕಾರರು ಎನ್ನುವುದು ಇದಕ್ಕೆ" ಎಂದು ದಯಾನಂದ ಹಲಸವಾಳ ಹಾಲನಾಯ್ಕ ಕಾಮೆಂಟ್ ಮಾಡಿದ್ದಾರೆ.

ಲಕ್ಷ್ಮಿಕಾಂತ ಮಿರಜಕರ ಅವರು ಖುಷಿಯಾಯ್ತು.. ಆ ಮಗುವಿಗೆ ಶುಭವಾಗಲಿ ಎಂದಿದ್ದಾರೆ.

mysore-dasara_Entry_Point